ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಹಾರೈಕೆಯೇ ನನ್ನ ಯಶಸ್ಸು: 'ಜೊತೆ ಜೊತೆಯಲಿ' ನಟ ಅನಿರುದ್ಧ್

Last Updated 30 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

‘ಒಬ್ಬ ನಟನಾದವನು ತನ್ನ ಜೀವನದಲ್ಲಿ ಪ್ರತಿ ಹಂತದಲ್ಲೂ ಎದುರಾಗುವ ಅನುಭವಗಳನ್ನು ಗಮನಿಸಬೇಕು. ವ್ಯಕ್ತಿಯೊಬ್ಬರ ನಡವಳಿಕೆ, ಮಾತನಾಡುವ ಶೈಲಿ, ಯೋಚನಾಶಕ್ತಿ ಹೀಗೆ ಪ್ರತಿಯೊಂದರಲ್ಲೂ ಕಲಿಯುವುದು ಇರುತ್ತದೆ. ನಾನು ವೈಯಕ್ತಿಕವಾಗಿ ಪುಸ್ತಕಗಳು, ಕಾದಂಬರಿಗಳನ್ನು ಓದಿ, ಜೀವನ ವೃತ್ತಾಂತಗಳನ್ನು ತಿಳಿದು ಸಾಕಷ್ಟು ಕಲಿತಿದ್ದೇನೆ. ಯಾವುದೇ ಒಬ್ಬ ಕಲಾವಿದ ಒಂದು ಪಾತ್ರವನ್ನು ನಿರ್ವಹಿಸಲು ಕಲ್ಪನಾಶಕ್ತಿ ತುಂಬಾ ಮುಖ್ಯ’ ಎನ್ನುತ್ತಾರೆ ನಟ ಅನಿರುದ್ಧ ಜತ್ಕರ್‌.

‘ಚಿಟ್ಟೆ’ ಸಿನಿಮಾದ ಮೂಲಕ ಸಿನಿ ಪಯಣ ಆರಂಭಿಸಿದ ಈ ನಟ ಕನ್ನಡ, ತಮಿಳು, ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇವರಿಗೆ ಅತಿ ಹೆಚ್ಚು ಹೆಸರು ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿಯ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಆರ್ಯವರ್ಧನ್’ ಪಾತ್ರ.

ಜೊತೆಜೊತೆಯಲಿ ಧಾರಾವಾಹಿಯ ಆರಂಭದ ದಿನಗಳ ಬಗ್ಗೆ ಮಾತನಾಡುವ ಅನಿರುದ್ಧ ‘ಧಾರಾವಾಹಿ ಆರಂಭವಾಗುವಾಗ ಯಾವುದೇ ನಿರೀಕ್ಷೆಗಳಿರಲಿಲ್ಲ. ಜೀ ಟಿವಿ ತಂಡ, ನಿರ್ದೇಶಕ ಆರೂರು ಜಗದೀಶ್ ಅವರು ನಮ್ಮ ಮನೆಗೆ ಬಂದು ಕತೆ ಹೇಳಿದಾಗ ಇದೊಂದು ಉತ್ತಮ ಪಾತ್ರ ಎನ್ನಿಸಿತ್ತು. ಜೊತೆಗೆ ನನ್ನ ಮಗಳು ಕೂಡ ಪಪ್ಪಾ, ಕತೆ ಚೆನ್ನಾಗಿದೆ, ಮಾಡಿ ಎಂದಿದ್ದಳು. ಆದರೆ ನಾನು ಆ ಸಮಯದಲ್ಲಿ ಭಾರತಿ ಅಮ್ಮನವರ ಮೇಲೆ ಡಾಕ್ಯುಮೆಂಟರಿ ಮಾಡುತ್ತಿದ್ದ ಕಾರಣ ಸಮಯ ಹೊಂದಾಣಿಕೆ ಆಗುತ್ತದೋ ಇಲ್ಲವೋ ಎಂಬ ಆತಂಕ ಮೂಡಿತ್ತು. ಆದರೆ ವಾಹಿನಿ ಹಾಗೂ ನಿರ್ದೇಶಕರ ಆತ್ಮೀಯತೆ, ಗೌರವಾದರ ಹಾಗೂ ನನ್ನ ಮಗಳ ಮಾತು ಧಾರಾವಾಹಿಯಲ್ಲಿ ನಟಿಸುವಂತೆ ಮಾಡಿತು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಆರ್ಯವರ್ಧನ್ ಪಾತ್ರದಲ್ಲಿ ಸಾಕಷ್ಟು ಆಯಾಮಗಳಿವೆ. ಈ ಪಾತ್ರದ ಮೂಲಕ ನಾನು ಮನೆ ಮನೆಗಳ ಮನ ಮನಗಳಿಗೆ ತಲುಪಿದ್ದೇನೆ. ಒಬ್ಬ ಕಲಾವಿದನಾದವನಿಗೆ ಅದಕ್ಕಿಂತ ದೊಡ್ಡ ಉಡುಗೊರೆ ಯಾವುದೂ ಇಲ್ಲ. ಇದು ಸಕಾರಾತ್ಮಕ ಪಾತ್ರವಾದ ಕಾರಣ ಜನರಿಗೆ ಪ್ರೇರಣೆಯಾಗುತ್ತಿದೆ. ಈ‍ಪಾತ್ರ ಅನೇಕ ಸಾಮಾಜಿಕ ಬದಲಾವಣೆಗಳಿಗೂ ಕಾರಣವಾಗಿದೆ. ಅದರಲ್ಲಿ ಒಂದು ಹಸಿಕಸ, ಒಣಕಸ ವಿಂಗಡಣೆ. ಈ ಬಗ್ಗೆ ಧಾರಾವಾಹಿಯಲ್ಲಿ ಪ್ರಸಾರವಾದ ಮೇಲೆ ಅನೇಕರಲ್ಲಿ ಜಾಗೃತಿ ಮೂಡಿದೆ. ಅನೇಕ ಜಿಲ್ಲೆಯ ಅಧಿಕಾರಿಗಳು ನನಗೆ ಕರೆ ಮಾಡಿ ತಿಳಿಸಿದ್ದಾರೆ. ಹೀಗೆ ಒಂದು ಪಾತ್ರ ಯಶಸ್ಸಿನ ಜೊತೆಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವುದು ನಿಜಕ್ಕೂ ಹೆಮ್ಮೆ ಹಾಗೂ ಸಂತಸದ ವಿಷಯ’ ಎಂದು ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳುತ್ತಾರೆ.

‘ಈ ಧಾರಾವಾಹಿ ಹಳ್ಳಿ ಹಳ್ಳಿಗಳನ್ನೂ ತಲುಪಿದೆ. ಇಡೀ ಕುಟುಂಬ ಕುಳಿತು ಧಾರಾವಾಹಿ ನೋಡುತ್ತದೆ.ಒಂದು ಒಳ್ಳೆಯ ಧಾರಾವಾಹಿ ನೀಡಿದರೆ ಇಡೀ ಕುಟುಂಬ ಒಂದೆಡೆ ಕಲೆತು ಧಾರಾವಾಹಿ ನೋಡುತ್ತದೆ ಎಂಬುದಕ್ಕೆ ಜೊತೆ ಜೊತೆಯಲಿ ಸಾಕ್ಷಿ. ನನಗೆ ಇಷ್ಟು ಯಶಸ್ಸು ಸಿಕ್ಕಿದ್ದು ಜನರಿಂದಲೇ. ಅನೇಕ ವರ್ಷಗಳಿಂದ ಜನರು ನನ್ನನ್ನು ಹರಸಿ ಹಾರೈಸಿದ್ದಾರೆ. ಅದೇ ನನ್ನ ಗೆಲುವಿಗೆ ಕಾರಣ’ ಎಂದು ತುಂಬು ಮನಸ್ಸಿನಿಂದ ಹೇಳುತ್ತಾರೆ.

ನಟ ಅನಿರುದ್ಧ್

ಜೀವನದ ಪ್ರತಿ ಏರಿಳಿತಗಳಲ್ಲೂ ಜೊತೆ ಇದ್ದವರು ನನ್ನ ಕುಟಂಬ ಎನ್ನುವ ಅನಿರುದ್ಧ ಮನೆಯವರ ಪ್ರೋತ್ಸಾಹವೂ ತನ್ನೆಲ್ಲಾ ಯಶಸ್ಸಿಗೆ ಕಾರಣ ಎಂದು ಹೇಳುವುದನ್ನು ಮರೆಯುವುದಿಲ್ಲ.

ನಟಿ ಭಾರತಿಯವರ ಮೇಲೆ ಮಾಡುತ್ತಿರುವಡಾಕ್ಯುಮೆಂಟರಿ ಅಂತಿಮ ಹಂತಕ್ಕೆ ಬಂದಿದ್ದು ಹಿನ್ನೆಲೆ ಸಂಗೀತದ ಭಾಗ ಮಾತ್ರ ಉಳಿದುಕೊಂಡಿದೆ. ಲಾಕ್‌ಡೌನ್ ಇರುವ ಕಾರಣಕ್ಕೆ ಅದು ನಿಂತಿದ್ದು, ಲಾಕ್‌ಡೌನ್ ಮುಗಿದ ಕೂಡಲೇ ಅದನ್ನು ಪೂರ್ಣಗೊಳಿಸುವ ಯೋಜನೆಯಲ್ಲಿದ್ದಾರೆ ಅನಿರುದ್ಧ.

ಲಾಕ್‌ಡೌನ್ ಸಮಯದಲ್ಲಿ ಮನೆಯವರೊಂದಿಗೆ ಸಂತಸದಿಂದ ಸಮಯ ಕಳೆಯುತ್ತಿರುವ ಇವರು ಮನೆಯಲ್ಲಿ ತಾಯಿ ಹಾಗೂ ಮಡದಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ. ಮಕ್ಕಳೊಂದಿಗೆ ಸೇರಿ ಆಟವಾಡುತ್ತಾರೆ. ‘ನನಗೆ ಗೊತ್ತಿಲ್ಲದ ಎಷ್ಟೋ ಆಟಗಳನ್ನು ನಾನು ಮಕ್ಕಳಿಂದ ಕಲಿಯುತ್ತಿದ್ದೇನೆ. ನಾವು ಬಾಲ್ಯದಲ್ಲಿ ಆಡುತ್ತಿದ್ದ ಆಟಗಳನ್ನು ಅವರಿಗೆ ಕಲಿಸುತ್ತಿದ್ದೇನೆ. ಜೊತೆಗೆ ನಾವೆಲ್ಲರೂ ಸೇರಿ ಸಿನಿಮಾ, ವೆಬ್ ಸಿರೀಸ್‌ಗಳನ್ನು ನೋಡುತ್ತೇವೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಅಲ್ಲದೇ ಡಾಕ್ಯುಮೆಂಟರಿಯಲ್ಲಿ ಸಬ್‌ಟೈಟಲ್‌ ಕೆಲಸ ಒಂದಿಷ್ಟು ಬಾಕಿಯಿದ್ದು ಅದನ್ನು ಮುಗಿಸಿದ್ದೇನೆ. ಸದ್ಯಕ್ಕೆ ಮನೆಯಲ್ಲೇ ವರ್ಕೌಟ್‌ ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳುತ್ತೇನೆ’ ಎನ್ನುತ್ತಾರೆ.

ಈ ನಡುವೆ ಸಿನಿಮಾಗಳಲ್ಲೂ ಅವಕಾಶಗಳು ಬಂದಿದ್ದು ಮುಂದಿನ ದಿನಗಳಲ್ಲಿ ಮತ್ತೆ ಸಿನಿರಂಗಕ್ಕೆ ಮರಳುವ ಯೋಚನೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT