ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಕ್ತ’ ಪಯಣ

Last Updated 31 ಜನವರಿ 2019, 19:30 IST
ಅಕ್ಷರ ಗಾತ್ರ

ಟೀಸರ್‌ ಬಿಡುಗಡೆಯಾದ ದಿನದಿಂದಲೇ ‘ಅನುಕ್ತ’ ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ಚಿತ್ರ ರಸಿಕರ ಈ ಕುತೂಹಲಕ್ಕೆ ಹತ್ತಾರು ಕಾರಣಗಳೂ ಇವೆ. ‘ಅನುಕ್ತ’ (ಈವರೆಗೆ ಹೇಳದಿರುವಂಥದ್ದು) ಎಂಬ ಹೆಸರೇ ಕುತೂಹಲ ಹುಟ್ಟಿಸುವ ಮೊದಲ ಅಂಶ.

ಚಿತ್ರದ ಸಬ್ಜೆಕ್ಟ್‌, ತಾರಾಗಣ, ಸಂಗೀತ... ಹೀಗೆ ಅನೇಕ ವಿಚಾರಗಳು ಚಿತ್ರದ ನಿರೀಕ್ಷೆಗಳನ್ನು ಹೆಚ್ಚಿಸಿವೆ. ನಟಿ ಅನು ಪ್ರಭಾಕರ್‌ ಮುಖರ್ಜಿ ಸ್ವಲ್ಪ ದೀರ್ಘ ಅವಧಿಯ ಬಳಿಕ ಬೆಳ್ಳಿತೆರೆಯ ಮೇಲೆ ಕಾಣಿಸುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆ ಖುಷಿಕೊಡುವ ಅಂಶ.

‘ಮಗಳು ಹುಟ್ಟಿದ ನಂತರ ಬರುತ್ತಿರುವ ಚಿತ್ರವಿದು. ನನಗೂ ಹೆಚ್ಚಿನ ನಿರೀಕ್ಷೆಗಳಿವೆ’ ಎಂದಿದ್ದಾರೆ ಅನು ಪ್ರಭಾಕರ್‌. ‘ಅನುಕ್ತ’ ಚಿತ್ರ, ನಿರೀಕ್ಷೆಗಳು... ಹೀಗೆ ಹಲವು ವಿಚಾರಗಳ ಬಗ್ಗೆ ‘ಸಿನಿಮಾ ಪುರವಣಿ’ಯ ಜೊತೆ ಅವರು ಮಾತನಾಡಿದ್ದಾರೆ...

* ಸ್ವಲ್ಪ ದೀರ್ಘ ಅಂತರದ ಬಳಿಕ ಬೆಳ್ಳಿ ತೆರೆಯ ಮೇಲೆ ಕಾಣಿಸುತ್ತಿದ್ದೀರಲ್ಲ...?
ಹೌದು, ‘ಆಟಗಾರ’ ಚಿತ್ರದ ನಂತರ ಸ್ವಲ್ಪ ಕಾಲ ಕಿರುತೆರೆಯಲ್ಲಿ ಬಿಜಿಯಾಗಿದ್ದೆ. ‘ಅನುಕ್ತ’ ದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು. ನಟನೆಗೆ ಬಹಳ ಸ್ಕೋಪ್‌ ಇತ್ತು, ಒಪ್ಪಿಕೊಂಡು ನಟಿಸಿದೆ.

* ನಿಮ್ಮ ಪಾತ್ರದ ಬಗ್ಗೆ ಹೇಳಬಹುದೇ?
ಆ ಗುಟ್ಟನ್ನು ಈಗಲೇ ಬಿಟ್ಟುಕೊಡುವಂತಿಲ್ಲ. ಆದರೆ ವಿಭಿನ್ನವಾದ ಮತ್ತು ಬಹಳ ಕಾಲ ನೆನಪಿನಲ್ಲಿ ಉಳಿಯುವಂಥ ಪಾತ್ರ ಎಂದು ಮಾತ್ರ ಹೇಳಬಲ್ಲೆ.

* ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಕಥಾವಸ್ತು ಈ ಚಿತ್ರದಲ್ಲಿದೆ. ಕಥೆ ಇಷ್ಟವಾಗಲು ಬೇರೆ ಕಾರಣವೂ ಇದೆಯೇ?
ನಾಯಕ ನಟ ಕಾರ್ತಿಕ್‌ ಅತ್ತಾವರ ಅವರು ನನ್ನನ್ನು ಸಂಪರ್ಕಿಸಿ, ‘ನಮ್ಮ ಸಿನಿಮಾದಲ್ಲಿ ಒಳ್ಳೆಯ ಪಾತ್ರವೊಂದಿದೆ, ನಟಿಸುವಿರಾ’ ಎಂದು ಕೇಳಿದ್ದರು. ಕಥೆ ಕೇಳಿದಾಗ ಆ ಪಾತ್ರದ ಬಗ್ಗೆ ಕುತೂಹಲ ಹುಟ್ಟಿ, ನಟಿಸಲು ಒಪ್ಪಿಕೊಂಡೆ.

ಅದು ಒಂದು ಭಾಗ. ದಕ್ಷಿಣ ಕನ್ನಡ– ಉಡುಪಿ ಜಿಲ್ಲೆಗಳ ಬಗ್ಗೆ ವಿಶೇಷವಾದ ಒಲವು ನನಗೆ ಹಿಂದಿನಿಂದಲೂ ಇತ್ತು. ನನ್ನ ಅಪ್ಪ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದವರು. ನನ್ನ ಅಜ್ಜಿ ತುಳು ಮಾತನಾಡುತ್ತಿದ್ದರು. ದಕ್ಷಿಣ ಕನ್ನಡದ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅಜ್ಜಿ ಆಗಾಗ ಹೇಳುತ್ತಿದ್ದರು. ದೈವಾರಾಧನೆ, ಭೂತದ ಕೋಲಗಳ ಬಗ್ಗೆಯೂ ಅವರು ಹೇಳುತ್ತಿದ್ದರು. ‘ಪಂಜುರ್ಲಿ’ ನಮ್ಮ ‘ಕುಲದೈವ’ವಂತೆ. ಅನುಕ್ತ ಸಿನಿಮಾದಲ್ಲಿ ದೈವಾರಾಧನೆಯ ದೃಶ್ಯಗಳೂ ಬರುತ್ತವೆ. ಈ ಸಬ್ಜೆಕ್ಟ್‌ ಇಷ್ಟವಾಗಲು ಇದು ಇನ್ನೊಂದು ಕಾರಣ.

ಹಿಂದೆ ಜಾಹೀರಾತು ಚಿತ್ರವೊಂದರಲ್ಲಿ ನಾನು ಮತ್ತು ಸಂಪತ್‌ ಜೊತೆಯಾಗಿ ನಟಿಸಿದ್ದೆವು. ಈ ಚಿತ್ರದಲ್ಲಿ ನಾವಿಬ್ಬರು ಪುನಃ ಜೊತೆಯಾಗಿ ನಟಿಸುತ್ತಿದ್ದೇವೆ. ಅದೂ ಖುಷಿಕೊಡುವ ವಿಚಾರ.

* ಕತೆಯ ಬಗ್ಗೆ ಇನ್ನಷ್ಟು ತಿಳಿಸಬಹುದೇ..?
ಇಲ್ಲ, ಅದಕ್ಕೆ ಚಿತ್ರ ಮಂದಿರಕ್ಕೇ ಬರಬೇಕು. ಆದರೆ ‘ಅನುಕ್ತ’ ಎಂಬ ಹೆಸರಿಗೆ ತಕ್ಕಂತೆ ಈವರೆಗೆ ಯಾರೂ ಹೇಳದಿರುವ ಕತೆಯನ್ನು ಈ ಸಿನಿಮಾ ಹೇಳುತ್ತದೆ. ಜನರು ಈಗ ವಿಭಿನ್ನವಾದ ಕತೆ ಮತ್ತು ನಿರೂಪಣೆ ಇರುವ ಚಿತ್ರಗಳನ್ನು ಇಷ್ಟಪಡುತ್ತಾರೆ. ನಿರ್ಮಾಪಕರು ಅದನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖಂಡಿತವಾಗಿ ‘ಅನುಕ್ತ’ ಎಲ್ಲರಿಗೂ ಇಷ್ಟವಾಗುತ್ತದೆ.

* ಕರಾವಳಿ ಭಾಗದ ಕಥೆಗಳನ್ನು ಆಧರಿಸಿದ ಚಿತ್ರಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಲ್ಲ?
ಒಳ್ಳೆಯದಲ್ಲವೇ? ಇತ್ತೀಚಿನವರೆಗೂ ಕನ್ನಡ ಚಿತ್ರಗಳು ಮಧ್ಯ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾತ್ರ ಓಡುತ್ತಿದ್ದವು. ದಕ್ಷಿಣ ಕನ್ನಡ– ಉಡುಪಿ ಜಿಲ್ಲೆಗಳ ಜನರು ತುಳು ಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಈಗ ಆ ಭಾಗದ ಕತೆಗಳು ಬರುತ್ತಿವೆ. ಅ ಭಾಗದ ಕಲಾವಿದರು ಸಹ ಕನ್ನಡ ಚಿತ್ರೋದ್ಯಮಕ್ಕೆ ಬರುತ್ತಿದ್ದಾರೆ. ಕನ್ನಡ ಚಿತ್ರೋದ್ಯಮದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ. ಇತರರಿಗೂ ಆ ಭಾಗದ ಕಲೆ– ಸಂಸ್ಕೃತಿಯ ಪರಿಚಯವಾಗುತ್ತದೆ, ಹೊಸ ಹೊಸ ಸಬ್ಜೆಕ್ಟ್‌ಗಳು ಬರುತ್ತಿವೆ. ಹೊಸ ಕಲಾವಿದರೂ ಬರುತ್ತಿದ್ದಾರೆ... ಒಳ್ಳೆಯದೇ...

* ಅನುಕ್ತ ಸಿನಿಮಾದ ಪಾಸಿಟಿವ್‌ ಅಂಶಗಳೇನು?
ಎಲ್ಲವೂ ಪಾಸಿಟಿವ್‌ ಅಂಶಗಳೇ! ಕಥಾ ವಸ್ತು ವಿಶೇಷವಾದದ್ದು, ಮನೋಹರ್‌ ಜೋಶಿ ಅವರ ಛಾಯಾಗ್ರಹಣ ಅದ್ಭುತವಾಗಿದೆ. ಹಾಡುಗಳು ಸುಮಧುರವಾಗಿ ಬಂದಿವೆ... ಇಡೀ ತಂಡದ ಹಾರ್ಡ್‌ ವರ್ಕ್‌ ಸಿನಿಮಾದಲ್ಲಿ ಕಾಣಿಸುತ್ತಿದೆ. ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ನಿರೀಕ್ಷೆಗಳು ಬಹಳಷ್ಟಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT