ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತಮಿತ್ರನ ನೆನಪು

Last Updated 7 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಸಾಹಸಸಿಂಹ ವಿಷ್ಣುವರ್ಧನ್‌ ಮತ್ತೆ ನೆನಪಾದರು. ಅವರನ್ನು ಪುನಃ ನೆನಪಿಸಿಕೊಂಡದ್ದು ಅವರ ಹಳೆಯ ಮತ್ತು ದೀರ್ಘ ಕಾಲದ ಗೆಳೆಯ ದ್ವಾರಕೀಶ್‌. ಸಂದರ್ಭ; ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‌ ನಟಿಸಿರುವ ‘ಪಡ್ಡೆಹುಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ.

ಕಲಾವಿದರ ಸಂಘದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮೈಕ್‌ ಎತ್ತಿಕೊಂಡ ದ್ವಾರಕೀಶ್‌, ‘ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಟ ವಿಷ್ಣುವರ್ಧನ್‌’ ಎನ್ನುತ್ತಾ ಭಾವುಕರಾದರು. ಅದೆಷ್ಟನೇ ಬಾರಿಯೋ... ದ್ವಾರಕೀಶ್‌ ವಿಷ್ಣುವಿನ ಗುಣಗಾನ ಆರಂಭಿಸಿದರು. ‘ಅವನನ್ನು ನೆನಪಿಸಿಕೊಳ್ಳದ ದಿನವಿಲ್ಲ. ಅವನೊಂದಿಗೆ 19 ಸಿನಿಮಾ ಮಾಡಿದ್ದೇನೆ. ಈಗಲೂ ವಾರಕ್ಕೊಮ್ಮೆಯಾದರೂ ಕನಸಿನಲ್ಲಿ ಬಂದು ವಿಚಾರಿಸುತ್ತಾನೆ. ನಾಗರಹಾವು ಪ್ರೀಮಿಯರ್ ಶೋ ಸಂದರ್ಭದಲ್ಲಿ ‘ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಹೀರೊ ಒಬ್ಬನನ್ನು ಕೊಟ್ಟದ್ದಿಯಾ’ ಅಂತ ಪುಟ್ಟಣ್ಣ ಕಣಗಾಲ್‍ಗೆ ಹೇಳಿದ್ದೆ. ನನ್ನ ಮಾತು ಸುಳ್ಳಾಗಲಿಲ್ಲ’ ಎಂದರು.

‘ಪಡ್ಡೆಹುಲಿ’ ಸಿನಿಮಾದಲ್ಲಿ ಎರಡು ಹಾಡುಗಳನ್ನು ವಿಷ್ಣುವರ್ಧನ್‌ ಅವರಿಗೆ ಸಮರ್ಪಿಸಲಾಗಿದೆ. ದ್ವಾರಕೀಶ್‌ ಅವರನ್ನು ನೆನಪಿನ ಅಂಗಳಕ್ಕೆ ಎಳೆದೊಯ್ಯಲು ಈ ಹಾಡುಗಳು ಕಾರಣವಾಗಿದ್ದವು.

‘45 ವರ್ಷಗಳ ನಂತರ ಕಳೆದ ವರ್ಷ ‘ನಾಗರಹಾವು’ ಸಿನಿಮಾ ಪುನಃ ಬಿಡುಗಡೆಯಾಗಿ ದಾಖಲೆ ಮಾಡಿದೆ. ಹೀರೊ ಆಗಬೇಕೆಂಬ ಕನಸನ್ನಿಟ್ಟುಕೊಂಡು ನೂರಾರು ಯುವಕರು ಗಾಂಧಿನಗರಕ್ಕೆ ಬರುತ್ತಾರೆ. ‘ತಗ್ಗಿ ಬಗ್ಗಿ ನಡೆದರೆ ಚಿತ್ರೋದ್ಯಮದಲ್ಲಿ ದೀರ್ಘ ಕಾಲ ಉಳಿಯಬಹುದು’ ಎಂಬ ಪಾಠವನ್ನು ಅವರೆಲ್ಲರೂ ವಿಷ್ಣುವಿನ ಜೀವನ ನೋಡಿ ಕಲಿಯಬೇಕು’ ಎಂಬ ಸಲಹೆಯನ್ನೂ ದ್ವಾರಕೀಶ್‌ ನೀಡಿದರು.

ನಟ ಶಿವರಾಂ ಸಹ ವಿಷ್ಣುವರ್ಧನ್‌ ಅವರ ಭಾವನಾತ್ಮಕ ಸೆಳೆತಕ್ಕೆ ಒಳಗಾದರು. ‘ರಾಜ್‍ಕುಮಾರ್ ಅವರು ನೂರು ಸಿನಿಮಾ ಪೂರೈಸಿದಾಗ ದೊಡ್ಡ ಸಮಾರಂಭ ಏರ್ಪಾಟು ಮಾಡಲಾಗಿತ್ತು. ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರು ನೂರು ಚಿತ್ರಗಳನ್ನು ಮಾಡಿದಾಗಲೂ ಕಾರ್ಯಕ್ರಮ ಮಾಡಬೇಕೆಂದಿದ್ದೆವು. ಆದರೆ ಅವರಿಬ್ಬರೂ ಅಂಥ ಆಸಕ್ತಿ ತೋರಿಸಲಿಲ್ಲ’ ಎಂದು ಶಿವರಾಂ ನೆನಪಿಸಿಕೊಂಡರು.

ಹಿರಿಯ ನಟರಿಬ್ಬರು ಸೃಷ್ಟಿಸಿದ ಭಾವುಕ ಪ್ರಪಂಚದಿಂದ ಪ್ರೇಕ್ಷಕರನ್ನು ಹೊರಕ್ಕೆ ಎಳೆದು ತಂದದ್ದು ಪಡ್ಡೆಹುಲಿ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ. ಅವರು ತಮ್ಮ ಸಿನಿಮಾ ‘ಪಡ್ಡೆಹುಲಿ’ ಬಗ್ಗೆ ಮಾತನಾಡಿದರು. ‘ಚಿತ್ರದುರ್ಗದಲ್ಲಿ ನಡೆಯುವ ಕಥೆಯಾದ್ದರಿಂದ ನಿರ್ಮಾಪಕ ಮಂಜು ಅವರ ಸಲಹೆಯಂತೆ ‘ಪಡ್ಡೆಹುಲಿ’ ಎಂಬ ಹೆಸರಿಡಲಾಗಿದೆ. ದುರ್ಗದ ಬೆಟ್ಟದಲ್ಲಿ ಓಡಾಡುವಾಗ ಎಲ್ಲ ಕಡೆಗಳಲ್ಲೂ ವಿಷ್ಣು ಸರ್ ಕಾಣಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ಕುರಿತ ಒಂದು ಹಾಡನ್ನು ಬರೆದು, ಅದನ್ನು ಸಾಹಸಸಿಂಹನ ಅಭಿಮಾನಿಗಳಿಗೆ ಅರ್ಪಿಸಲಾಗಿದೆ’ ಎಂದರು. ಈ ಸಿನಿಮಾದಲ್ಲಿ 10 ಹಾಡುಗಳಿದ್ದು, ಅದರಲ್ಲಿ ಐದು ಹಾಡುಗಳು ವಿಶೇಷವಾಗಿವೆ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

ಹಾಡುಗಳ ಚಿತ್ರೀಕರಣಕ್ಕೆ ತಲಾ ₹ 60ಲಕ್ಷ ಖರ್ಚು ಮಾಡಲಾಗಿದೆಯಂತೆ. ನಾಯಕನ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. 44 ಚಿತ್ರಗಳನ್ನು ನಿರ್ಮಾಣ ಮಾಡಿದ ಅನುಭವ ಇರುವ ಮಂಜು ಅವರು ವೇದಿಕೆಯಿಂದಲೇ ಮಗನಿಗೆ, ‘ನಿರ್ಮಾಪಕರನ್ನು ಉಳಿಸುವ ಕೆಲಸ ಮಾಡಬೇಕು’ ಎಂಬ ಸಲಹೆ ನೀಡಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT