ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಥರ್ವ’ನ ಅಬ್ಬರ

Last Updated 21 ಜೂನ್ 2018, 20:13 IST
ಅಕ್ಷರ ಗಾತ್ರ

ಒಂದು ಬಾರ್ ಸಾಂಗ್, ಇನ್ನೊಂದು ರೊಮ್ಯಾಂಟಿಕ್, ಜತೆಗೊಂದು ಪ್ಯಾಥೊ ಇನ್ನುಳಿದೆರಡು ಹೇಗೋ ನಡೆಯುತ್ತದೆ. ಇದು ಗಾಂಧಿನಗರದ ಸಿನಿಮಾ ಗೀತಸೂತ್ರ. ಈ ಸೂತ್ರವನ್ನೇ ನೆಚ್ಚಿಕೊಂಡು ತಯಾರಾದ ಹಾಡುಗಳ ಗುಚ್ಛ ‘ಅಥರ್ವ’ ಚಿತ್ರದ್ದು.

ಅರ್ಜುನ್ ಸರ್ಜಾ ಕುಟುಂಬದ ಇನ್ನೊಂದು ಕುಡಿ ಪವನ್ ತೇಜ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾಗುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಮತ್ತು ಧ್ವನಿಸಾಂದ್ರಿಕೆ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಸಂಭ್ರಮಕ್ಕೆ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸಹ ಹಾಜರಿದ್ದು ಮೆರುಗು ಹೆಚ್ಚಿಸಿದರು.

ಕಾರ್ಯಕ್ರಮವೂ ಹಾಡು, ನೃತ್ಯಗಳ ಅಬ್ಬರದಿಂದಲೇ ಕೂಡಿತ್ತು. ಅಷ್ಟೇ ಅಲ್ಲ, ಟ್ರೇಲರ್‌, ಹಾಡುಗಳಲ್ಲೆಲ್ಲ ‘ಅಥರ್ವ’ ಅಬ್ಬರಿಸಿದ್ದೇ ಅಬ್ಬರಿಸಿದ್ದು. ಖಳನಾಗಿ ಯಶವಂತ್ ಶೆಟ್ಟಿ ಕ್ಷಣ ಹಾದುಹೋದರೂ ಬೆಚ್ಚಿ ಬೀಳಿಸುವ ಅಬ್ಬರವೇ. ಅಬ್ಬರ ಈ ಚಿತ್ರದ ಮುಖ್ಯ ಗುಣ ಎಂಬುದು ಎದ್ದು ಕಾಣುವಂತಿತ್ತು. ಆದರೆ ಮಾತಿಗೆ ನಿಂತಾಗ ಮಾತ್ರ ಪವನ್ ತೇಜ ಅಬ್ಬರ ತಣ್ಣಗಾಗಿ ವಿಧೇಯ ವಿದ್ಯಾರ್ಥಿಯ ಹಾಗೆ ‘ಎಲ್ಲರಿಗೂ ಧನ್ಯವಾದ’ ಎಂಬುದನ್ನೇ ಬೇರೆ ಬೇರೆ ಬಗೆಗಳಲ್ಲಿ ಹೇಳಿ ಸುಮ್ಮನಾದರು.

‘ಪವನ್ ತುಂಬ ಬದ್ಧತೆ ಇರುವ ನಟ. ನನಗಿಂತ ಹೆಚ್ಚು ಬದ್ಧತೆ ಅವನಿಗಿದೆ’ ಎಂದು ಬೆನ್ನುತಟ್ಟಿದರು ಚಿರಂಜೀವಿ ಸರ್ಜಾ. ಧ್ರುವ ಸರ್ಜಾ ಕೂಡ ‘ಜೈ ಆಂಜನೇಯ’ ಎಂದು ಹೇಳಿ ಶುಭ ಹಾರೈಸಿದರು. ತಾರಾ ಈ ಚಿತ್ರದಲ್ಲಿ ಒಂದು ಮಹತ್ವದ ಪಾತ್ರದಲ್ಲಿ ನಟಿಸಿದ್ದಾರಂತೆ. ‘ಈ ಚಿತ್ರದಲ್ಲಿ ನನ್ನದು ತುಂಬ ಚಿಕ್ಕ ಪಾತ್ರ. ಆದರೆ ಅಷ್ಟೇ ಮಹತ್ವದ್ದು’ ಎನ್ನುವುದು ಅವರ ಅಂಬೋಣ.ಅರುಣ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ‘ಈ ಸಿನಿಮಾ ನನ್ನ ಕನಸು. ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಸಂಬಂಧಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಪ್ರೇಮದ ಕಥೆ’ ಎಂದರು ಅರುಣ್. ಅಥರ್ವ ಎಂದರೆ ನರಸಿಂಹ ಸ್ವಾಮಿಯ ಹೆಸರು. ಈ ಚಿತ್ರದ ಕಥೆಯಲ್ಲಿ ನರಸಿಂಹಸ್ವಾಮಿ ಛಾಯೆಯೂ ಇರುವುದರಿಂದ ಆ ಹೆಸರಿಟ್ಟಿದ್ದಾರಂತೆ.

ಸನಂ ಶೆಟ್ಟಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ. ‘ನಾನು ಕನ್ನಡದ ಹುಡುಗಿ. ಕನ್ನಡದಲ್ಲಿ ನಟಿಸಬೇಕು ಎಂಬ ಕನಸು ಈ ಚಿತ್ರದ ಮೂಲಕ ನೆರವೇರುತ್ತಿದೆ’ ಎಂದು ಖುಷಿಯಿಂದ ಹೇಳಿದರು. ‘ನಾನು ಇದುವರೆಗೆ ದ್ರುವ ಮತ್ತು ಚಿರಂಜೀವಿ ಫ್ಯಾನ್ ಆಗಿದ್ದೆ. ಆದರೆ ಈ ಚಿತ್ರ ಮಾಡಿದ ನಂತರ ಪವನ್ ತೇಜ ಅವರ ಫ್ಯಾನ್ ಆಗಿದ್ದೇನೆ’ ಎಂಬ ಪ್ರಶಂಸೆಯ ಪಾರಿವಾಳವನ್ನೂ ಅವರು ಹಾರಿಬಿಟ್ಟರು.

ಚಿತ್ರದಲ್ಲಿರುವ ಐದು ಹಾಡುಗಳಿಗೆ ರಾಘವೇಂದ್ರ ವಿ. ಸಂಗೀತ ಸಂಯೋಜಿಸಿದ್ದಾರೆ. ಬಾರ್ ಸಾಂಗ್‌ಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.ವಿನಯ್ ಕುಮಾರ್ ಎಚ್‌. ಮತ್ತು ರಕ್ಷಯ್ ಎಸ್‌.ವಿ. ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT