ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಚಿತ್ರೋತ್ಸವ| ವಿಶ್ವ ಚಿತ್ರಗಳ ಬೆಳ್ಳಿ ಚಿತ್ತಾರ

Last Updated 24 ಮಾರ್ಚ್ 2023, 20:36 IST
ಅಕ್ಷರ ಗಾತ್ರ

ಬೆಂಗಳೂರು: ಅದೆಷ್ಟೋ ಕತೆಗಳು, ಮಾತು– ಕತೆಗಳು, 10 ಬೆಳ್ಳಿ ಪರದೆಗಳ ಮೇಲೆ ಫಳ್ಳನೆ ಮೂಡುವ ಬೆಳಕು ಚಿತ್ರ ನಿರ್ಮಾಪಕ ನಿರ್ದೇಶಕರ, ಪ್ರೇಕ್ಷಕರ ಮುಖದಲ್ಲಿ ಮೂಡಿಸುವ ಬೆರಗು, ಸಣ್ಣಗಿನ ಅಭಿಮಾನದ ಚಪ್ಪಾಳೆ, ಪುಟ್ಟ ಹರಟೆ... ಹೀಗೆ ಇನ್ನೂ ಏನೇನೋ ವರ್ಣ– ರಂಜಿತ ನೋಟಗಳು.

ಇದು ನಗರದ ಒರಾಯನ್‌ ಮಾಲ್‌ನಲ್ಲಿ ಶುಕ್ರವಾರ ಆರಂಭವಾದ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ನೋಟ. ಒರಾಯನ್‌ ಮಾಲ್‌ನಲ್ಲಿ ಇಂದು 32 ಚಿತ್ರಗಳು ಪ್ರದರ್ಶನಗೊಂಡವು. ಸುಚಿತ್ರಾ ಮತ್ತು ಡಾ.ರಾಜ್‌ಕುಮಾರ್ ಕಲಾ ಭವನದಲ್ಲಿ ಒಟ್ಟು 8 ಚಿತ್ರಗಳು ಪ್ರದರ್ಶನಗೊಂಡವು.

ಹೊಸ ಪ್ರತಿಭೆಗಳು, ಯುವ ನಿರ್ದೇಶಕರು ಅವರ ಅಭಿಮಾನಿಗಳ ದಂಡು ಈ ಚಿತ್ರೋತ್ಸವ ಪರಿಸರದ ಸುತ್ತಮುತ್ತ ಸೇರಿತ್ತು. ನೋಂದಾಯಿತ ಪ್ರತಿನಿದಿಗಳು, ವಿದ್ಯಾರ್ಥಿಗಳು ಚಿತ್ರ ಪ್ರದರ್ಶನದ ಪಟ್ಟಿಯನ್ನು ತದೇಕಚಿತ್ತದಿಂದ ಗಮನಿಸುತ್ತಾ ಯಾವುದು ಚೆನ್ನಾಗಿದೆ, ಚೆನ್ನಾಗಿಲ್ಲ ಎಂಬ ಚರ್ಚೆ ನಡೆಸುತ್ತಲೇ ಚಿತ್ರ ಮಂದಿರಗಳ ಒಳಗೆ ಹೆಜ್ಜೆ ಹಾಕಿದರು. ಇಂದು ಪ್ರದರ್ಶನಗೊಂಡ ಚಿತ್ರಗಳ ಪೈಕಿ ಸ್ಟೋನ್ ಟರ್ಟಲ್‌ (ಮಲೇಷ್ಯಾದ ಚಿತ್ರ, ನಿರ್ದೇಶನ: ವೂ ಮಿಂಗ್‌ ಜಿನ್‌) ಕ್ಲೋಂಡಿಕ್‌ (ಉಕ್ರೇನಿ ಭಾಷೆ, ನಿರ್ದೇಶನ: ಮರೈನಾ ಎರ್‌ ಗೊರ್ಬಚ್‌) ಹೌಸ್‌ಫುಲ್‌ ಪ್ರದರ್ಶನ ಕಂಡವು. ಸಂಜೆ ವೇಳೆಗೆ ಎಲ್ಲ ಪ್ರದರ್ಶನ ಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು.

ಪ್ರದರ್ಶನ ಮಂದಿರಗಳ ಹೊರಗೆ ಸಿನಿಮಾ ಫಲಕಗಳ ಮುಂದೆ, ಚಿತ್ರೋತ್ಸವದ ಲೋಗೊ, ಬ್ಯಾನರ್‌ ಮುಂದೆ ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆಯೂ ದೊಡ್ಡದಿತ್ತು. ನಿರ್ದೇಶಕರೊಂದಿಗೆ ಸಂವಾದ, ಸಮಕಾಲೀನ ಚಿತ್ರಗಳ ಬಗೆಗೆ ಚರ್ಚೆಗಳು ನಡೆದವು.

***

ನಮಗೆ ಇಂಥ ಚಿತ್ರೋತ್ಸವದಲ್ಲಿ ಭಾಗವಹಿಸಿ ಗೊತ್ತಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿಯೂ ರಾಜ್ಯಮಟ್ಟದ ಚಿತ್ರೋತ್ಸವಗಳು ಇದೇ ಮಾದರಿಯಲ್ಲಿ ನಡೆಯಬೇಕು.
- ಮಹಾದೇವ ಹಡಪದ, ಚಿತ್ರನಟ

ತವರೂರಷ್ಟೇ ಅಲ್ಲ, ಬೆವರೂರು ಎಂಬ ಪರಿಕಲ್ಪನೆ ನಮ್ಮದು. ಅದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಎಲ್ಲರೂ ಬೆಂಗಳೂರು ಬಗ್ಗೆ ತಿಳಿದುಕೊಳ್ಳಲಿ
- ಪ್ರದೀಪ್‌ ಶಾಸ್ತ್ರಿ, ನಿರ್ದೇಶಕ, ‘ಮೇಡ್‌ ಇನ್‌ ಬೆಂಗಳೂರು

ಗುರುಶಿಷ್ಯರು’ ಚಿತ್ರ ದೇಸಿ ಕ್ರೀಡೆಯೊಂದರ ಪುನರುತ್ಥಾನ ಸಂಬಂಧಿಸಿದಂತೆ ನೈಜ ಘಟನೆ ಆಧರಿಸಿಯೇ ಮೂಡಿಬಂದಿದೆ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿದೆ
- ಜಡೇಶ ಕೆ. ಹಂಪಿ, ಚಿತ್ರ ನಿರ್ದೇಶಕ

ಇದೊಂದು ರಿಫ್ರೆಷ್‌ ಆಗುವ ಉತ್ಸವ. ಇಲ್ಲಿನ ಚಿತ್ರಗಳಿಂದಲೇ ನಾವು ಎಂತಹ ಚಿತ್ರ ಮಾಡಬಹುದು ಎಂಬ ಐಡಿಯಾಗಳನ್ನು ಪಡೆದಿದ್ದಿದೆ. ವಿಶ್ವದ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶ ಇದೊಂದು ತರಬೇತಿಯೂ ಹೌದು.
- ಮಂಸೋರೆ, ಚಿತ್ರ ನಿರ್ದೇಶಕ

ತುಂಬಾ ಚೆನ್ನಾಗಿ ಆಯೋಜಿಸಿದ್ದಾರೆ. ಮೊದಲ ದಿನವಾದ ಕಾರಣ ಜನರ ಸಂಖ್ಯೆ ಕಡಿಮೆ ಇದೆ. ಮುಂದೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ನಮ್ಮ ಚಿತ್ರವೂ (ಮಾವು ಬೇವು) ಇಲ್ಲಿ ಹೆಚ್ಚು ಜನರಿಗೆ ತಲುಪಿದೆ.

-ಪ್ರೊ.ದೊಡ್ಡರಂಗೇಗೌಡ, ಸಾಹಿತಿ

****

ಚಿತ್ರೋತ್ಸವದಲ್ಲಿ ಇಂದು

ಒರಾಯನ್‌ ಮಾಲ್‌: ಚಿತ್ರಮಂದಿರಗಳ ಸಂಖ್ಯೆ 3ರಿಂದ 10: ವಿವಿಧ ಚಿತ್ರಗಳ ಪ್ರದರ್ಶನ

ಆಡಿಟೋರಿಯಂ 11: ಸಿನಿಮಾಟೋಗ್ರಪಿ ಮಾಸ್ಟರ್‌ ಕ್ಲಾಸ್‌ ಬೆಳಿಗ್ಗೆ 11.30

ಆರ್‌ಆರ್‌ಆರ್‌ ಬಿಹೈಂಡ್‌ ದಿ ಸ್ಕ್ರೀನ್‌ ಪ್ಲೇ – ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್‌ ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT