ಬತ್ತಿ ಗುಲ್‌ ಮೀಟರ್‌ ಚಾಲೂ: ವಿದ್ಯುತ್‌ ಕಳವಿನ ಸುತ್ತ

7
ಸಿನಿಮಾ ಟ್ರೇಲರ್

ಬತ್ತಿ ಗುಲ್‌ ಮೀಟರ್‌ ಚಾಲೂ: ವಿದ್ಯುತ್‌ ಕಳವಿನ ಸುತ್ತ

Published:
Updated:

ವೃತ್ತಿಯಲ್ಲಿ ವಕೀಲನಾಗಿದ್ದರೂ ನಾಯಕನದು ಹುಡುಕಾಟದ ಸ್ವಭಾವ. ಸಿನಿಮಾ ಎಂದಮೇಲೆ ಅವನಿಗೊಬ್ಬಳು ನಾಯಕಿ ಬೇಕು, ಇದ್ದಾಳೆ. ಕಣ್ಣುಮಿಟುಕಿಸುವ ವಿದ್ಯುತ್‌ ಬಲ್ಬ್‌ಗಳೊಡನೆ ಒಂದಿಷ್ಟು ಹಾಸ್ಯ, ಹರಟೆ, ಹಾಡು–ಕುಣಿತದೊಡನೆ ಲಯವಾಗಿಯೇ ಸಾಗುವ ಕಥೆ ಇದ್ದಕ್ಕಿದ್ದಂತೆ ತಿರುವಿಗಿಳಿದುಬಿಡುತ್ತದೆ.

ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯುತ್‌ ಬಿಲ್‌ ಪಾವತಿಸಬೇಕಾದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ಸಾವು ನಾಯಕನ ಸ್ವಭಾವ ಬದಲಿಸುತ್ತದೆ. ಸ್ನೇಹಿತನ ಸಾವಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿಯ ಹೊರೆ ಅವನ ಬೆನ್ನಿಗೇರುತ್ತದೆ. ಪ್ರಕರಣದ ಬೆನ್ನು ಹತ್ತುವ ನಾಯಕ ಕೋರ್ಟ್‌ನಲ್ಲಿ ಚಿತ್ರದ ಎರಡನೇ ನಾಯಕಿಯೊಡನೆ ಜಿದ್ದಿಗೆ ಬಿದ್ದು ವಾದಿಸುತ್ತಾನೆ.

ಆಗಾಗ್ಗೆ ಕೇಳುವ ಸಂಗೀತ, ಮನಸ್ಸಿಗೆ ಹತ್ತಿರವಾಗುವ ಭಾವುಕ ಕ್ಷಣಗಳು ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಿಸುತ್ತದೆ.

*

ದೇಶದಲ್ಲಿ ನಡೆಯುತ್ತಿರುವ ವಿದ್ಯುತ್‌ ಕಳ್ಳತನದ ಸಮಸ್ಯೆಯನ್ನು ವಸ್ತುವಾಗಿರಿಸಿಕೊಂಡು ತಯಾರಾಗುತ್ತಿರುವ ಸಿನಿಮಾ ಬತ್ತಿ ಗುಲ್‌ ಮೀಟರ್‌ ಚಾಲೂ (ವಿದ್ಯುತ್ ಇಲ್ಲದೇ ಇದ್ದರೂ ಮೀಟರ್ ಓಡುತ್ತದೆ)  ದ ಟ್ರೇಲರ್‌ನ ತಿರುಳು ಇದು. ಅಕ್ಷಯ್‌ ಕುಮಾರ್‌ ಇತ್ತೀಚೆಗೆ ಅಭಿನಯಿಸಿದ್ದ ಟಾಯ್ಲೆಟ್‌ ಏಕ್‌ ಪ್ರೇಮ ಕಥಾ ಚಿತ್ರ ನಿರ್ಮಿಸಿದ್ದ ಟಿ– ಸಿರೀಸ್‌ ಫಿಲ್ಮ್ಸ್‌ ಈ ಸಿನಿಮಾಗೂ ಹಣ ಹೂಡುತ್ತಿದೆ.

ನಾಯಕನಾಗಿ ಶಾಹಿದ್‌ ಕಪೂರ್‌ ನಟಿಸಿದ್ದು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಸೂಚನೆ ನೀಡಿದ್ದಾರೆ. ಶ್ರದ್ದಾ ಕಪೂರ್‌ ಹಾಗೂ ಯಾಮಿ ಗೌತಮ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಅನ್ನು ಸಂಪೂರ್ಣವಾಗಿ ಶಾಹಿದ್‌ ಆವರಿಸಿಕೊಂಡಿದ್ದಾರೆ. ಉಳಿದವರ ನಟನೆ ನೋಡಬೇಕಾದರೆ ಸಿನಿಮಾ ರಿಲೀಸ್‌ವರೆಗೆ ಕಾಯಲೇಬೇಕು. ಚಿತ್ರ ಸೆಪ್ಟೆಂಬರ್‌ 21ಕ್ಕೆ ತೆರೆಕಾಣಲಿದೆ.


ಯಾಮಿ ಗೌತಮ್‌

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿರುವ ನಿರ್ದೇಶಕ ಶ್ರೀ ನಾರಾಯಣ ಸಿಂಗ್‌, ‘ಈ ಸಿನಿಮಾ ಕಥೆ ನನ್ನ ಹೃದಯಕ್ಕೆ ಹತ್ತಿರವಾದದ್ದು. ದೇಶದಲ್ಲಿ ತಲೆದೋರಿರುವ ವಿದ್ಯುತ್‌ ಕಳವಿನ ಸಮಸ್ಯೆಯ ಬಗ್ಗೆ ಅರಿತಿದ್ದೇನೆ. ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಬರೆದಿದ್ದವರೇ ಈ ಸಿನಿಮಾಗೂ ಚಿತ್ರಕಥೆ ಬರೆದಿದ್ದಾರೆ. ಸಾಧ್ಯವಾದಷ್ಟು ಉತ್ತಮವಾಗಿ ಸಿನಿಮಾ ಮಾಡಿದ್ದೇವೆ. ಟ್ರೇಲರ್‌ ಬಿಡುಗಡೆಯಾಗಿದ್ದು, ಭಾವೋದ್ವೇಗಕ್ಕೊಳಗಾಗಿದ್ದೇನೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !