ಮಂಗಳವಾರ, ಜೂನ್ 28, 2022
20 °C

ಬರ್ಲಿನ್‌ಗೆ ‘ಬಯಲಾಟದ ಭೀಮಣ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜರಾಜೇಶ್ವರಿ ಸಿನಿ ಆರ್ಟ್ಸ್‌ ಸಂಸ್ಥೆಯು ನಿರ್ಮಾಣ ಮಾಡಿದ, ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬಯಲಾಟದ ಭೀಮಣ್ಣ’ ಚಿತ್ರವು ಬರ್ಲಿನ್‌ ಅಂತರರಾಷ್ಟ್ರೀಯ ಆರ್ಟ್‌ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

2018ರ ಡಿಸೆಂಬರ್‌ನಲ್ಲಿ ಸೆನ್ಸಾರ್‌ ಆಗಿದ್ದ ಈ ಚಿತ್ರವನ್ನು ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯ ‘ಚಿತ್ರಯಾತ್ರೆ’ ಮೂಲಕ ನೂರಾರು ಊರುಗಳಲ್ಲಿ ಪ್ರದರ್ಶನ ಮಾಡಲಾಗಿತ್ತು. ಕೊರೊನಾ ನಂತರ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಅಧಿಕೃತ ಬಿಡುಗಡೆಗೂ ಸಿದ್ಧತೆ ನಡೆದಿದೆ. ಈ ಚಿತ್ರವು ಬರಗೂರರ ‘ಬಯಲಾಟದ ಭೀಮಣ್ಣ’ ಎಂಬ ಕಥೆಯನ್ನು ಆಧರಿಸಿದೆ. ಬರಗೂರರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದು ಗೀತೆಗಳನ್ನೂ ನಿರ್ದೇಶಿಸಿದ್ದಾರೆ.

‘ಬಯಲುಸೀಮೆಯಲ್ಲಿ ಪ್ರಸಿದ್ಧವಾದ ರಂಗರೂಪ ‘ಬಯಲಾಟ’ದ ಕಲಾವಿದನನ್ನು ಕೇಂದ್ರವಾಗಿರಿಸಿಕೊಂಡು ‍ಗ್ರಾಮೀಣ ಕಲಾವಿದರ ಆಸೆ, ಆಕಾಂಕ್ಷೆ ಹಾಗೂ ಸವಾಲುಗಳ ಸುತ್ತ ಈ ಸಿನಿಮಾ ಬೆಳಕುಚೆಲ್ಲುತ್ತದೆ. ಕಲಾಭಿವ್ಯಕ್ತಿಗೆ ಒದಗುವ ಸರ್ವಾಧಿಕಾರಿ ಸವಾಲುಗಳನ್ನು ಎದುರಿಸಲು ಯುವ ಲೇಖಕನ ಪಾತ್ರದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನು ಈ ಸಿನಿಮಾದಲ್ಲಿ ಅಂತರ್ಗತ ಮಾಡಲಾಗಿದೆ’ ಎನ್ನುತ್ತಾರೆ ಬರಗೂರು.

ಭೀಮಣ್ಣನ ಪಾತ್ರದಲ್ಲಿ ಸುಂದರ್‌ ರಾಜ್‌, ಯುವ ಲೇಖಕನ ಪಾತ್ರದಲ್ಲಿ ನಟ ರಂಜಿತ್‌ ಅಭಿನಯಿಸಿದ್ದಾರೆ. ಇವರಿಗೆ ಬೆಂಬಲವಾಗಿ ನಿಲ್ಲುವ ಟೀಚರ್‌ ಪಾತ್ರದಲ್ಲಿ ‘ಸ್ಪರ್ಶ’ ಖ್ಯಾತಿಯ ರೇಖಾ ಅಭಿನಯಿಸಿದ್ದಾರೆ. ಮಾಸ್ಟರ್‌ ಆಕಾಂಕ್ಷ್‌ ಬರಗೂರು ಜನಪದ ಕಲೆಯ ಹೊಸ ರಾಯಭಾರಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇವರಲ್ಲದೆ ಹನುಮಂತೇಗೌಡ, ಪ್ರಮೀಳಾ ಜೋಷಾಯ್‌, ರಾಧಾ ರಾಮಚಂದ್ರ, ವತ್ಸಲಾ ಮೋಹನ್‌, ಅಂಬರೀಷ್‌ ಸಾರಂಗಿ, ನಂಜಪ್ಪ ಕಾಳೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೃಷ್ಣವೇಣಿ ನಂಜಪ್ಪ ಮತ್ತು ಧನಲಕ್ಷ್ಮಿ ಕೃಷ್ಣಪ್ಪ ನಿರ್ಮಾಪಕರಾಗಿರುವ ಈ ಚಿತ್ರದ ಛಾಯಾಗ್ರಾಹಕರು ನಾಗರಾಜ ಆಧವಾನಿ, ಸಂಕಲನಕಾರರು ಸುರೇಶ್‌ ಅರಸು, ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್‌. ಖ್ಯಾತ ನಟರಾದ ಸಂಚಾರಿ ವಿಜಯ್‌ ಮತ್ತು ಸುಂದರ್‌ ರಾಜ್‌ ಅವರು ಗಾಯಕರಾಗಿ ತಲಾ ಒಂದು ಹಾಡು ಹಾಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು