ಶುಕ್ರವಾರ, ಆಗಸ್ಟ್ 23, 2019
22 °C

ನಕ್ಕು ನಲಿಸುವ ‘ಬೆಲ್ಚಪ್ಪ’!

Published:
Updated:
Prajavani

ಕೋಸ್ಟಲ್‌ವುಡ್‌ನಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಒಂದು ಚಿತ್ರ ಸಹ ತೆರೆಕಂಡಿರಲಿಲ್ಲ. ಏಪ್ರಿಲ್‌ನಲ್ಲಿ ಬಿಡುಗಡೆ ಆಗಿದ್ದಂತಹ ‘ಗೋಲ್‌ಮಾಲ್‌’ ಸಿನಿಮಾ ಪ್ರೇಕ್ಷಕರನ್ನು ಅಷ್ಟೇನೂ ಮೋಡಿ ಮಾಡಲಿಲ್ಲ. ‘ತೆಲಿಪಂದೆ ಉಪ್ಪರೆಗ್‌ ಸಾಧ್ಯನೇ ಇಜ್ಜಿ...’ ಎನ್ನುತ್ತಾ ತೆರೆಗೆ ಬರುತ್ತಿರುವ ‘ಬೆಲ್ಚಪ್ಪ’ ಕೋಸ್ಟಲ್‌ವುಡ್‌ಗೆ ಶಕ್ತಿಮದ್ದು ನೀಡುತ್ತಾನೆಯೇ ಎಂಬ ಪ್ರಶ್ನೆಗೆ ಉತ್ತರ ಇಂದೇ ಸಿಗಲಿದೆ!

ರಜನೀಶ್‌ ದೇವಾಡಿಗ ನಿರ್ದೇಶನದ ‘ಬೆಲ್ಚಪ್ಪ’ ಸಂಪೂರ್ಣ ಹಾಸ್ಯಮಯ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಎರಡನೇ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ರಜನೀಶ್‌ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

‘ಬೆಲ್ಚಪ್ಪ’ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ ಎನ್ನುತ್ತಾ ಮಾತು ಆರಂಭಿಸಿದರು ನಿರ್ದೇಶಕ ರಜನೀಶ್‌. ‘ಏನೇನು’ ಎಂಬ ಪ್ರಶ್ನೆಗೆ ಮೂರು ಮುಖ್ಯ ಸಂಗತಿಗಳನ್ನು ಹಂಚಿಕೊಂಡರು.

‘ಈ ಚಿತ್ರದ ಮೂಲಕ ನಾವು ಮೂರು ದಾಖಲೆಗಳನ್ನು ನಿರ್ಮಿಸಿದ್ದೇವೆ. ಮೊದಲನೇಯದಾಗಿ ಕೇವಲ 14 ದಿನಗಳಲ್ಲಿ ಇಡೀ ಚಿತ್ರದ ಚಿತ್ರೀಕರಣವನ್ನು ಮುಗಿಸಲಾಗಿದೆ. ಸ್ಟಡಿ ಕ್ಯಾಮ್‌ ಬಳಸಿ ಚಿತ್ರೀಕರಿಸಿದ್ದು ಚಿತ್ರದ ಇನ್ನೊಂದು ವಿಶೇಷ. ಇದು ತುಳುಚಿತ್ರರಂಗದಲ್ಲಿ ಪ್ರಥಮ ಪ್ರಯತ್ನ. ಮೂರನೇಯದ್ದು ಇನ್ನೂ ವಿಶೇಷವಾದದ್ದು. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಈವರೆಗೆ ಯಾರೂ ಮಾಡದಿರುವಂತಹ ಪ್ರಯತ್ನ ಅದು. ಆನೆಯ ಕೈಯಲ್ಲಿ ಟ್ರೈಲರ್‌ ಅನ್ನು ಬಿಡುಗಡೆ ಮಾಡಿಸಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದೆವು. ಸೋಷಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗಿತ್ತು’ ಎಂದರು.

ಶುಕ್ರವಾರ ತೆರೆಗೆ ಬರುತ್ತಿರುವ ‘ಬೆಲ್ಚಪ್ಪ’ ಸಿನಿಮಾ ಮಂಗಳೂರು, ಉಡುಪಿ, ಮೂಡುಬಿದಿರೆ ಮತ್ತು ಕಾರ್ಕಳ ಸೇರಿದಂತೆ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆಕಾಣುತ್ತಿದೆ. ತದನಂತರ, ಬೆಂಗಳೂರು, ಮುಂಬೈ ಮತ್ತು ದುಬೈನಲ್ಲಿ ತೆರೆಕಾಣಿಸುವ ಯೋಚನೆಯಲ್ಲಿದ್ದಾರೆ ರಜನೀಶ್‌.

‘ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಪ್ರಾಣಿ, ಪಕ್ಷಿಗಳಿಂದ ಪೈರು ರಕ್ಷಿಸಿಕೊಳ್ಳಲು ಬೆಲ್ಚಪ್ಪನನ್ನು ನಿಲ್ಲಿಸುತ್ತಾರೆ. ಆ ಬೆಲ್ಚಪ್ಪ ಪ್ರಾಣಿ ಪಕ್ಷಿಗಳಲ್ಲಿ ದಿಗಿಲು ಮೂಡಿಸುತ್ತಾನೆ. ಆದರೆ, ನಮ್ಮ ಸಿನಿಮಾದಲ್ಲಿರುವ ಬೆಲ್ಚಪ್ಪ ಪ್ರೇಕ್ಷಕರನ್ನು ನಕ್ಕುನಲಿಸುತ್ತಾನೆ. ಈ ಚಿತ್ರದಲ್ಲಿ ಅರವಿಂದ್‌ ಬೋಳಾರ್‌ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ನಾಯಕನಟರೇ ಅವರು ಎಂದರೆ ತಪ್ಪಾಗಲಾರದು. ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಕಾಮಿಡಿ ಟ್ರ್ಯಾಕ್‌ನಲ್ಲೇ ಅವರ ಪಾತ್ರ ಸಾಗುತ್ತದೆ. ಪ್ರೇಕ್ಷಕರಲ್ಲಿ ಪ್ರತಿಕ್ಷಣವೂ ಕುತೂಹಲ ಮೂಡಿಸಿಕೊಂಡು ಹೋಗುವಂತಹ ಪಾತ್ರ ಅವರದ್ದು. ಚಿತ್ರದ ನಾಯಕ ಬೆಲ್ಚಪ್ಪನೇ ಅಥವಾ ಸಹ ಕಲಾವಿದರು ಬೆಲ್ಚಪ್ಪನೇ ಎಂಬುದನ್ನು ಪ್ರೇಕ್ಷಕರು ಸಿನಿಮಾ ನೋಡಿಯೇ ತಿಳಿಯಬೇಕು. ಚಿತ್ರದಲ್ಲಿ ನಾಲ್ಕು ಗೀತೆಗಳಿವೆ. ಒಂದು ವಾಟರ್‌ ಫೈಟ್‌ ಕೂಡ ಇದೆ. ಸಂಪೂರ್ಣ ಹಾಸ್ಯಮಯ ಹಾಗೂ ವಿಭಿನ್ನವಾದಂತಹ ಸಿನಿಮಾ’ ಎನ್ನುತ್ತಾರೆ ರಜನೀಶ್‌.

‘ಯಶಸ್ವಿ ದೇವಾಡಿಗ ಚಿತ್ರದ ನಾಯಕನಟಿ. ಲವ್ಲಿ–ಬಬ್ಲಿ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಚಿತ್ರದುದ್ದಕ್ಕೂ ಅವರ ಪಾತ್ರ ಪಯಣಿಸುತ್ತದೆ. ಇದು ಅವರ ಮೊದಲ ತುಳು ಚಿತ್ರ. ಈ ಚಿತ್ರದಲ್ಲಿ ನಾನು ಖಡಕ್‌ ಮಿಲಿಟರಿ ಆಫೀಸರ್‌ ಪಾತ್ರವನ್ನು ಮಾಡಿದ್ದೇನೆ’ ಎಂದರು ರಜನೀಶ್‌.

ನಂತರ ಮಾತು ಮುಂದುವರಿಸಿದ ಅವರು, ‘ಕಿಚ್ಚ ಸುದೀಪ ಹಾಗೂ ಬಾಕ್ಸ್ ಆಫೀಸ್‌ ಸುಲ್ತಾನ ದರ್ಶನ್‌ ತೂಗುದೀಪ ಅವರ ಅಭಿಮಾನಿಗಳು ‘ಬೆಲ್ಚಪ್ಪ’ ಸಿನಿಮಾವನ್ನು ಕನ್ನಡಕ್ಕೆ ಡಬ್‌ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ’ ಎಂದು ಹೊಸ ಬಾಂಬ್‌ ಸಿಡಿಸಿ ಮಾತು ಮುಗಿಸಿದರು!

Post Comments (+)