ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಬ್‌ಗೆ ಫಲಿತಾಂಶದ ಕಾತರ

Last Updated 14 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ನಟನಾಗುವ ಹಂಬಲದಿಂದ ಚಂದನವನಕ್ಕೆ ಕಾಲಿಟ್ಟಿದ್ದ ರಿಷಬ್‌ ಶೆಟ್ಟಿ ನಟಿಸಿದ್ದು ಕಡಿಮೆಯೇ. ನಿರ್ದೇಶಕನಾಗಿ ಅವರು ಹೆಚ್ಚು ಹೆಸರು ಗಳಿಸಿದರು. ಅವರ ನಿರ್ದೇಶನದ ಎರಡು ಸಿನಿಮಾಗಳು ಚಂದನವನದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದವು. ನಿರ್ದೇಶಕನಾಗಿ ಚಿತ್ರೋದ್ಯಮದಲ್ಲಿ ತಳವೂರಿದ ಬಳಿಕ, ಈಗ ಅವರು ಪೂರ್ಣ ಪ್ರಮಾಣದ ‘ಹೀರೊ’ ಆಗಿ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಾರೆ. ಅವರ ನಟನೆಯ ‘ಬೆಲ್‌ ಬಾಟಂ’ ಚಿತ್ರ ಇದೇ ಶುಕ್ರವಾರ (ಫೆ. 15) ತೆರೆಕಾಣುತ್ತಿದೆ. 80ರ ದಶಕದ ಕಥೆ ಇದು. ಇದರಲ್ಲಿ ರಿಷಬ್‌ ಅವರದು ರೆಟ್ರೊ ಲುಕ್‌. ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಹೀರೊ ಆಗಿ ನಟಿಸಿದ ಮೊದಲ ಸಿನಿಮಾದಲ್ಲೇ ವೀಕ್ಷಕರನ್ನು 80ರ ದಶಕಕ್ಕೆ ಕರೆದೊಯ್ದಿದ್ದೀರಲ್ಲ?
ಹೌದು, ಕನ್ನಡದದಲ್ಲಿ ಇಂಥ ಮೊದಲ ಪ್ರಯತ್ನ ಇದು. 80ರ ದಶಕದಲ್ಲಿ ನಾವೆಲ್ಲ ಅಣ್ಣಾವ್ರ (ಡಾ.ರಾಜ್‌ಕುಮಾರ್‌) ಸಿನಿಮಾಗಳನ್ನು ನೋಡಿ ಬೆಳೆದಿದ್ದೇವೆ. ಆ ಕಾಲದ ಲುಕ್‌, ಡೈಲಾಗ್‌ ಡೆಲಿವರಿ, ನಡೆ–ನುಡಿ... ಇವೆಲ್ಲವನ್ನೂ ಬಳಸಿಕೊಂಡು ಹೊಸ ತಂತ್ರಜ್ಞಾನದೊಂದಿಗೆ ವೀಕ್ಷಕರ ಮುಂದಿಟ್ಟಿದ್ದೇವೆ.

* ಅಂದರೆ, ಈಗ ಮಧ್ಯವಯಸ್ಸಿನಲ್ಲಿರುವವರಿಗೆ ಈ ಸಿನಿಮಾ ಇಷ್ಟವಾಗಬಹುದು ಅಲ್ಲವೇ?
ಮಧ್ಯ ವಯಸ್ಸಿನವರಿಗೆ ಮಾತ್ರವಲ್ಲ, ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಮಧ್ಯವಯಸ್ಸಿನವರಿಗೆ ಇದು ನಾಸ್ಟಾಲ್ಜಿಕ್‌ ಆಗಿ ಕಾಣಬಹುದು. ತಮ್ಮ ಹದಿಹರೆಯದ ದಿನಗಳನ್ನು, ಆ ಕಾಲದ ಸಿನಿಮಾಗಳನ್ನು ನೆನಪಿಸಿಕೊಡಬಹುದು. ಆದರೆ, ಈಗಿನ ಅನೇಕ ಯುವಕರು ಸಣ್ಣ ವಯಸ್ಸಿನಲ್ಲಿ ಅಂಬರೀಷ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಮುಂತಾದ ನಟರ ಸಿನಿಮಾಗಳನ್ನು ನೋಡುತ್ತ ಬೆಳೆದಿದ್ದಾರೆ. ಅವರಿಗೂ ಒಂದು ಹೊಸ ಅನುಭವವನ್ನು ಈ ಚಿತ್ರ ನೀಡುತ್ತದೆ. ಚಿತ್ರದ ಹಿನ್ನೆಲೆ ಮಾತ್ರ 80ರ ದಶಕದ್ದು, ಆದರೆ, ಆ ಕಾಲದಲ್ಲಿ ನಗರವೊಂದರಲ್ಲಿ ನಡೆಯುವ ಕತೆ ಇದರಲ್ಲಿದೆ. ಆದ್ದರಿಂದ ಎಲ್ಲರೂ ನೋಡಿ ಆನಂದಿಸಬಹುದಾದ ಕಾಮಿಡಿ, ಥ್ರಿಲ್ಲರ್‌ ಇದು.

* ನಿರ್ದೇಶಕನಾಗಿ ಹೆಸರು ಮಾಡಿರುವ ನಿಮಗೆ ಬೇರೊಬ್ಬ ನಿರ್ದೇಶಕನ ಕೆಳಗೆ ಕೆಲಸ ಮಾಡುವುದು ಹೇಗನಿಸಿತು?
ಅಂಥ ಸಮಸ್ಯೆ ಏನೂ ಆಗಲಿಲ್ಲ. ಶೂಟಿಂಗ್‌ ಸಮಯದಲ್ಲಿ ನನ್ನೊಳಗಿನ ನಿರ್ದೇಶಕನನ್ನು ಸ್ವಿಚ್‌ ಆಫ್‌ ಮಾಡಿ ಪಕ್ಕಕ್ಕೆ ಇಟ್ಟಿದ್ದೆ. ಯಾಕೆಂದರೆ ಜಯತೀರ್ಥ ಅವರು ತುಂಬ ಅನುಭವಿ ನಿರ್ದೇಶಕ. ಒಂದು ಸಿನಿಮಾ ಮಾಡುವಾಗ ಅದು ಹೀಗೆಯೇ ಇರಬೇಕು ಎಂಬ ಕಲ್ಪನೆ ನಿರ್ದೇಶಕನಲ್ಲಿ ಇರುತ್ತದೆ. ಇನ್ನೊಬ್ಬರು ಮೂಗು ತೂರಿಸಿದರೆ ಅದರ ಅಂದ– ಚೆಂದ, ಆಕಾರಗಳು ಕೆಡುತ್ತವೆ. ಆದ್ದರಿಂದ ‘ಬೆಲ್‌ ಬಾಟಂ’ನಲ್ಲಿ ನಾನು ನಟನೆಗೆ ಮಾತ್ರ ಸೀಮಿತನಾಗಿದ್ದೆ. ಹಾಗೆಂದು ಉಳಿದ ವಿಚಾರಗಳಲ್ಲಿ ಮಾತನಾಡಿಯೇ ಇಲ್ಲ ಎಂದಲ್ಲ. ಸ್ಕ್ರಿಪ್ಟ್‌, ಚಿತ್ರಕತೆ ನಿರ್ಮಾಣದ ಹಂತದಲ್ಲಿ ಎಲ್ಲರೂ ಕುಳಿತು ಚರ್ಚೆ ನಡೆಸಿದ್ದೆವು. ಆಗ ನನ್ನ ಸಲಹೆ ಸೂಚನೆಗಳನ್ನೂ ನೀಡಿದ್ದೆ. ನನ್ನೊಳಗಿನ ನಿರ್ದೇಶಕ ಅಷ್ಟಕ್ಕೇ ಸೀಮಿತನಾಗಿದ್ದ. ಎರಡು ದೋಣಿಗಳಲ್ಲಿ ಕಾಲಿಡುವುದು ಅಪಾಯಕಾರಿಯಲ್ಲವೆ?

* ‘ಬೆಲ್‌ ಬಾಟಂ’ ತಮಿಳಿಗೆ ರಿಮೇಕ್‌ ಆಗುತ್ತಿದೆಯಂತೆ, ಅದರಲ್ಲೂ ನೀವೇ ನಟಿಸುವಿರಾ?
ಇಲ್ಲ. ಅಲ್ಲಿನ ನಿರ್ಮಾಪಕರೊಬ್ಬರಿಗೆ ಕಥೆ ಇಷ್ಟವಾಗಿದ್ದು, ತಮಿಳಿನಲ್ಲಿ ರಿಮೇಕ್‌ ಮಾಡುವುದಾಗಿ ಹೇಳಿದ್ದಾರೆ. ಅದರಲ್ಲಿ ನಮ್ಮ ತಂಡದ ಯಾರೂ ಇರುವುದಿಲ್ಲ.

* ಅಮಿತಾಬ್‌ ಬಚ್ಚನ್‌, ಸುದೀಪ್‌ ಅವರ ಚಿತ್ರಗಳನ್ನು ನೀವು ನಿರ್ದೇಶಿಸಲಿದ್ದೀರಿ ಎಂದು ಸುದ್ದಿಯಾಗಿತ್ತಲ್ಲ, ನಿಜವೇ?
ಹಾಗೊಂದು ಸುದ್ದಿಯಾಗಿದೆ ಅಷ್ಟೇ. ಆ ನಿಟ್ಟಿನಲ್ಲಿ ಯೋಚಿಸಿದ್ದು ನಿಜ. ಇನ್ನಷ್ಟು ಕೆಲಸಗಳು ಆಗಬೇಕು. ಆದ್ದರಿಂದ ಈಗಲೇ ಆ ಬಗ್ಗೆ ಏನನ್ನೂ ಹೇಳಲಾರೆ. ಸದ್ಯ ವಿನು ಬಳಂಜ ನಿರ್ದೇಶನದ ‘ನಾಥೂರಾಮ್‌’ ಎಂಬ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಸದ್ಯದಲ್ಲೇ ಅದರ ಶೂಟಿಂಗ್‌ ಆರಂಭವಾಗಲಿದೆ.

* ‘ಬೆಲ್‌ ಬಾಟಂ’ ಅನುಭವ ಹೇಗಿತ್ತು?
ಶೂಟಿಂಗ್‌ನ ಪ್ರತಿ ಕ್ಷಣವನ್ನೂ ಆನಂದಿಸಿದ್ದೇವೆ. ಇಡೀ ತಂಡ ಪ್ರತಿನಿತ್ಯ ತಲೆಹರಟೆ ಮಾಡುತ್ತಲೇ ಇರುತ್ತಿತ್ತು. ನನ್ನ ಪಾತ್ರವೂ ಅಂಥ ಅನುಭವವನ್ನು ಬಯಸುತ್ತಿತ್ತು. ಚಿತ್ರಕ್ಕೆ ತುಂಬಾ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದೆವು. ತಂಡದ ಶ್ರಮ ತೆರೆಯ ಮೇಲೆ ಕಾಣಿಸುತ್ತಿದೆ. ಉಳಿದದ್ದನ್ನು ವೀಕ್ಷಕರು ಹೇಳಬೇಕು. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT