ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಬಹುಮತ ಬರದಿದ್ದರೆ ರಾಷ್ಟ್ರಪತಿ ಆಡಳಿತ ಹೇರಲಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಜಾತ್ಯತೀತ ಜನತಾದಳಕ್ಕೆ ಹೆಚ್ಚು ಸೀಟು ಬರಲಿದೆ ಎಂಬ ನಿಮ್ಮ ಆಶಾವಾದಕ್ಕೆ ಕಾರಣಗಳೇನು?

ಹೆಗಡೆ ವಿರೋಧಿ, ಕೃಷ್ಣಾ ನೀರಾವರಿ ವಿರೋಧಿ, ಬೊಮ್ಮಾಯಿ ಸರ್ಕಾರವನ್ನು ಬೀಳಿಸಿದವನು ಎಂದು ಮೀಡಿಯಾ ನನ್ನನ್ನು ಮುಗಿಸಲು ಪ್ರಯತ್ನಿಸಿತು. ವಾಸ್ತವಾಂಶಗಳನ್ನು ನನ್ನ ಪುಸ್ತಕದಲ್ಲಿ ಬರೆಯುತ್ತಿದ್ದೇನೆ. ಈಗ ಹಲವಾರು ಸಭೆಗಳಲ್ಲಿ, ಆಗಿನ ಕಾಲದ ಈ ಅನ್ಯಾಯ ಕಂಡಿದ್ದ ಹಿರಿಯರು ಕೆಲವರು ಎದ್ದು ನಿಂತು 'ನಿನಗೆ ಎಷ್ಟು ತೊಂದರೆ ಕೊಟ್ಟೆವಪ್ಪಾ ನಾವು' ಅಂತ ಅಳ್ತಾರೆ. ನನ್ನ ಕಾಲ ಮುಗೀತು, ಈ ಪಕ್ಷ ಉಳಿಸಿಕೊಡಿ ಅಂತ ನಾನು ಕೋರಿದರೆ 'ಯಾಕಪ್ಪಾ ಹೀಗಂತೀಯಾ ನಿನ್ ಕಾಲ ಮುಗಿದಿಲ್ಲಪ್ಪಾ, ಅನ್ಯಾಯ ಮಾಡಿದೆವಪ್ಪಾ ನಿನಗೆ. ಈ ಸಲ ನಿನ್ನ ಮಗನಿಗೆ ಮತ ಕೊಟ್ಟು ಋಣ ತೀರಿಸ್ತೀವಿ' ಅಂತ ಕಣ್ಣೀರು ಹಾಕ್ತಾರೆ.

* ಹಳೆಯ ಮೈಸೂರು ಪ್ರದೇಶದಲ್ಲಿ ಪಕ್ಷ ತೊರೆದವರಿಂದ ತೊಂದರೆ ಇಲ್ಲವೇ?

ಬಿಟ್ಟು ಹೋದದ್ದು ‘ಪಾಸಿಟಿವ್’ ಆಗಿದೆಯೇ ವಿನಾ, ‘ನೆಗೆಟಿವ್’ ಆಗಿಲ್ಲ. ಅವರ ನಡವಳಿಕೆಯೇ ಅದಕ್ಕೆ ಕಾರಣ. ಅವರು ಅತಿಯಾಗಿ ಲಘುವಾಗಿ ಮಾತಾಡ್ತಿರೋದೇ ಅದಕ್ಕೆ ಕಾರಣ. ನಮಗೆ ಹಣಕಾಸಿನ ಶಕ್ತಿ ಕಡಿಮೆ. ನಮ್ಮ ಪಕ್ಷ ಬಿಟ್ಟು ಹೋದವರಿಗೆ ಸಿದ್ದರಾಮಯ್ಯ ಬಹಳ ಶಕ್ತಿ ಕೊಟ್ಟಿದ್ದಾರೆ. ಗುತ್ತಿಗೆಗಳನ್ನು ಧಾರಾಳವಾಗಿ ಕೊಟ್ಟು, ಒಂದೊಂದು ಕ್ಷೇತ್ರದಲ್ಲೂ ನೂರಿನ್ನೂರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಮಂಜೂರು ಮಾಡಿದ್ದಾರೆ. ಜನ ಅದನ್ನು ಮೆಟ್ಟಿ ನಿಲ್ಲುತ್ತಾರೆ.

ಹಳೇ ಮೈಸೂರಿನಲ್ಲಿ ನಮಗೆ ತೊಂದರೆ ಇಲ್ಲ. ಆದರೆ ನಮ್ಮಲ್ಲಿ ಜಗಳ ಇದೆ. ಒಕ್ಕಲಿಗರಲ್ಲೇ ತೀವ್ರ ಪೈಪೋಟಿ ಎದ್ದಿದೆ.

* ನಿಮ್ಮ ಚುನಾವಣಾ ಬಲಾಬಲಗಳೇನು?

ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಪಕ್ಷ ಮತ್ತೆ ಚೇತರಿಸಿಕೊಳ್ಳುತ್ತಿದೆ. ಹೈದರಾಬಾದ್ ಕರ್ನಾಟಕದಲ್ಲಿ ನಾವು ಕಳೆದ ಸಲ ಐದು ಕ್ಷೇತ್ರ
ಗಳಲ್ಲಿ ಗೆದ್ದಿದ್ದೆವು. ಈ ಸಲ ಅದು 25ಕ್ಕೆ ಹೋಗಬಹುದು. ಉತ್ತರ ಕನ್ನಡ ಚೆನ್ನಾಗಿದೆ. ಬೆಳಗಾವಿಯ ಹದಿನೆಂಟು ಸೀಟುಗಳ ಪೈಕಿ ನಾವು ನಾಲ್ಕನ್ನಾದರೂ ಗೆಲ್ಲುತ್ತೀವಿ. ವಿಜಯಪುರದ ಏಳರಲ್ಲಿ ನಾಲ್ಕು ನಮಗೇ. ಗದಗದಲ್ಲಿ ಒಂದು, ದಾವಣಗೆರೆಯಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲುವ ಸಂಭವ ಇದೆ.

* ಜಾತ್ಯತೀತ ಜನತಾದಳ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸುವ ಸಾಧ್ಯತೆ ಕಾಣುತ್ತಿದೆಯೇ?

ಅಂತಹ ಅಹಂಕಾರ ನಮಗಿಲ್ಲ. ಆದರೆ ಅಂತಹ ಗುರಿಯತ್ತ ಮೈಮುರಿದು ಕೆಲಸ ಮಾಡುತ್ತಿದ್ದೇವೆ. ಮಾಯಾವತಿ ನಮ್ಮ ಜೊತೆಗಿದ್ದಾರೆ. ಶಕ್ತಿಯ ನಿರೀಕ್ಷೆ ಇದೆ. ತ್ರಿಪುರಾದಲ್ಲಿ ಕಮ್ಯುನಿಸ್ಟರು ಮತ್ತು ಬಿಜೆಪಿ ಮತಗಳಿಕೆ ಪ್ರಮಾಣ ಶೇಕಡ ಒಂದೂವರೆ ಅಷ್ಟೆ. ಆದರೆ ಬಿಜೆಪಿಗೆ ಸೀಟುಗಳು ಹೆಚ್ಚು ಬಂದಿವೆ. ಕರ್ನಾಟಕದಲ್ಲಿ ನಾವೂ ಇಂತಹ ಫಲಿತಾಂಶ ಎದುರು ನೋಡುತ್ತಿದ್ದೇವೆ. ಶರದ್ ಪವಾರ್ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಅವರಿಗೆ ಒಂದೈದಾರು ಕಡೆ ಸೀಟು ಬಿಟ್ಟು ಕೊಡ್ತೀವಿ.

* ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದ್ದೀರಂತೆ ಹೌದೇ?

ಇಲ್ಲ... ಅವರು ಕೇಳುವ ಸೀಟುಗಳನ್ನು ಕೊಡಲು ನಮಗೆ ಆಗುವುದಿಲ್ಲ. ಯಾಕೆಂದರೆ ನಾವು ಈಗಾಗಲೇ ಇಂತಹ ಕ್ಷೇತ್ರಕ್ಕೆ ಇಂತಿಂತಹ ಅಭ್ಯರ್ಥಿಗಳು ಎಂದು ಗುರುತಿಸಿಬಿಟ್ಟಿದ್ದೇವೆ.

* ಬಿಎಸ್‌ಪಿ ಜೊತೆ ನಿಮ್ಮ ಮೈತ್ರಿಯ ಹಿಂದೆ ಬಿಜೆಪಿ ತಂತ್ರವಿದೆ ಎಂಬ ಟೀಕೆ ಇದೆ?

ಈ ಟೀಕೆಯ ಹಿಂದೆ ಕೇವಲ ರಾಜಕೀಯ ಉದ್ದೇಶವಿದೆ. ಮಾಯಾವತಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಮೇಲೆ ಸಮ ಸಮವಾಗಿ ದಾಳಿ ಮಾಡಿದ್ದಾರೆ. ಯಾವ ಪಕ್ಷದ ಮೇಲೂ ದಯೆ ತೋರಿಲ್ಲ.  ನಾನು ಅದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ.

* ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಸೋಲಬೇಕೆಂದು ಯಾಕೆ ಬಯಸುತ್ತೀರಿ?

2007ರಲ್ಲಿ ಕಾವೇರಿ ಐತೀರ್ಪು ಬಂದಾಗ ಲೋಕಸಭೆಯಲ್ಲಿ ನಾನು ಕಣ್ಣೀರು ಹಾಕಿದ್ದೆ. ಜಯಲಲಿತಾ ಅವರ ಹುಟ್ಟುಹಬ್ಬದ ಉಡುಗೊರೆ ಎಂದು ಐತೀರ್ಪನ್ನು ಬಣ್ಣಿಸಲಾಗಿತ್ತು. ನೀವು ಬಿಜೆಪಿಯವರು 17 ಮಂದಿ ಇದ್ದೀರಿ. ನನ್ ಜೊತೆ ಬೆಂಬಲವಾಗಿ ನಿಂತುಕೊಳ್ಳಿ ಎಂದು ಸದನದಲ್ಲಿ ಅನಂತಕುಮಾರ್ ಅವರನ್ನು ಹಿಂದಿನ ದಿನವೇ ಕೇಳಿಕೊಂಡಿದ್ದೆ. ಆಗ ಜಯಲಲಿತಾ ಬೆಂಬಲ ಪಡೆದು ಸರ್ಕಾರ ಮಾಡಬೇಕೆಂಬ ಭಾವನೆ ಅವರ ಪಕ್ಷಕ್ಕೆ ಇತ್ತು. ಪಕ್ಷವನ್ನು ಕೇಳಿ ಹೇಳ್ತೀನಿ ಎಂದಿದ್ದ ಅನಂತಕುಮಾರ್ ಮರುದಿನ ಸದನಕ್ಕೆ ಬರಲಿಲ್ಲ. ಮನಮೋಹನ ಸಿಂಗ್ ನನ್ನನ್ನು ಕರೆಸಿದರು. 'ಏನು ಮಾಡ್ಲಿ, ನನ್ನ ಸರ್ಕಾರ ಹೋಗಿಬಿಡುತ್ತೆ. ಅವರು (ತಮಿಳುನಾಡು ಸಂಸದರು) 39 ಜನ ಇದ್ದಾರೆ. ಏನಾದರೂ ಕಾನೂನು ಲೋಪ ಹುಡುಕಿಕೊಡಿ' ಎಂದರು. ಅಲ್ಲಿಂದಲೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದೆ.

* ಚುನಾವಣೆಯಲ್ಲಿ ನಿಮಗೆ ಬಹುಮತ ಸಿಗದೇ ಹೋದರೆ ಬೆಂಬಲ ಪಡೆಯಲು ಅಥವಾ ಬೆಂಬಲ ನೀಡಲು ನಿಮ್ಮ ಆಯ್ಕೆ ಕಾಂಗ್ರೆಸ್ ಪಕ್ಷವೇ ಅಥವಾ ಬಿಜೆಪಿಯೇ?

ಎರಡೂ ಪಕ್ಷಗಳನ್ನು ದೂರ ಇರಿಸಿ ಸರ್ಕಾರ ಮಾಡಬೇಕೆಂಬ ಹಂಬಲವಿದೆ. ಅದಕ್ಕಾಗಿಯೇ ಮಾಯಾವತಿ ಮತ್ತು ಪವಾರ್ ಅವರ ಬೆಂಬಲ ಪಡೆದು ಕಸರತ್ತು ಮಾಡುತ್ತಿದ್ದೇವೆ. ನಮ್ಮ ಬಳಿ ಸಂಪನ್ಮೂಲ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಹುಡುಕಿಕೊಂಡು ಹೋಗಿ ಜಂಟಿ ಸರ್ಕಾರ ಮಾಡೋದು ಬೇಡ ಅಂತ ಕುಮಾರಸ್ವಾಮಿಯವರಿಗೆ ಹೇಳಿದ್ದೇನೆ. ಕರುಣಾನಿಧಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಎರಡರ ಜೊತೆಗೂ ಇದ್ದರು. ಆದರೆ ಪಕ್ಷ ಉಳಿಸಲೆಂದು ಕುಮಾರಸ್ವಾಮಿ ಒಂದೇ ಒಂದು ಸಲ ಬಿಜೆಪಿ ಜೊತೆ ಹೋಗಿದ್ದಕ್ಕೆ... ಅಯ್ಯೋ ಅದು ಬೇಡಪ್ಪಾ ಬೇಡ.

* ಯಾರಿಗೂ ಪೂರ್ಣ ಬಹುಮತ ಬಾರದೇ ಹೋದರೆ?

ಅವರು ರಾಷ್ಟ್ರಪತಿ ಆಡಳಿತ ಹೇರಿಕೊಳ್ಳಲಿ. ಮತ್ತೆ ಚುನಾವಣೆಗೆ ಹೋಗಲೇಬೇಕು. ನಮಗೂ ಇವರ ಹತ್ತಿರ, ಅವರ ಹತ್ತಿರ ಹೋಗಿ ಸಾಕಾಗಿದೆ. ಆರು ತಿಂಗಳು ರಾಷ್ಟ್ರಪತಿ ಆಡಳಿತ ಹಾಕಲಿ... ಮತ್ತೆ ಸುಧಾರಿಸಿಕೊಳ್ಳುತ್ತೇವೆ ನಾವು. ಕುಂದು ಕೊರತೆಗಳ ತಿದ್ದಿಕೊಳ್ಳಲು ನಮಗೆ ಇನ್ನೊಂದು ಅವಕಾಶ ಸಿಗುತ್ತದೆ. ರಾಷ್ಟ್ರಪತಿ ಆಡಳಿತ ಹೇರಿದರೆ ಮುಂದಿನ ವಿಧಾನಸಭಾ ಚುನಾವಣೆಯು ಲೋಕಸಭಾ ಚುನಾವಣೆಯ ಜೊತೆಗೇ ಬರಬಹುದು. ಆರ್ಥಿಕ ಹೊರೆಯೇನೂ ಬೀಳುವುದಿಲ್ಲ.

* ಚುನಾವಣೆಯ ನಂತರ ಸರ್ಕಾರ ರಚನೆಗೆ ಸಹಾಯ ಮಾಡುತ್ತೀರಿ ಎಂಬ ನಿರೀಕ್ಷೆಯಿಂದ ಬಿಜೆಪಿ ನಿಮ್ಮನ್ನು ಹೆಚ್ಚು ಟೀಕೆ ಮಾಡುತ್ತಿಲ್ಲ ಎಂಬ ಮಾತು ನಿಜವೇ?

ಟೀಕೆ ಮಾಡುವಂತಹುದು ನಮ್ಮಲ್ಲಿ ಏನೂ ಇಲ್ಲ. ಇದ್ದಿದ್ದರೆ ಬಿಡ್ತಿದ್ರಾ? ಕುಮಾರಸ್ವಾಮಿ ಮೇಲೆ ಒಂದು ಕೋರ್ಟ್ ಕೇಸಿದೆ. ನಮ್ಮದೇನೂ ಸರ್ಕಾರ ಇರಲಿಲ್ಲ, ಸುಮ್ಮನೆ ಯಾಕೆ ಕೆದಕಬೇಕು ಅಂತ ಉಪೇಕ್ಷೆ ಮಾಡುತ್ತಿರಬಹುದು. ಆದರೆ ಮೋದಿ ಬಗ್ಗೆ ಸಿದ್ದರಾಮಯ್ಯ ಬಳಸುವ ಭಾಷೆಯನ್ನು ನಾನು ಬಳಸುತ್ತಿಲ್ಲ. ಅದೇ ರೀತಿ ರಾಹುಲ್ ಗಾಂಧಿ ಕುರಿತೂ ಮಾತಾಡಿಲ್ಲ. ಮೋದಿಯನ್ನು ಹೊಗಳಿಕೊಂಡು ಬಿಜೆಪಿ ವಿರುದ್ಧ ಮತ್ತು ರಾಹುಲ್ ಹೊಗಳಿ ಕಾಂಗ್ರೆಸ್ ವಿರುದ್ಧ ಹೇಗೆ ಹೋರಾಡಲಿ?

* 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ ಹೇಗಿದ್ದೀತು?

ಸಮೂಹ ಮಾಧ್ಯಮಗಳು ಶುರುವಿನಲ್ಲಿ ನಮ್ಮ ಶಕ್ತಿಯನ್ನು 18 ಸೀಟುಗಳು ಎಂದು ಅಂದಾಜು ಮಾಡಿ 40ಕ್ಕೆ ಒಯ್ದು, ಇದೀಗ 60-65ರ ಸಮೀಪ ಇಟ್ಟಿವೆ. ತಾವು 140ರವರೆಗೂ ಹೋಗ್ತೀವಿ ಅಂತ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಬಿಜೆಪಿಗೆ ಆಂತರಿಕ ಸಮಸ್ಯೆ ಇದೆ.

* ಕರ್ನಾಟಕದ ಜನ ಮೋದಿಯವರ ಹೆಸರಲ್ಲಿ ಬಿಜೆಪಿಗೆ ವೋಟು ಹಾಕ್ತಾರೆ ಎಂಬ ಮಾತಿದೆ?

ಮೋದಿಯವರನ್ನು ನಾನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಅವರು ಯಾವ್ಯಾವ ಕಾಲಕ್ಕೆ ಏನೇನು ಘೋಷಣೆಗಳನ್ನು ಮಾಡ್ತಾರೆ, ಹೇಗೆ ಹೋಗ್ತಾರೆ ಅನ್ನೋದು ಗೊತ್ತಿಲ್ಲ. ಬಿಜೆಪಿ ಹಿಂದೂ, ಮುಸ್ಲಿಂ ಧ್ರುವೀಕರಣ ಬಳಕೆ ಪ್ರಯತ್ನ ಮಾಡುತ್ತದೆ. ಆದರೆ ಕರ್ನಾಟಕದಲ್ಲಿ ಅದು ಅಷ್ಟರಮಟ್ಟಿಗೆ ಪ್ರಭಾವ ಬೀರಲ್ಲ. ಯಾಕೆಂದರೆ ಈ ಎರಡೂ ಪಕ್ಷಗಳ ಕುರಿತು ರೋಸಿರುವ ಜನ, ಜಾತ್ಯತೀತ ಜನತಾದಳದ ಜೊತೆ ಯಾಕೆ ಹೋಗಬಾರದು ಎಂಬ ಕುರಿತು ಕರಾವಳಿ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ.

* ಜಲವಿವಾದಗಳು, ಹಿಂದಿ ಹೇರಿಕೆ, ರೈಲ್ವೆ ಮೂಲಸೌಲಭ್ಯ ಮುಂತಾದ ವಿಷಯಗಳಲ್ಲಿ ರಾಜ್ಯದ ಹಿತ ಕಾಯಲು ರಾಷ್ಟ್ರೀಯ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂಬ ಅಸಮಾಧಾನ ಬೇರೂರತೊಡಗಿದೆಯೇ?

ನಿಜ, ಆದರೆ ಪ್ರಾದೇಶಿಕ ಪಕ್ಷವೊಂದಕ್ಕೆ ಪೂರ್ಣ ಬಹುಮತ ನೀಡಿ ಅಧಿಕಾರಕ್ಕೆ ತರುವ ಹಂತಕ್ಕೆ ಕರ್ನಾಟಕದ ಜನ ತಲುಪಿದ್ದಾರೆ ಎಂದು ಹೇಳೋದು ಕಷ್ಟ. ಕಾಂಗ್ರೆಸ್-ಬಿಜೆಪಿಯ ತಲಾ ಐದು ವರ್ಷಗಳ ಆಡಳಿತಗಳನ್ನು ಮತ್ತು 20 ತಿಂಗಳ ಕುಮಾರಸ್ವಾಮಿ ಆಡಳಿತವನ್ನು ಜನ ಹೋಲಿಸಿ ನೋಡಿದ್ದಾರೆ. ಈ ಸಲ ಕುಮಾರಸ್ವಾಮಿಗೆ ಯಾಕೆ ಕೊಡಬಾರದು ಅಂತ ಒಂದು ಚರ್ಚೆ ನಡೀತಾ ಇದೆ.

* ಕಾವೇರಿ ನೀರು ಹಂಚಿಕೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಸಾಧುವೇ?

ಕಾವೇರಿ ತೀರ್ಪು ಬಂದಾಗ ರಾಜ್ಯದ ಆಡಳಿತ ಪಕ್ಷವು ವಿಧಾನಸಭೆಯಲ್ಲಿ ಸಿಹಿ ಹಂಚಿದ್ದು ತಪ್ಪು. ಅಪ್ರಬುದ್ಧ ನಡೆ. ಖುದ್ದು ವಕೀಲರಾಗಿದ್ದ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳಬಾರದಿತ್ತು. ಬೆಂಗಳೂರಿನ ಕುಡಿಯುವ ನೀರಿನ ಹಾಲಿ ಅಗತ್ಯ 45 ಟಿ.ಎಂ.ಸಿ. ಅಡಿಗಳು. ಆದರೆ ತೀರ್ಪಿನಲ್ಲಿ ಕೇವಲ 14.75 ಟಿ.ಎಂ.ಸಿ. ಅಡಿ ನೀಡಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಅಪಾಯವನ್ನು ಸುಪ್ರೀಂ ಕೋರ್ಟ್ ಮತ್ತಷ್ಟು ಹತ್ತಿರ ತಂದಿದೆ. ಇನ್ನೂ ಹಲವು ವಿಸಂಗತಿಗಳು ತೀರ್ಪಿನಲ್ಲಿ ಇವೆ. ಇವರು ಸಿಹಿ ಹಂಚುತ್ತಾರಲ್ಲ, ಏನು ಹೇಳಲಿ?

* ಕಾವೇರಿ ನಿರ್ವಹಣಾ ಮಂಡಳಿ ರಾಜ್ಯದ ಹಿತಕ್ಕೆ ಮಾರಕವೇ?

ಸಂದೇಹವೇ ಬೇಡ, ರಾಜ್ಯದ ಕಾವೇರಿ ಕಣಿವೆಯಲ್ಲಿ ಬರುವ ಎಲ್ಲಾ  ಜಲಾಶಯಗಳನ್ನು ಕಾವೇರಿ ನಿರ್ವಹಣಾ ಮಂಡಳಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ತುಂಗಭದ್ರಾ ಮಂಡಳಿಯನ್ನು ಆಂಧ್ರ ಕಾಯ್ದೆಯ ಪ್ರಕಾರ ರಚಿಸಿದ ಕಾರಣ ಅದಕ್ಕೆ ಅಷ್ಟೊಂದು ಅಧಿಕಾರ ಇಲ್ಲ. ಆದರೆ 1956ರ ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆಯಡಿ ರಚಿಸಲಾಗುವ ಕಾವೇರಿ ಮಂಡಳಿ ಊಹಿಸಲಸಾಧ್ಯವಾದ ಅಧಿಕಾರವನ್ನು ಹೊಂದಲಿದೆ. ಮಂಡಳಿ ರಚನೆಗೆ ಕಾಲಮಿತಿ ಇಲ್ಲ ಎಂದು ದಿಟ್ಟತನದ ಮಾತಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿನಂದನೀಯರು.

* ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದೆ ಎಂಬ ಟೀಕೆಯಿದೆ. ಲೋಕಾಯುಕ್ತ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಶಾಖೆಯನ್ನು ರದ್ದು ಮಾಡಿ, ಮುಖ್ಯಮಂತ್ರಿಗೆ ವರದಿ ಮಾಡಿಕೊಳ್ಳುವ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತ್ಯೇಕವಾಗಿ ರಚಿಸಿದ್ದು ನಿಮಗೆ ಸರಿ ಕಾಣುತ್ತದೆಯೇ?

(ಕಚಗುಳಿಯಾದಂತೆ ನಕ್ಕು) ಇದರ ಬಗ್ಗೆ ಎರಡು ವಾದಾನೇ ಇಲ್ಲ. ಅದು ಬಹು ದೊಡ್ಡ ಭಾನಗಡಿ. ರಾಮಕೃಷ್ಣ ಹೆಗಡೆಯವರು ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಲೋಕಾಯುಕ್ತ ತಂದರು. ಅವರ ಅಣ್ಣ ಗಣೇಶ ಹೆಗಡೆ ಅಕ್ಕಿ ಕದ್ದು ಸಾಗಿಸ್ತಾರೆ ಅಂತ ಬಂಗಾರಪ್ಪ ಮಾಡಿದ್ದ ಆಪಾದನೆ ಸಂದರ್ಭದಲ್ಲಿ ಲೋಕಾಯುಕ್ತ ಮಸೂದೆ ಮಂಡಿಸಿದ್ದು. ಮುಖ್ಯಮಂತ್ರಿಯವರನ್ನೂ ಲೋಕಾಯುಕ್ತ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವವನ್ನು ತೆಗೆದು ಹಾಕಿ ಹೆಗಡೆ ಲೋಕಾಯುಕ್ತವನ್ನು ಕೊಂಚ ಸಡಿಲ ಮಾಡಿದರು. ಈ ಸಂಸ್ಥೆಯ ಇಳಿಜಾರಿನ ಹಾದಿ ಅಲ್ಲಿಂದ ಶುರುವಾಯಿತು. ಇವರಂತೂ (ಸಿದ್ದರಾಮಯ್ಯ ಸರ್ಕಾರ) ಮುಗಿಸೇಬಿಟ್ಟರು. ನಮ್ಮ ಸರ್ಕಾರ ಬಂದರೆ ಈ ತಪ್ಪನ್ನು ತಿದ್ದುತ್ತೇವೆ.

*  'ಅಸ್ಪೃಶ್ಯ' ದಲಿತ ಒಳಪಂಗಡಗಳಿಗೆ ನ್ಯಾಯ ಒದಗಿಸಲು ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಪಕ್ಷದ ನಿಲುವೇನು?

ಇವು ಜನಪ್ರಿಯ ಹೇಳಿಕೆಗಳು ಅಷ್ಟೆ. ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗುವುದಿಲ್ಲ. ಚಂದ್ರಬಾಬು ನಾಯ್ಡು ಎಡ ಮತ್ತು ಬಲಕ್ಕೆ ಒಳಮೀಸಲಾತಿ ಕಲ್ಪಿಸಿದಾಗ ಸುಪ್ರೀಂ ಕೋರ್ಟ್ ಅದನ್ನು ಹೊಡೆದು ಹಾಕಿತು. ಪಾರ್ಲಿಮೆಂಟ್ ಅನುಮೋದನೆ ಪಡೆಯಬೇಕೆಂದಿತು. ಆಗಿನಿಂದಲೂ ಈ ವಿಷಯ ಪಾರ್ಲಿಮೆಂಟ್ ಮುಂದೆ ಬಾಕಿ ಇದೆ.

* ವಿವಾದಗ್ರಸ್ತ ಎತ್ತಿನಹೊಳೆ (ನೇತ್ರಾವತಿ ತಿರುವು) ಯೋಜನೆ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಉಂಟು ಮಾಡುವ ಆಪಾದನೆ ಮತ್ತು ಕರಾವಳಿಯ ಎರಡು ಜಿಲ್ಲೆಗಳ ಜನರ ವಿರೋಧ ಎದುರಿಸಿದೆ. ನಿಮ್ಮ ಪಕ್ಷದ ನಿಲುವೇನು?

ಈ ಯೋಜನೆ ಅವಾಸ್ತವಿಕ ಎಂದು ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿಯವರು ನಿಜಲಿಂಗಪ್ಪನವರ ಕಾಲದಲ್ಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ವಿಷಯವನ್ನು ಕೈ ಬಿಡಲಾಗಿತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ಜೀವ ನೀಡಿತು. ಜಗದೀಶ ಶೆಟ್ಟರ್ ಕಾಲದಲ್ಲಿ ಒಂದು ಆಕಾರ ಪಡೆಯಿತು. ವಾದ ವಿವಾದಕ್ಕೆ ಹೋಗಲ್ಲ. ಒಂದು ಶಬ್ದ ಆ ಕಡೆ ಈ ಕಡೆ ವಾಸ್ತವಾಂಶದ ಮೇಲೆ ಮಾತಾಡಿದರೂ ಅದನ್ನು ಕರ್ನಾಟಕದಲ್ಲಿ ಬೇರೆ ಬೇರೆ ಬಿಂಬಿಸಿಬಿಡ್ತಾರೆ. ಸಾವಾಸಾನೇ ಬೇಡಪ್ಪಾ ಅಂತ ಸುಮ್ಮನಾದೆ. ಎಲ್ಲ ಕಡೆ ನೀರು ಕೊಡ್ತೀವಿ ಅಂತ ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ತಲುಪೋ ಹೊತ್ತಿಗೆ ಎಷ್ಟು ನೀರು ಉಳಿಯುತ್ತೋ ಗೊತ್ತಿಲ್ಲ ನನಗೆ. ಹೇಗೆ ನೀರು ಹೋಗುತ್ತೆ ಅಂತ ಮಾತಾಡಿದರೆ ಮತ್ತೆ ನನಗೆ ಹೊಡೆತ ಬೀಳುತ್ತೆ. ಏನೂ ಮಾತಾಡಲ್ಲ. ಪರಿಸರಕ್ಕೆ ಕೆಲ ಕಡೆ ಹಾನಿ ಆಗಿರೋದು ಹೌದು. ಆದರೆ ಕುಡಿಯುವ ನೀರಿನ ಯೋಜನೆ ಎಂದು ಪರಿಗಣಿಸಿ ಹಸಿರು ನ್ಯಾಯಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಈಗ ಅದು ಮುಗಿದು ಹೋಗಿರೋ ವಿಷಯ. ‘ಟರ್ನ್ ಕೀ’ ಆಧಾರದ ಮೇಲೆ ಕಾಮಗಾರಿಯನ್ನು ಈ ಸರ್ಕಾರ ಗುತ್ತಿಗೆ ಕೊಟ್ಟಿದೆ. ಗುತ್ತಿಗೆದಾರರೂ ನನಗೆ ಗೊತ್ತು. ಅದರ ಬಗ್ಗೆ ನಾನೇನೂ ಹೇಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT