ಬುಧವಾರ, ಏಪ್ರಿಲ್ 21, 2021
32 °C

ಬಿಗ್‌ಬಾಸ್‌ 6ನೇ ಸೀಸನ್‌ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕಲರ್ಸ್‌ ಸೂಪರ್‌ ಚಾನೆಲ್‍ನಲ್ಲಿ ಇದೇ 21ರಂದು ಬಿಗ್‍ಬಾಸ್ 6ನೇ ಸೀಸನ್‌ ಶುರುವಾಗಲಿದೆ.

ಈ ಬಾರಿಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಒಂದು ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಒಟ್ಟು ಹದಿನೆಂಟು ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದಾರೆ. ಗಾಯಕ ನವೀನ್‌ ಸಜ್ಜು, ನಟಿಯರಾದ ಸುಮನ್‌ ರಂಗನಾಥ್‌, ಅಕ್ಷತಾ ಪಾಂಡವಪುರ, ‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್, ರೂಪದರ್ಶಿ ಶಾಲಿನಿಗೌಡ, ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ, ‘ತಿಥಿ’ ಚಿತ್ರದ ಖ್ಯಾತಿಯ ಗಡ್ಡಪ್ಪ ಈ ಬಾರಿಯ ಬಿಗ್‌ಬಾಸ್‌ ಪ್ರವೇಶಿಸಲಿರುವ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ.

ಸೀಸನ್ 5ರಲ್ಲಿ ಪ್ರಥಮ ಬಾರಿಗೆ ಜನಸಾಮಾನ್ಯರಿಗೆ ಬಿಗ್‌ಬಾಸ್‌ ಪ್ರವೇಶಿಸಲು ಅವಕಾಶ ಸಿಕ್ಕಿತ್ತು. ಈ ಬಾರಿ ಅರ್ಧದಷ್ಟು ಜನಸಾಮಾನ್ಯರು ಇರಲಿದ್ದಾರೆ. ಮನೆಯೊಳಗೆ ಯಾರು ಪ್ರವೇಶಿಸುತ್ತಾರೆ, ಅವರು ಯಾವ ರೀತಿ ಇರುತ್ತಾರೆ, ಅವರನ್ನು ಕಳುಹಿಸಿಕೊಡಲು ಯಾರು ಬರುತ್ತಾರೆ, ನಟ ಸುದೀಪ್ ಏನು ಹೇಳುತ್ತಾರೆ ಎಂಬ ಪ್ರಶ್ನೆಗಳಿಗೆ ಭಾನುವಾರ ಸಂಜೆ 6ಗಂಟೆಗೆ ಉತ್ತರ ದೊರೆಯಲಿದೆ. ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಬಿಗ್‌ಬಾಸ್‌ ಪ್ರಸಾರವಾಗಲಿದೆ.

‘ಸಿನಿಮಾಗಳ ಹೊರತಾಗಿ ಪ್ರತಿವರ್ಷ ನಾನು ಕ್ರಿಕೆಟ್ ಆಡುತ್ತೇನೆ. ಪ್ರಯಾಣ ಮಾಡುತ್ತೇನೆ. ಅಡುಗೆಯನ್ನೂ ಮಾಡುತ್ತೇನೆ. ಹಾಗೆಯೇ, ಬಿಗ್‍ಬಾಸ್ ನಡೆಸಿಕೊಡುತ್ತೇನೆ. ಇದು ನನಗೆ ಬಹಳ ಪ್ರಿಯವಾದ ವಿಷಯ. ಹೊಸ ಹೊಸ ಸ್ಪರ್ಧಿಗಳನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ’ ಎನ್ನುತ್ತಾರೆ ನಿರೂಪಕ ಸುದೀಪ್.

‘ಬಿಗ್‌ಬಾಸ್‌ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕ್ಯಾರೆಕ್ಟರ್‌ಗಳನ್ನು ಹುಡುಕುತ್ತಿರುತ್ತೇವೆ. ಆ ಕ್ಯಾರೆಕ್ಟರ್‌ಗಳು ಸೆಲೆಬ್ರಿಟಿಗಳಲ್ಲಿಯೂ ಇರಬಹುದು. ಜನಸಾಮಾನ್ಯರಲ್ಲೂ ಇರಬಹುದು. ಮನೆಯೊಳಗೆ ಹೋದವರು ಎಷ್ಟು ಮನರಂಜನೆ ನೀಡುತ್ತಾರೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ’ ಎಂದು ವಿವರಿಸುತ್ತಾರೆ ವಯಾಕಾಮ್ 18 ಸಂಸ್ಥೆಯ ಕನ್ನಡ ಬ್ಯುಸಿನೆಸ್ ಹೆಡ್ ಹಾಗೂ ಬಿಗ್‍ಬಾಸ್‍ನ ನಿರ್ದೇಶಕರಾದ ಪರಮೇಶ್ವರ ಗುಂಡ್ಕಲ್.

**

ವಿಶಾಲವಾದ ಹೊಸ ಮನೆ

ಕೆಲವು ತಿಂಗಳ ಹಿಂದೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಿಡದಿಯ ಇನೋವೇಟಿವ್ ಫಿಲ್ಮ್‌ಸಿಟಿಯಲ್ಲಿದ್ದ ಬಿಗ್‍ಬಾಸ್ ಮನೆ ಸಂಪೂರ್ಣ ಭಸ್ಮವಾಗಿತ್ತು. ಈ ಬಾರಿ ವಿಶಾಲವಾದ ಹೊಸ ಮನೆ ನಿರ್ಮಾಣಗೊಂಡಿದೆ. ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳಲು ಪೌಡರ್ ರೂಮ್ ಸೇರಿದಂತೆ ಹೊಸ ಆಕರ್ಷಣೆಗಳು ಮನೆಯಲ್ಲಿವೆ. ಮನೆಯ ಹೊರಗಿನ ಗಾರ್ಡನ್ ಏರಿಯಾದಲ್ಲಿ ವಿಶೇಷವಾದ ಗಿಡವೊಂದನ್ನು ನೆಡಲಾಗಿದೆ. ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲಾಗಿದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು