ನಗರ ಡಕಾಯಿತರ ‘ಚಂಬಲ್’

7

ನಗರ ಡಕಾಯಿತರ ‘ಚಂಬಲ್’

Published:
Updated:

‘ನಾನು ರಂಗಭೂಮಿಯಿಂದ ಬಂದವನು. ಸಿನಿಮಾ ನಟನೆಗೆ ಇಳಿದ ಮೇಲೆ ಯಾವ ಪಾತ್ರವೂ ನನಗೆ ಕಷ್ಟ ಅನಿಸಿರಲಿಲ್ಲ. ಆದರೆ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸುವಾಗ ನರ್ವಸ್‌ ಅನಿಸಿತು. ಒಂದೇ ಒಂದು ಬೆರಳು ನಿರ್ದೇಶಕರ ಲೆಕ್ಕಾಚಾರದ ವಿರುದ್ಧವಾಗಿ ಚಲಿಸಿದರೂ ಅವರು ಒಪ್ಪುತ್ತಿರಲಿಲ್ಲ. ಮತ್ತೆ ಮಾಡಿಸುತ್ತಿದ್ದರು. ಮೊದಲು ಕೆಲವು ದಿನ ತುಂಬ ಕಷ್ಟವಾಯ್ತು. ಪಾತ್ರದೊಳಗೆ ಪ್ರವೇಶ ಪಡೆದುಕೊಳ್ಳುವುದಕ್ಕೇ ಎರಡು ದಿನ ತಗುಲಿತು. ಆದರೆ ಡಬ್ಬಿಂಗ್ ಮಾಡುವಾಗ ನನ್ನದೇ ನಟನೆಯನ್ನು ಮತ್ತೊಮ್ಮೆ ನೋಡುತ್ತಿದ್ದಾಗ, ಈ ಪಾತ್ರ ಮಿಸ್ ಮಾಡಿಕೊಂಡಿದ್ದರೆ ನನ್ನ ವೃತ್ತಿಜೀವನದಲ್ಲಿ ಮಹತ್ವವಾದದ್ದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ ಎಂದು ಬಲವಾಗಿ ಅನಿಸಿತು’

ಇಷ್ಟನ್ನು ಒಂದೇ ಉಸಿರಿನಲ್ಲಿ ಹೇಳಿ ಪಕ್ಕದಲ್ಲಿದ್ದ ನಿರ್ದೇಶಕ ಜೇಕಬ್‌ ವರ್ಗೀಸ್ ಮುಖ ನೋಡಿ ನಸುನಕ್ಕರು ನೀನಾಸಂ ಸತೀಶ್‌. ಅವರು ಹೇಳುತ್ತಿರುವುದು ತನ್ನ ವಿಷಯ ಅಲ್ಲವೇ ಅಲ್ಲ ಎನ್ನುವಷ್ಟು ನಿರ್ಲಿಪ್ತವಾಗಿ ಕೂತಿದ್ದರು ಜೇಕಬ್‌.

ಅದು ‘ಚಂಬಲ್’ ಸಿನಿಮಾ ಪತ್ರಿಕಾಗೋಷ್ಠಿ. ’ಪೃಥ್ವಿ’, ‘ಸವಾರಿ’ಗಳಂಥ ಸದಭಿರುಚಿಯ ಚಿತ್ರಗಳನ್ನು ಕೊಟ್ಟಿರುವ ಜೇಕಬ್‌ ವರ್ಗೀಸ್ ಇದೀಗ ’ಚಂಬಲ್‌’ ಕಣಿವೆಗೆ ಇಳಿದಿದ್ದಾರೆ. ಇದೇನು ಚಂಬಲ್ ಕಣಿವೆಯ ಡಕಾಯಿತರ ಕಥೆಯೇ? ಖಂಡಿತ ಅಲ್ಲ. ಇದು ಮಹಾನಗರಗಳಲ್ಲಿ ಇರುವ ವೈಟ್‌ಕಾಲರ್‌ ಡಕಾಯಿತರ ನಡುವೆ ಇರುವ ಒಬ್ಬ ಹುಡುಗನ ಕಥೆ. ತನ್ನ ಸುತ್ತಲಿನ ಪರಿಸರದಲ್ಲಿಯೇ ಇರುವ ಅಂಥ ಡಕಾಯಿತರನ್ನು ನಾಯಕ ಹೇಗೆ ಎದುರಿಸುತ್ತಾನೆ, ಜನರಿಗಾಗಿ ಹೇಗೆ ಹೋರಾಡುತ್ತಾನೆ ಎನ್ನುವುದನ್ನು ತೆರೆಯ ಮೇಲೆ ಥ್ರಿಲ್ಲರ್ ಜಾನರ್‌ನಲ್ಲಿ ತೋರಿಸಲು ಸಜ್ಜಾಗಿದ್ದಾರೆ ಜೇಕಬ್‌. ಬೆಂಗಳೂರು, ರಾಮನಗರ, ಶ್ರಿಲಂಕಾದ ಕೊಲಂಬೋದಲ್ಲಿ ಶೂಟ್ ಮಾಡಲಾಗಿದೆ. 

ಮೌನವನ್ನೇ ಹೆಚ್ಚು ಇಷ್ಟಪಡುವಂತೇ ತೋರುವ ಜೇಕಬ್‌ ಕೈಗೆ ಮೈಕ್‌ ಸಿಕ್ಕಾಗಲೂ ಮಾತಾಡಿದ್ದು ಕಮ್ಮಿ. ‘ಚಂಬಲ್‌’ ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ನೆಟ್‌ಫ್ಲಿಕ್ಸ್‌ ಖರೀದಿಸಲು ಆಸಕ್ತಿ ತೋರಿಸಿತ್ತು. ಈ ಕುರಿತು ಕೇಳಿದಾಗ ಅವರು ಹೇಳಿದ್ದು ಇಷ್ಟು: ‘ಅಂಥದ್ದೊಂದು ಆಫರ್ ಬಂದಿದ್ದು ನಿಜ. ಅದು ನಮ್ಮ ಸಿನಿಮಾ ಬಜೆಟ್‌ಗಿಂತ ಸಾಕಷ್ಟು ಹೆಚ್ಚಿದ್ದಿದ್ದೂ ನಿಜ. ಆದರೆ ನಾವು ಈ ಸಿನಿಮಾ ಮಾಡಿದ್ದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ. ನೆಟ್‌ಫ್ಲಿಕ್ಸ್‌ನವರು ಎಕ್ಸ್‌ಕ್ಲೂಸಿವ್ ಆಗಿ ತಮಗೇ ಕೊಡಬೇಕು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿದರು. ಆದ್ದರಿಂದ ತಿರಸ್ಕರಿಸಿದ್ದೇವೆ. ಹಾಗಂತ ಆನ್‌ಲೈನ್‌ ಫ್ಲ್ಯಾಟ್‌ಫಾರ್ಮ್‌ಗೆ ಸಿನಿಮಾ ಕೊಡುವುದೇ ಇಲ್ಲ ಎಂದಲ್ಲ. ಚಿತ್ರಮಂದಿರದಲ್ಲಿ ಬಿಡುಗಡೆ ಆದಮೇಲೆ ಕೊಡಲು ಸಿದ್ಧ’ ಎಂಬುದು ಅವರ ಸ್ಪಷ್ಟನೆ. 

‘ನನಗೆ ಇಂಡಸ್ಟ್ರಿಗೆ ಬರುವುದು ಕಷ್ಟ ಅನಿಸಿರಲಿಲ್ಲ. ಆದರೆ ಇಲ್ಲಿಯೇ ಉಳಿದುಕೊಳ್ಳುವುದು ಕಷ್ಟ ಅನಿಸಿತ್ತು. ಇನ್ಯಾರೂ ನನಗೆ ಅವಕಾಶ ಕೊಡಲಾರರು ಎಂದು ನಿರ್ಧರಿಸಿ ನಟನೆಯಿಂದ ಹಿಂದಕ್ಕೆ ಹೋಗು ನಿರ್ಧಾರ ಮಾಡಿದ್ದಾಗಲೇ ಜೇಕಬ್‌ ವರ್ಗೀಸ್‌ ನನ್ನನ್ನು ಕರೆದು ಈ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು. ಹಾಗಾಗಿ ಇದು ನನ್ನ ಪಾಲಿನ ಸ್ಪೇಷಲ್ ಸಿನಿಮಾ. ಯಾವುದೇ ಮೇಕಪ್‌ ಇಲ್ಲದೆ ನಾರ್ಮಲ್ ಹುಡುಗಿಯಾಗಿ ನಟಿಸಿದ್ದೇನೆ. ಪ್ರತಿ ಪಾತ್ರ, ದೃಶ್ಯಗಳೂ ತುಂಬ ಪರಿಣಾಮಕಾರಿಯಾಗಿವೆ. ನಡೆದಿರುವಂಥ ಘಟನೆ ಇಟ್ಟುಕೊಂಡೇ ಸಿನಿಮಾ ಮಾಡಿದ್ದಾರೆ’ ಎಂದು  ಹೇಳಿದರು ನಾಯಕಿ ಸೋನು ಗೌಡ. 

ಪೂರ್ಣಚಂದ್ರ ತೇಜಸ್ವಿ ಈ ಚಿತ್ರದ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜಿ.ಪಿ. ರಾಜರತ್ನಂ ಅವರ ಒಂದು ಪದ್ಯವನ್ನು ಬಳಸಿಕೊಳ್ಳಲಾಗಿದೆಯಂತೆ. ಇನ್ನೊಂದು ಹಾಡನ್ನು ಜಯಂತ ಕಾಯ್ಕಿಣಿ ಬರೆದಿದ್ದಾರೆ. ರೋಜರ್ ನಾರಾಯಣ್, ಅಚ್ಯುತ್‌ ಕುಮಾರ್, ಸತ್ಯ, ಗಿರಿಜಾ ಲೋಕೇಶ್‌ ತಾರಾಗಣದಲ್ಲಿದ್ದಾರೆ.

ಸದ್ಯವೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಟ್ರೈಲರ್‌ಗೆ ಪುನೀತ್‌ ರಾಜ್‌ಕುಮಾರ್ ಧ್ವನಿ ಕೊಟ್ಟಿದ್ದಾರಂತೆ. ಜನವರಿ ಅಂತ್ಯಕ್ಕೆ ಚಿತ್ರವನ್ನು ತೆರೆಯ ಮೇಲೆ ತರುವ ಸಿದ್ಧತೆಯೂ ನಡೆದಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !