‘ಚಂಬಲ್' ಚಿತ್ರದ ವಿರುದ್ಧ ಚೇಂಬರ್‌ ಮೆಟ್ಟಿಲೇರಿದ ಗೌರಮ್ಮ

7

‘ಚಂಬಲ್' ಚಿತ್ರದ ವಿರುದ್ಧ ಚೇಂಬರ್‌ ಮೆಟ್ಟಿಲೇರಿದ ಗೌರಮ್ಮ

Published:
Updated:
Prajavani

ಬೆಂಗಳೂರು: ಜೇಕಬ್‌ ವರ್ಗೀಸ್‌ ನಿರ್ದೇಶನದ ನಟ ನೀನಾಸಂ ಸತೀಶ್‌ ಹಾಗೂ ನಟಿ ಸೋನು ಗೌಡ ನಟನೆಯ ‘ಚಂಬಲ್’ ಚಿತ್ರದ ಟ್ರೇಲರ್‌ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರ ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಜೀವನ ಕುರಿತದ್ದಾಗಿದೆ ಎಂಬುದು ರವಿ ಅವರ ತಾಯಿ ಗೌರಮ್ಮ ಅವರ ಆರೋಪ. ಈ ಕುರಿತು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

‘ಇತ್ತೀಚೆಗೆ ಚಂಬಲ್‌ ಚಿತ್ರದ ಟ್ರೇಲರ್‌ ನೋಡಿದೆ. ಇದರಲ್ಲಿ ನನ್ನ ಮಗನ ಕಥೆ, ಸಂಭಾಷಣೆ, ಜೀವನಶೈಲಿಯನ್ನು ನನ್ನ ಅನುಮತಿ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಹಾಗಾಗಿ, ಚಿತ್ರ ಬಿಡುಗಡೆಗೂ ಮೊದಲು ನನಗೆ ವೀಕ್ಷಿಸಲು ಅವಕಾಶ ನೀಡಬೇಕು. ಸತ್ಯಕ್ಕೆ ದೂರವಾದ ಅಂಶಗಳಿದ್ದರೆ ತಡೆತರುವ ಬಗ್ಗೆ ಮತ್ತು ಸರಿ ಇಲ್ಲದಿದ್ದರೆ ನಿರ್ಮಾಪಕರು, ನಿರ್ದೇಶಕರ ವಿರುದ್ಧ ಕಾನೂನು ಕ್ರಮಕೈಗೊಂಡು ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕು’ ಎಂದು ಗೌರಮ್ಮ ಮನವಿಯಲ್ಲಿ ಕೋರಿದ್ದಾರೆ.

ಕಳೆದ ತಿಂಗಳು ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. 

ಫೆಬ್ರುವರಿ 22ರಂದು ಸಿನಿಮಾದ ಬಿಡುಗಡೆಗೆ ಚಿತ್ರತಂಡ ಸಿದ್ಧತೆಯಲ್ಲಿ ಮುಳುಗಿಸಿದೆ. ಈ ನಡುವೆ ಗೌರಮ್ಮ ಅವರ ಆರೋಪಕ್ಕೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯನ್ನೂ ನೀಡಿದೆ.

‘ಹಲವರು ಮಂದಿ ನೇರ, ನಿಷ್ಠಾವಂತ, ದಿಟ್ಟ ಅಧಿಕಾರಿಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾ ನಿರ್ಮಿಸಲಾಗಿದೆ. ಈ ಚಿತ್ರದ ಕಥೆ ಕಾಲ್ಪನಿಕವಾದುದು. ಯಾವುದೇ ವ್ಯಕ್ತಿಯ ನಿಜಜೀವನಕ್ಕೆ ಸಂಬಂಧಿಸಿದ್ದಲ್ಲ. ಸಮಾಜಕ್ಕೆ ಸಂದೇಶ ತಿಳಿಸಲು ನಿರ್ಮಾಪಕನ ಒಂದು ಪ್ರಯತ್ನ ಅಷ್ಟೇ. ಯಾರೊಬ್ಬರ ವ್ಯಕ್ತಿತ್ವವನ್ನು ಕೆಟ್ಟ ದೃಷ್ಟಿಯಲ್ಲಿ ತೋರಿಸುವ ಉದ್ದೇಶ ನಮಗಿಲ್ಲ’ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

‘ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದಲೂ ಸ್ಪಷ್ಟನೆ ಪಡೆಯಲಾಗಿದೆ. ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೀತಿ ಹಾಗೂ ಆಶೀರ್ವಾದ ಕೋರುತ್ತೇವೆ’ ಎಂದು ಚಂಬಲ್ ಚಿತ್ರತಂಡ ಪ್ರತಿಕ್ರಿಯಿಸಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !