ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌಕಾಬಾರ’ ಚಿತ್ರದ ಪೋಸ್ಟರ್ ಬಿಡುಗಡೆ

ವಿಕ್ರಂ ಸೂರಿ ನಿರ್ದೇಶನ, ನಮಿತಾ ರಾವ್ ನಿರ್ಮಾಣ
Last Updated 6 ಫೆಬ್ರುವರಿ 2021, 7:43 IST
ಅಕ್ಷರ ಗಾತ್ರ

ರಘು ಭಟ್ ಅವರ ಶ್ರೀಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ನವಿ ನಿರ್ಮಿತಿ ಬ್ಯಾನರ್‌ ಅಡಿ ನಿರ್ಮಿಸಿರುವ ಚೌಕಾಬಾರ ಸಿನಿಮಾದ ಶೀರ್ಷಿಕೆ ಅನಾವರಣ ಗುರುವಾರ ವಸಂತನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಶೀರ್ಷಿಕೆ ಬಿಡುಗಡೆ ಮಾಡಿದರು.

ವಿಕ್ರಂ ಸೂರಿ ನಿರ್ದೇಶನದ ಈ ಚಿತ್ರವನ್ನು ಅವರ ಪತ್ನಿ ನಮಿತಾ ರಾವ್ ನಿರ್ಮಾಣ ಮಾಡಿದ್ದಾರೆ. ಲಕ್ಷ್ಮೀ ಗಣೇಶ್ ಪ್ರೊಡಕ್ಷನ್‌ನ ರಘು ಭಟ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ನಿರ್ಮಾಣದ ಜತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಮಿತಾ ರಾವ್ ನಟಿಸಿದ್ದಾರೆ. ಇದೀಗ ಬಹುತೇಕ ಸಿನಿಮಾ ಮುಗಿದಿದ್ದು, ಪೋಸ್ಟರ್ ಬಿಡುಗಡೆ ನೆಪದಲ್ಲಿ ಇಡೀ ತಂಡ ಬಂದು ಕಡೆ ಸೇರಿ ಸಂಭ್ರಮಿಸಿದೆ.

ಪುನೀತ್ ಮಾತನಾಡಿ, ಚಿಕ್ಕಂದಿನಿಂದಲೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇತ್ತು. ಮನೆಯಲ್ಲಿ ಅಮ್ಮ ಸಾಕಷ್ಟು ಚಿತ್ರ ನಿರ್ಮಿಸಿದ್ದರು. ಒಳ್ಳೇ ಕಂಟೆಂಟ್ ಸಿಕ್ಕರೆ ಸಿನಿಮಾ ಮಾಡುತ್ತೇನೆ. ಈಗಾಗಲೇ ಹಲವು ಸಿನಿಮಾ ಮಾಡಿದ್ದೇನೆ. ಇನ್ನೂ ಒಂದು ಇದೀಗಷ್ಟೇ ಪೂಜೆ ಮುಗಿಸಿಕೊಂಡಿದೆ. ಇದೀಗ ಆ ಸಿನಿಮಾ ನಿರ್ಮಾಣ ಸಾಹಸಕ್ಕೆ ವಿಕ್ರಂ ಮತ್ತು ನಮಿತಾ ಕೈ ಹಾಕಿದ್ದಾರೆ. ಅವರಿಬ್ಬರಿಗೂ ಒಳ್ಳೆಯದಾಗಲಿ ಎಂದರು.

ನಿರ್ದೇಶಕ ವಿಕ್ರಂ ಸೂರಿ ಮಾತನಾಡಿ, ‘ಇದೊಂದು ಕಾದಂಬರಿ ಆಧರಿತ ಸಿನಿಮಾ. ಮಣಿ ಆರ್. ರಾವ್ ಅವರು ಈ ಕಾದಂಬರಿ ಬರೆದಿದ್ದಾರೆ. ಪ್ರೀತಿ, ಸ್ನೇಹ ಮತ್ತು ಸಂಬಂಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗಲಿದೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಇತ್ತು. ಆದರೆ, ಕೊರೊನಾದಿಂದಾಗಿ ಆಗಲಿಲ್ಲ. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿದ್ದೇವೆ ಎಂದರು. ವಿಕ್ರಂ ಅವರ ಮಾತಿಗೆ ದನಿ ಗೂಡಿಸಿದ ನಮಿತಾ, ಮಾರ್ಚ್ ವೇಳೆಗೆ ಆಡಿಯೋ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಹಾಡುಗಳಿಗೆ ಎಚ್‌.ಎಸ್‌. ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್‌ರಾವ್, ವಿಕ್ರಂ ಸೂರಿ, ಹರೀಶ್ ಭಟ್, ಅಲೋಕ್ ಸಾಹಿತ್ಯ ಬರೆದಿದ್ದಾರೆ. ಆ ಹಾಡುಗಳನ್ನು ಬೆಂಗಳೂರು, ಕಾರವಾರ, ದಾಂಡೇಲಿ, ಮೈಸೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ವಿಹಾನ್ ಪ್ರಭಂಜನ್, ನಮಿತಾ ರಾವ್, ಕಾವ್ಯಾ ರಮೇಶ್, ಸುಜಯ್ ಗೌಡ, ಸಂಜಯ್ ಸೂರಿ, ಸುಮಾ ರಾಜ್‌, ಡಾ.ಸೀತಾ ಕೋಟೆ, ಕೀರ್ತಿ ಬಾನು, ಮಧು ಹೆಗಡೆ, ಶಶಿಧರ್ ಕೋಟೆ, ಪ್ರಥಮಾ ಪ್ರಸಾದ್. ದಮಯಂತಿ ನಾಗರಾಜ್, ಆ್ಯಡಮ್ ಪಾಷಾ, ಪ್ರದೀಪ್, ಕಿರಣ್ ವಟಿ ಸೇರಿ ಹಲವು ಕಲಾವಿದರು ನಟಿಸಿದ್ದಾರೆ.

ಇನ್ನು ರೂಪಾ ಪ್ರಭಾಕರ್ ಸಂಭಾಷಣೆ, ಅಶ್ವಿನ್ ಕುಮಾರ್ ಸಂಗೀತ, ರವಿರಾಜ್ ಹೊಂಬಳ ಛಾಯಾಗ್ರಹಣ, ಶಶಿಧರ್ ಸಂಕಲನ ಮಾಡಿದ್ದಾರೆ. ಚೈತ್ರಾ, ವ್ಯಾಸರಾಜ್ ಸೋಸಲೆ, ನಕುಲ್ ಅಭಯಂಕರ್, ರಮ್ಯ ಭಟ್, ಸಿದ್ಧಾರ್ಥ್ ಬೆಳಮನ್ನು ಹಾಡಿಗೆ ದನಿಯಾಗಿದ್ದಾರೆ. ಮದನ್, ಹರಿಣಿ ಮತ್ತು ಸುಚಿನ್ ನೃತ್ಯ ಸಂಯೋಜಿಸಿದ್ದಾರೆ. ಹರೀಶ್ ಭಟ್ ಸಹ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT