ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ವಜನಿಕರಲ್ಲಿ ವಿನಂತಿ’ ಇದು ಕ್ರೈಂ–ಥ್ರಿಲ್ಲರ್

Last Updated 18 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ರಂಗಭೂಮಿ ಹಿನ್ನೆಲೆಯ ಕೃಪಾ ಸಾಗರ್, ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಚಂದನವನದ ನಿರ್ದೇಶಕರ ಸಾಲಿಗೆ ಸೇರುತ್ತಿದ್ದಾರೆ. ಶಾಲಾ–ಕಾಲೇಜು ದಿನಗಳಿಂದಲೇ ನಟನೆ ಮತ್ತು ನಿರ್ದೇಶನದತ್ತ ಆಸಕ್ತಿ ಬೆಳೆಸಿಕೊಂಡ ಅವರಿಗೆ, ತಮ್ಮ ಮುಂದಿನ ಹಾದಿ ಸ್ಪಷ್ಟವಾಗಿತ್ತು. ತುಮಕೂರಿನವರಾದರೂ ಅವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಹಾಗಾಗಿ, ತಮ್ಮ ಆಸಕ್ತಿ ಕ್ಷೇತ್ರಕ್ಕೆ ಧಮುಕಲು ಅವರು ಮೊದಲು ಹತ್ತಿದ ಏಣಿ ರಂಗಭೂಮಿ.

‘ಸಂಚಾರಿ’ ತಂಡದಲ್ಲಿ ಸಕ್ರಿಯವಾದ ಅವರು ರಾಜಧಾನಿಯ ಹಲವು ಕಡೆ ನಡೆದ ನಾಟಕಗಳಿಗೆ ಬಣ್ಣ ಹಚ್ಚಿದರು. ಬಳಿಕ, ಸಮಾನಮನಸ್ಕ ಸ್ನೇಹಿತರೊಂದಿಗೆ ‘ರಂಗ ಕಲಾವಿದರು’ ಎಂಬ ತಂಡ ಕಟ್ಟಿಕೊಂಡು ಊರೂರು ಅಲೆದು ನಾಟಕ ಪ್ರದರ್ಶನ ನೀಡಿದರು. ಇದು ಅವರಲ್ಲಿ ನಾನೊಬ್ಬ ನಟನಾಗಬೇಕೆಂಬ ಆಸೆಯನ್ನು ಮತ್ತಷ್ಟು ಹಬ್ಬಿಸಿತು. ಇದೇ ವೇಳೆ ಅವರಿಗೆ ನಿರ್ದೇಶಕರಾದ ಎ.ಆರ್‌. ಬಾಬು, ನಂದಕಿಶೋರ್ ಹಾಗೂ ಚೇತನ್ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

ನಟನಾಗಬೇಕೆಂಬ ಕನಸು ಹೊತ್ತಿದ್ದ ಸಾಗರ್‌ಗೆ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ತಾನೂ ಕೂಡ ನಿರ್ದೇಶಕನ ಟೋಪಿ ಧರಿಸಬೇಕೆಂಬ ಅಭಿಲಾಷೆ ಮೂಡಿತು.

‘ಎರಡೊಂದ್ಲಾ ಎರಡು’, ‘ನಾಲಾಯಕ್‌’ ಸೇರಿದಂತೆ ಕೆಲ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಆಗ, ಆ್ಯಕ್ಷನ್ ಕಟ್ ಹೇಳುವಷ್ಟು ಕಲಿತಿದ್ದೇನೆ ಎನಿಸಿತು. ಆಗ ಹೊಳೆದಿದ್ದೆ, ‘ಸಾರ್ವಜನಿಕರಲ್ಲಿ ವಿನಂತಿ’ ಕಥೆ’ ಎಂದು ಕೃಪಾ ಸಾಗರ್ ತಮ್ಮ ನಿರ್ದೇಶನದ ಹಾದಿಯನ್ನು ಬಿಚ್ಚಿಟ್ಟರು.

ಸಾಗರ್ ಆ್ಯಕ್ಷನ್ ಕಟ್ ಹೇಳಿರು ವುದು ಕ್ರೈಂ ಮತ್ತು ಥ್ರಿಲ್ಲರ್ ಕಥಾ ಹಂದರದ ಚಿತ್ರಕ್ಕೆ. ಕಣ್ಣೆದುರಿಗೆ ನಡೆಯುವ ಅಪರಾಧ ಘಟನೆಗಳ ಹಿಂದಿರುವ ಯಾರಿಗೂ ಕಾಣದ ಮುಖಗಳನ್ನು ಅನಾವರಣಗೊಳಿಸುವ ಪ್ರಯತ್ನ ಚಿತ್ರದ್ದು ಎಂದು ಅವರು ಹೇಳುತ್ತಾರೆ.

‘ನಿತ್ಯ ಮಾಧ್ಯಮಗಳಲ್ಲಿ ಗಮನಿಸಿದಾಗ, ಮನುಷ್ಯನ ಬೆನ್ನ ಹಿಂದೆ ನಡೆಯುವ ಅಪರಾಧಗಳೇ ಹೆಚ್ಚು. ಅದೇ ಎಳೆಯನ್ನಿಟ್ಟುಕೊಂಡು ಸಾಮಾಜಿಕ ಸಂದೇಶದ ಕ್ರೈಂ ಮತ್ತು ಥ್ರಿಲ್ಲರ್ ಕಥೆ ಹೆಣೆದೆ. ಭರಪೂರ ಮನರಂಜನೆಯಾಗಿ ಹಾಸ್ಯವನ್ನು ಬೆರೆಸಿದೆ. ಚಿತ್ರ ಸಾರ್ವಜನಿಕ ಕೇಂದ್ರಿತವಾಗಿದ್ದರಿಂದ ‘ಸಾರ್ವಜನಿಕರಲ್ಲಿ ವಿನಂತಿ’ ಎಂಬ ಶೀರ್ಷಿಕೆಯನ್ನೇ ಇಟ್ಟೆ’ ಎಂದರು ಸಾಗರ್.

ಮೊದಲ ಚಿತ್ರ ಬಿಡುಗಡೆಯ ಹೊತ್ತಿನಲ್ಲೇ, ಸಾಗರ್ ಲೂಸ್ ಮಾದ ಯೋಗೀಶ್ ಅವರಿಗೆ ಆ್ಯಕ್ಷನ್ ಹೇಳಲು ತಯಾರಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯ ಮದನ್‌ರಾಜ್‌ ಓದಿನ ಜತೆಗೆ, ನಟನೆಯ ಚುಂಗು ಅಂಟಿಸಿಕೊಂಡವರು. ರಂಗಭೂಮಿ ಜತೆಗೆ, ಬಯಲು ನಾಟಕಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಣೆಗೆ ಒಡ್ಡಿಕೊಂಡ ಅವರು, ಸಿನಿಮಾಗಳಲ್ಲಿ ಸಣ್ಣ ನೆಗೆಟಿವ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೀಗ, ‘ಸಾರ್ವಜನಿಕರಲ್ಲಿ ವಿನಂತಿ’ ಮೂಲಕ ನಾಯಕ ನಟನಾಗಿ ಪ್ರಮೋಷನ್‌ ಪಡೆದಿದ್ದಾರೆ.

‘ನನ್ನ ಕುಟುಂಬದಲ್ಲಿ ಬಣ್ಣ ಹಚ್ಚಿದ ಮೊದಲಿಗ ನಾನೇ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಸ್ನೇಹಿತ ವಿನಯ್‌ ನನ್ನ ಸಿನಿಪಯಣದ ಗುರು. ಇದುವರೆಗೆ ’ಶ್ವೇತಾ’, ‘ದರ್ಬಾರ್‌’ ಸೇರಿದಂತೆ ಕೆಲ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ‘ಜವಾನ’ ಮತ್ತು ‘ಸರ್ಕಾರ್‌’ ಚಿತ್ರಗಳು ಇನ್ನೂ ತೆರೆ ಕಂಡಿದ್ದೇನೆ. ‘ಕಮೋಹಂ’ ಎಂಬ ಚಿತ್ರದಲ್ಲಿ ಕುರುಡನ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು ಅವರು.

‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಪಾತ್ರಕ್ಕೆ ನಾಯಕ ಮತ್ತು ಖಳನ ಶೇಡ್ ಎರಡೂ ಇದೆ. ಅನಿರೀಕ್ಷಿತ ತಿರುವುಗಳು ನಾಯಕನ ಪಾತ್ರಕ್ಕೆ ಖಳನ ಸ್ಪರ್ಶ ನೀಡುತ್ತವೆ. ಮನುಷ್ಯನೊಬ್ಬನ ಸಣ್ಣ ತಪ್ಪು, ಆತನನ್ನು ಅಪರಾಧ ಲೋಕದ ವ್ಯೂಹದೊಳಗೆ ಹೇಗೆ ಎಳೆದೊಯ್ಯುತ್ತದೆ ಎಂಬುದೇ ಚಿತ್ರದ ತಿರುಳು’ ಎಂದು ಕಥೆಯ ಎಳೆಯನ್ನು ಮದನ್‌ರಾಜ್ ಹಂಚಿಕೊಂಡರು.

ಟಿ.ವಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ನೀಳಕಾಯ ಸುಂದರಿ ಅಮೃತಾ ಕೆ.ಎಲ್., ಸುದ್ದಿಮನೆಯಿಂದ ಕಿರುತೆರೆ; ಅಲ್ಲಿಂದ ಬೆಳ್ಳಿತೆರೆಗೆ ಬಂದ ಅಂದಗಾತಿ. ಆರಂಭದಲ್ಲಿ ‘ಬಲು ಅಪರೂಪ ನಮ್ ಜೋಡಿ’, ‘ಗುಂಡ್ಯಾನ ಹೆಂಡ್ತಿ’ ಸೇರಿದಂತೆ ಕನ್ನಡ ಕೆಲ ಧಾರವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

ತಮಿಳಿನ ಕೆಲ ಚಿತ್ರಗಳಲ್ಲೂ ನಟಿಸಿರುವ ಅಮೃತಾ, ಬೆಳ್ಳಿತೆರೆಯ ನಾಯಕಿ ನಟಿಯಾಗಿ ಪದಾರ್ಪಣೆ ಮಾಡುತ್ತಿರುವ ಚಿತ್ರ ‘ಸಾರ್ವಜನಿಕರಲ್ಲಿ ವಿನಂತಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT