ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌, ಇಂದ್ರಜಿತ್‌ ಲಂಕೇಶ್‌ ವಿರುದ್ಧ ದೂರು

Last Updated 20 ಜುಲೈ 2021, 12:58 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್‌ ಹಾಗೂ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರಿಬ್ಬರೂ ‘ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವಂತೆ, ಅಸಭ್ಯವಾಗಿ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿರುವ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ‘ಇಬ್ಬರನ್ನೂ ಐದು ವರ್ಷಗಳ ಕಾಲ ಚಿತ್ರರಂಗದಿಂದ ಬಹಿಷ್ಕರಿಸಬೇಕು’ ಎಂದು ಆಗ್ರಹಿಸಿದೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿರುವ ಸಂಸ್ಥೆಯ ಅಧ್ಯಕ್ಷ ಅಖಂಡ ಮೋಹನ್‌, ‘ನಟ ದರ್ಶನ್‌ ತೂಗುದೀಪ ಹಾಗೂ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರಿಬ್ಬರೂ ಸಿನಿಮಾ ಶೈಲಿಯಲ್ಲಿ ಅಸಭ್ಯ ವರ್ತನೆ ಹಾಗೂ ರೌಡಿಗಳಂತೆ ನಡೆದುಕೊಳ್ಳುತ್ತಿದ್ದು, ಕನ್ನಡ ಬೆಳ್ಳಿತೆರೆ, ಚಿತ್ರರಂಗದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಅವರು ನಾಡಿನ ಯುವಸಮೂಹವನ್ನು ದಿಕ್ಕುತಪ್ಪಿಸಿ ಅವರ ಜೀವನವನ್ನು ಹಾಳು ಮಾಡಿ ಕೊಲೆಗಡುಕರನ್ನಾಗಿ ಪ್ರೇರಣೆ ನೀಡುವ ಮಾತುಗಳನ್ನು ಆಡುತ್ತಿದ್ದಾರೆ'

'ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಶಂಕರನಾಗ್‌, ಅನಂತನಾಗ್‌ ಮುಂತಾದ ನೂರಾರು ನಟರು ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟು ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆದರೆ ದರ್ಶನ್‌ ಹಾಗೂ ಇಂದ್ರಜಿತ್‌ ಅವರು ತಮ್ಮ ಕೀಳುಮಟ್ಟದ ಮಾತುಗಳಿಂದ ಕರ್ನಾಟಕದ ಗೌರವವನ್ನು ಹಾಳು ಮಾಡಿದ್ದಾರೆ. ಆದ್ದರಿಂದ ಈ ಕೂಡಲೇ ಇಬ್ಬರನ್ನು ಐದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿಡಬೇಕು ಹಾಗೂ ಚಿತ್ರರಂಗದ ಯಾವುದೇ ವಿಭಾಗದಲ್ಲಿ ಭಾಗವಹಿಸಲು ಬಿಡಬಾರದು. ಇವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT