ಶನಿವಾರ, ಜುಲೈ 24, 2021
21 °C

ಈಗಲೇ 3ನೇ ಅಲೆಯ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಎರಡನೇ ಅಲೆಯನ್ನು ನಿಯಂತ್ರಿಸಲು ಹೇರಲಾಗಿದ್ದ ಲಾಕ್‌ಡೌನ್‌ ಕ್ರಮೇಣವಾಗಿ ಹಂತಹಂತವಾಗಿ ಸಡಿಲವಾಗುತ್ತಿದೆ. ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಸಿನಿಮಾ, ಕಿರುತೆರೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಆದರೆ, ಚಿತ್ರಮಂದಿರಗಳನ್ನು ತೆರೆಯುವುದರ ಕುರಿತು ಹಾಗೂ ಒಳಾಂಗಣದಲ್ಲಿ ಚಿತ್ರೀಕರಣದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದರೂ, ಒಂದಿಷ್ಟು ಅನಿಶ್ಚಿತತೆ ಚಿತ್ರೋದ್ಯಮದಲ್ಲಿ ಇನ್ನೂ ಮುಂದುವರಿದಿದೆ.

ಸಾಲು ಸಾಲು ಬಿಗ್‌ಬಜೆಟ್‌ ಚಿತ್ರಗಳು: ಕಳೆದ ಬಾರಿ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರತೆ ಹೆಚ್ಚಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ರಷ್ಟು ನಿರ್ಬಂಧಿಸಲಾಯಿತು. ಹೀಗಾಗಿ ಈ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಒಟಿಟಿಯಲ್ಲಿ ತೆರೆಕಂಡಿತು. ಪ್ರಸ್ತುತ ಇದೇ ಆತಂಕ ನಿರ್ಮಾಪಕರಲ್ಲಿ ಇದೆ. ದುನಿಯಾ ವಿಜಯ್‌ ನಟನೆಯ ‘ಸಲಗ’, ಸುದೀಪ್‌ ನಟನೆಯ ‘ಕೋಟಿಗೊಬ್ಬ–3’, ಶಿವರಾಜ್‌ಕುಮಾರ್‌ ಅಭಿನಯದ ‘ಭಜರಂಗಿ–2’ ಹೀಗೆ ಬಿಗ್‌ಬಜೆಟ್‌ ಚಿತ್ರಗಳು ಏಪ್ರಿಲ್‌–ಜೂನ್‌ ನಡುವೆ ತೆರೆಕಾಣಬೇಕಿತ್ತು. ಲಾಕ್‌ಡೌನ್‌ ಕಾರಣದಿಂದ ಇವೆಲ್ಲವೂ ಬಿಡುಗಡೆಗೆ ಕಾಯುತ್ತಿವೆ.

ಯಶ್‌ ಅಭಿನಯದ ‘ಕೆಜಿಎಫ್‌–2’ ಜುಲೈ 16ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ಚಿತ್ರಮಂದಿರ ತೆರೆಯುವ ಯಾವುದೇ ಸೂಚನೆ ಇಲ್ಲ. ಚಿತ್ರಮಂದಿರ ತೆರೆಯಲು ಅವಕಾಶ ನೀಡಿದರೂ, ಇನ್ನೂ ನಾಲ್ಕೈದು ವಾರ ಶೇ 100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವುದು ಅನುಮಾನವೇ ಸರಿ. ಹೀಗಾಗಿ ಈ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ಮೂರನೇ ಅಲೆಯ ಆತಂಕ’: ‘ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೆಯೇ ಇಲ್ಲವೇ ಎನ್ನುವ ಭಯ ಇನ್ನೂ ನಮ್ಮಲ್ಲಿದೆ. ಆದರೂ ಚಿತ್ರಬಿಡುಗಡೆ ನಾವು ಪ್ರಯತ್ನಪಡಲೇಬೇಕು. ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆ ಬರುತ್ತದೆ ಎನ್ನುತ್ತಿದ್ದಾರೆ. ಇದು ಚಿತ್ರಮಂದಿರದ ಮಾಲೀಕರಿಗೆ ಹಾಗೂ ನಿರ್ಮಾಪಕರಿಗೆ ಆತಂಕ ತಂದಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳುತ್ತಿರುವ ಕಾರಣ ಮೂರನೇ ಅಲೆ ಬರಲಿಕ್ಕಿಲ್ಲ ಎನ್ನುವ ನಂಬಿಕೆಯೂ ಇದೆ. ಜುಲೈ 2 ಅಥವಾ 3ನೇ ವಾರದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಬಹುದು. ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದರೆ ಬಿಗ್‌ಬಜೆಟ್‌ ಚಿತ್ರಗಳಿಗೆ ವರ್ಕ್‌ಔಟ್‌ ಆಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಚಿತ್ರರಂಗ 20 ವರ್ಷ ಹಿಂದಕ್ಕೆ ಹೋದಂತಾಗಿದೆ’ ಎನ್ನುತ್ತಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ.

‘ಮತ್ತೆ ಸಿನಿಮಾ ವಾತಾವರಣ ನಿರ್ಮಾಣ ಮಾಡಬೇಕಾಗಿದೆ’: ಚಿತ್ರರಂಗದ ಚಟುವಟಿಕೆ ಮತ್ತೆ ಗರಿಗೆದರುತ್ತಿರುವ ಸಂದರ್ಭದಲ್ಲೇ ಒಳಾಂಗಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಜುಲೈ 5ರ ಬಳಿಕ ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎನಿಸುತ್ತಿದೆ. ಮೊದಲಿಗೆ ಒಂದೆರಡು ತಿಂಗಳು ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡುವ ಸಾಧ್ಯತೆ ಇದೆ. ಕೋವಿಡ್‌–19 ಮೂರನೇ ಅಲೆಯ ಮುನ್ಸೂಚನೆಯೂ ಇದ್ದು, ಇದೀಗ ಚಿತ್ರಮಂದಿರ ತೆರೆದು ಒಂದೆರಡು ಸಿನಿಮಾ ಬಿಡುಗಡೆ ನಂತರ ಮತ್ತೆ ಮುಚ್ಚುವಂತ ಸ್ಥಿತಿ ಬಂದರೆ ಏನು ಮಾಡುವುದು. ಕಳೆದ ಬಾರಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ರಷ್ಟು ನಿರ್ಬಂಧಿಸುವ ಏಕಾಏಕಿ ನಿರ್ಧಾರ ನಿರ್ಮಾಪಕರಿಗೆ ಸಮಸ್ಯೆಯಾಗಿತ್ತು. ನಾವು ಮನವಿ ಸಲ್ಲಿಸಿದ ಮೇಲೆ ಕೆಲ ದಿನಗಳ ಅವಕಾಶ ನೀಡಲಾಯಿತು. ಈ ರೀತಿಯ ಘಟನೆ ಮರುಕಳಿಸಬಾರದು’ ಎನ್ನುತ್ತಾರೆ ಜೈರಾಜ್‌. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು