ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕೊರೊನಾ ಯೋಧರನ್ನು ಗೌರವಿಸಿ: ರಮೇಶ್‌ ಅರವಿಂದ್‌

Last Updated 24 ಏಪ್ರಿಲ್ 2020, 2:17 IST
ಅಕ್ಷರ ಗಾತ್ರ

ಕೊರೊನಾ ವಾರಿಯರ್ಸ್‌‌ಗಳಾದ (ಆರೋಗ್ಯ ಸೈನಿಕರು)ವೈದ್ಯರು, ನರ್ಸ್‌ಗಳು, ಆರೋಗ್ಯ ಸಹಾಯಕರಿಗೆ ದೇಶ ಕಾಯುವ ಸೈನಿಕರಿಗೆ ನೀಡುವಷ್ಟೇ ಗೌರವ, ಮರ್ಯಾದೆಯನ್ನು ಕೊಡಬೇಕು.

–ಇದು ನಟ ರಮೇಶ್‌ ಅರವಿಂದ್‌ ಅವರು ಗುರುವಾರ ‘ಪ್ರಜಾವಾಣಿ’ ನಡೆಸಿದ ಫೇಸ್‌ಬುಕ್‌ ಲೈವ್‌ನಲ್ಲಿ ಜನರ ಮುಂದಿಟ್ಟ ಕಳಕಳಿಯ ಕೋರಿಕೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಇರುವಅವರು ಅಲ್ಲಿಂದಲೇ ಫೇಸ್‌ಬುಕ್‌ ಮೂಲಕ ವೀಕ್ಷಕರು ಮತ್ತು ಅಭಿಮಾನಿಗಳೊಂದಿಗೆ ಮುಖಾಮುಖಿಯಾದರು. ಒಂದು ತಾಸು ನಡೆದ ಈ ಲೈವ್‌ನಲ್ಲಿ ಸಿನಿಮಾ, ಲಾಕ್‌ಡೌನ್‌, ಕೊರೊನಾ ಸೇರಿ ಹಲವು ವಿಷಯಗಳ ಕುರಿತು ವೀಕ್ಷಕರಿಂದ ಎದುರಾದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳುಸ್ಫೂರ್ತಿದಾಯಕವಾಗಿದ್ದವು.

‘ಜನರು ಈ ಸಂದರ್ಭದಲ್ಲಿ ಭರವಸೆ ಕಳೆದುಕೊಳ್ಳಬಾರದು. ಭರವಸೆಯೊಂದೇ ಜೀವನ. ಕೊರೊನಾ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ, ಕಣ್ಣಿಗೆ ಕಾಣದ ಶತ್ರು ಈ ಕೊರೊನಾ ವಿರುದ್ಧ ಭಾರತ ಗೆಲ್ಲುತ್ತದೆ’ ಎನ್ನುವುದು ಅವರ ವಿಶ್ವಾಸದ ನುಡಿ.

‘ಲಾಕ್‌ಡೌನ್‌ನಿಂದಾಗಿ ಗೃಹಬಂಧನ ಶಿಕ್ಷೆ ಅನುಭವಿಸುವಂತಾಗಿದೆಯಲ್ಲ’ ಎಂದು ವೀಕ್ಷಕರೊಬ್ಬರು ಮುಂದಿಟ್ಟ ಪ್ರಶ್ನೆಗೆ ‘ಇದನ್ನು ಖಂಡಿತಾ ಗೃಹಬಂಧನ ಎಂದುಕೊಳ್ಳಬೇಡಿ. ಮನೆಯೊಳಗೆ ಇರುವುದರಿಂದ ಜೀವಂತ ಇದ್ದೇವೆ ಎಂದು ಭಾವಿಸಿ. ಹೊರಗೆ ಯಾರಾದರೂ ಎಕೆ 47 ಬಂದೂಕು ಹಿಡಿದು ಸುಡಲು ನಿಂತಿದ್ದರೆ ಮನೆಯಿಂದ ಯಾರಾದರೂ ಆಚೆ ಹೋಗುತ್ತೀರಾ? ಬಂದೂಕು ಕಣ್ಣಿಗೆ ಕಾಣಿಸುತ್ತದೆ, ಆದರೆ, ಈ ಕೊರೊನಾ ಕಣ್ಣಿಗೆ ಕಾಣಿಸುವುದಿಲ್ಲ ಅಷ್ಟೇ. ಮನೆಯಿಂದ ಆಚೆ ಬಾರದೆ ಸುರಕ್ಷಿತವಾಗಿರಿ’ ಎನ್ನಲು ಅವರು ಮರೆಯಲಿಲ್ಲ.

‘ಇಂತಹ ಮಹಾಮಾರಿ ರೋಗಗಳು ಬಂದಾಗ ಜನರು ಪ್ರಾಣಿ ಬಲಿ ನೀಡುವ ಮೌಢ್ಯ ಆಚರಿಸುತ್ತಿದ್ದರು. ಈಗ ವಿಜ್ಞಾನ ಮತ್ತು ವಾಸ್ತವ ಸ್ಥಿತಿ ನಂಬುವ ಕಾಲದಲ್ಲಿದ್ದೇವೆ. ಕೊರೊನಾದಿಂದಾಗಿ ದೇವಸ್ಥಾನ, ಮಸೀದಿ, ಮಂದಿರ, ಚರ್ಚುಗಳು ಮುಚ್ಚಿವೆ. ಇಂದು ಎಲ್ಲರೂ ಧರ್ಮಾತಿತ, ಜಾತ್ಯತೀತವಾಗಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ನಿರ್ದೇಶನ ಪಾಲಿಸುತ್ತಿರುವುದು ದೊಡ್ಡ ವಿಷಯ. ಹಿಂದೆ ಪ್ಲೇಗ್‌ ಬಂದಾಗ ರೋಗ ಹೇಗೆ ಹರಡುತ್ತಿದೆ ಎನ್ನುವುದೇ ಗೊತ್ತಾಗದಂತಹ ಪರಿಸ್ಥಿತಿ ಇತ್ತಂತೆ. ಈಗ ಮುಖಕ್ಕೆ ಮಾಸ್ಕ್‌ ಧರಿಸಿದರೆ, ಒಬ್ಬರಿಂದ ಒಬ್ಬರುಅಂತರ ಕಾಯ್ದುಕೊಂಡರೆ ಕೊರೊನಾ ಹರಡುವಿಕೆ ತಡೆಯಬಹುದು ಎನ್ನುವ ಕಾಲಘಟ್ಟದಲ್ಲಿರುವುದು ಸಮಾಧಾನದ ಸಂಗತಿ’ ಎಂದರು.

‘ಪ್ರಜಾವಾಣಿ ನಮ್ಮ ಹೆಮ್ಮೆ’ ಎನ್ನುವ ಮಾತು ಉಲ್ಲೇಖಿಸಿದ ಅವರು, ‘ಪ್ರಜಾವಾಣಿ’ಯಲ್ಲಿ ಬರುವ ಸುದ್ದಿಗಳನ್ನು ಜನರು ನಂಬುತ್ತಾರೆ. ಇದು ನಂಬಿಕೆಗೆ ಅರ್ಹ ಪತ್ರಿಕೆ. ಯಾವುದೋ ಒಂದು ಮಾಧ್ಯಮದಲ್ಲಿ ಸುಳ್ಳು ಸುದ್ದಿ ಬಂದ ಕಾರಣಕ್ಕೆ ಇಡೀ ಮಾಧ್ಯಮ ವಲಯವನ್ನೇ ದೂಷಿಸಬಾರದು. ಮಾಧ್ಯಮಗಳಿಂದಲೇ ಇಂದು ಜಗತ್ತಿನ ಆಗುಹೋಗುಗಳು ಜನರಿಗೆ ಗೊತ್ತಾಗುತ್ತಿದೆ. ಕೊರೊನಾ ವಿರುದ್ಧದ ಸಮರದಲ್ಲಿ ಮಾಧ್ಯಮಗಳಿಂದ ಜಾಗೃತಿಯೂ ಮೂಡುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಾಮಾಜಿಕ ಮಾಧ್ಯಮ ಒಂದು ವರವಿದ್ದಂತೆ. ಆದರೆ, ಫೇಕ್‌ ಸುದ್ದಿಗಳಿಂದ ಅದು ಶಾಪವಾಗಿ ಪರಿಣಮಿ ಸುತ್ತಿದೆ. ಬಳಕೆದಾರರು ಸತ್ಯಾಂಶ ಪರಿಶೀಲಿಸದೆ ಅದನ್ನು ಫಾರ್ವರ್ಡ್‌ ಮಾಡಿಮತ್ತೊಬ್ಬರ ಬದುಕಿಗೆ ಮುಳುವಾಗಬಾರದು’ ಎಂದು ಕಿವಿ ಮಾತನ್ನು ಹೇಳಿದರು.

ಸಿನಿಮಾ ಬಗ್ಗೆಯೂ ಮಾತನಾಡಿದ ಅವರು, ‘ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘100’ ಸಿನಿಮಾವನ್ನು ಆದಷ್ಟು ಬೇಗ ತೆರೆ ಮೇಲೆ ತರಲಿದ್ದೇನೆ. ‘ರಾಮ ಶಾಮ ಭಾಮ’ ಭಾಗ 2 ಸಿನಿಮಾ ಮಾಡುವ ಆಲೋಚನೆಯೂ ಇದೆ. ‘ಶಿವಾಜಿ ಸೂರತ್ಕಲ್‌’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ.ಈಗ ನನ್ನ ವಯಸ್ಸು ಮತ್ತು ವ್ಯಕ್ತಿತ್ವಕ್ಕೆ ಒಪ್ಪುವ ಪಾತ್ರಗಳು ಸಿಗುತ್ತಿರುವುದಕ್ಕೆ ಖುಷಿ ಇದೆ. ನಾನು ಕಲಿತ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನನ್ನ ಸಿನಿಮಾ ಬದುಕಿನಲ್ಲಿ ಉಪಯೋಗಕ್ಕೆ ಬರುತ್ತಿದೆ ಎಂದರು.

ಲಾಕ್‌ಡೌನ್‌ ಸಮಯ ಹೇಗೆ ಕಳೆಯುತ್ತಿದ್ದೀರಿ ಎಂದಾಗ, ‘ಮನೆಯಲ್ಲೇ ಇರುವುದು ನನಗೆ ಹೊಸದಲ್ಲ. ಚಿತ್ರದ ಸ್ಕ್ರಿಪ್ಟ್‌ ಬರೆಯುವಾಗ ಹೀಗೇ ಇರುತ್ತೇವೆ. ಹೊಸ ವಿಷಯಗಳನ್ನು ತಿಳಿಯಲು ಈ ಸಮಯ ಬಳಸಿಕೊಳ್ಳುತ್ತಿದ್ದೇನೆ. ಪತ್ನಿ, ಮಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಇದು ಒಂದು ರೀತಿಯಲ್ಲಿ ನನಗೆಖುಷಿ ಕೊಟ್ಟಿದೆ’ ಎನ್ನುವ ಮಾತು ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT