ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತ ಬಾಲಕನ ಮಾನವೀಯ ಕಥನ

ಗೋವಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Last Updated 21 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಸಾವಿರಾರು ನಿರಾಶ್ರಿತ ಮಕ್ಕಳು ಯುರೋಪಿನ ಬೀದಿಗಳಲ್ಲಿ ಓಡಾಡುವುದು ಸಹಜ. ನಾಳೆ ಯಾವುದೋ ಬೆಳಕು ಸಿಕ್ಕೀತೇನೊ ಎಂಬ ಹುಡುಕಾಟವು ಅಲ್ಲಿ ನಿರಂತರ. ಅಂತಹ ಹುಡುಗನೊಬ್ಬನ ಕೇಂದ್ರಪಾತ್ರವಾಗಿ ಉಳ್ಳ ಸಿನಿಮಾ ‘ಡಿಸ್ಪೈಟ್ ದಿ ಫಾಗ್’. ಇಟಲಿಯ ಈ ಸಿನಿಮಾ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಸಂಭ್ರಮದ ಉದ್ಘಾಟನಾ ಚಿತ್ರ.

ನೂರು ನಿಮಿಷಗಳ ಅವಧಿಯ ಸಿನಿಮಾ ಇದು. ಗೋರಾನ್ ಪ್ಯಾಸ್ಕಲ್‌ಜೆವಿಕ್ ಇದರ ನಿರ್ದೇಶಕ. ಸರ್ಬಿಯಾ ಹಾಗೂ ಫ್ರಾನ್ಸ್ ಎರಡೂ ದೇಶಗಳ ಪೌರತ್ವ ಇರುವ ಗೋರಾನ್ ತಮ್ಮ ಕಲಾತ್ಮಕ ದೃಷ್ಟಿಕೋನದಿಂದ ಯುರೋಪ್‌ನಲ್ಲೇ ಹೆಸರುವಾಸಿ. ಇವರ ಒಂದೂವರೆ ಡಜನ್ ಸಿನಿಮಾಗಳಿಗೆ ಬಹುದೊಡ್ಡ ಎನ್ನುವಂಥ ಮನ್ನಣೆಗಳು ಸಂದಿವೆ. ಅಷ್ಟೇ ಅಲ್ಲ, ಮೂವತ್ತಕ್ಕೂ ಹೆಚ್ಚು ಕಿರುಚಿತ್ರಗಳ ತಯಾರಿಯಿಂದಲೂ ಇವರು ಛಾಪು ಮೂಡಿಸಿದ್ದಾರೆ.

ರೋಮ್‌ನ ಸಣ್ಣ ಪಟ್ಟಣದ ಹೋಟೆಲ್ ವ್ಯವಸ್ಥಾಪಕ ಪವೋಲೊ ದಿನದ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಮಳೆಯಲ್ಲಿ ತೊಯ್ದು ನಡುಗುತ್ತಾ ಕುಳಿತ ಹುಡುಗನೊಬ್ಬ ಅವನ ಕಣ್ಣಿಗೆ ಬೀಳುತ್ತಾನೆ. ಅವನ ಹೆಸರು ಏನೆಂದು ಕೇಳಿದಾಗ, ಮಹಮ್ಮದ್ ಎಂದು ಗೊತ್ತಾಗುತ್ತದೆ. ಅವನನ್ನು ಮನೆಗೆ ಕರೆದುಕೊಂಡು ಹೋಗುವ ಪವೋಲೊಗೆ ಹೆಂಡತಿಯಿಂದ ಪ್ರತಿರೋಧ ವ್ಯಕ್ತವಾಗುತ್ತದೆ. ಒಂದು ರಾತ್ರಿ ಆ ನಿರಾಶ್ರಿತ ಬಾಲಕ ಅಲ್ಲಿ ಇರಲಿ ಎನ್ನುವ ಪತಿ- ಪತ್ನಿಯ ಒಪ್ಪಂದದಿಂದ ಸಿನಿಮಾ ಕುತೂಹಲದ ಘಟ್ಟ ತಲುಪುತ್ತದೆ. ಯಾವ ಬಾಲಕನನ್ನು ಮೊದಲು ಆ ತಾಯಿ ನಿರಾಕರಿಸಿದ್ದಳೋ ಅವನೇ ಮನೆಯ ಮಗನಾಗುವ ಮಾನವೀಯ ಅಂಶಗಳ ಸಿನಿಮಾ ‘ಡಿಸ್ಪೈಟ್ ದಿ ಫಾಗ್’.

ರಬ್ಬರ್ ದೋಣಿಯಲ್ಲಿ ರಕ್ಷಣೆ ಪಡೆಯಲೆಂದು ಸಾಗುವಾಗ ಆ ದೋಣಿ ಮುಳುಗಿ ಮಹಮ್ಮದನ ಅಪ್ಪ- ಅಮ್ಮ ಮೃತಪಟ್ಟಿರುತ್ತಾರೆ. ನಿರಾಶ್ರಿತ ಬಾಲಕರ ಬೇಗುದಿಯನ್ನು ಹಾಗೂ ಅದರ ರಾಜಕೀಯ ಸೂಕ್ಷ್ಮಗಳನ್ನು ಹೇಳಲು ನಿರ್ದೇಶಕರು ಮಾನವೀಯ ದಾರಿಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಮಿಲಾನ್ ಸ್ಪ್ಯಾಸಿಕ್ ಸಿನಿಮಾಟೊಗ್ರಫಿ ನಿರ್ದೇಶನ ಚಿತ್ರದ ಇನ್ನೊಂದು ಗಮನಾರ್ಹ ಅಂಶ. ಮಂಜು ಮುಸುಕಿದ ಸ್ಥಿತಿಯನ್ನು ರೂಪಕವಾಗಿ ಶೀರ್ಷಿಕೆಗೆ ಇಟ್ಟಿರುವ ಈ ಸಿನಿಮಾದಲ್ಲಿ ಡೆನಟೆಲಾ ಫಿನೊಕಿಯಾರೊ, ಜಾರ್ಜಿಯೊ ತಿರಬಸಿ, ಫ್ರಾನ್ಸೆಸ್ಕೊ ಅಕ್ವರೊಲು ಅಭಿನಯವಿದೆ.

ಸಾಮಾಜಿಕ ಹಾಗೂ ರಾಜಕೀಯ ಆಯಾಮಗಳು ಬೆಸೆದುಕೊಂಡ ಕಥನಗಳಿಗೆ ಮಾನವೀಯ ಸ್ಪರ್ಶ ನೀಡಿ ತಣ್ಣಗಿನ ಧ್ವನಿಯಲ್ಲಿ ಹೇಳುವ ಕಾರ್ಯಕ್ಕೆ ಈಗ ಮೆಚ್ಚುಗೆವ್ಯಕ್ತವಾಗುತ್ತಿದೆ. ಆರಂಭಿಕ ಚಿತ್ರವಾಗಿ ಗೋವಾ ಚಿತ್ರೋತ್ಸವಕ್ಕೆ ‘ಡಿಸ್ಪೈಟ್ ದಿ ಫಾಗ್’ದ ಆಯ್ಕೆ ಇದನ್ನು ಸಮರ್ಥಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT