ಯೋಗರಾಜ್‌ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

4
ಗೇಟಿಲ್ಲದ ಬಿಲ್ಡಿಂಗ್‌ನಲ್ಲಿ ಹೂಬಿಟ್ಟ ಶೃಂಗಾರದ ಹೊಂಗೆಮರ

ಯೋಗರಾಜ್‌ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

Published:
Updated:

ಭಾಗ 1
ಹೇರು, ಊರು ಮತ್ತು ವಿಚಿತ್ರ ಕ್ಯಾರೆಕ್ಟರು

 

‘ಅದೇ, ಗೇಟಿಲ್ದಿರೋ ಬಿಲ್ಡಿಂಗಿದೆ ನೋಡಿ...’

ಯೋಗರಾಜ್ ಭಟ್‌ ತಮ್ಮ ಆಫೀಸಿನ ಗುರುತು ನೀಡಿದ್ದು ಹೀಗೆ. ಈ ‘ಗೇಟಿಲ್ದಿರೋ ಬಿಲ್ಡಿಂಗು’ ಅವರ ಸ್ವಭಾವಕ್ಕೂ ಒಂದು ಸರಿಯಾದ ರೂಪಕ. ಹಲವು ಹಳೇತನಗಳನ್ನು ತಮ್ಮೊಳಗೆ ಜೋಪಾನವಾಗಿ ಇರಿಸಿಕೊಂಡಿರುವ, ಹೊಸತನಗಳು ಯಾವ ಅನುಮತಿಯೂ ಕೇಳದೆ ಒಳಗೆ ನುಗ್ಗಿಬರಲು ಮನದ ಗೇಟನ್ನೂ ಕಿತ್ತಾಕಿಕೊಂಡು ಕೂತಿರುವ ಭಟ್ಟರ ಜತೆ ಹರಟೆಗೆ ಕೂತಾಗ ಮುಸ್ಸಂಜೆ ದಾಟಿ ಕತ್ತಲು ಮುತ್ತುತ್ತಿತ್ತು.

ಹಳೆಯದೊಂದು ರೇಡಿಯೊ ಮತ್ತು ಹೊಸತಾಗಿ ಹೊಳೆಯುವ ಪುಂಗಿ, ಗೋಡೆ ಕಪಾಟಿನೊಳಗೆ ಕೂತು ನಮ್ಮನ್ನೇ ದಿಟ್ಟಿಸುತ್ತಿದ್ದವು. ಖಾಸಗಿ ವಾಹಿನಿಯೊಂದರ ರಿಯಾಲಿಟಿ ಷೋಗಾಗಿ ಸ್ಪೈಕ್‌ ಮಾಡಿಸಿದ್ದ ಅವರ ಹೇರು, ಟೇಬಲ್ಲಿನ ಮೇಲಿನ ಆ್ಯಷ್‌ಟ್ರೇನಲ್ಲಿ ತುಂಬಿದ್ದ ಬೂದಿಯ ನಡುವೆಯೇ ಇಣುಕುತ್ತಿದ್ದ ಸಿಗರೇಟು ಚೂರು, ಒಂದಕ್ಕೊಂದು ತಾಳೆಯಾಗದ ವಿಚಿತ್ರ ವಾತಾವರಣವೊಂದು ಅಲ್ಲಿ ರೂಪುಗೊಂಡಿತ್ತು. ಅವರ ಚಲನಚಿತ್ರಗಳಲ್ಲಿನ ಚಡ್ಡಿ ತೊಟ್ಟ ಚಕೋರಿಯರನ್ನು ನೆನಪಿಸುವ ಸಪೂರ ಸಿಗರೇಟನ್ನು ತುಟಿಗಳ ನಡುವೆ ಇಟ್ಟು, ಕಿಡಿ ಹೊತ್ತಿಸಿ ಮಾತಿನ ಮೂಡಿಗೆ ಬಂದರು ಭಟ್ಟರು.

ತುಸು ಪೋಲಿ, ಪಂಚಿಂಗ್ ಡೈಲಾಗ್‌ಗಳ ದಾಳಿ, ಮಧ್ಯಮಧ್ಯ ಒಣ ವೇದಾಂತದ ಖಯಾಲಿ – ಎಲ್ಲವೂ ಅವರ ಮಾತಿನಲ್ಲಿತ್ತು. ನಡುನಡುವೆ ತಮ್ಮ ಮಾತಿಗೆ ತಾವೇ ಸಣ್ಣ ಮಗುವಿನ ಹಾಗೆ ಅಕ್ಕಳಿಸಿ ನಗುತ್ತಿದ್ದರು. ಈ ನಗುವಿನ ಕಾರಣಕ್ಕೋ ಏನೋ ಮಾತುಕತೆ ಶುರುವಾಗಿದ್ದು ಮಕ್ಕಳ ನೆಪದಿಂದಲೇ.

‘ಮಕ್ಕಳಿಗೆ ನಿಮ್ ಕಂಡ್ರೆ ತುಂಬಾ ಇಷ್ಟ ಯಾಕಿರ್ಬೋದು?’ ಎಂಬ ಪ್ರಶ್ನೆಗೆ, ‘ಹೂ, ಮಕ್ಳಿಗೆ ಈ ಕೋತಿಗಳನ್ನ ಕಂಡ್ರೆ, ಹುಚ್ಚರನ್ನ ಕಂಡ್ರೆಲ್ಲ ತುಂಬಾ ಇಷ್ಟ ಆಗ್ತದೆ. ಅದ್ಕೇ ಇರ್ಬೇಕು’ ಎಂದು ಮತ್ತೆ ನಕ್ಕರು. ಈ ಮಾತಿನ ಜತೆಗೇ ತಮ್ಮ ಬಾಲ್ಯದ ಸ್ಮೃತಿಕೋಶದ ಭಾಗವಾಗಿಬಿಟ್ಟ ಹುಚ್ಚನೊಬ್ಬನ ಕಥೆಯನ್ನೂ ಬಿಚ್ಚಿಟ್ಟರು:

‘ನಮ್ಮೂರಲ್ಲೊಬ್ಬ ಹುಚ್ಚ ಇದ್ದ, ಅಲೀಮ ಅಂತ. ನಾವು ಅವ್ನ ಆಗಮನಕ್ಕೆ ಕಾಯ್ತಿದ್ವಿ. ನಲ್ವತ್ತೈದು ಐವತ್ತಾಗಿತ್ತು ವಯಸ್ಸು. ಅವಂದೊಂದು ಪೆಕ್ಯುಲರ್ ವಾಯ್ಸು... ಮಾತು ಬರ್ತಿರ್ಲಿಲ್ಲ. ಜಾಂಬೋಯ್‌... ಟುರ್ರೋಯ್... ಅನ್ನೋನು. ಮತ್ತೆ ಆ್ಯಪ್ ಆ್ಯಪ್ ಆ್ಯ...ಕ್ ಅನ್ನೋನು. ಅದನ್ನು ಅವ್ನ್ ಥರಾನೇ ಹೇಳ್ಬೇಕು ನಾವು. ಅಲ್ಲೀವರೆಗೆ ಸಮಾಧಾನ ಇಲ್ಲ. ಒಂದನೇ ಕ್ಲಾಸಿನ ಹುಡುಗ್ರಿಂದ ಹತ್ತನೇ ಕ್ಲಾಸಿನ ಹುಡುಗರವರೆಗೂ ಅದ್ನೇ ಬಳಸ್ತಾ ಇದ್ವಿ. ಕ್ಲಾಸಲ್ಲೂ ಹಾಂಗೆ ಸೌಂಡು ಮಾಡೋದು. ಮೇಷ್ಟ್ರಿಗೆ ಇರಿಟೇಶನ್‌ ಮಾಡೋದು. ಅವನ ಹಿಂದೆ ಹೋಗೋದು... ಎಲ್ಲೆಲ್ಲಿ ಹೋಗ್ತಾನೋ ಅವನ ಫಾಲೋ ಮಾಡೋದು ಮಾಡ್ತಿದ್ವಿ. ಅವನ ಒಂದು ಎಲಿಮೆಂಟು ನನ್ನಲ್ಲೂ ಉಳ್ಕಂಡ್ಬಿಟ್ಟಿದೆ ಅನಿಸ್ತದೆ. ಅದ್ಕೆ ಮಕ್ಕಳಿಗೆ ಇಷ್ಟ ಆಗ್ತೀನಿ’.

ಹೀಗೆ ತಮ್ಮನ್ನು ತಾವೇ ವ್ಯಂಗ್ಯ ಮಾಡಿಕೊಳ್ಳುವುದು ಅವರ ವ್ಯಕ್ತಿತ್ವದ ವೈಶಿಷ್ಟ್ಯ. ಹಳ್ಳಿಯಲ್ಲಿ ಕಳೆದ ಬಾಲ್ಯದ ನೆನಪುಗಳು ಅವರ ಮನಸಲ್ಲಿನ್ನೂ ಹಸಿರಾಗಿಯೇ ಇದೆ. ಆ ಕಾಲದಲ್ಲಿ ತಮ್ಮಲ್ಲಿದ್ದ ‘ದಿವ್ಯ ಅಜ್ಞಾನ’ವನ್ನೂ ಅವರು ನೆನಪಿಸಿಕೊಂಡರು.

‘ಈ ಪುಟ್ಟಣ್ಣ ಗಿಟ್ಟಣ್ಣ ಎಲ್ಲ ಯಾರು ಅನ್ನೋದೇ ಗೊತ್ತಿರ್ಲಿಲ್ಲ. ಸಿನಿಮಾಕ್ಕೆ ಒಬ್ಬ ನಿರ್ದೇಶಕ ಇರ್ತಾನೆ ಅಂತ್ಲೇ ಗೊತ್ತಿರ್ಲಿಲ್ಲ. ಸಿಟಿಗಳಿಗೆ ಬಂದ ಮೇಲೆಯೇ ಸಿನಿಮಾದ ಬೇರೆ ಆಯಾಮಗಳು ತಿಳಿಯುತ್ತ ಹೋದದ್ದು’ ಎಂದು ನೆನಪಿಸಿಕೊಳ್ಳುವ ಅವರಿಗೆ ಸಿನಿಮಾ ವ್ಯಾಮೋಹ ಶುರುವಾಗಿದ್ದು ಎಂ.ಎ. ಮಾಡಲು ಮೈಸೂರಿಗೆ ಬಂದ ಮೇಲೆಯೇ.

ಹಾಗೆಂದು ನೆಟ್ಟಗೆ ಎಂ.ಎ.ನಾದ್ರೂ ಮಾಡಿದ್ರಾ? ಖಂಡಿತ ಇಲ್ಲ. ಇಂಟರ್‌ ಯೂನಿವರ್ಸಿಟಿ ಕೋಟಾದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೀಟು ಸಿಕ್ಕರೂ ಅರ್ಧಕ್ಕೆ ಕಾಲೇಜು ಬಿಟ್ಟು ವಾಪಸ್‌ ಊರಿಗೆ ಹೋಗಿಬಿಟ್ಟರು. ಅಲ್ಲಿಯೂ ಹೆಚ್ಚು ದಿನ ಇರಲಿಲ್ಲ. ‘ಎಲ್‌ಎಲ್‌ಬಿ ಮಾಡುವಾ’ ಎಂಬ ಘನ ಉದ್ದೇಶದೊಂದಿಗೆ ವಾಪಸ್ ಮೈಸೂರಿಗೆ ಬಂದರು. ಆ ಟೈಮಲ್ಲಿ ಕತೆ ಗಿತೆ ಬರೆಯುವ ಖಯಾಲಿಯೂ ಅವರಿಗಿತ್ತು. ಆ ಬಗ್ಗೆ ಕೇಳಿದ್ರೆ, ‘ಬರೀತಿದ್ದೆ. ಪತ್ರಿಕೆಗಳಿಗೂ ಕಳಿಸ್ತಿದ್ದೆ. ಆದ್ರೆ ಪ್ರಕಟ ಆಗ್ಬೇಕಲ್ಲ’, ಮತ್ತದೇ ಮುಸಿಮುಸಿ ನಗು.

ಭಟ್ಟರ ವ್ಯಕ್ತಿತ್ವ ಪಾಕಗೊಳ್ಳುವಲ್ಲಿ ಮೈಸೂರು ಮತ್ತು ಬೆಂಗಳೂರು ನಗರಗಳ ಪಾತ್ರ ದೊಡ್ಡದಿದೆ. ಈ ಕುರಿತು ಅವರೂ ಉತ್ಸಾಹದಿಂದಲೇ ಮಾತನಾಡುತ್ತಾರೆ. ‘ಈ ಉತ್ತರ ಕರ್ನಾಟಕದ ಮಂದಿಗೆಲ್ಲಾ ಮೈಸೂರು–ಬೆಂಗಳೂರು ಆಗೂದೇ ಇಲ್ಲ. ನಮ್ದು ಬಟಾ ಬಯ್ಲು... ಮರ ಗಿಡ ಎಂತದೂ ಇಲ್ಲ, ಬರೀ ಮಣ್ಣು. ಅಬ್ಬಬ್ಬಾ ಅಂದ್ರೆ ಬೆಟ್ಟ ಗುಡ್ಡ ಇಷ್ಟ ಆಗ್ತಿತ್ತು. ಆದ್ರೆ ನಗರ... ಅದು ಬೇರೆಯದೇ ಅನುಭವ ಕೊಡ್ತದೆ. ಇಪ್ಪತ್ನೇ ವಯಸ್ಸಿಗೆ ಒಬ್ಬ ಹುಡ್ಗ ಹಳ್ಳಿಯಿಂದ ನಗರಕ್ಕೆ ಹೋದಾಗ ಆಗ್ತದೆ ಗೊತ್ತಾ, ಗಾಂಡ್‌ ಗಾಬ್ರಿ ಅಂತಾರೆ ಅದ್ನ... ಆರಂಭದಲ್ಲಿ ಅದೇ ನಂಗೂ ಆಗಿದ್ದು...’

‘ಆಗ ನಮಗೆ ಬೆಂಗಳೂರಿಗೆ ಬರೂದಂದ್ರೂ ತೀವ್ರ ಹೆದ್ರಿಕೆ. ಬೆಂಗಳೂರಿಗೆ ಬಂದು ಸಂಗಮ್ ಥಿಯೇಟರ್‌ನಲ್ಲಿ ಒಂದು ಸಿನಿಮಾ ನೋಡ್ಕೊಂಡು ವಾಪಾಸ್ ಹೋಗೋದು ಒಂದು ಸಾಹಸ. ಬಸ್‌ಸ್ಟ್ಯಾಂಡ್‌ನಲ್ಲಿ ಇಳಿದು ಥಿಯೇಟರ್‌ಗೆ ಹೋಗೋಕೆ ಭಯ. ನನ್ನ ಅಮ್ಮನ ತಮ್ಮಂದಿರೆಲ್ಲ ಬೆಂಗಳೂರಿನಲ್ಲಿಯೇ ಇದ್ದಿದ್ದು. ಹಾಗಾಗಿ ಬಾಲ್ಯದಲ್ಲಿ ಕರ್ಕೊಂಬರ್ತಿದ್ರು. ಆದರೆ ಒಬ್ನೇ ಬೆಂಗಳೂರಿಗೆ ಬಂದಾಗ ನನಗೆ ಇಪ್ಪತ್ನೂರು ವರ್ಷ. ಆಗ ನನ್ನತ್ರ ಚಿಲ್ರೆ ಕಾಸೂ ಇರಲಿಲ್ಲ. ಊರಿಗೆ ವಾಪಸ್ ಓಡೋದೆ. ಆಗಿನ ಒಂದು ಇನ್ಸಿಡೆಂಟು ನಂಗೆ ಸಖತ್ ನೆನಪಿದೆ. ಬಸ್‌ನಲ್ಲಿ ಮಧ್ಯಾಹ್ನ ಬಿಸಿಲು ಯಾವ ಕಡೆ ಹೊಡೀತದೆ ಗೊತ್ತಾಗ್ತಿರ್ಲಿಲ್ಲ ನಂಗೆ. ಮಧ್ಯಾಹ್ನ ಹನ್ನೊಂದೂವರೆಯ ಬಸ್ಸು. ಯಾವ ಸೈಡ್‌ ಕೂತ್ಕೊಂಡ್ರೆ ಬಿಸಿಲಿಂದ ತಪ್ಪಿಸ್ಕೋಬೋದು ಅಂತ ಯೋಚಿಸ್ತಿದ್ದೆ. ಒಬ್ಬ ಬಸ್ಸಲ್ಲಿ ಕೂತಿದ್ದ. ಅವನ ಬಳಿ ಹೋಗಿ ‘ಊರಿಗೆ ಹೋಗ್ಬೇಕಾದ್ರೆ ಬಿಸ್ಲು ಯಾವ ಕಡೆ ಬೀಳ್ತೇತ್ರೀ’ ಅಂದೆ. ಅವ್ನು ಅಪ್ಪಟ ಧಾರವಾಡಿ ಭಾಷೆಯಲ್ಲಿ ‘ನನ್ನೇನ್ ಕೇಳ್ತಿಯೋ...’ ಎಂದು ಎಷ್ಟು ಕೆಟ್ಟದಾಗಿ ಬೈದ ಅಂದ್ರೆ, ಒಂದೊಂದು ಶಬ್ದಾನೂ ಇನ್ನೂ ಮರೆತಿಲ್ಲ...

‘ಇಂದು ನಗರಕ್ಕೆ ಬರುವ ಹುಡುಗರಿಗೂ ಅಂಥದ್ದೊಂದು ಅಂಜಿಕೆ ಆಗತ್ತಾ?’ ಎಂಬ ಪ್ರಶ್ನೆಗೆ ಉತ್ತರವಾಗಿ ವೈಯಕ್ತಿಕ ಅನುಭವದಿಂದ ಕೊಂಚ ಹಿಂದೆ ಜರುಗಿ, ಯುವಪೀಳಿಗೆಯ ಮನಸಿನ ಕಿಟಕಿಯೊಳಗೆ ಟಾರ್ಚ್ ಲೈಟು ಬಿಟ್ಟರು. ‘ಅದನ್ನು ವಿಲೇಜ್ ಈಡಿಯಸಿ ಅಂತೇನೋ ಕರೀತಾರೆ ಇಂಗ್ಲೀಷಿನಲ್ಲಿ. ಆ ಹೆದ್ರಿಕೆ ಇದ್ದೇ ಇರ್ತದೆ. ಮತ್ತೆ ಆ ಹೆದ್ರಿಕೆಯೇ ನಮ್ಮನ್ನು ಏನಾದ್ರೂ ಮಾಡ್ಲಿಕ್ಕೆ ಹಚ್ಚೂದು. ನಗರದಲ್ಲಿ ಹುಟ್ದೋರಿಗೆ ಆ ಫಿಯರ್ ಇರೋದಿಲ್ಲ.’

‘ಹಾಗಾದ್ರೆ ಅದನ್ನೆಲ್ಲ ಇಟ್ಕೊಂಡು ಯಾಕೆ ಎಲ್ರೂ ಬೆಂಗಳೂರಿಗೆ ಬಂದು ಸೇರ್ಕೋತಾರೆ?’ – ತಾವೇ ಕೇಳಿಕೊಂಡ ಪ್ರಶ್ನೆಗೆ ಉತ್ತರಿಸುತ್ತ ತುಸು ಗಂಭೀರವಾದರು: ‘ಕೇಳಿದರೆ ಆಶ್ಚರ್ಯ ಆಗ್ತದೆ ನಿಮಗೆ. ಹತ್ತು ಲಕ್ಷ ಜನಸಂಖ್ಯೆ ದಾಟಿದ ಊರುಗಳೇ ಇಲ್ಲ ನಮ್ಮಲ್ಲಿ. ಇರೋದು ಬೆಂಗಳೂರು ಒಂದೇ. ಅದ್ಕೇ ಎಲ್ರೂ ಅವರವರ ಊರಿಂದ ಇಲ್ಲಿ ಬಂದು ಸೇರ್ಕೋತೀವಿ. ನಾವೆಲ್ಲ ಯಾವ್ಯಾವ್ದೋ ಹಳ್ಳಿಯಿಂದ ಬಂದಿದೀವಿ. ನಿಮಗೆ ನಿಮ್ಮ ಹಳ್ಳಿಯಲ್ಲಿಯೇ ನಿಮ್ಮ ಇಗೋವನ್ನು ತಣಿಸುವಂಥದ್ದು ಏನೋ ಒಂದು ಸಿಕ್ರೆ ಅಲ್ಲೇ ಇರ್ತೀರಿ. ಅದು ಸಿಗಬೇಕು ಅಲ್ಲಿ. ಸಿಕ್ರೆ ಮಜಾ ತಗೊಂಡು ಅಲ್ಲಿಯೇ ಇದ್ಬಿಡ್ತೀರಾ... ಯಾಕೆ ಮುಂಚೆ ಎಲ್ಲಾ ಇರ್ಲಿಲ್ವಾ? ಕಾರಂತರು ಇರ್ಲಿಲ್ವಾ? ತೇಜಸ್ವಿ ಎಲ್ಲಾ ಬಿಟ್ಟು ಮೂಡಿಗೆರೆಗೆ ಹೋಗಿ ಇರ್ಲಿಲ್ವಾ? ಹಾಗಂತ ನಾನು ನಗರ ಎಲ್ಲಾ ನೋಡಿದ ಮೇಲೆ ವಾನಪ್ರಸ್ಥ ಆಶ್ರಮದ ಹಾಗೆ ಹಳ್ಳಿಗಳಿಗೆ ಹೋಗಿ ಇರಬೇಕು ಎಂದು ಪುರೋಗಾಮಿ ಥರ ಹೇಳ್ತಿಲ್ಲ. ಸರಿಯಾದ ಉದ್ಯೋಗಾವಕಾಶ ಇರುವ, ಮೂಲಭೂತ ಸೌಕರ್ಯ ಇರುವ, ಇನ್ನೊಂದು ಸಿಟಿ ಕರ್ನಾಟಕದಲ್ಲಿ ಇಲ್ಲ. ಅದ್ಕೇ ನಾವು ಎಲ್ಲ ಬಂದು ಬೆಂಗಳೂರು ಸೇರ್ಕೊಂಡ್ಬಿಡ್ತೀವಿ. ಹಳ್ಳಿಗಳಲ್ಲಿ ಬೆಂಗಳೂರಿಗೆ ಸೇರ್ಕೊಳ್ಳೋದು ಅನ್ನೋದೇ ಒಂದು ಕ್ವಾಲಿಫಿಕೇಶನ್ನು. ಬೆಂಗ್ಳೂರಿಗೋಗ್ಬುಟ್ಟ ಅವ್ನು ಅಂತಾರೆ ನೋಡಿ... ಹಂಗಾಗಿಯೇ ಹುಬ್ಳಿಲಿದ್ರೂ, ಮಂಗಳೂರಲ್ಲಿದ್ರೂ ಬೆಂಗಳೂರಿಗೆ ಹೋಗ್ಬೇಕು ಅನ್ಸತ್ತೆ.’

ಹಾಗೆ ಎಲ್ಲೆಲ್ಲಿಂದಲೋ ಬಂದ ಜನರು ಇಲ್ಲಾದ್ರೂ ನೆಮ್ಮದಿಯಾಗಿ ಇರ್ತಾರಾ? ಕೊನೆಯವರೆಗೂ ಕೊರಗುತ್ತ ಇದ್ದುಬಿಡ್ತಾರೆ... ಈ ಹಳಹಳಿಕೆಯ ಕರಿತು ಭಟ್ಟರಿಗೆ ತುಸು ಸಿಟ್ಟಿದೆ. ‘ಎಲ್ರಿಗೂ ಅವರವರ ಊರು ಇಷ್ಟಾನೆ. ನಮ್ ನಮ್ಮ ಅಹಂಕಾರದ ತೃಪ್ತಿಗೆ ಊರು ಬಿಟ್ಟಿರ್ತೀವಿ ನಾವು. ನಾನೇನೋ ದೊಡ್ಡ ಪಂಡಿತ, ನಗರಕ್ಕೆ ಹೋಗಿ ಕಡ್ದು ಕಟ್ಟೆ ಹಾಕ್ತೀನಿ ಅಂತ್ಲೇ ಅಂದ್ಕೊಂಡು ಬಂದಿರ್ತೀವಿ. ಇಲ್ಲಿ ಈ ನಗರ ನಮಗೆ ತುಂಬ ದೊಡ್ಡ ಸಹಾಯ ಮಾಡಿರುತ್ತದೆ. ಬದುಕು ಕೊಟ್ಟಿರತ್ತೆ. ಆದ್ರೂ ನಮ್ಮೂರೇ ಶ್ರೇಷ್ಠ; ಇಲ್ಲಿ ಯಾವ್ದೂ ಸರಿ ಇಲ್ಲ ಎಂದ್ಕೊಂಡು ಓಡಾಡೂದು. ‘ಇದೆಲ್ಲ ಬದ್ಕಲ್ಲ; ನಾನ್ ಹತ್ನೇ ಕ್ಲಾಸಲ್ಲಿದ್ದಾಗ...’ ಅಂತ ಶುರುಮಾಡ್ಬಿಡ್ತಾರೆ... ಅವರಿಗೆ ‘ಹೌದು ಹೌದು’ ಅನ್ನೋಕೆ ನಾಲ್ಕು ಜನ... ಇದ್ನ ಪ್ರತಿಯೊಬ್ಬ ದೊಡ್ಡವರೂ ಮಾಡ್ತಾರೆ. ಪ್ರತಿಯೊಬ್ಬ ಚಿಕ್ಕವರೂ ಮಾಡ್ತಾರೆ. ಹಾಗಂತ ಈಗ್ ಊರ್ ಹಾಳ್ ಬೀಳ್ತಾ ಇದೆ. ಇಲ್ಯಾಕಿದೀರಾ ಹೋಗಿ ಉದ್ಧಾರ ಮಾಡಿ ಅಂದ್ರೆ ಯಾವೋನೂ ಹೋಗಲ್ಲ’.

ಅವರು ಹೀಗೆ ಮಾತಾಡುತ್ತಿದ್ದಾಗಲೇ ನಮಗೆ ಅವರೇ ಬರೆದಿರುವ ‘ಪರಪಂಚ’ ಚಿತ್ರದ ‘ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ’ ಎಂಬ ಹಾಡು ನೆನಪಾಯ್ತು. ‘ಈ ಹಾಡನ್ನು ಬರ್ದಿದ್ದು ನೀವೇ ಅಲ್ವಾ? ನೀವು ಈಗ ಹೇಳ್ತಿರೋ ಮಾತಿಗೂ ಅದಕ್ಕೂ ವೈರುಧ್ಯ ಇದ್ದಂಗಿದ್ಯಲ್ಲಾ...’ ಎಂದು ಕೆಣಕುವ ಪ್ರಯತ್ನ ಮಾಡಿದೆವು.


-ಭಟ್ರು ರೆಕಾಡ್ರಿಂಗ್‌ನಲ್ಲಿ ಬ್ಯುಸಿ

‘ಊರು ನಮಗೆ ತುಂಬ ತೃಪ್ತಿ ಕೊಡುವುದು ಹೌದ್ರೀ... ಊರು ಯಾರಿಗೆ ಇಷ್ಟ ಇಲ್ಲ ಹೇಳಿ? ನೀವು ನೀವಾಗಿರುವುದು ಅಲ್ಲಿಯೇ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಸೇರಿ ಆಡಿದ ಪೋಲಿ ಮಾತೋ, ಓದಿದ ಕಾವ್ಯವೋ ಎಲ್ಲ ಯಾವಾಗಲೂ ನೆನಪಿರುತ್ತವೆ. ಆದ್ರೆ ಅದು ಆಗಲೇ ಆಗಿ ಮುಗಿದಿರುತ್ತದೆ. ನಾವು ಒಡನಾಡಿದ ಊರು ಈಗ ಹಾಗೆಯೇ ಇರೂದಿಲ್ಲ. ಈಗ ಅಲ್ಲಿಗೆ ಹೋಗಿ ಅಯ್ಯೋ ನಾವಿದ್ದಾಗ ಎಷ್ಟ್ ಚೆನ್ನಾಗಿತ್ತಪಾ... ಎಲ್ಲಾ ಹಾಳ್ಮಾಡ್ಬಿಟ್ರು... ಎಂದು ಗೋಳಾಡುವ ಜನ ಒಂದಿಷ್ಟು ಇರ್ತಾರೆ. ಹಾಳಾಗಕ್ಕೆ ಅವರೂ ಕಾರಣವೇ ತಾನೆ? ಆ ಎಚ್ಚರ ಬಿಟ್ಟು ಈಗಲೂ ಅದ್ನೇ ಮಾತಾಡ್ತಾ ಇರ್ತೀವಿ. ಅದನ್ನಿಟ್ಟುಕೊಂಡು ನಾವೀಗ ಬದುಕ್ತಿರೋ ನಗರವನ್ನು ಬೈತೀವಿ.’

ಯೂರೋಪ್ ದೇಶಗಳಲ್ಲಿ ಹೀಗಿಲ್ಲ. ಅಲ್ಲಿ ಒಂದು ಊರು, ಮನೆಯನ್ನು ಎಷ್ಟೋ ವರ್ಷಗಳ ಕಾಲ ಅದರ ಮೂಲಸ್ಥಿತಿಯಲ್ಲಿಯೇ ಇರಿಸಿಕೊಂಡಿರ್ತಾರೆ. ನಮ್ದು ಹಂಗಲ್ಲ, ಒಮ್ಮೆ ಸಿಟಿಗೆ ಹೋಗಿ ಬಂದಾ ಅಂದ್ರೆ ಊರಲ್ಲಿನ ಇಂಡಿಯನ್ ಕಮೋಡ್ ಕಿತ್ ಬಿಸಾಕಿ ಫಾರಿನ್ ಕಮೋಡ್ ಕೂಡಿಸಿಬಿಡ್ತಾನೆ, ಅಜ್ಜಿಗೆ ಸೊಂಟನೋವು ಕೂತ್ಕೊಳ್ಳಕ್ಕಾಗಲ್ಲ ಅಂತ... ಈ ಊರು ಅನ್ನೋದು ಇದ್ಯಲ್ಲಾ, ಅದು ನಮ್ಮನ್ನು ನಾವು ನೋಡ್ಕೊಳ್ಳಕ್ಕೆ ಒಳ್ಳೆಯ ಕನ್ನಡಿ. ಅದ್ರೆದುರು ತುಂಬ ನಾಟಕ ಮಾಡ್ತೀವಿ ನಾವು. ಅದಿಷ್ಟ ಅಂತೆ... ಅಲ್ಲೇ ಹೋಗಿ ಏನಾದ್ರೂ ಮಾಡ್ಬೋದಿತ್ತಲಾ... ಬಿಟ್ ಬಂದೋನು ಇವ್ನು ಊರನ್ನು... ಇಲ್ಲಿ ಬಂದು ಇನ್ಯಾರ್ಯಾರನ್ನೋ ಬೈಯೋದು...’

ಭಟ್ಟರ ಪ್ರಕಾರ ಇಂದು ನಗರಕ್ಕೆ ಬರ್ತಿರೋ ಹುಡುಗ್ರಿಗೆ ಹಲವು ಥರದ ಅಂಜಿಕೆಗಳು ಇರ್ತವೆ. ಅವುಗಳಲ್ಲಿ ಮೊದಲನೇದು ಭಾಷೆ. ‘ಹೊಯ್ಸಳ ಕರ್ನಾಟಕದ ಬನಿಯನ್ನು (ಮಾತಿನ ಶೈಲಿ) ಬೇರೆ ಭಾಗದವರು ಬೇಗ ಹಿಡಿಯುವುದಿಲ್ಲ. ಮತ್ತೆ ಇಂಗ್ಲಿಷ್ ಹಾವಳಿ. ಇಂಗ್ಲಿಷ್ ಬರತ್ತೆ, ಓದಿದ್ರೆ ಅರ್ಥ ಆಗತ್ತೆ. ಆದ್ರೆ ಎಲ್ಲಿ ಮಾತಾಡಿದ್ರೆ ಎಡವಟ್ಟಾಗಿಬಿಡತ್ತೋ ಎಂಬ ಹೆದ್ರಿಕೆಗೇ ಐದು ವರ್ಷ ಹೋಗ್ಬಿಡತ್ತೆ. ಐದ್ ವರ್ಷ ನಾಮಾವಶೇಷ. ಯಾಕೆಂದರೆ ನಮ್ಮೆಲ್ಲರ ಯೋಚನಾ ಭಾಷೆ ಅಚ್ಚಕನ್ನಡ ಆಗಿರತ್ತಲ್ಲ.

‘ಇನ್ನು ನಗರಕ್ಕೆ ಬಂದ ಹುಡುಗ್ರಿಗೆ ಹಗಲುಗಳು ಹೇಗೋ ಗಿಟ್ಟಿಬಿಡುತ್ತವೆ. ಆದ್ರೆ ರಾತ್ರಿ ಊಟಗಳು ಸಿಗದೆ ಸತಾಯಿಸುತ್ತವೆ. ಇರುವ ಜಾಗದ ಸಮಸ್ಯೆಯೂ ದೊಡ್ಡದು. ಫ್ರೆಂಡ್ಸ್ ಸರ್ಕಲ್ ಇರಲ್ಲ, ಹೊಸಬರನ್ನು ಫ್ರೆಂಡ್ ಮಾಡ್ಕೋಬೇಕಾಗತ್ತೆ. ಈ ಬದುಕಲ್ಲಿ ಯಾವತ್ತೂ ಯಾಕೆ ಯಾವಾಗ ಯಾವೋನು ಫ್ರೆಂಡ್ ಆಗ್ತಾನೆ ಗೊತ್ತಿರಲ್ಲ. ಇವೆಲ್ಲ ಸೇರಿ ಏನೇನೋ ಗೊಂದಲ ಹುಟ್ತಾ ಇರತ್ತೆ.

‘ಜತೆಗೆ ಡ್ರೀಮ್ಸು...
‘ಯಾವನೋ ತುಂಬಾ ಸಾಧನೆ ಮಾಡಿದವನನ್ನು ನೋಡಿದಾಗ ನಾನೂ ಈ ಫೀಲ್ಡಲ್ಲೇ ಇದೀನಿ. ಹೀಗೆಲ್ಲಾ ಮಾಡಕ್ಕೆ ಆಗತ್ತಾ ಎಂದು ಅನಿಸಿಬಿಡುತ್ತದೆ. ಅದನ್ನು ಗೆದ್ದುಕೊಳ್ಳುವುದು ತುಂಬ ಕಷ್ಟ ಒದ್ದಾಟ. ಇದ್ಯಾವ ಗೊಂದಲ ಇಲ್ದೋನಿಗೆ ಎಲ್ಲವೂ ತುಂಬ ಈಜಿ. ಅಂಥವನಿಗೆ ತುಂಬ ಕ್ಲಾರಿಟಿ ಇರತ್ತೆ ಲೈಫ್‌ ಬಗ್ಗೆ. ಅವನು ಎಲ್ಲಿ ಬಿಟ್ರೂ ನೆಟ್ಗೆ ಇರ್ತಾನೆ. ಅಂಥವರು ಬಹಳ ಬೇಗ ಊರು ಬಿಟ್ಟಿರ್ತಾರೆ... ಬಹಳ ಬೇಗ ಸ್ಕೂಲೂ ಬಿಟ್ಟಿರ್ತಾರೆ...

‘ತಾನೂ ಹೆಚ್ಚೂ ಕಮ್ಮಿ ಈ ಎರಡನೇ ಕೆಟಗೆರಿಗೆ ಸೇರಿದ ಮನುಷ್ಯ’ ಎಂದು ಹೇಳಿಕೊಳ್ಳುತ್ತಾರೆ ಅವ್ರು. ‘ನನ್ನ ಯಾವನೊಬ್ಬನೂ ಪರಿಚಯ ಇಲ್ದಿರೋ ಜನರ ಗುಂಪಿನ ಮಧ್ಯ ಬಿಟ್ರೂ ಇಷ್ಟೇ ನಾರ್ಮಲ್ ಆಗಿರ್ತೀನಿ. ಏನೂ ಟೆನ್ಶನ್ ಆಗಲ್ಲ. ಆದ್ರೆ ತಿನ್ನಕೇನಾದ್ರೂ ಹೆಚ್ಚೂಕಮ್ಮಿ ಆಗ್ಬಿಟ್ರೆ ನಂಗೆ ತಡ್ಕಳಕ್ಕಾಗಲ್ಲ. ಒದ್ದಾಡ್ಬಿಡ್ತೀನಿ. ಹೊಟ್ಟೆಗೊಂಚೂರು ಹಾಕಿ ಬಿಟ್ಬಿಟ್ರೆ ಮಂಗಳಗ್ರಹದಲ್ಲಿ ಬಿಟ್ರೂ ನಂಗೇನ್ ಟೆನ್ಶನ್ ಆಗಲ್ಲ’ ಎಂದು ಅನಿವಾಸಿ ಭೂಗ್ರಹಜೀವಿಯಾಗಿ ಮಂಗಳನಲ್ಲಿ ಬದುಕುವ ಗುಪ್ತ ಆಸೆಯನ್ನೂ ಹೊರಹಾಕಿದರು.

ಅವರಿಗೆ ಬೆಂಗಳೂರಿಗೆ ಬಂದಾಗ ಭಾಷೆ ಒಂದು ಸಮಸ್ಯೆ ಅಂತಲೇ ಅನಿಸಿರಲಿಲ್ಲವಂತೆ. ಯಾಕಂದ್ರೆ ಬೆಂಗ್ಳೂರು ಲಾಂಗ್ವೇಜನ್ನು ಅವರು ಊರಲ್ಲಿದ್ದಾಗಲೇ ಮಾತಾಡ್ತಿದ್ದರಂತೆ. ಬೆಂಗಳೂರು ಕನ್ನಡ ಅಂತಲ್ಲ, ಯಾವುದೇ ಪ್ರಾಂತದ ಕನ್ನಡ ಉಚ್ಚಾರಣೆಯನ್ನು ಐದು ನಿಮಿಷ ಸೂಕ್ಷ್ಮವಾಗಿ ಗಮನಿಸಿದರೆ ಅದನ್ನು ಯಥಾವತ್ ಆಡುವ ಕಲೆ ಅವರಿಗೆ ಚಿಕ್ಕಂದಿನಿಂದಲೇ ಇತ್ತಂತೆ. ಮನೆಯವರು ಹೋಟೆಲ್ ಉದ್ಯಮ ಮಾಡ್ತಿದ್ದರು. ‘ಏನೂ ಮಾಡ್ಲಿಕ್ಕಾಗ್ಲಿಲ್ಲ ಅಂದ್ರೆ ಹೋಟೆಲ್ ಮಾಡಿಯಾದ್ರೂ ಬದುಕಬಹುದು’ ಎಂಬ ಹುಂಬತನವೇ ಅವರನ್ನು ಅವರಿಷ್ಟದ ಕೆಲಸ ಮಾಡಲು ಧೈರ್ಯಕೊಟ್ಟಿತ್ತು. ಹಾಗೆಂದು ತಾನು ಬದುಕಿನಲ್ಲಿ ತುಂಬ ಕಷ್ಟಪಟ್ಟು ಮೇಲೆ ಬಂದೆ ಎಂದು ಅಪ್ಪಿತಪ್ಪಿಯೂ ಅವರು ಹೇಳುವುದಿಲ್ಲ. ಹಾಗೆ ಹೇಳುವವರನ್ನು ಕಂಡರೂ ಅವರಿಗ ಸಿಟ್ಟು ಬರುತ್ತದಂತೆ.

‘ಎಲ್ಲರ ಬದುಕೂ ಕಷ್ಟದ್ದೇ ಆಗಿರುತ್ತದೆ. ಎಲ್ಲರಿಗೂ ಅವರದ್ದೇ ಆದ ಕೋಟಿ ಕೋಟಲೆಗಳಿರ್ತವೆ. ಅದರಲ್ಲಿ ಹೇಳಿಕೊಳ್ಳುವಂಥದ್ದೇನಿದೆ? ಹಾಗೆ ಗೋಳನ್ನೇ ಹೇಳಿಕೊಳ್ಳುತ್ತಾ ಹೋದರೆ ನಿರಾಶ್ರಿತರ ಶಿಬಿರದಲ್ಲಿ ಕೈಯೆತ್ತಿ ನಿಂತಿದ್ದೇನೆ ಅಂತ ಅನಿಸಿಬಿಡುತ್ತದೆ ನನಗೆ’ ಎಂದು ಹಳಹಳಿಕೆಯನ್ನು ಮೀರಿ ಬದುಕನ್ನು ಪ್ರೀತಿಸಬೇಕಾದ, ಆದ್ಯತೆಗಳಿಂದ ರೂಪಿಸಿಕೊಳ್ಳಬೇಕಾದ ಅಗತ್ಯವನ್ನು ಹೇಳುತ್ತಾರೆ.

‘ಈ ಹದಿನಾರರಿಂದ ಇಪ್ಪತ್ತೆರಡರ ವಯಸ್ಸಿದ್ಯಲ್ಲಾ... ಆಗ ನಮಗೆ ಎಲ್ಲಾ ಗೊತ್ತು ಅಂತ ಅನಿಸ್ತಿರ್ತದೆ. ಆದ್ರೆ ಎಲ್ಲಾ ಗೊತ್ತು ಅನ್ನೋದೊಂದು ಬಿಟ್ಟು ಏನೂ ಗೊತ್ತಿರಲ್ಲ. ಅದೊಂಥರ ಪ್ರೊಬೆಷನರಿ ಪೀರಿಯಡ್ ಅಂತ ಕನ್ಸಿಡರ್ ಮಾಡಿ ನಂತರ ಕಬಡ್ಡಿ ಆಡೋದು ಒಳ್ಳೆಯದು’ ಅಂತ ‘ಟೀನೇಜ್ ಟಿಪ್ಸ್‌’ ಅನ್ನೂ ಕೊಟ್ಟ ಭಟ್ಟರ ಮಾತು ಒಮ್ಮಿಂದೊಮ್ಮೆಲೇ ತಮ್ಮ ಹೊಸ ಸಿನಿಮಾ ‘ಪಂಚತಂತ್ರ’ದ ಕಡೆಗೆ ಹೊರಳಿತು. ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಿರೀಕ್ಷೆ, ನಂಬಿಕೆ ಎರಡೂ ಇದೆ. ‘ಎರಡು ಪೀಳಿಗೆಗಳ ನಡುವಿನ ಜಟಾಪಟಿಯ ಕಥೆ ಇದು. ಭರ್ಜರಿ ಎಂಟರ್‌ಟೇನ್ಮೆಂಟ್ ಇದೆ. ಅದ್ರ ಕಥೆ ಬೇಕಾದ್ರೆ ಹೇಳ್ತೀನಿ ಕೇಳಿ...’ ಎಂದು ಶುರುವಿಟ್ಟುಕೊಂಡರು. ಮುಂದಿನ ಒಂದು ಗಂಟೆ ನಾವು ‘ಪಂಚತಂತ್ರ’ದ ಕಥೆಯಲ್ಲಿ ಮಂತ್ರಮುಗ್ಧರಾಗಿ ಕಳೆದುಹೋಗಿದ್ದೆವು. ಸಿನಿಮಾ ಮಾಡುವುದಷ್ಟೇ ಅಲ್ಲ, ಕಥೆ ಹೇಳೂದು ಅವರಿಗೆ ಚೆನ್ನಾಗಿ ಗೊತ್ತು.


-ಯೋಗರಾಜ್‌ ಭಟ್

ಭಾಗ 2

ಸಕ್ಸೆಸ್ಸು, ಫಿಲಾಸಫಿ ಮತ್ತು ಶೃಂಗಾರ...

ಕಥೆ ಮುಗಿದು ಮತ್ತೊಂದು ಸಿಗರೇಟು ತುಟಿಗಿಟ್ಟುಕೊಂಡು ಹೊಗೆ ಹರಡತೊಡಗಿದಾಗ ಹರಟೆ ಮತ್ತೆ ಸಿನಿಮಾ ಕಡೆಗೆ ಹೊರಳಿತು. ‘ಮುಂಗಾರು ಮಳೆ’ ಯಶಸ್ಸಿನ ಉಲ್ಲೇಖ ಬಂತು.

‘ಆ ಸಿನಿಮಾ ಎರಡನೇ ವಾರಕ್ಕೆ ಮಗಚ್ಕೊಂಡ್‌ ಬಿಟ್ಟಿತ್ತು ಕಣ್ರೀ... ಹುಬ್ಳಿ ಕಡೆಯಿಂದೆಲ್ಲ ಪ್ರಿಂಟ್ ವಾಪಸ್ ಬಂದ್ಬಿಟ್ಟಿತ್ತು. ಸಿನಿಮಾ ಸಾವಾಗಿಬಿಟ್ಟಿತ್ತು. ಮತ್ತೆ ಎದ್ದು ಕುಂತಿದ್ದು ನಾಲ್ಕನೇ ವಾರಕ್ಕೆ. ಆ ಟೈಮಲ್ಲಿ ನಾನು ‘ಸುಧಾ’ ವಾರಪತ್ರಿಕೆಯಲ್ಲಿ ‘ಮುಂಗಾರುಮಳೆ ರೂಪುಗೊಂಡ ಬಗೆ’ ಅಂತ ಲೇಖನ ಸರಣಿ ಬರೆದಿದ್ದೆ’ ಎಂದು ಸೋಲಿನಂಚಿಗೆ ಹೋಗಿ ಜಿಗಿದೆದ್ದು ದಾಖಲೆ ಬರೆದದ್ದನ್ನು ನೆನಪಿಸಿಕೊಳ್ಳುತ್ತಲೇ ಸೋಲು ಗೆಲುವುಗಳ ಜಿಜ್ಞಾಸೆಗೆ ತೊಡಗಿದರು.

‘ನಾವು ಮಾಡಿದ ಸಿನಿಮಾ ಜನರಿಗೆ ತುಂಬ ವಿಶೇಷ ಅನಿಸಿದಾಗ ಮಾತ್ರ ನಮ್ಮ ಶ್ರಮ ಸಾರ್ಥಕ. ಯಾವುದೋ ಒಂದು ಅಂಶವನ್ನು ತುಂಬ ಜನ ಗುರ್ತಿಸಿ ಕೊಂಡಾಡಿರುತ್ತಾರೆ. ಕೆಲವೊಂದು ಸಂಗತಿಯನ್ನು ಗುರ್ತಿಸಿರುವುದೇ ಇಲ್ಲ. ಪ್ರತಿಯೊಂದು ಸಿನಿಮಾ ಮುಗಿದಾಗಲೂ ಅದು ನಿರ್ದೇಶಕನ ಕಿವಿಯಲ್ಲಿ ಬಂದು ಉಸುರುತ್ತಿರುತ್ತದೆ. ಇದು ಇಲ್ಲಿ ತಪ್ಪಿದೆ ಎಂದು. ಮತ್ತೆ ಇದುವರೆಗೆ ಗೆಲುವಿನ ಒಂದು ಸೈಂಟಿಫಿಕ್ ಆದ ಸಿದ್ಧಾಂತ ಇಲ್ಲ. ಎಷ್ಟೋ ಒಳ್ಳೆಯ ಸಿನಿಮಾಗಳು ಓಡುವುದೇ ಇಲ್ಲ. ಅದು ಹಾಲಿವುಡ್‌ನಲ್ಲಿಯೂ ಹಾಗೆಯೇ. ನಾನು ‘ಫೈಟ್‌ಕ್ಲಬ್’ ಅಂತೊಂದು ಸಿನಿಮಾ ನೋಡಿ ತುಂಬ ಇಷ್ಟಪಟ್ಟಿದ್ದೆ. ಹಿಂಗೆಲ್ಲ ಹೆಂಗೆ ಸಿನಿಮಾ ತೆಗೀಲಿಕ್ಕೆ ಸಾಧ್ಯ ಎಂದು ತಲೆಕೆಡಿಸಿಕೊಂಡಿದ್ದೆ. ಪ್ರಪಂಚದಾದ್ಯಂತ ಇದನ್ನು ನೋಡಿರಲೇಬೇಕು ಅಂದ್ಕೊಂಡಿದ್ದೆ. ಲೂಸಿಯಾ ಪವನ್ ಒಂದಿನ ಹೇಳಿದ, ಆ ಸಿನಿಮಾವನ್ನೂ ಯಾರೂ ನೋಡಿಲ್ಲ. ದೊಡ್ಡ ಫ್ಲಾಪ್ ಸಿನಿಮಾ ಅದು ಅಂತ. ಅದ್ಹೇಗೆ ಸಾಧ್ಯ ಎಂದು ಜಗಳವಾಡಿದ್ದೆ. ಆದರೆ ಅದು ಬಾಕ್ಸ್ ಆಫೀಸಲ್ಲಿ ಓಡಿಯೇ ಇಲ್ಲ.

‘ಆವಾಗ ಅನಿಸ್ತು ನಂಗೆ. ನಮಗನಿಸಿದ್ದೇ ಪ್ರೇಕ್ಷಕನಿಗೆ ಅನಿಸಿರಲ್ಲ, ಅವರಿಗನಿಸುವುದು ಏನು, ನಮಗೆ ಗೊತ್ತಾಗಲ್ಲ. ಒಂದೊಂದು ಸಲ ಇಬ್ಬರ ಅಭಿಪ್ರಾಯಗಳೂ ಸೇರಿಕೊಂಡಾಗ ಸಿನಿಮಾ ಹಿಟ್‌ ಆಗತ್ತೆ. ಪ್ರೇಕ್ಷಕ ಮತ್ತು ನಿರ್ದೇಶಕನ ಈ ‘ಕೂಡುಬಿಂದು’ವಿನಲ್ಲಿಯೇ ಒಳ್ಳೆಯ ಸಿನಿಮಾ ಹುಟ್ಟಿಕೊಳ್ಳುವುದು. ಮತ್ತೆ ಈ ಒಳ್ಳೆಯ ಸಿನಿಮಾ ಅನ್ನುವುದನ್ನೂ ನಿಖರವಾಗಿ ಯಾವುದು ಅಂತ ಹೇಳುವುದು ಕಷ್ಟ. ಹೊಸ ಹುಡುಗನೊಬ್ಬ ನಮಗಿಂತ ಬ್ರಿಲಿಯಂಟ್ ಸಿನಿಮಾ ಮಾಡಿರ್ತಾನೆ. ಆದರೆ ಅವನಿಗೆ ಅಷ್ಟೊಂದು ಎಕ್ಸ್‌ಪೋಷರ್ ಸಿಗುವುದೇ ಇಲ್ಲ.


-ವಿಹಾನ್ ಜತೆ ಯೋಗರಾಜ್‌ ಭಟ್

‘ಯಾವುದೋ ಒಂದು ಗಳಿಗೆಯಲ್ಲಿ ಅವನ ಪ್ರಯತ್ನವೂ ಸರ್ವಶ್ರೇಷ್ಠ ಅಂತ ಆಗಿಬಿಡಬಹುದು. ಅದು ಯಾವಾಗ? ದೊಡ್ಡವರೆಲ್ಲ ಮಲೀಕಂಡಿದ್ದಾಗ, ನೋಡುಗರು ಎದ್ದು ಕೂತಾಗ. ಅದು ಹೇಗೆ ಸಕ್ಸೆಸ್ ಆಯ್ತು ಅಂತ ಕತ್ತು ಪಟ್ಟಿ ಹಿಡಿದು ಕೇಳಿದರೂ ಹೇಳುವುದು ಗೊತ್ತಾಗುವುದಿಲ್ಲ’ ಎಂದು ತಮ್ಮ ಸಕ್ಸಸ್‌ ಸಿದ್ಧಾಂತವನ್ನು ಅವರು ಮುಂದಿಡುತ್ತಾರೆ.

ಭಟ್ಟರ ಇತ್ತೀಚಿನ ಸಿನಿಮಾಗಳಲ್ಲಿ ಹೆಚ್ಚಾಗಿ ಕಂಡುಬರುವ ಜಂಗುಳಿಯ ಗುಣ ಅವರ ಬದುಕಿನಲ್ಲಿಯೂ ಇರುವಂತಿದೆ. ಅವರು ಸದಾ ಗುಂಪಿನಲ್ಲಿ, ಗದ್ದಲದಲ್ಲಿಯೇ ಇರುತ್ತಾರೆ. ಹಾಗಾದರೆ ಬರವಣಿಗೆಗೆ ಒಂದು ಖಾಸಗಿ ಅವಕಾಶ ಬೇಕಲ್ಲವೇ? ಕಾರಿನಲ್ಲಿ ಹೋಗುವಾಗ ಹಾಡು ಬರೀತಾರೆ, ಶೂಟಿಂಗ್ ಸೆಟ್‌ನಲ್ಲಿಯೇ ಡೈಲಾಗ್ ಬರೀತಾರೆ – ಹೀಗೆ ಅವರ ಬರವಣಿಗೆಯ ಕುರಿತು ಹಲವು ಕತೆಗಳೂ ಇವೆ.

ಖಾಸಗಿತನದ ಪ್ರಶ್ನೆಗೆ ಅವರು ನೀಡುವ ಉತ್ತರವೂ ವಿಚಿತ್ರವಾಗಿದೆ. ‘ನನಗೆ ಬೇಕಾದಷ್ಟು ಪ್ರೈವಸಿ ಸಿಗುತ್ತದೆ. ಸಂತೆಯ ಮಧ್ಯದಲ್ಲಿಯೂ ಧ್ಯಾನಸ್ಥ ಆಗಬಲ್ಲೆ’ ಅನ್ನುತ್ತಾರೆ ಅವರು. ‘ನಂಗೆ ಒಬ್ನೇ ಕೂತು ಬರೆಯಕ್ಕಾಗಲ್ಲ, ಒಬ್ನೇ ಇರಕ್ಕೂ ಆಗಲ್ಲ’ ಎನ್ನುತ್ತಾರೆ. ಹಾಗಾದರೆ ನಿಮ್ಮ ಪ್ರಕಾರ ಖಾಸಗಿತನ ಎಂದರೇನು ಎಂದು ಕೇಳಿದರೆ ‘ಈಗ ನಿಮ್ಮ ಜತೆ ಮಾತಾಡ್ತಿದ್ದೀನಲ್ಲ, ಇದು ನನ್ನ ಖಾಸಗಿ ಸಮಯ’ ಎನ್ನುತ್ತಾರೆ. ‘ನೀವು ಎಲ್ಲಿರ್ತೀರಾ, ಅಲ್ಲಿ ನಿಮಗೆ ಖಾಸಗಿತನ ಇದ್ದೇ ಇರುತ್ತದೆ. ನೀವು ಇಲ್ಲಿ ಬರೀ ನನ್ನ ಮಾತುಗಳನ್ನಷ್ಟೇ ಕೇಳಿಸಿಕೊಳ್ಳುತ್ತಿರುವುದಿಲ್ಲ. ನಿಮ್ಮ ಚಿಂತನೆಯನ್ನೂ ಮಾಡುತ್ತಿರುತ್ತೀರಿ. ಅದೇ ಧ್ಯಾನ. ಅದಕ್ಕಾಗಿ ಎಲ್ಲೋ ಹೋಗಿ ಪದ್ಮಾಸನ ಹಾಕಿಕೊಂಡು ಕೂಡುವ ಅವಶ್ಯಕತೆ ನನಗಂತೂ ಕಾಣುವುದಿಲ್ಲ. ಯಾಕೆಂದರೆ ಅದೊಂದು ಹಸಿವು. ವೇದಿಕೆಯ ಮೇಲೆ ಇದ್ರೂ ನಾನು ಅಲ್ಲಿಯೇ ನನ್ನ ಖಾಸಗಿ ಗಳಿಗೆಗಳನ್ನು ಕಂಡುಕೊಳ್ಳಬಲ್ಲೆ’ ಎಂಬುದು ಅವರ ಮಾತು.

‘ಬೆಳಿಗ್ಗೆ ಸಾಂಗ್‌ ಶೂಟಿಂಗ್ ಇರುತ್ತೆ, ಸಂಜೆ ಬಂದು ಕೂತಿರ್ತಾರೆ. ಆಗ ನಾನು ‘ಕಾವ್ಯ ಏಕಾಂತದಲ್ಲಿ ಹುಟ್ಟುತ್ತದೆ’ ಅಂದ್ರೆ ಕೆರ ತಗಂಡ್ ಹೊಡೀತಾರೆ. ಆ ಕ್ಷಣಕ್ಕೆ ಅದು ಬೇಕು ಅಷ್ಟೆ. ಅಲ್ಲೇನು ತೌಲನಿಕ ಅಧ್ಯಯನ ಮಾಡ್ತಾ ಕೂರಕ್ಕಾಗತ್ತಾ? ಇದು ಈ ಕ್ಷೇತ್ರದ ಅವಶ್ಯಕತೆ’ ಎಂದು ಜೋರಾಗಿ ನಗುತ್ತಾರೆ ಅವರು.

ಯೋಗರಾಜ ಭಟ್ಟರು ನಿರ್ದೇಶಕನಾಗಿ ಜನಪ್ರಿಯತೆ ಗಳಿಸಿರುವಷ್ಟೇ ಗೀತರಚನೆಕಾರನಾಗಿಯೂ ಹೆಸರು ಗಳಿಸಿದವರು. ಬದುಕಿನ ಸತ್ಯಗಳನ್ನು, ಘನವಾದ ತತ್ವಗಳನ್ನು ಹಗುರವಾಗಿ, ವ್ಯಂಗ್ಯವಾಗಿ, ಹರಿತವಾಗಿ ಹೇಳುವ ವಿಶಿಷ್ಟ ಶೈಲಿಯೊಂದು ಅವರಿಗೆ ಸಿದ್ಧಿಸಿದೆ. ಪಡ್ಡೆಹುಡುಗರ ಭಾಷೆಯಲ್ಲಿ ಫಿಲಾಸಫಿ ಹೇಳುವ ಪ್ರಯತ್ನ ಅವರದು. ಈ ಹದವನ್ನು ಹಿಡಿದುಕೊಂಡಿದ್ದು ಹೇಗೆ ಎಂದು ಕೇಳಿದರೆ ‘ಅದು ನಿಮ್ಮೊಳಗೂ ಇದೆ’ ಎನ್ನುತ್ತಾರೆ ಭಟ್ಟರು.

‘ಒಣ ವೇದಾಂತ ಎನ್ನುವುದು ಒಬ್ಬ ರೈತ, ಪೆಟ್ಟಿಗೆ ಅಂಗಡಿಯವನಿಗೆ, ಕಾಲೇಜು ಹುಡುಗನಿಗೆ ಎಲ್ಲರಿಗೂ ಇರುತ್ತದೆ. ನಾವೆಲ್ಲ ಒಣ ವೇದಾಂತಿಗಳು. ನಾವು ಸಹಜವಾದ ಮಾತಿನಲ್ಲಿಯೂ ಅದೇ ಅದೇ ಸಂಗತಿಗಳನ್ನು ಹೇಳಿರುತ್ತೇವೆ. ಹಾಗೆ ಇರೋದಕ್ಕೆ ಒಂದು ಕನೆಕ್ಟಿಂಗ್ ಟೂಲ್ ಬೇಕಾಗಿರುತ್ತದೆ. ಆ ಟೂಲ್‌ನ ಮೂಲಕ ಹೇಳಿದಾಗ ಓ ಇದು ನನಗೂ ಗೊತ್ತಿತ್ತು. ಇದು ಸತ್ಯ ಎಂದು ಅನಿಸುತ್ತಿರುತ್ತದೆ. ಆಗಲೇ ಹಾಡು, ಫಿಲಾಸಫಿ ಎಲ್ಲವೂ ಜನರಿಗೆ ಇಷ್ಟವಾಗತ್ತೆ, ಹಿಟ್‌ ಆಗತ್ತೆ’.

ಊರು ಬಿಡುವುದರೊಂದಿಗೆ ಶುರುವಾದ ಮಾತುಕತೆ ಫಿಲಾಸಫಿಯೊಂದಿಗೆ ಕೊನೆಗೊಂಡಿತ್ತು. ಹೋಗುವ ಮೊದಲು ತಾಂಬೂಲ ಕೊಡುವಂತೆ ತಮ್ಮ ಹೊಸ ಚಿತ್ರ ‘ಪಂಚತಂತ್ರ’ದ ಹಾಡೊಂದನ್ನು ಕೇಳಿಸಿದರು. ‘ಶಂಗಾರದ ಹೊಂಗೆಮರ ಹೂ ಬಿಟ್ಟಿದೆ/ ನಾಚಿಕೆಯು ನನ್ನ ಜೊತೆ ಟೂ ಬಿಟ್ಟಿದೆ’ ಎಂದು ಶುರುವಾಗುವ ಹಾಡು ಅವರ ಪೋಲಿತನವನ್ನೂ ನಮಗೂ ವರ್ಗಾಯಿಸಿತ್ತು. ಗೊತ್ತಿಲ್ಲದೆ ಹಾಡಿನ ಮೊದಲೆರಡು ಸಾಲನ್ನು ಗುನುಗುತ್ತಾ ಹೂ ಬಿಟ್ಟ ಹೊಂಗೆಮರವನ್ನು ಮನಸಲ್ಲೇ ಕಲ್ಪಿಸಿಕೊಳ್ಳುತ್ತಾ, ಹೊಂಗೆಮರದ ಜಾಗದಲ್ಲಿ ಹುಣಸೇಮರ ಇದ್ದರೆ ಚೆನ್ನಾಗಿರುತ್ತದಲ್ಲವಾ ಅಂದುಕೊಳ್ಳುತ್ತಾ ಹೊರಬಿದ್ದೆವು.

***


ಯಾರಲ್ಲಿ ಎಂಥ ಪ್ರತಿಭೆ ಇದೆ ಅಂತ ಹೇಳಲು ಆಗದು
ಹೊಸದೇನಾದರೂ ಬರಬೇಕು ಎಂದರೆ ಒರಿಜಿನಲ್‌ ಪ್ರಯತ್ನಗಳ ಜತೆಗೆ ಫೇಕ್‌ಗಳೂ ಬರುತ್ತಲೇ ಹೋಗುತ್ತವೆ. ‘ತಿಥಿ’ ಕನ್ನಡದ ಸರ್ವಶ್ರೇಷ್ಠ ಸಿನಿಮಾಗಳಲ್ಲಿ ಒಂದು. ಅದು ಸಾಧಾರಣವಾದ ಸಾಧನೆ ಅಲ್ಲ. ಖಷಿಯಾಗುತ್ತದೆ ಅದನ್ನು ನೋಡಿದಾಗ. ನಂತರ ಅದರ ಹೆಸರು, ನಟರನ್ನು ಇಟ್ಟುಕೊಂಡು ಇನ್ನೊಂದಿಷ್ಟು ಕಳಪೆ ಚಿತ್ರಗಳು ಬಂದವು. ಅವು ಉರಿಸುತ್ತದೆ ನಮ್ಮನ್ನು. ಆದರೆ ಅದನ್ನು ತಡೆಯಲಿಕ್ಕಾಗುವುದಿಲ್ಲ. ಯಾವುದೋ ಒಂದು ಸ್ಟುಪಿಡ್ ಸಿನಿಮಾ. ಕೋಟ್ಯಂತರ ರೂಪಾಯಿ ಬಾಚಿಕೊಳ್ಳುತ್ತಿರುತ್ತದೆ. ಪ್ರಜ್ಞಾವಂತರಿಗೆ ಎಲ್ಲಿ ಹೋಗಿ ಸೂಸೈಡ್ ಮಾಡ್ಕೊಳ್ಳೋದು ಗೊತ್ತಾಗಲ್ಲ. ಇದು ಹೀಗೆಯೇ. ಅದಕ್ಕೊಂದು ಫಿಲ್ಟರ್ ಇರುವುದಿಲ್ಲ. ಆದರೆ ಕೊನೆಗೂ ಉಳಿದುಕೊಳ್ಳುವುದು ‘ತಿಥಿ’ ಸಿನಿಮಾ ಮಾತ್ರ. ಯಾರಲ್ಲಿ ಎಂಥ ಪ್ರತಿಭೆ ಇದೆ ಅಂತ ಹೇಳಲಿಕ್ಕಾಗುವುದಿಲ್ಲ. ಹಾಗಾಗಿ ಎಲ್ಲರನ್ನೂ ಮಾಡಲಿಕ್ಕೆ ಬಿಡಬೇಕು. ಇಲ್ಲದಿದ್ದರೆ ಹೊಸದೇನೂ ಬರುವುದೇ ಇಲ್ಲ.

*

-ಚಿತ್ರೀಕರಣದಲ್ಲಿ ತಲ್ಲೀನ

*

-ಗೋಲ್ಡನ್‌ ಸ್ಟಾರ್‌ ಜೊತೆ ಸೆಲ್ಫಿ

***

ಭಟ್ಟರ ಮಾತು ಕೇಳಲು ಯೂಟ್ಯೂಬ್‌ ಲಿಂಕ್‌: https://bit.ly/2unW3LK

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !