ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್ ಸರಣಿಯಲ್ಲಿ ದಿಯಾ ಮಿರ್ಜಾ

Last Updated 11 ಜೂನ್ 2019, 14:07 IST
ಅಕ್ಷರ ಗಾತ್ರ

ದಿಯಾ ಮಿರ್ಜಾ ಅಂದಾಕ್ಷಣ ‘ರೆಹೆನಾ ಹೈ ದಿಲ್ ಮೇ’ ಸಿನಿಮಾದ ಮುಗ್ಧಮುಖದ ಚೆಲುವೆ ನೆನಪಾಗುತ್ತಾಳೆ. ಇಂದಿಗೂ ಅದೇ ಮುಗ್ಧತೆ ಉಳಿಸಿಕೊಂಡಿರುವ ದಿಯಾ ಮಿರ್ಜಾ ಮೊದಲ ಬಾರಿಗೆ ವೆಬ್‌ಸರಣಿಯಲ್ಲಿ ನಟಿಸಿದ್ದಾರೆ.

ಜೀ5 ನಿರ್ಮಿಸಿರುವ ‘ಕಾಫೀರ್’ ಹೆಸರಿನ ವೆಬ್‌ಸರಣಿಯಲ್ಲಿ ದಿಯಾ, ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಗ್ಲ್ಯಾಮರ್ ರಹಿತವಾಗಿರುವ ಈ ಪಾತ್ರದಲ್ಲಿ ದಿಯಾ, ಹೆಣ್ಣುಮಗುವೊಂದರ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿರುವ ತಾಯಿ–ಮಗಳು ಭಾರತದ ಗಡಿಯೊಳಗೆ ಬಂದಾಗ ಎದುರಾಗುವ ತಲ್ಲಣಗಳ ಚಿತ್ರಣ ‘ಕಾಫೀರ್’ ವೆಬ್‌ಸರಣಿಯಲ್ಲಿದೆ. ‘ಕಾಫೀರ್’ ಟ್ರೇಲರ್ ಬಿಡುಗಡೆಯಾಗಿದ್ದು ನೋಡುಗರ ಮನಮುಟ್ಟುವ ದೃಶ್ಯಗಳು ಇದರಲ್ಲಿವೆ.

ಕಾಶ್ಮೀರದ ಅಪ್ರತಿಮ ಸೌಂದರ್ಯದ ಜೊತೆಗೆ ಅದರೊಳಗಿನ ಭಯಾನಕ ಸತ್ಯವನ್ನೂ ವೆಬ್‌ಸರಣಿ ತೋರಿಸುತ್ತದೆ. ಕೈನಾಜ್ ಹೆಸರಿನ ಪಾಕಿಸ್ತಾನದ ಮಹಿಳೆ ತನ್ನ ಮಗುವಿನೊಂದಿಗೆ ಭಾರತದ ಗಡಿಯೊಳಗೆ ಆಕಸ್ಮಿಕವಾಗಿ ಪ್ರವೇಶಿಸಿದಾಗ ಅವರಿಬ್ಬರೂ ಸೇನೆಯ ಬಂಧನಕ್ಕೊಳಗಾಗುತ್ತಾರೆ. ಅವರು ಪಾಕಿಸ್ತಾನದವರು ಎನ್ನುವ ಒಂದೇ ಕಾರಣಕ್ಕಾಗಿ ಅವರನ್ನು ಭಯೋತ್ಪಾದಕರೆಂದು ಅನುಮಾನಿಸಿ ತನಿಖೆಗೊಳಪಡಿಸಲಾಗುತ್ತದೆ. ಜೈಲಿನಲ್ಲಿರುವ ತಾಯಿ–ಮಗಳು ತಾಯ್ನಾಡಿಗೆ ಹಿಂತಿರುಗಲು ಮತ್ತು ತಾವು ಭಯೋತ್ಪಾದಕರಲ್ಲ ಅನ್ನುವುದನ್ನು ಸಾಬೀತುಪಡಿಸಲು ಹೆಣಗುವ ಕಥೆ ಈ ವೆಬ್‌ಸರಣಿಯದ್ದು. ತಾಯಿ–ಮಗಳು ನಿರಪರಾಧಿಗಳೆಂದು ಸಾಬೀತುಪಡಿಸಲು ಹೆಣಗುವ ಪತ್ರಕರ್ತನ ಪಾತ್ರದಲ್ಲಿ ಮೋಹಿತ್ ರೈನಾ ನಟಿಸಿದ್ದು, ಟ್ರೇಲರ್‌ನ ದೃಶ್ಯಗಳು ನೋಡುಗರನ್ನು ಭಾವುಕರನ್ನಾಗಿಸುತ್ತದೆ.

ಮೇಘನಾ ಗುಲ್ಜಾರ್ ನಿರ್ದೇಶನದ ಹಿಟ್ ಚಿತ್ರ ‘ರಾಜಿ’ಗೆ ಚಿತ್ರಕಥೆ ಬರೆದಿದ್ದ ಭವಾನಿ ಅಯ್ಯರ್ ‘ಕಾಫೀರ್’ ಚಿತ್ರಕಥೆ ಬರೆದಿದ್ದಾರೆ. ಈ ವೆಬ್‌ಸರಣಿಯನ್ನು ಸೋನಂ ನಾಯರ್ ನಿರ್ದೇಶಿಸಿರುವುದು ವಿಶೇಷ. ಈ ವೆಬ್‌ಸರಣಿಗೆ ಸತ್ಯಕಥೆಯೊಂದು ಆಧಾರವಾಗಿದೆ ಎನ್ನುತ್ತಾರೆ ನಿರ್ದೇಶಕಿ.

ಭಯ ಮತ್ತು ಆತಂಕಗಳಿಲ್ಲದ ಕ್ಷಣಕ್ಷಣಕ್ಕೂ ನರಳುವ ತಾಯಿಯ ಪಾತ್ರದಲ್ಲಿ ದಿಯಾ ಮನೋಜ್ಞವಾಗಿ ನಟಿಸಿದ್ದಾರೆ. ದಿಯಾಳ ಮಗಳಾಗಿ ಪುಟಾಣಿ ದಿಶಿತಾ ಪಾತ್ರಕ್ಕೆ ಜೀವತುಂಬಿದ್ದಾಳೆ. ‘ನಾನು ಪಾಕಿಸ್ತಾನಿಯವಳಲ್ಲ. ಹಿಂದೂಸ್ತಾನಿ’ ಎಂದು ತೊದಲು ನುಡಿಯಲ್ಲಿ ದಿಶಿತಾ ಹೇಳುವ ಮಾತುಗಳು ನೋಡುಗರ ಕಣ್ಣಂಚಿನಲ್ಲಿ ನೀರುಕ್ಕಿಸುವಂತಿದೆ. ‘ಕಾಫೀರ್’ ವೆಬ್‌ಸರಣಿ ಜೀ5ನಲ್ಲಿ ಜೂನ್ 15ಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT