ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಸಮ್ಮುಖದಲ್ಲಿ ಹೊಳೆವ ಬದುಕಿನ ಸತ್ಯಗಳು

ಮಲಯಾಳಂನ ಈ ಮ ಯೊ ಜಗತ್ತಿನ ಗಮನ ಸೆಳೆದಿದೆ
Last Updated 8 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ನನ್ನ ಅಂತ್ಯಕ್ರಿಯೆಯನ್ನು ಅದ್ದೂರಿಯಾಗಿ ಮಾಡಬೇಕು. ಅಲಂಕಾರ ಮಾಡಿದ ಪೆಟ್ಟಿಗೆಯಲ್ಲಿ ನನ್ನ ಶವ ಇಟ್ಟು ಭರ್ಜರಿ ಬ್ಯಾಂಡ್‌ನೊಂದಿಗೆ ಮೆರವಣಿಗೆ ಮಾಡಬೇಕು. ಚರ್ಚಿನ ಪಾದ್ರಿಗಳು ಸ್ತೋತ್ರಗಳನ್ನು ಹಾಡುತ್ತ ಮೆರವಣಿಗೆಯಲ್ಲಿ ಸಾಗಿಬರಬೇಕು... ಇದು ನನ್ನ ಕೊನೆಯ ಆಸೆ... ಈಡೇರಿಸ್ತೀನಿ ಅಂತ ಭಾಷೆ ಕೊಡ್ತೀಯಾ? ಕುಡಿದ ಮತ್ತಿನಲ್ಲಿದ್ದ ಮುದುಕ ಅಪ್ಪ ಮಧ್ಯ ವಯಸ್ಸಿನ ಮಗನನ್ನು ಕೇಳುತ್ತಾನೆ!

ಮನೆ, ಹೆಂಡತಿ ಮಕ್ಕಳನ್ನು ಮರೆತು ತಿಂಗಳುಗಟ್ಟಲೆ ಹೊರಗೆ ಅಲೆಯುವ ಮುದುಕ ಮೇಸ್ತ್ರಿ ವಾವಚ್ಚನ್‌ ಕೆಲ ತಿಂಗಳ ನಂತರ ಒಂದು ಸಂಜೆ ಮನೆಗೆ ಬರುತ್ತಾನೆ. ಬರುವಾಗ ತಂದ ಬಾತುಕೋಳಿಯನ್ನು ಹೆಂಡತಿಗೆ ಕೊಟ್ಟು ಅಡುಗೆ ಮಾಡುವಂತೆ ಹೇಳಿ ಮನೆಯ ಅಂಗಳದಲ್ಲಿ ಮದ್ಯ ಕುಡಿಯಲು ಕೂತಿದ್ದಾನೆ. ಹೆಂಡತಿ,ಸೊಸೆ ಅಡುಗೆ ಮನೆಯಲ್ಲಿದ್ದಾರೆ. ಮಗಳು ಪೋನ್‌ನಲ್ಲಿ ಯಾರೊಂದಿಗೊ ಹರಟುತ್ತಿದ್ದಾಳೆ. ಅದೇ ಸಮಯಕ್ಕೆ ಅವನ ಮಗ ಈಷೊ ಮನೆಗೆ ಬರುತ್ತಾನೆ. ಅಪ್ಪನನ್ನು ಕಂಡು ಅವನಿಗೆ ಸಂತೋಷ ಹಾಗೂ ಬೇಸರ. ಅಪ್ಪನ ಹೊಣೆಗೇಡಿತನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಅವನ ಜತೆ ಮಾತಿಗೆ ಕೂರುತ್ತಾನೆ. ತನ್ನ ಜತೆ ತಂದಿದ್ದ ಮದ್ಯವನ್ನು ಅಪ್ಪನಿಗೂ ಕೊಟ್ಟು, ತಾನೂ ಕುಡಿಯುತ್ತ ಕೂರುತ್ತಾನೆ. ಆಗ ಮಗನೆದುರು ವಾವಚ್ಚನ್‌ ತನ್ನ ಕೊನೆಯಾಸೆ ಹೇಳಿಕೊಳ್ಳುತ್ತಾನೆ.

ಅಪ್ಪನ ಕೊನೆಯಾಸೆ ಕೇಳಿ ಮಗನಿಗೆ ವಿಚಿತ್ರ ಅನ್ನಿಸುತ್ತದೆ. ಮುಂದೆಂದೊ ಅಪ್ಪ ಸತ್ತ ಮೇಲೆ ತಾನೇ ಅಂತ್ಯಕ್ರಿಯೆ. ಈಗೇಕೆ ಅದರ ಚಿಂತೆ? ಖುಷಿಯಾಗಿರುವ ಅಪ್ಪನಿಗೆ ಬೇಸರವಾಗಬಾರದೆಂದು ನಿನ್ನ ಅಪೇಕ್ಷೆಯಂತೆ ಅಂತ್ಯಕ್ರಿಯೆ ಮಾಡುತ್ತೇನೆಂದು ಈಷೊ ಅಪ್ಪನಿಗೆ ಭಾಷೆ ಕೊಡುತ್ತಾನೆ. ಮುದುಕ ವಾವಚ್ಚನ್‌ ತನ್ನ ಸಂತೋಷ ಹತ್ತಿಕ್ಕಲಾಗದೆ ಹಾಡಿಕೊಂಡು ಕುಣಿಯಲು ಆರಂಭಿಸುತ್ತಾನೆ. ಮಗ ಕುಣಿತಕ್ಕೆ ಸಾಥ್‌ ಕೊಡುತ್ತಾನೆ. ಈ ಸಂತೋಷ ಕೆಲವೇ ಕ್ಷಣಗಳಷ್ಟೆ... ಮೂತ್ರ ವಿಸರ್ಜನೆಗೆಂದು ಹೋದ ವಾವಚ್ಚನ್‌ ಮರಳಿ ಬರುವಾಗ ನಡುಮನೆಯಲ್ಲಿ ಕುಸಿದು ಬಿದ್ದು ಸಾಯುತ್ತಾನೆ! ವಾವಚ್ಚನ್‌ ಹಠಾತ್‌ ಸಾವಿನಿಂದ ಮನೆಯಲ್ಲಿ ಸಂಜೆಯಿಂದ ಸ್ಥಾಯಿಯಾಗಿದ್ದ ಸಂತೋಷ ಕರಗಿ ದುಃಖ ಮಡುಗಟ್ಟುತ್ತ ಹೋಗುತ್ತದೆ.

ಇದು ಮಲಯಾಳಂನ ಈ ಮ ಯೊ (ಈಷೊ ಮರಿಯಂ ಯೊಸೆಫ್) ಸಿನಿಮಾದ ಒಂದು ಮುಖ್ಯ ಸನ್ನಿವೇಶ.

ಇದು ಈಗ ಸಿನಿಮಾ ಜಗತ್ತಿನ ಗಮನ ಸೆಳೆದಿದೆ. ಕಳೆದ ವಾರ ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ವಿದೇಶಿ ಸಿನಿಮಾಗಳ ಜತೆ ಪೈಪೋಟಿ ನಡೆಸಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿತು. ನಿರ್ದೇಶಕ ಲಿಜೊ ಜೋಸ್‌ ಪೆಲ್ಲಿಷೆರಿ ಹಾಗೂ ನಾಯಕ ನಟ ಚೆಂಬನ್‌ ವಿನೋದ್‌ ಚಿತ್ರೋತ್ಸವದ ಅತ್ಯುತ್ತಮ ನಿರ್ದೇಶಕ ಹಾಗೂ ನಟ ಪ್ರಶಸ್ತಿ ಪಡೆದು ಗಮನ ಸೆಳೆದರು.

ಈ ಮ ಯೊ, ಮೇಸ್ತ್ರಿ ವಾವಚ್ಚನ್‌ನ ಹಠಾತ್‌ ಸಾವು ಹೊಸ ತಿರುವುಗಳನ್ನು ಪಡೆಯುತ್ತ ಗಾಢ ವಿಷಾದದಲ್ಲಿ ಕೊನೆಗೊಳ್ಳುವ ದುರಂತ ಸಿನಿಮಾ.

ಒಂದು ಸಹಜ ಸಾವಿಗೆ ಅನುಮಾನದ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡು ಕೊನೆಗೆ ಅಂತ್ಯಕ್ರಿಯೆಯನ್ನು ಕಗ್ಗಂಟಾಗಿಸುವ ಘಟನೆಗಳು ಭಾರತೀಯ ಸಂದರ್ಭಕ್ಕೆ ಹೊಸದಲ್ಲ. ಇಂತದೇ ವಸ್ತು ಇಟ್ಟುಕೊಂಡು ಹತ್ತಾರು ಕಥೆ, ಕಾದಂಬರಿಗಳು ರಚನೆಯಾಗಿವೆ. ಸಿನಿಮಾಗಳೂ ಬಂದಿವೆ.

ನಿರ್ದೇಶಕ ಪೆಲ್ಲಿಷೆರಿ ಕ್ರಿಶ್ಚಿಯನ್‌ ಕುಟುಂಬದ ಚೌಕಟ್ಟಿಗೆ ಈ ದುರಂತ ಕಥೆಯನ್ನು ಅಳವಡಿಸಿ ತೆರೆಯ ಮೇಲೆ ಸೊಗಸಾಗಿ ನಿರೂಪಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ಸಮಸ್ಯೆಗಳು, ಅಸಹಾಯಕತೆ, ಅದರ ಧಾರ್ಮಿಕ ಶ್ರದ್ಧೆ ಇತ್ಯಾದಿಗಳ ಹಿನ್ನಲೆಯಲ್ಲಿ, ಕುಟುಂಬದ ಹಿರಿಯನ ಸಾವಿಗೆ ಒದಗಿ ಬರುವ ನೆರೆ ಹೊರೆಯವರು, ಬಂಧುಗಳು, ಊರ ಜನರು, ಚರ್ಚಿನ ಪಾದ್ರಿ, ಪೊಲೀಸರು, ಅನುಕಂಪ ಸೂಚಿಸಲು ಬಂದವರು ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದರ ಸಣ್ಣ ಸಣ್ಣ ವಿವರಗಳನ್ನು ಸೂಕ್ಷ್ಮವಾಗಿ ಹೇಳುತ್ತಲೇ ಬಡವರಿಗೆ ಜೀವನ ಮತ್ತು ಸಾವು ಎರಡೂ ದೊಡ್ಡ ಸಮಸ್ಯೆ ಎನ್ನುವುದನ್ನು ಪೆಲ್ಲಿಷೆರಿ ಸೊಗಸಾಗಿ ನಿರೂಪಿಸಿದ್ದಾರೆ. ವಾವಚ್ಚನ್‌ ಹಠಾತ್‌ ಸಾವಿಗೆ ಅಳುವ ಅವನ ಕುಟುಂಬ ಸದಸ್ಯರನ್ನು ಸಂತೈಸುತ್ತಲೇ ಮುಂದಿನ ಕೆಲಸಗಳತ್ತ ಗಮನ ಕೊಡುವ ಹಲವು ಸಂಗತಿಗಳು ಸಿನಿಮಾಗೆ ನೈಜತೆಯನ್ನು ತಂದುಕೊಟ್ಟಿವೆ.

ಅಪ್ಪನ ಕೊನೆಯಾಸೆಯಂತೆ ಅಂತ್ಯಕ್ರಿಯೆ ಮಾಡಿ ಮುಗಿಸುವ ನಿರ್ಧಾರಕ್ಕೆ ಬರುವ ಈಷೊ ಹೆಂಡತಿ ತಾಳಿ ಸರ ಮಾರಾಟ ಮಾಡಿ ದುಬಾರಿಯ ಶವ ಪೆಟ್ಟಿಗೆ ಹಾಗೂ ಶವದ ಬಟ್ಟೆಬರೆಗಳನ್ನು ಖರೀದಿಸುತ್ತಾನೆ. ಶವ ಯಾತ್ರೆಗೆ ಬರಲು ಬ್ಯಾಂಡ್‌ನವರಿಗೆ ಹೇಳಿ ಬರುತ್ತಾನೆ.

ಅಂತ್ಯಕ್ರಿಯೆ ನೆರವಾಗಲು ಬಂದವನೊಬ್ಬ ಚರ್ಚಿನ ಪಾದ್ರಿ ಎದುರು ವಾವಚ್ಚನ್‌ ಸಾವಿನ ಬಗ್ಗೆ ಸಂದೇಹದ ಮಾತುಗಳನ್ನಾಡಿ ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟುಬಿಡುತ್ತಾನೆ.

ವಾವಚ್ಚನ್‌ ತಲೆಗೆ ಏಟು ಬಿದ್ದು ಸತ್ತಿದ್ದಾನೆ. ಸಾವು ಸಹಜ ಅಲ್ಲ ಎಂದು ಶವ ನೋಡಲು ಬಂದ ನರ್ಸ್‌ ಸಹ ಹೇಳುತ್ತಾಳೆ. ವಾವಚ್ಚನ್‌ ಸಾವಿನ ಬಗ್ಗೆ ಸಂದೇಹಗಳು ದಟ್ಟವಾಗುತ್ತ ಹೋಗುತ್ತವೆ.

ಈಷೊ ನೆರವಿಗೆ ಬರುವ ಗ್ರಾಮ ಪಂಚಾಯ್ತಿ ಸದಸ್ಯ ಈ ಸಂದೇಹಗಳನ್ನು ನಿವಾರಿಸಲು ಯತ್ನಿಸಿದರೂ ಪ್ರಯೋಜನ ಆಗುವುದಿಲ್ಲ. ಇವೆಲ್ಲದರ ನಡುವೆ ಶವಯಾತ್ರೆಗೆ ಸಿದ್ಧತೆಗಳೆಲ್ಲ ಮುಗಿದು ಅಂತಿಮ ವಿಧಿ ವಿಧಾನಗಳು ಶುರುವಾಗುವ ಹೊತ್ತಿಗೆ ಹಠಾತ್ತನೆ ವಾವಚ್ಚನ್‌ನ ನಿಜವಾದ ಹೆಂಡತಿ ತಾನೆಂದು ಹೇಳಿಕೊಂಡು ಒಬ್ಬ ಮಹಿಳೆ ಮತ್ತವಳ ಮಗ , ಹಾಗೂ ಕೆಲವರು ಬಂದು ಶವದೆದುರು ಗೋಳಾಡುತ್ತ ತಕರಾರು ತೆಗೆಯುತ್ತಾರೆ. ತನ್ನ ಗಂಡನ ಸಾವು ಸಹಜವಲ್ಲ , ಈಚೊ ಮತ್ತವನ ಕುಟುಂಬದವರು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಾಳೆ.

ಮರು ಕ್ಷಣವೇ ವಾವಚ್ಚನ್‌ ಶವದ ಸುತ್ತ ನೆಲೆಗೊಂಡಿದ್ದ ದುಃಖ ಹಾಗೂ ಸಂತಾಪದ ವಾತಾವರಣ ಮರೆಯಾಗಿ, ಗದ್ದಲ,ಅರಚಾಟಗಳ ಗೊಂದಲದ ಸನ್ನಿವೇಶ ಸೃಷ್ಟಿಯಾಗಿ ಬಿಡುತ್ತದೆ. ಅದರ ಬೆನ್ನಲ್ಲೇ ಮಳೆ ಶುರುವಾಗುತ್ತದೆ. ಈ ನಡುವೆ ಅಂತ್ಯಕ್ರಿಯೆಗಾಗಿ ಗುಂಡಿ ತೋಡುತ್ತಿದ್ದವನೊಬ್ಬ ಅದರಲ್ಲೇ ಬಿದ್ದು ಸಾಯುತ್ತಾನೆ.

ಮಳೆಯ ಸೃಷ್ಟಿಸುವ ಅವಾಂತರಗಳ ನಡುವೆಯೇ ಅಂತಿಮ ವಿಧಿಗಳನ್ನು ಪೂರೈಸಲು ಬಂದ ಪಾದ್ರಿ ತಕರಾರು ತೆಗೆಯುತ್ತಾನೆ. ವಾವಚ್ಚನ್‌ ಸಾವು ಸಹಜವಲ್ಲ ಎನ್ನುವುದು ಅವನ ಅನುಮಾನ. ಶವದ ಮರಣೋತ್ತದ ಪರೀಕ್ಷೆ ಆಗುವ ಮೊದಲು ಅಂತಿಮ ವಿಧಿ ಪೂರೈಸಲಾರೆ ಎಂದು ಹೇಳಿ ಬಿಡುತ್ತಾನೆ. ಪಾದ್ರಿಯ ಜತೆ ವಾದಕ್ಕಿಳಿದ ಈಷೊ ತಾಳ್ಮೆ ಕಳೆದುಕೊಂಡು ಪಾದ್ರಿಯ ಮೇಲೆ ಕೈ ಮಾಡುತ್ತಾನೆ. ಕೋಪಗೊಂಡ ಪಾದ್ರಿ ಅಲ್ಲಿಂದ ಹೊರಟು ಬಿಡುತ್ತಾನೆ.

ಅಂತ್ಯಕ್ರಿಯೆಗೆ ನೆರವಾಗುವಂತೆ ಪೊಲೀಸರ ಮನವೊಲಿಸುವ ಪ್ರಯತ್ನಗಳು ವಿಫಲವಾಗುತ್ತವೆ. ಈ ಬೆಳವಣಿಗೆಗಳಿಂದ ಹತಾಶನಾದ ಈಷೊ ತಾಳ್ಮೆ ಕಳೆದುಕೊಳ್ಳುತ್ತಾನೆ. ಅಪ್ಪನ ಕೊನೆಯಾಸೆಯಂತೆ ಅಂತ್ಯಕ್ರಿಯೆ ನಡೆಯುವುದಿಲ್ಲ ಎನ್ನುವುದು ಅವನಿಗೆ ಖಾತರಿಯಾಗಿ ಬಿಡುತ್ತದೆ. ಕೋಪ, ಹತಾಶೆ, ಉದ್ವೇಗಗಳಿಗೆ ಒಳಗಾದ ಅವನು ಸಿಡಿದೇಳುತ್ತಾನೆ . ದೊಣ್ಣೆ ಹಿಡಿದು ಎದುರಿಗೆ ಬಂದವರನ್ನೆಲ್ಲ ಹುಚ್ಚನಂತೆ ಹೊಡೆಯುತ್ತಾನೆ. ಕೊನೆಗೆ ಮಳೆಯ ನಡುವೆಯೇ ಮನೆಯ ಅಂಗಳದಲ್ಲೇ ಗುಂಡಿ ತೆಗೆದು ಅಪ್ಪನ ಹೆಣವನ್ನು ಹೂತು ಹಾಕುತ್ತಾನೆ! ಅಂತ್ಯಕ್ರಿಯೆಗೆ ಬಂದವರು ಅಸಹಾಯಕರಾಗಿ ಇದನ್ನೆಲ್ಲ ನೋಡುತ್ತ ನಿಂತು ಬಿಡುವುದರೊಂದಿಗೆ ಸಿನಿಮಾ ಕೊನೆಯಾಗುತ್ತದೆ.

ಈ ಮ ಯೊ ಆಪ್ತವೆನಿಸುವುದು ಅತ್ಯಂತ ಸಹಜವೆನಿಸುವ ನಿರೂಪಣೆಯಿಂದಾಗಿ. ಕೊನೆಯ ದೃಶ್ಯ ನಾಟಕೀಯ ಎನಿಸಿದರೂ ಅಂತ್ಯಕ್ರಿಯೆಯಾಗದೆ ಅಪ್ಪನ ಹೆಣ ಉಳಿದುಬಿಡುತ್ತದೆ ಎನ್ನುವ ಮಗನ ಆತಂಕ ಸಹಜ. ಈಷೊನ ಉದ್ವೇಗದ ವರ್ತನೆಯೂ ಸಿನಿಮಾಕ್ಕೆ ಸಹಜತೆ ತಂದು ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT