ಭಾನುವಾರ, ಮಾರ್ಚ್ 26, 2023
21 °C

ವರ್ಮಾ ಸಿನಿಮಾ 'ಎಂಟರ್‌ ದಿ ಗರ್ಲ್‌ ಡ್ರ್ಯಾಗನ್'; ಬಿಸಿಬಿಸಿ ಆ್ಯಕ್ಷನ್‌ ಟೀಸರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದ ನಾಯಕಿ ಪೂಜಾ ಭಾಳೇಕರ್‌

ಬೆಂಗಳೂರು: ಭಾರತದ ಮೊದಲ ಸಮರ ಕಲೆ (ಮಾರ್ಷಲ್‌ ಆರ್ಟ್ಸ್‌) ಆಧಾರಿತ ಚಿತ್ರ ಎಂದು ಹೇಳಿಕೊಂಡಿರುವ 'ಎಂಟರ್‌ ದಿ ಗರ್ಲ್‌ ಡ್ರ್ಯಾಗನ್' ಟೀಸರ್‌ ಬಿಡುಗಡೆಯಾಗಿದ್ದು, ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. 

ರಾಮ್‌ಗೋಪಾಲ್ ವರ್ಮಾ ನಿರ್ದೇಶಿಸಿರುವ ನಾಯಕಿ ಪ್ರಧಾನ ಸಿನಿಮಾದ ಟೀಸರ್‌ ಬ್ರೂಸ್‌ ಲೀ ಜನ್ಮದಿನದಂದು (ನವೆಂಬರ್‌ 27) ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ಆಕ್ಷನ್‌ನಿಂದ ಕೂಡಿದ ಸಿನಿಮಾದಂತೆ ತೋರಿದರೂ ಪ್ರೀತಿ ಮತ್ತು ರೊಮ್ಯಾಂಟಿಕ್‌ ದೃಶ್ಯಗಳನ್ನು ಟೀಸರ್‌ನಲ್ಲಿ ಕಾಣಬಹುದು. 

ಮಹಿಳೆಯೊಬ್ಬಳ ಕಲಿಕೆ, ಸಾಮರ್ಥ್ಯ ಪರೀಕ್ಷೆ ಹಾಗೂ ಹೋರಾಟವನ್ನೇ ಕಥೆಯಾಗಿಸಿರುವಂತೆ ಟೀಸರ್‌ ಹೇಳುತ್ತಿದೆ. ‘ನನ್ನ ವೃತ್ತಿ ಬದುಕಿನಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಿದು. ಇಂಡೊ– ಚೀನಾ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಸಮರಕಲೆ ಆಧಾರಿತ ಮೊದಲ ಚಿತ್ರ’ ಎಂದು ಹೇಳಿಕೊಂಡಿದ್ದ ವರ್ಮಾ, ಇತ್ತೀಚೆಗೆ ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದರು. 

3 ನಿಮಿಷ 24 ಸೆಕೆಂಡ್‌ಗಳ ಟೀಸರ್‌ನ ಶೇ 95ರಷ್ಟು ದೃಶ್ಯಗಳಲ್ಲಿ ಚಿತ್ರದ ನಾಯಕಿ ಪೂಜಾ ಭಾಳೇಕರ್‌ ಆವರಿಸಿಕೊಂಡಿದ್ದಾರೆ. ಕಿಕ್‌, ಪಂಚ್‌ ಮತ್ತು ಖಡಕ್‌ ನೋಟದ ಗುದ್ದಾಟದೊಂದಿಗೆ ವರ್ಮಾ ನಾಯಕಿಯ ಬೆಡಗನ್ನೂ ತೋರಿಸುವುದರಿಂದ ಹಿಂದೆ ಸರಿದಿಲ್ಲ. ಟೀಸರ್‌ ಈಗಾಗಲೇ 16 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಎ ಬಿಗ್‌ ಪೀಪಲ್‌ ಮತ್ತು ಟೈಗರ್‌ ಕಂಪನಿ ಬ್ಯಾನರ್‌ಗಳಡಿ ಜಿಂಗ್‌ ಲಿಯು, ನರೇಶ್‌ ಕುಮಾರ್‌ ಟಿ. ಮತ್ತು ಶ್ರೀಧರ್‌ ಟಿ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಶಂಕರ್‌ ಸಂಗೀತದ ಹೊಣೆ ನಿರ್ವಹಿಸಿದ್ದಾರೆ. ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಸಹ ಟೀಸರ್‌ ಹಂಚಿಕೊಂಡು, ಇದು 'ಸರ್ಕಾರ್‌' ಅವರ ಹೊಸ ಸಿನಿಮಾ... ಎಂದು ಟ್ವೀಟಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು