ಗುರುವಾರ , ಏಪ್ರಿಲ್ 9, 2020
19 °C

ಬಂಗಾರದ ಬಣ್ಣವೂ ಬದಲಾಗುತ್ತಿದೆ!

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Deccan Herald

ದಿನವೂ ಬಣ್ಣ ಬಣ್ಣದ ಉಡುಗೆ ಧರಿಸುವಂತೆ, ತೊಡುವ ಆಭರಣಗಳ ಬಣ್ಣವೂ ಭಿನ್ನವಾಗಿದ್ದರೆ ಎಷ್ಟು ಚೆನ್ನ... ಆದರೆ ಅದೆಲ್ಲವೂ ಚಿನ್ನದ್ದೇ ಆಗಿರಬೇಕು ಎಂದು ಆಸೆ ಪಟ್ಟರೆ ಕಷ್ಟವಾಗುತ್ತದೆ. ಆದರೆ ಆಭರಣ ಪ್ರಿಯರ ಹಲವು ವರ್ಷಗಳ ಈ ಆಸೆ ಪೂರ್ಣ ಪ್ರಮಾಣದಲ್ಲಿ ಸಾಕಾರವಾಗುವ ಕಾಲ ಬರುತ್ತಿದೆ. ಫ್ಯಾಷನ್‌ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿದೆ. 

ಕೆಲವು ಆಭರಣ ತಯಾರಿಕಾ ಸಂಸ್ಥೆಗಳು ಬಿಳಿ ಮತ್ತು ಗುಲಾಬಿ ಬಣ್ಣದ ಚಿನ್ನದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಬಣ್ಣದ ಆಭರಣಗಳನ್ನು ಧರಿಸುವ ಪರಿಪಾಠ ಹಲವು ವರ್ಷಗಳಿಂದ ಇದೆ. ಈಗ ಈ ಸಾಲಿಗೆ ಮತ್ತಷ್ಟು ಬಣ್ಣಗಳು ಸೇರುತ್ತಿವೆ. 

ರಷ್ಯಾದವರಿಗೆ ರೋಸ್‌ಗೋಲ್ಡ್ ಎಂದರೆ ತುಂಬಾ ಇಷ್ಟ. ಅವರು ಮದುವೆಯಲ್ಲಿ ತೊಡುವ ಉಂಗುರ ಮತ್ತು ಕೈ ಗಡಿಯಾರಗಳು ಸಾಮಾನ್ಯವಾಗಿ ಬಿಳಿ ಅಥವಾ ಗುಲಾಬಿ ಬಣ್ಣದಲ್ಲೇ ಇರುತ್ತವೆ.  ಗುಲಾಬಿ, ಹಳದಿ ಮತ್ತು ಬಿಳಿ ಮಿಶ್ರಿತ ಬಣ್ಣಗಳಿಂದ ತಯಾರಿಸಿದ ಆಭರಣಗಳೆಂದರೆ ಅವರಿಗೆ ಎಲ್ಲಿಲ್ಲದ
ಮೋಜು.

ಪ್ರಸ್ತುತ ಹಸಿರು ಬಣ್ಣದ ಆಭರಣಗಳನ್ನು ತೊಡುವ ಹೊಸ ಫ್ಯಾಷನ್ ಟ್ರೆಂಡ್ ಎಲ್ಲೆಲ್ಲೂ ವಿಸ್ತರಿಸುತ್ತಿದೆ. ಚಿನ್ನವನ್ನು ಹಸಿರು ಬಣ್ಣದಲ್ಲಿ ನೋಡಿದ ನಂತರ ಹಲವು ಆಭರಣ ತಯಾರಿಕಾ ಸಂಸ್ಥೆಗಳ ವ್ಯಾಪಾರ–ವಹಿವಾಟಿಗೆ ಮತ್ತಷ್ಟು ರೆಕ್ಕೆ ಬಂದಿದೆ. ಇದೇ ಪ್ರೇರಣೆಯಿಂದ ಚಿನ್ನವನ್ನು ಕೆಂಪು, ಕಪ್ಪು, ಬೂದಿ ಬಣ್ಣದಲ್ಲೂ ಕಂಗೊಳಿಸುವಂತೆ ಕೈಚಳಕ ತೋರುತ್ತಿದ್ದಾರೆ.

ಬಣ್ಣ ಹೇಗೆ ಬದಲಾಗುತ್ತದೆ?

ಶುದ್ಧವಾದ ಅಪರಂಜಿ ಚಿನ್ನ ಗಾಢ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಶುದ್ಧ ಚಿನ್ನವನ್ನೇ ಬಳಸಿ ಸುಂದರ ಆಭರಣಗಳನ್ನು ತಯಾರಿಸಲು ಸಾಧ್ಯವಿಲ್ಲ. ಚಿನ್ನಕ್ಕೆ ಕಾಡ್ಮಿಯಂ, ತಾಮ್ರ, ಬೆಳ್ಳಿಯಂತಹ ಲೋಹಗಳನ್ನು ಬರೆಸಿದರೆ ಆಭರಣಗಳನ್ನು ತಯಾರಿಸಬಹುದು. ತಾಮ್ರದ ಪ್ರಮಾಣವನ್ನು ಶೇ 20 ರಿಂದ ಶೇ 65ರ ವರೆಗೆ ಹೆಚ್ಚಿಸಿದರೆ ರೋಸ್‌ಗೋಲ್ಡ್ ರೂಪುಗೊಳ್ಳುತ್ತದೆ. 

ತಾಮ್ರದ ಪ್ರಮಾಣವನ್ನು ಆಧರಿಸಿ ಗುಲಾಬಿ, ಗಾಢಗುಲಾಬಿ, ಕೆಂಪು, ಕೇಸರಿ ಬಣ್ಣಗಳಿಗೆ ಚಿನ್ನ ಬದಲಾಗುತ್ತದೆ. ಇದನ್ನು ಪಿಂಕ್, ಅಥವಾ ರೆಡ್‌ಗೋಲ್ಡ್‌ ಎನ್ನುತ್ತಾರೆ. ಅದೇ ರೀತಿ ವೈಟ್‌ಗೋಲ್ಡ್ ಬೇಕೆಂದರೆ, ತಾಮ್ರ, ಜಿಂಕ್‌ಗಳ ಜತೆಗೆ ಬೆಳ್ಳಿ
ಬೆರೆಸುತ್ತಾರೆ.

ಹಸಿರು ಬಂಗಾರ ಹೇಗೆ?

ಶೇ 75ರಷ್ಟು ಚಿನ್ನಕ್ಕೆ ಶೇ 23ರಷ್ಟು ಬೆಳ್ಳಿ ಮತ್ತು ಶೇ 2ರಷ್ಟು ಕಾಡ್ಮಿಯಂ ಲೋಹಗಳನ್ನು ಬೆರೆಸಿದರೆ ಹಸಿರು ಬಣ್ಣದ ಚಿನ್ನದ ಆಭರಣಗಳನ್ನು ತಯಾರಿಸಬಹುದು. ಗಾಢಹಸಿರು ಬಣ್ಣ ಬೇಕೆಂದರೆ, ಶೇ 15ರಷ್ಟು ಬೆಳ್ಳಿ, ಶೇ 6ರಷ್ಟು ತಾಮ್ರ, ಶೇ 4ರಷ್ಟು ಕಾಡ್ಮಿಯಂ
ಬೆರೆಸುತ್ತಾರೆ. 

ಅದೇ ರೀತಿ ನೀಲಿ ಬಣ್ಣದ ಚಿನ್ನಾಭರಣಗಳು ಬೇಕಿದ್ದರೆ, ನಿರ್ದಿಷ್ಟ ಪ್ರಮಾಣದಲ್ಲಿ ಕಬ್ಬಿಣ ಅಥವಾ ಇಂಡಿಯಂ ಬೆರೆಸುತ್ತಾರೆ. ಚಿನ್ನವನ್ನು ಕಪ್ಪು ಬಣ್ಣದಲ್ಲೂ ನೋಡಲು ಇಷ್ಟಪಡುವವರಿಗಾಗಿ ಶೇ 75ರಷ್ಟು ಚಿನ್ನಕ್ಕೆ ಶೇ 25ರಷ್ಟು ಕೋಬಾಲ್ಟ್ ಬೆರೆಸಿ ಬ್ಲಾಕ್‌ ಗೋಲ್ಡ್‌ ತಯಾರಿಸಲಾಗುತ್ತಿದೆ. 

ಅವುಗಳ ತಯಾರಿ ಹೇಗೆ ಇರಲಿ, ಪ್ರಸ್ತುತ ಬ್ಲಾಕ್‌ ರಿಂಗ್ಸ್‌ ಪಾಶ್ಚಿಮಾತ್ಯ ರಾಷ್ಟ್ರಗಳ ಯುವ ಸಮುದಾದಯ ನೆಚ್ಚಿನ ಆಭರಣವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು