ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿತೇಶ್‌ ಸಿನಿಮಾ ರೀತಿ...

ಸಿನಿಯಾನ
Last Updated 24 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಸ್ನೇಹಿತನ ಜತೆ ಮುಂಬೈನ ಬಾಂದ್ರಾದ ಗಲ್ಲಿಗಳಲ್ಲಿ ರಿತೇಶ್‌ ಬಾತ್ರಾ ಸೈಕಲ್‌ ತುಳಿಯುತ್ತಿದ್ದ ದಿನಗಳಿದ್ದವು. ಹ್ಯಾಂಡಲ್ ತೆಗೆದು, ಸ್ಟೀರಿಂಗ್‌ ಹಾಕಿಕೊಂಡು ನೋಡುಗರ ಗಮನ ಸೆಳೆಯುವಂತೆ ಸೈಕಲ್ ಹೊಡೆಯುತ್ತಿದ್ದ ಅವರಿಗೆ ಬಾಲ್ಯದಿಂದಲೂ ಸಿನಿಮಾ ಮೇಲೆ ಆಸಕ್ತಿ. ಹಾಗೆಂದು ಓದನ್ನು ಕಡೆಗಣಿಸಲಿಲ್ಲ.

ಅಮೆರಿಕದ ಅಯೋವಾದ ಡ್ರೇಕ್‌ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಮೇಲೆ ಮೂರು ವರ್ಷ ಡೆಲಾಯಿಟ್‌ ಕಂಪನಿಯಲ್ಲಿ ಕೆಲಸ ಮಾಡಿದರು. ಸಿನಿಮಾ ಮಾಡುವ ಕನಸಿಗೆ ರೆಕ್ಕೆಪುಕ್ಕ ಮೂಡಿಸಿಕೊಳ್ಳಲೆಂದೇ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಕೋರ್ಸ್‌ಗೆ ಸೇರಿಕೊಂಡರಾದರೂ, ಅದನ್ನು ಪೂರೈಸದೇ ಹೊರಬಂದರು.

ಮೊದಲು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದರು. ‘ಕೆಫೆ ರೆಗ್ಯುಲರ್’ ಹಾಗೂ ‘ಕೈರೊ’ ಎಂಬ ಅರಬ್‌ ಭಾಷೆಯ ಕಿರುಚಿತ್ರಗಳು 40 ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾದವು. ಒಂದು ಡಜನ್‌ ಪ್ರಶಸ್ತಿಗಳೂ ಒಲಿದುಬಂದವು. 2009ರಲ್ಲಿ ‘ಸನ್‌ಡಾನ್ಸ್‌ ಸ್ಕ್ರೀನ್‌ರೈಟರ್ಸ್‌ ಅಂಡ್‌ ಡೈರೆಕ್ಟರ್ಸ್‌ ಲ್ಯಾಬ್‌’ ಯೋಜನೆಯೊಂದನ್ನು ಕೈಗೆತ್ತಿಕೊಂಡಿತು. ‘ಸ್ಟೋರಿ ಆಫ್ ರಾಮ್’ ಎನ್ನುವುದು ಅದರ ಶೀರ್ಷಿಕೆ. ಅದಕ್ಕಾಗಿ ಕೆಲಸ ಮಾಡಿದ ನಿರ್ದೇಶಕರು, ಚಿತ್ರಕಥಾ ಬರಹಗಾರರ ತಂಡದಲ್ಲಿ ರಿತೇಶ್‌ ಕೂಡ ಇದ್ದರು. ‘ದಿ ವಾರ್ನರ್ ಸ್ಟೋರಿ ಟೆಲಿಂಗ್ ಫೆಲೊ’ ಗೌರವ ಆಗ ಅವರದ್ದಾಯಿತು. ಸನ್‌ಡಾನ್‌ ಫಿಲ್ಮ್‌ ಅಕಾಡೆಮಿಯಿಂದ ‘ಅನೆನ್‌ಬರ್ಗ್‌ ಫೆಲೊ’ ಕೂಡ ಸಿಕ್ಕಾಗ ಸಹಜವಾಗಿಯೇ ಅವರಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇಮ್ಮಡಿಯಾಯಿತು.

ಡಬ್ಬಾವಾಲಾಗಳ ಒಡನಾಟದಿಂದ...
ಡಬ್ಬಾವಾಲಾಗಳ ಕುರಿತು ಕಿರುಚಿತ್ರ ಮಾಡಲೆಂದು 2011ರಲ್ಲಿ ಮುಂಬೈಗೆ ರಿತೇಶ್‌ ಕಾಲಿಟ್ಟರು. ವೃತ್ತಿಬದುಕಿಗೆ ಅದೇ ತಿರುವಾದೀತೆಂದು ಖುದ್ದು ಅವರೂ ಭಾವಿಸಿರಲಿಲ್ಲ. ಡಬ್ಬಾವಾಲಾಗಳ ಕುರಿತು ತಿಳಿಯುತ್ತಾ ಹೋದಂತೆ ಆ ವ್ಯವಸ್ಥೆಯಲ್ಲಿನ ಅನೇಕ ಮಾನವೀಯ ಕಥನಗಳು ಅವರೆದುರು ಬಿಚ್ಚಿಕೊಂಡವು. ಅದರ ಫಲಿತಾಂಶವೇ ‘ಲಂಚ್‌ಬಾಕ್ಸ್‌’ ಸಿನಿಮಾ.

2013ರಲ್ಲಿ ತೆರೆಕಂಡ ‘ಲಂಚ್‌ಬಾಕ್ಸ್‌’ ವಸ್ತುವಿನ ಮೇಲೆ ಅನುರಾಗ್‌ ಕಶ್ಯಪ್‌, ಕರಣ್‌ ಜೋಹರ್‌ ಸೇರಿದಂತೆ ಎಂಟು ನಿರ್ಮಾಪಕರು ಭರವಸೆ ಇಟ್ಟರು. 22 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಲಾಭ ಮಾಡಿತೆನ್ನುವ ಲೆಕ್ಕಾಚಾರವಿದೆ. ವಿದೇಶಗಳಲ್ಲೂ ಅದರ ಗಳಿಕೆ 2014ರಲ್ಲಿ ಉಳಿದ ಹಿಂದಿ ಚಿತ್ರಗಳನ್ನೆಲ್ಲ ಹಿಂದಿಕ್ಕಿತೆನ್ನುವುದು ವಿಶೇಷ. ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಿಕಿ, ನಿಮ್ರತ್ ಕೌರ್ ಅಭಿನಯ ಜನಮನ ಗೆದ್ದಿತ್ತು.

ಜೂಲಿಯನ್‌ ಬಾರ್ನ್ಸ್ ಬರೆದ, ಬೂಕರ್ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ದಿ ಸೆನ್ಸ್‌ ಆಫ್‌ ಎನ್‌ ಎಂಡಿಂಗ್’ ಆಧರಿಸಿದ ಅದೇ ಹೆಸರಿನ ಇಂಗ್ಲಿಷ್‌ ಸಿನಿಮಾವನ್ನು ರಿತೇಶ್‌ ನಿರ್ದೇಶಿಸಿದರು. ‘ಅವರ್‌ ಸೋಲ್ಸ್‌ ಅಡ್‌ ನೈಟ್’ ಅವರ ಇನ್ನೊಂದು ಇಂಗ್ಲಿಷ್‌ ಚಿತ್ರ. ಸಿನಿಮಾ ತಂತ್ರಜ್ಞಾನ, ತಂತ್ರಗಳ ಪಟ್ಟುಗಳನ್ನು ಹೀಗೆ ಉತ್ತಮಪಡಿಸಿಕೊಳ್ಳುತ್ತಾ ಬಂದ ರಿತೇಶ್‌ ಈಗ ‘ಫೋಟೊಗ್ರಾಫ್’ ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ಮುಂಬೈನ ಸಾಮಾಜೋ–ಸಾಂಸ್ಕೃತಿಕ ಸೂಕ್ಷ್ಮಗಳನ್ನು ಕೆಲವೇ ಪಾತ್ರಗಳ ಮೂಲಕ ಹೇಳುವ ಅವರ ಕ್ರಮಕ್ಕೆ ಉತ್ತಮ ವಿಮರ್ಶೆ ಕೂಡ ವ್ಯಕ್ತವಾಗಿದೆ.

ಬಾಬ್ರಿ ಮಸೀದಿ ವಿವಾದದ ಬೆಂಕಿ ಹೊತ್ತಿದಾಗ ಮುಂಬೈನ ತಮ್ಮ ಮನೆಯ ತಾರಸಿ ಮೇಲೆ ನಿಂತು ನಗರದ ತಲ್ಲಣಗಳನ್ನು ಕಂಡಿದ್ದ ರಿತೇಶ್‌ಗೆ ಬೇರೆ ದೇಶಗಳ ನೆಲಕ್ಕಿಂತ ತಮ್ಮ ತವರೇ ಹೆಚ್ಚು ಕಾಡುತ್ತದಂತೆ. ಅದಕ್ಕೇ ಅವರು ಮತ್ತೆ ಮುಂಬೈ ನಗರಿಯ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT