ಎ ಡೆತ್‌ ಇನ್‌ ದ ಗುಂಜ್‌

7
ಪಿಕ್ಚರ್‌ ನೋಡಿ

ಎ ಡೆತ್‌ ಇನ್‌ ದ ಗುಂಜ್‌

Published:
Updated:
Deccan Herald

ಪ್ರತಿಭಾವಂತ ನಟಿಯಾಗಿ ಗುರ್ತಿಸಿಕೊಂಡಿರುವ ಕೊಂಕಣಸೆನ್‌ ಶರ್ಮಾ ಅವರ ನಿರ್ದೇಶನದ ಸಿನಿಮಾ ‘ಎ ಡೆತ್‌ ಇನ್‌ ದ ಗುಂಜ್‌’.  2016ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಲ್ಯದ ಮುಗ್ಧಜಗತ್ತನ್ನು ‘ದೊಡ್ಡವರ’ ಜಗತ್ತು ಆಕ್ರಮಿಸಿಕೊಳ್ಳುತ್ತ ಹೋಗುವಲ್ಲಿನ ಬಹುಸೂಕ್ಷ್ಮ ಕ್ರೌರ್ಯವನ್ನೂ ಅದಕ್ಕೆ ಬಲಿಯಾಗುವ ಒಬ್ಬ ಹುಡುಗನ ಬದುಕನ್ನೂ ಅಪೂರ್ವವಾಗಿ ಸೆರೆಹಿಡಿದಿದೆ. 

ಇಡೀ ಚಿತ್ರ 1979ನಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಕಾರ್‌ನ ಡಿಕ್ಕಿಯಲ್ಲಿದ್ದ ಒಂದು ಹೆಣವನ್ನು ನೋಡಿ ಇಬ್ಬರು ‘ಇದನ್ನು ಏನು ಮಾಡುವುದು?’ ಎಂದು ಮಾತಾಡಿಕೊಳ್ಳುವ ದೃಶ್ಯದ ಮೂಲಕವೇ ಚಿತ್ರ ಆರಂಭವಾಗುತ್ತದೆ. ಅಂದರೆ ಈ ಚಿತ್ರದ ಆರಂಭ ಬಿಂದುವೇ ಸಾವು. ನಂತರ ನಿರೂಪಣೆ ಥಟ್ಟನೆ ಏಳು ದಿನಗಳ ಹಿಂದಕ್ಕೆ ಜಿಗಿಯುತ್ತದೆ. 

ನಂದು ಮತ್ತು ಅವನ ಮಗಳು, ಗೆಳೆಯರೆಲ್ಲ ಕೋಲ್ಕತ್ತದಲ್ಲಿನ ತಂದೆಯ ಮನೆಯಲ್ಲಿ ರಜೆಯ ದಿನಗಳನ್ನು ಕಳೆಯುವುದಕ್ಕಾಗಿ ಸೇರುತ್ತಾರೆ. ಅವರಲ್ಲಿ ಶುರು ಕೂಡ ಒಬ್ಬ. ಅವನಿಗೆ ಸುಮಾರು ಇಪ್ಪತ್ಮೂರರ ಆಸುಪಾಸು. ಜತೆಗೆ ನಂದುವಿನ ಮಗಳು ತಾನಿ. ಪುಟಾಣಿ ಹುಡುಗಿ. ತಾನಿ ಮತ್ತು ಶುಟುವಿಗೆ ಆಪ್ತ ಸ್ನೇಹ. 

ಅಲ್ಲಿ ಸೇರಿದ್ದವರೆಲ್ಲರ ಪಾಲಿಗೆ ಶುಟು ವ್ಯವಹಾರಜ್ಞಾನ ಗೊತ್ತಿಲ್ಲದ ಮುಗ್ಧ ಹುಡುಗ. ಹಾಗಾಗಿಯೇ ಅವರು ಅವನನ್ನು ತಮಾಷೆ ಮಾಡುತ್ತ, ತಮ್ಮ ವೃತ್ತದಿಂದಾಚೆಯೇ ಉಳಿಸಿಕೊಂಡಿರುತ್ತಾರೆ. ಅವರು ಮಾಡುವ ತಮಾಷೆ, ಕೋಪ, ಸದರ ಎಲ್ಲವೂ ಅವನೊಳಗಿನ ಮುಗ್ಧ ಜಗತ್ತನ್ನು ಘಾಸಿಗೊಳಿಸುತ್ತಲೇ ಹೋಗುತ್ತದೆ. 

ಹೀಗೆ ಒಬ್ಬ ಮುಗ್ಧ ಹುಡುಗನ ಜಗತ್ತು ಹಂತಹಂತವಾಗಿ ನಾಶವಾಗುತ್ತ ಅವನು ಆತ್ಮಹತ್ಯೆಯ ಕಡೆಗೆ ಮುಖಮಾಡಲು ಕಾರಣವಾದ ದಾರುಣತೆಯನ್ನು ನಿರ್ದೇಶಕಿ ನಿರೂಪಿಸಿರುವ ರೀತಿಯಲ್ಲಿಯೇ ಚಿತ್ರ ನಮ್ಮನ್ನು ಒಳಗೊಳ್ಳುತ್ತ ಹೋಗುತ್ತದೆ. ಚಿತ್ರದ ಕೊನೆಯಲ್ಲಿ ನಿಂತು ತಿರುಗಿ ನೋಡಿದರೆ ಇಡೀ ಕಥೆಯ ಜಾಡು ಅವನನ್ನು ಸಾವಿನತ್ತ ದೂಡುತ್ತಿರುವ ದೊಡ್ಡವರ ಜಗತ್ತಿನ ಚಲನೆಯನ್ನು ಬಹುಸೂಕ್ಷ್ಮವಾಗಿ ಸೆರೆ ಹಿಡಿದಿರುವುದು ಕಾಣಿಸುತ್ತದೆ.

ಎಲ್ಲರೂ ಅವನನ್ನು ತಿರಸ್ಕರಿಸುತ್ತಾರೆ. ಎಲ್ಲರ ಸಂಭ್ರಮದ, ನೋವಿನ ಸಂತಸದ, ತಮಾಷೆಯ ಜಗತ್ತಿನ ಆಚೆಯೇ ಅವನು ಉಳಿದುಬಿಡುತ್ತಾನೆ. ತಾನು ಹೀಗೆ ಅಪ್ರಸ್ತುತ ಆಗಿಬಿಡುವ ನೋವೇ ಅವನನ್ನು ಕೊಂದುಕೊಳ್ಳಲು ಪ್ರೇರೇಪಿಸುತ್ತದೆ. ಹಾಗೆ ನೋಡಿದರೆ ಅವನದು ಆತ್ಮಹತ್ಯೆಯಲ್ಲ, ಸುತ್ತಲಿನ ಜಗತ್ತು ಒತ್ತಡ ಹಾಕಿ ಮಾಡಿ ಕೊಲೆ. 

ತುಂಬ ಸಂಯಮದ ನಿರೂಪಣೆಯಲ್ಲಿ ಹಲವು ಭಾವತೀವ್ರಬಿಂದುಗಳು ಈ ಚಿತ್ರದಲ್ಲಿವೆ. ಮನುಷ್ಯ ಸಂಬಂಧಗಳ ಶಿಥಿಲತೆ, ಮೇಲಿನ ತೋರಿಕೆ, ಕ್ಷಣಿಕ ಗುಣ ಹೀಗೆ ಮುಖ್ಯವಾದ ಹಲವು ಸಂಗತಿಗಳನ್ನು ವಾಚ್ಯವಾಗಿಸದೇ ಹೇಳಿರುವ ಕೌಶಲವೇ ಈ ಚಿತ್ರ ನಮ್ಮ ಮನಸ್ಸಿನಲ್ಲಿ ಬಹುಕಾಲ ಉಳಿಯಲು ಕಾರಣವಾಗುತ್ತದೆ. ಕೊನೆಯಲ್ಲಿ ನಡೆಯುವ ಒಂದು ಸಾವಿಗಾಗಿ ಚಿತ್ರದ ಮೊದಲ ಹೆಜ್ಜೆಯಿಂದಲೇ ಪ್ರೇಕ್ಷಕನ ಮನಸ್ಸಿನೊಳಗೆ ಜಾಲವನ್ನು ಹೆಣೆಯುತ್ತ ಹೊರಡುವ ನಿರ್ದೇಶಕರ ಗಾಢ ಪ್ರತಿಭೆಯನ್ನು ಮೆಚ್ಚಲೇ ಬೇಕು. 

ಸಾಗರ ದೇಸಾಯಿ ಅವರ ಸಂಗೀತ ಮತ್ತು ಶೀರ್ಷ ರೇ ಅವರ ಛಾಯಾಗ್ರಹಣವೂ ನಿರ್ದೇಶಕರ ಉದ್ದೇಶಕ್ಕೆ ಬಹುಪ್ರಭಾವಶಾಲಿಯಾಗಿ ಒದಗಿಬಂದಿದೆ. ಒಟ್ಟಾರೆ ಒಂದು ಗಾಢವಾದ ಅನುಭವ ನೀಡುವ ಅಪರೂಪದ ಸಿನಿಮಾ ಇದು ಎಂದು ನಿಕ್ಕಿಯಾಗಿ ಹೇಳಬಹುದು. 

ಈ ಚಿತ್ರವನ್ನು ಅಮೆಜಾನ್‌ ಫ್ರೈಮ್‌ನಲ್ಲಿ ವೀಕ್ಷಿಸಬಹುದು. ಯುಟ್ಯೂಬ್‌ ಲಿಂಕ್‌: https://bit.ly/2agOBIX

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !