ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಗೀತಾ ಪಿಕ್ಚರ್ಸ್‌ ನನಸಾದ ದಶಕದ ಹಿಂದಿನ ಕನಸು

Last Updated 10 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಬೇಕು ಎನ್ನುವ ಕಲ್ಪನೆ ಹುಟ್ಟಿದ್ದು ಯಾವಾಗ?

ನನ್ನ ಗಮನ ಯಾವತ್ತೂ ಚಿತ್ರರಂಗದ ಮೇಲೆಯೇ ಇದೆ. ನನ್ನ ತಂದೆ ಹಾಗೂ ಕುಟುಂಬದಿಂದ ನನಗೆ ರಾಜಕೀಯದಲ್ಲಿ ಆಸಕ್ತಿ ಬೆಳೆದಿದೆ. ಅದೇ ಚಿತ್ರರಂಗದಲ್ಲಿ ನಾನು ಒಂದು ರೀತಿ ಪ್ರೇಕ್ಷಕಳಾಗಿದ್ದೆ ಅಷ್ಟೆ. ಕಾರಣ, ಎಲ್ಲ ನಿರ್ಮಾಪಕರೂ ಬಹಳ ಸಕ್ರಿಯವಾಗಿದ್ದರು. ಹೀಗಾಗಿ ಯಾವ ತೊಂದರೆಗಳೂ ಎದುರಾಗಿರಲಿಲ್ಲ. ಶಿವರಾಜ್‌ಕುಮಾರ್‌ ಅವರ ನೂರನೇ ಚಿತ್ರವನ್ನು (ಜೋಗಯ್ಯ) ನಮ್ಮ ಚಿತ್ರ ನಿರ್ಮಾಣ ಸಂಸ್ಥೆ ‘ಗೀತಾ ಪಿಕ್ಚರ್ಸ್‌’ನಿಂದಲೇ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಪ್ರೇಮ್‌ ಹಾಗೂ ರಕ್ಷಿತಾ ಇದನ್ನು ನಿರ್ಮಾಣ ಮಾಡುತ್ತಾರೆ ಎನ್ನುವ ಕಾರಣ ಬಿಟ್ಟುಕೊಟ್ಟಿದ್ದೆವು. ಇದಾದ ನಂತರ, ನಿರ್ದಿಷ್ಟ ಸಂಖ್ಯೆಗೆ ಕಾದಿದ್ದೆವು. ಅದೇ 125ನೇ ಸಿನಿಮಾ, ‘ವೇದ’.

‘ಗೀತಾ ಪಿಕ್ಚರ್ಸ್‌’ನ ಉದ್ಘಾಟನೆ ಹಾಗೂ ‘ವೇದ’ ಸಿನಿಮಾದ ಮುಹೂರ್ತ ಎರಡನ್ನೂ 2021ರ ನ.8ರಂದು ನಡೆಸಲು ನಾವು ನಿರ್ಧರಿಸಿದ್ದೆವು. ಅರಮನೆ ಮೈದಾನದಲ್ಲಿ ಇದಕ್ಕಾಗಿ ಸ್ಥಳವನ್ನೂ ಕಾದಿರಿಸಿದ್ದೆವು.ಚಿತ್ರದ ಮೊದಲ ದೃಶ್ಯವೂ ಅಲ್ಲೇ ಚಿತ್ರೀಕರಣ ಆಗಬೇಕಿತ್ತು. ಆದರೆ, ಅಪ್ಪು (ಪುನೀತ್‌ ರಾಜ್‌ಕುಮಾರ್‌) ಅಕಾಲಿಕ ನಿಧನ ಇಡೀ ಕುಟುಂಬವನ್ನು ಆಘಾತಕ್ಕೆ ದೂಡಿತ್ತು. ಹೀಗಾಗಿ ಕಾರ್ಯಕ್ರಮವನ್ನೇ ರದ್ದುಗೊಳಿಸಿದೆವು. ಏಕೆಂದರೆ ಅಪ್ಪು ಇಲ್ಲದೆ ಕೆಲಸ ಮಾಡುವುದು ನಮಗೆಲ್ಲರಿಗೂ ಕಷ್ಟ. ಆದರೆ, ಅಪ್ಪುಗೂ ನಾವು ಪ್ರೊಡಕ್ಷನ್‌ ಹೌಸ್‌ ಆರಂಭಿಸುವ ಬಗ್ಗೆ ಹೇಳಿದ್ದೆವು. ಇದಕ್ಕೆ ಆತನ ಬೆಂಬಲವೂ ಇತ್ತು.

ಶಿವರಾಜ್‌ಕುಮಾರ್‌ ಅವರ ಬೆಂಬಲದ ಬಗ್ಗೆ?

ಕಳೆದ 36 ವರ್ಷಗಳಲ್ಲಿ ಶಿವರಾಜ್‌ಕುಮಾರ್‌ ಅವರ ಸಿನಿಮಾ ಪಯಣದ ಪ್ರತೀ ಹೆಜ್ಜೆಯಲ್ಲೂ ನಾನು ಜೊತೆಗಿದ್ದೇನೆ. ಹೀಗಾಗಿ ಚಿತ್ರರಂಗದ ಮೇಲೆ ಪ್ರೀತಿ ಇದ್ದೇ ಇದೆ. ಆಸಕ್ತಿಯೂ ಇದೆ. ‘ಪ್ರೊಡಕ್ಷನ್‌ ಹೌಸ್‌’ ಆರಂಭಿಸಬೇಕು ಎನ್ನುವ ಕಳೆದ ಸುಮಾರು 12 ವರ್ಷಗಳ ಹಿಂದಿನ ನಿರ್ಧಾರ ಹಾಗೂ ಸಂಕಲ್ಪದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದಕ್ಕೆ ತಕ್ಕ ಹಾಗೆಯೇ ಸಿದ್ಧತೆ ಇತ್ತು. ‘125’ನೇ ಸಿನಿಮಾ ನಮ್ಮ ಬ್ಯಾನರ್‌ನಲ್ಲಿ ನಿರ್ಮಿಸಲು ನಮ್ಮ ಕುಟುಂಬವೂ ಒಪ್ಪಿಗೆ ಸೂಚಿಸಿತು. ನೂರು ಸಿನಿಮಾಗಳ ಬಳಿಕ 24 ಸಿನಿಮಾಗಳು ಹೇಗೆ ಆದವು, ಈ ಅವಧಿ ಹೇಗೆ ಮಿಂಚಿನಂತೆ ಕಳೆಯಿತು ಎಂದು ನಮಗೂ ಗೊತ್ತಾಗುತ್ತಿಲ್ಲ. 125ರ ಸಂಖ್ಯೆಗೆ ಕಾಯುವ ತಾಳ್ಮೆಯೂ ನಮ್ಮಲ್ಲಿತ್ತು.

ನಮ್ಮ ಚಿತ್ರ, ನಮ್ಮ ಪ್ರೊಡಕ್ಷನ್‌ ಎನ್ನುವ ಬದಲಾವಣೆ ನನಗೆ ‘ವೇದ’ ಸೆಟ್‌ನಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಪ್ರತೀ ಸಿನಿಮಾವೂ ನಮ್ಮದೇ ಸಿನಿಮಾ ಎಂಬಂತೆ ನಾವು ಕಂಡಿದ್ದೇವೆ. ಎಲ್ಲ ನಿರ್ಮಾಪಕರೂ, ನಿರ್ದೇಶಕರೂ ಅದೇ ರೀತಿ ನಮ್ಮನ್ನು ನೋಡಿಕೊಂಡಿದ್ದಾರೆ.

‘ವೇದ’ ಸಿನಿಮಾ ಮೇಲೆ ನಿಮ್ಮ ನಿರೀಕ್ಷೆ?

ಎ.ಹರ್ಷ ಹಾಗೂ ಶಿವರಾಜ್‌ಕುಮಾರ್‌ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ‘ವೇದ’. ಈಗಾಗಲೇ ಚಿತ್ರದ ಶೇ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರವು ಚೆನ್ನಾಗಿ ಬರಲಿದೆ ಎನ್ನುವ ನಂಬಿಕೆ ನನಗಿದೆ.ಶಿವರಾಜ್‌ಕುಮಾರ್‌ ಅವರು ‘ವೇದ’ ಕಥೆಯನ್ನು ಬಹಳ ಇಷ್ಟಪಟ್ಟರು. ಚಿತ್ರತಂಡವನ್ನು ಹರ್ಷ ಅವರೇ ಬಹಳ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. 2022ರಲ್ಲೇ ‘ವೇದ’ ತೆರೆಕಾಣಲಿದೆ. ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ ಇದೆ.

ಸಂಸ್ಥೆ ವಿಸ್ತರಣೆ ಬಗ್ಗೆ ಯೋಜನೆ ಏನಾದರೂ ಇದೆಯೇ?

‘ವೇದ’ ಸಿನಿಮಾ ಮುಗಿದ ಮೇಲೆ ಹೊಸ ಚಿತ್ರಗಳೂ ಸೆಟ್ಟೇರಲಿವೆ. ಸದ್ಯಕ್ಕೆ ‘ವೇದ’ ಮೇಲೆ ನಮ್ಮೆಲ್ಲರ ಗಮನ ಹೆಚ್ಚಿದೆ. ಮಗಳು ನಿವೇದಿತಾ ಹೊಸ ಕಥೆ ಕೇಳುತ್ತಿದ್ದಾಳೆ. ಅವಳಿಗೆ ಇಷ್ಟವಾದ ಕಥೆಯನ್ನು ಮತ್ತೆ ಶಿವರಾಜ್‌ಕುಮಾರ್‌ ಅವರು ಕೇಳುತ್ತಾರೆ. ವರ್ಷಕ್ಕೆ ಕನಿಷ್ಠ ಒಂದು ಸಿನಿಮಾ ಮಾಡುವ ಯೋಚನೆ ನಮಗಿದೆ. ಶಿವರಾಜ್‌ಕುಮಾರ್‌ ಅವರು ಇತರೆ ಚಿತ್ರಗಳನ್ನೂ ಒಪ್ಪಿಕೊಂಡಿದ್ದು ಅವರ ಕೆಲಸದ ಒತ್ತಡವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ಗೀತಾ ಪಿಕ್ಚರ್ಸ್‌ ಅನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಯೋಚನೆ ಇದೆ. ಆದರೆ ಈ ಕುರಿತು ನಾವು ಇನ್ನಷ್ಟೇ ಚರ್ಚೆ ನಡೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT