‘ಜೆಂಟಲ್‌ಮನ್ ’ ಆದ ಪ್ರಜ್ವಲ್

7

‘ಜೆಂಟಲ್‌ಮನ್ ’ ಆದ ಪ್ರಜ್ವಲ್

Published:
Updated:

ಇದೇನು ಹೀಗಂತಿದೀರಾ? ಇಷ್ಟು ದಿನ ಪ್ರಜ್ವಲ್ ಅಸಭ್ಯರಾಗಿದ್ರಾ..?

ಖಂಡಿತ ಅಲ್ಲ, ಪ್ರಜ್ವಲ್ ದೇವರಾಜ್ ಮೊದಲಿನಿಂದಲೂ ಜಂಟಲ್‌ಮನ್ ಆಗಿಯೇ ಇದ್ದವರು. ಆದರೆ ಹೇಳಿ ಕೇಳಿ ಅವರು ನಟ. ಹಲವು ಸಿನಿಮಾಗಳಲ್ಲಿ ತೆರೆಯ ಮೇಲೆ ಸಭ್ಯತೆ ಮೀರಿ ಖಳರಿಗೆ ಚಚ್ಚಿದ್ದಾರೆ, ನಟಿಯರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾರೆ... ಆದರೆ ಈಗ ತೆರೆಯ ಮೇಲೂ ಜಂಟಲ್‌ಮನ್ ಆಗಲು ಹೊರಟಿದ್ದಾರೆ. ಅಂದರೆ ‘ಜಂಟಲ್‌ಮನ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ಗುರು ದೇಶಪಾಂಡೆ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ‘ರಾಜಹಂಸ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 

ಇದು ‘ಸ್ಲೀಪಿಂಗ್ ಸಿಂಡ್ರೋಮ್’ ಇರುವ ಹುಡುಗನೊಬ್ಬನ ಕಥೆ. ನಾಯಕನಿಗೆ ದಿನಕ್ಕೆ ಹದಿನೆಂಟು ಗಂಟೆ ನಿದ್ರೆ ಬೇಕು. ಇಲ್ಲದಿದ್ದರೆ ಅವನನ್ನು ನಿಯಂತ್ರಿಸುವುದು ಕಷ್ಟ. ಆದರೆ ಹದಿನೆಂಟು ಗಂಟೆ ನಿದ್ರೆ ಮಾಡಲು ಈ ಜಗತ್ತು ಎಲ್ಲಿ ಬಿಡುತ್ತದೆ? ಸರಿಯಾಗಿ ನಿದ್ರೆ ಇಲ್ಲದೆ ಎಂಥ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನೇ ನಿರ್ದೇಶಕರು ಹೇಳಹೊರಟಿದ್ದಾರೆ. ಸಮಾಜದಲ್ಲಿ ಜಂಟಲ್‌ಮನ್‌ ಎನಿಸಿಕೊಳ್ಳಬೇಕು ಎಂಬ ಹಂಬಲವಿರುವ, ಅದಕ್ಕಾಗಿ ಎಡಬಿಡದೇ ಪ್ರಯತ್ನಿಸುವ ಹುಡುಗನ ಕಥೆಯಿದು. 

ಹೆಸರೇನೋ ಹೀಗಿದೆ. ಆದರೆ ಚಿತ್ರದ ಸ್ಥಿರಚಿತ್ರಗಳನ್ನು ನೋಡಿದರೆ ಇದು ಜಂಟಲ್‌ಮನ್‌ ಆಗಲು ಪ್ರಯತ್ನಿಸುವ ಮೆಂಟಲ್‌ಮನ್‌ನ ಕಥೆಯೇನೋ ಅಂತಲೂ ಅನಿಸುತ್ತದೆ. ಒಂದು ಚಿತ್ರದಲ್ಲಿ ಗಡಿಯಾರಗಳಿಂದ ಸುತ್ತುವರಿದಿರುವ ಪ್ರಜ್ವಲ್, ಸಭ್ಯ ಹುಡುಗನ ಪೋಸಿನಲ್ಲಿದ್ದರೆ, ಇನ್ನೊಂದು ಚಿತ್ರದಲ್ಲಿ ರಕ್ತಸಿಕ್ತ ಮುಖದಲ್ಲಿ ಕಣ್ಣಿನಲ್ಲಿ ಬೆಂಕಿಯುಂಡೆ ತುಂಬಿಕೊಂಡು ಇನ್ನೇನು ಎದುರಾಳಿಯನ್ನು ಚಚ್ಚಿಹಾಕಲು ಸಿದ್ಧರಾಗಿರುವ ರಗಡ್ ಲುಕ್‌ನಲ್ಲಿದ್ದಾರೆ.

ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿ ಮತ್ತು ಉಳಿದ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈಗ ಪ್ರಜ್ವಲ್, ‘ಇನ್ಸ್‌ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ನಂತರ ‘ಜಂಟಲ್‌ಮನ್’ ಮುಂದೆ ಬರಲಿದ್ದಾನೆ. ನಾಳೆ (ಜುಲೈ 4) ಪ್ರಜ್ವಲ್ ಬರ್ತ್‌ಡೇ. ಅಂದೇ ಈ ಚಿತ್ರದ ಮುಹೂರ್ತವೂ ನೆರವೇರಲಿದ್ದು, ನಟ ದರ್ಶನ್ ಕ್ಲಾಪ್ ಮಾಡಲಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !