ಸೋಮವಾರ, ಆಗಸ್ಟ್ 8, 2022
22 °C

ಜನ್ಮದಿನ: ಅಭಿಮಾನಿಗಳಿಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜುಲೈ 2ರಂದು ನಟ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಜನ್ಮದಿನ. ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಆಸೆ ಹೊತ್ತಿದ್ದ ಅಭಿಮಾನಿಗಳಿಗೆ ಗಣೇಶ್‌ ಪತ್ರವೊಂದನ್ನು ಬರೆದಿದ್ದಾರೆ. ಇದನ್ನು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. 

‘ಪ್ರತಿ ವರ್ಷವೂ ನನ್ನ ಜನ್ಮದಿನದಂದು ರಾಜ್ಯದ ಮೂಲೆಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಿಸಿದ್ದೀರಿ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದ ನಾನು ನನ್ನ ಜನ್ಮದಿನದಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ಅಭಿಮಾನದಿಂದ ನನಗಾಗಿ ತರುವ ಹಾರ, ತುರಾಯಿ, ಕೇಕ್‌ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ’ ಎಂದು ಗಣೇಶ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2006ರಲ್ಲಿ ಬಿಡುಗಡೆಯಾಗಿದ್ದ ‘ಚೆಲ್ಲಾಟ’ ಸಿನಿಮಾ ಮೂಲಕ ನಾಯಕನಾಗಿ ಚಂದನವನದಲ್ಲಿ ಪಯಣ ಆರಂಭಿಸಿದ್ದ ನಟ ಗಣೇಶ್‌ಗೆ ಬ್ರೇಕ್‌ ನೀಡಿದ್ದು, ಯೋಗರಾಜ್‌ ಭಟ್‌ ನಿರ್ದೇಶದನ ‘ಮುಂಗಾರು ಮಳೆ’ ಚಿತ್ರ. ಈ ಸಿನಿಮಾ ಗಣೇಶ್‌ ಅವರ ಸಿನಿ ಬದುಕನ್ನೇ ಬದಲಾಯಿಸಿತ್ತು. ಗಣೇಶ್‌ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ನಂತರ ಹಲವು ಹಿಟ್‌ ಚಿತ್ರಗಳನ್ನು ಗಣೇಶ್‌ ನೀಡಿದ್ದರು. ಸದ್ಯ, ಯೋಗರಾಜ್‌ ಭಟ್‌ ನಿರ್ದೇಶನದ ಬಹುನಿರೀಕ್ಷಿತ ‘ಗಾಳಿಪಟ–2’ ಸಿನಿಮಾ ಬಿಡುಗಡೆಗೆ ಗಣೇಶ್‌ ಕಾಯುತ್ತಿದ್ದಾರೆ. ಆಗಸ್ಟ್‌ 12ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದರ ನಡುವೆ ‘ಮುಂಗಾರು ಮಳೆ’ಗೆ ಕಥೆ ಬರೆದಿದ್ದ ಪ್ರೀತಮ್‌ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ ‘ಬಾನದಾರಿಯಲ್ಲಿ’ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಗಣಿ, ನಟಿಯರಾದ ರುಕ್ಮಿಣಿ ವಸಂತ್‌, ರೀಷ್ಮಾ ನಾಣಯ್ಯ ಜೊತೆ ಪಯಣ ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು