ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕಾಲದ ಕೊಳೆಗೇರಿ ಹುಡುಗನ ಆರ್ತನಾದ

Last Updated 18 ಫೆಬ್ರುವರಿ 2019, 10:12 IST
ಅಕ್ಷರ ಗಾತ್ರ

ಚಿತ್ರ: ಗಲ್ಲಿ ಬಾಯ್ (ಹಿಂದಿ)
ನಿರ್ಮಾಣ: ರಿತೇಶ್ ಸಾಧ್ವಾನಿ, ಝೋಯಾ ಅಖ್ತರ್, ಫರ್ಹಾನ್ ಅಖ್ತರ್
ನಿರ್ದೇಶನ: ಝೋಯಾ ಅಖ್ತರ್
ತಾರಾಗಣ: ರಣವೀರ್ ಸಿಂಗ್, ಆಲಿಯಾ ಭಟ್, ಸಿದ್ಧಾಂತ್ ಚತುರ್ವೇದಿ, ವಿಜಯ್ ರಾಜ್, ಕಲ್ಕಿ ಕೊಯ್ಲಿನ್.

***

ಹೀಗೆ ಕಲ್ಪಿಸಿಕೊಳ್ಳಿ: ಕಡಲಿನಿಂದ ದೂರದಲ್ಲಿ ಕುಳಿತಿರುವಿರಿ. ಅಲೆಗಳು ಕಾಣುತ್ತಿವೆ, ಅವುಗಳ ದನಿ ಕೇಳುತ್ತಿಲ್ಲ. ನೋಡುತ್ತಿರುವವರ ಮನದ, ಮನೆಯ ಏರಿಳಿತಗಳಿಗೆಲ್ಲ ಆ ಅಲೆಗಳೇ ರೂಪಕ. ‘ಗಲ್ಲಿ ಬಾಯ್’ ಸಿನಿಮಾದ ಮೊದಲರ್ಧ ಹೀಗೆಯೇ; ದೂರದಿಂದಲೇ ಮನದ ಅಲೆಗಳು ನಮ್ಮನ್ನು ಕಾಡುತ್ತವೆ. ಉತ್ತರಾರ್ಧದಲ್ಲಿ ಅಲೆಗಳ ಬಳಿಗೆ ನೋಡುಗರೇ ತೆರಳಿ, ಅದರ ಮೊರೆತವನ್ನೂ ಕಿವಿತುಂಬಿಕೊಳ್ಳಬೇಕು; ಅಂಥ ಮಾರ್ಗವನ್ನು ನಿರ್ದೇಶಕಿ ಝೋಯಾ ಅಖ್ತರ್ ತಮ್ಮದಾಗಿಸಿಕೊಂಡಿದ್ದಾರೆ.

ಡಿವೈನ್, ನೇಜಿ ಎಂಬ ಇಬ್ಬರು ದೇಸಿ ರ‍್ಯಾಪರ್‌ಗಳ ಬದುಕಿನ ಕಥನವನ್ನು ಹೇಳುವುದು ನಿರ್ದೇಶಕಿಯ ಮೇಲುನೋಟದ ಉದ್ದೇಶ. ಆದರೆ, ಚಿತ್ರಕಥೆಯಲ್ಲಿ ಹಲವು ಪದರಗಳಿವೆ. ಮುರಾದ್ ಎಂಬ ಪದವಿ ಓದುವ ಹುಡುಗನ ಪ್ರೇಮ ಕಥನ ಒಂದು ಕಡೆ. ರ‍್ಯಾಪರ್ ಆಗಬೇಕೆಂಬ ಕನಸಿನ ಕಥನ ಇನ್ನೊಂದು ಕಡೆ. ಅವನ ಕುಟುಂಬದ ಸದಸ್ಯರ ಸಂಬಂಧಗಳ ಸಿಕ್ಕುಗಳು ಮತ್ತೊಂದು ಕಡೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಉಸಿರಾಡುವ ಸ್ನೇಹ ಮಗದೊಂದು ಕಡೆ. ಇವೆಲ್ಲಕ್ಕೂ ಹಿನ್ನೆಲೆಯಾಗಿ ಮುಂಬೈನ ಧಾರಾವಿ ಕೊಳೆಗೇರಿಯ ಬೆಂಕಿಪಟ್ಟಣದಂತೆ ಕಾಣುವ ಮನೆಗಳ ಭಿತ್ತಿ. ಎಲ್ಲವುಗಳ ನಡುವೆಯೂ ನಾಯಕ ತೇಲಬೇಕು ಎಂಬ ದೃಶ್ಯವತ್ತಾದ ಜಾಣ್ಮೆ ಸಿನಿಮಾದಲ್ಲಿದೆ.

ನಾಯಕ ರ್‍ಯಾಪರ್ ಎಂದಮಾತ್ರಕ್ಕೆ ಅಬ್ಬರವನ್ನೇ ಮುಂದುಮಾಡಬೇಕಿಲ್ಲ ಎಂಬ ನಿರ್ದೇಶಕಿಯ ಸಾವಧಾನ ಇಷ್ಟವಾಗುತ್ತದೆ. ಕೊಳೆಗೇರಿ ಹುಡುಗನೊಬ್ಬನ ಆರ್ತನಾದಕ್ಕೆ ಒದಗಿಬರುವ ಕವಿಸಮಯ, ಮೌನಿಯಾಗಿಯೂ ಅವನೊಳಗೆ ಕುದಿಯುವ ಕಿಚ್ಚನ್ನು ತೋರುವ ಕ್ರಮ, ವಾಚ್ಯವಾಗಿಸದೆಯೂ ಕಟ್ಟಿದಂಥ ಹದವರಿತ ಡ್ರಾಮಾ... ಸಿನಿಮಾ ಹೆಚ್ಚೇ ಆಪ್ತವಾಗಲು ಕಾರಣವಾಗಿವೆ.

ಹಲವು ಪದರಗಳ ಕಥನಗಳನ್ನು ಒಂದು ಸೂತ್ರಕ್ಕೆ ಕಟ್ಟಿರುವುದೂ ಆಸಕ್ತಿಕರವಾಗಿದೆ. ಯಾವುದೂ ಒಂದನ್ನೊಂದು ಎಲ್ಲಿಯೂ ಕಳಚಿಕೊಳ್ಳುವುದಿಲ್ಲ. ಎಲ್ಲೆಲ್ಲಿ ವ್ಯಂಗ್ಯ ಬೇಕೋ ಅಲ್ಲಲ್ಲಿ ಅದನ್ನಿಟ್ಟು ಮಜಾ ಕೊಡುವ ನಿರ್ದೇಶಕಿ, ಮನರಂಜನೆಗಾಗಿ ಸಂಭಾಷಣೆಯನ್ನೇ ನೆಚ್ಚಿಕೊಂಡಿದ್ದಾರೆ. ವಿಜಯ್‌ ಮೌರ್ಯ ಬರೆದಿರುವ ಮಾತು (ಅವರು ನಾಯಕನ ಮಾವನ ಪಾತ್ರಧಾರಿಯೂ ಹೌದು) ಸ್ಫುಟ, ಚುರುಕು.

ರ‍್ಯಾಪರ್‌ಗಳದ್ದು ವಾಚ್ಯಮಾರ್ಗವಾದರೂ ಈ ಸಿನಿಮಾದಲ್ಲಿ ಹಾಡುಗಳ ಸಾಲುಗಳಲ್ಲಿ ಪದೇ ಪದೇ ಕವಿಹೃದಯದ ಬಡಿತವೊಂದು ನಮಗೆ ಕೇಳಿಸುತ್ತದೆ. ಅಂಕುರ್ ತಿವಾರಿ ನಿಗರಾಣಿಯಲ್ಲಿ ಒಂದೂವರೆ ಡಜನ್‌ ಸಂಯೋಜಕರು ಸಿನಿಮಾದ ಉದ್ದೇಶಕ್ಕೆ ತಕ್ಕಂಥ ಸಂಗೀತ ಶಿಲ್ಪ ಕಟೆದಿರುವುದು ಗಮನಾರ್ಹ. ಹೊಸಕಾಲದ ಹುಡುಗರ ಎದೆಬಡಿತದ ಸಂಗೀತ ಸಿನಿಮಾದ ಆತ್ಮವೂ ಹೌದು.

ರಣವೀರ್‌ ಸಿಂಗ್ ಪಾತ್ರವೇ ತಾವಾಗಿ, ಅದನ್ನು ಜೀವಿಸಿದ್ದಾರೆ. ಬಣ್ಣದ ಲೇಪವಿಲ್ಲದ ಅವರ ತುಟಿಗಳ ಬಿರುಕುಗಳಿಂದ ಹೊಮ್ಮುವ ಶಬ್ದ–ನಾದ ಪಾತ್ರಶ್ರದ್ಧೆಗೆ ಹಿಡಿದ ಕನ್ನಡಿ. ಅವರೇ ಹಾಡುವಾಗಲೂ ರ್‍ಯಾಪರ್‌ಗೆ ಇರಬೇಕಾದ ಲಯವನ್ನು ಅಳವಡಿಸಿಕೊಂಡಿರುವುದು ವೃತ್ತಿಪರತೆಗೆ ಸಾಕ್ಷಿ. ಕಣ್ಣಂಚಲ್ಲಿ ಹನಿಗಳನ್ನು ರಣವೀರ್ ಜಮೆ ಮಾಡಿಕೊಂಡು ನಿಂತರೆ, ನೋಡುಗರ ಕಣ್ಣಲ್ಲಿ ಅದು ಹರಿಯುವುದು ದೃಶ್ಯಗಳ ಶಕ್ತಿ. ಆಲಿಯಾ ಭಟ್ ಎರಡೂ ಕಣ್ಣುಗಳನ್ನು ಒಟ್ಟಿಗೆ ಮಿಟುಕಿಸಿದರೆ ತುಂಟತನದ ಮಿಂಚು. ದುಗುಡಗಳನ್ನೆಲ್ಲ ಅಡಗಿಸಿಕೊಂಡ ಕಡಲಿನಂತೆ ರಣವೀರ್ ಕಂಡರೆ, ಬುರ್ಖಾದೊಳಗೆ ಜ್ವಾಲಾಮುಖಿ ಸುತ್ತಿಕೊಂಡ ಹುಡುಗಿಯಂತೆ ಆಲಿಯಾ ಪ್ರಕಟಗೊಳ್ಳುತ್ತಾರೆ. ಇಬ್ಬರ ಪಾತ್ರಪೋಷಣೆಯಲ್ಲೇ ಸಹಜ ಮನರಂಜನೆಯ ಅಂಶವೊಂದು ಬೆರೆತುಕೊಂಡಿದೆ. ನಾಯಕನ ಕನಸುಗಳಿಗೆ ರೆಕ್ಕೆ ಕಟ್ಟುವ ಸ್ನೇಹಿತನಾಗಿ ಸಿದ್ಧಾರ್ಥ್ ಚತುರ್ವೇದಿ ತಮ್ಮ ಚೊಚ್ಚಿಲ ಸಿನಿಮಾದಲ್ಲೇ ಮನ ಗೆಲ್ಲುತ್ತಾರೆ. ಚಿತ್ರಕಥೆಗೆ ಕಾಣ್ಕೆ ಸಲ್ಲಿಸಿದ ರೀಮಾ ಕಾಗ್ಟಿ ಅವರಿಗೂ ಹೆಚ್ಚು ಅಂಕಗಳು ಸಲ್ಲಬೇಕು.

ಭಾವದ ಗೆರೆಗಳ ಮೇಲೆ ಎಲ್ಲೆಲ್ಲಿ ಎಷ್ಟು ಬೆಳಕು ಬೀಳಬೇಕೋ ಅಷ್ಟೇ ಬೀಳುವಂತೆ ಸಿನಿಮಾಟೊಗ್ರಾಫರ್ ಜಯ್ ಓಝಾ ನಿಗಾ ವಹಿಸಿರುವುದಕ್ಕೂ ಶಹಬ್ಬಾಸ್. ರಣವೀರ್‌ ಸಿಂಗ್‌ ಸತತವಾಗಿ ಪ್ರಯೋಗಮುಖಿಯಾಗುತ್ತಿರುವುದಕ್ಕೆ ಕೂಡ ಈ ಸಿನಿಮಾ ತಾಜಾ ಉದಾಹರಣೆಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT