ಹಳೇ ಡೌವ್‌ ನೆನಪು

ಬುಧವಾರ, ಜೂಲೈ 17, 2019
29 °C

ಹಳೇ ಡೌವ್‌ ನೆನಪು

Published:
Updated:
Prajavani

ಅದು ‘ಹಳೇ ಡೌವ್‌ ನೆನಪಲ್ಲಿ’ ಚಿತ್ರದ ಮುಹೂರ್ತ. ಕಾರ್ಯಕ್ರಮ ಮುಗಿಸಿಕೊಂಡು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಯಿತು. ಯಾರು ಮೊದಲು ಮಾತನಾಡಬೇಕು. ಎಲ್ಲಿಂದ ಮಾತು ಆರಂಭವಾಗಬೇಕು ಎಂಬುದೇ ಗೊತ್ತಾಗದಂತಹ ಸಂಭ್ರಮ ವೇದಿಕೆಯಲ್ಲಿತ್ತು.

ನಿರೂಪಕಿ ‘ಹಳೇ ಡೌವ್‌’ ಎಂದು ಸಿನಿಮಾದ ಹೆಸರು ಹೇಳಿದಾಗಲೆಲ್ಲಾ ಜೈಕಾರ ಮೊಳಗುತ್ತಿತ್ತು. ಚಿತ್ರತಂಡವು ಟೀಸರ್‌ ಎಂದು ಮಾಧ್ಯಮದವರಿಗೆ ಟ್ರೇಲರ್‌ ತೋರಿಸಿ ಅಚ್ಚರಿಗೊಳಿಸಿತ್ತು. 

ಕೊನೆಗೆ ನಿರ್ದೇಶಕ ಮಾರುತಿ ಟಿ. ಅವರ ಕೈಗೆ ಮೈಕ್‌ ಹಸ್ತಾಂತರಿಸಲಾಯಿತು. ‘ನಿರ್ಮಾಪಕರು ಚಿತ್ರ ನಿರ್ದೇಶನಕ್ಕೂ ಮೊದಲು ನನಗೊಂದು ನೀಟ್‌ ಪರೀಕ್ಷೆ ನೀಡಿದ್ದರು. ಅವರಿಗೆ ಟೀಸರ್ ತೋರಿಸಿರುವೆ. ಈಗ ಅವರಿಗೆ ಖುಷಿಯಾಗಿರಬಹುದು’ ಎಂದು ಮಾತು ಆರಂಭಿಸಿದರು.

‘ಇದು ಯಾವುದೇ ಸತ್ಯ ಘಟನೆ ಆಧಾರಿತ ಚಿತ್ರವಲ್ಲ. ಹಲವರ ಅನುಭವದ ಆಧಾರದ ಮೇಲೆ ಕಥೆ ಹೊಸೆಯಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಪ್ರೀತಿಯ ರಾಯಭಾರಿ’ಯ ಚಿತ್ರದಲ್ಲಿ ನಟಿಸಿದ್ದ ನಕುಲ್‌ ಗೌಡ ಈ ಚಿತ್ರದ ನಾಯಕ. ‘ಎಲ್ಲ ಯುವಕ, ಯುವತಿಯರಿಗೆ ಹಳೇ ಡೌವ್‌ಗಳ ಕನವರಿಕೆ ಕಾಡುತ್ತಿರುತ್ತದೆ. ಯಾರೊಬ್ಬರು ಹೇಳಿಕೊಳ್ಳುವುದಿಲ್ಲ ಅಷ್ಟೇ. ಅದನ್ನೇ ನಾವು ಚಿತ್ರದಲ್ಲಿ ಹೇಳಿದ್ದೇವೆ’ ಎಂದು ವಿವರಿಸಿದರು.

ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಅವರೆಲ್ಲರೂ ನಾಯಕನ ಹೊಸ ಬಾಳಿನಲ್ಲಿ ಉಳಿಯುತ್ತಾರೋ ಅಥವಾ ಹಳೇ ಡೌವ್‌ಗಳಾಗಿ ಕೊನೆಯಾಗುತ್ತಾರೋ ಎನ್ನುವುದೇ ಈ ಚಿತ್ರದ ಹೂರಣ.

ಪೋಷಕ ನಟ ತಬಲ ನಾಣಿ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ‘ನಿರ್ದೇಶಕರು ಒಳ್ಳೆಯ ಪಾತ್ರ ಇದೆ ಎಂದು ಹೇಳಿದ್ದಾರೆ. ಹಾಗಾಗಿ, ಒಪ್ಪಿಕೊಂಡಿರುವೆ. ಕಥೆ ಬಗ್ಗೆ ನನಗೂ ಗೊತ್ತಿಲ್ಲ’ ಎಂದು ನಕ್ಕರು. 

ಚಿತ್ರದಲ್ಲಿ ಐದು ಹಾಡುಗಳಿದ್ದು ನಾಲ್ಕು ಹಾಡುಗಳಿಗೆ ವಿನೀತ್‌ ರಾಜ್‌ ಮೆನನ್‌ ಸಂಗೀತ ಸಂಯೋಜಿಸಿದ್ದಾರೆ. ಒಂದು ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಗಿರಿಧರ ಟಿ. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಿರಂಜನ್‌ ಬಾಬು ಅವರದು.

Post Comments (+)