ಹೈಬ್ರಿಡ್‌ ಸೀರೆ!

7

ಹೈಬ್ರಿಡ್‌ ಸೀರೆ!

Published:
Updated:

ಸೀರೆಯಲ್ಲಿ ನಾಟಿ, ಹೈಬ್ರಿಡ್‌ ಎಂದರೆ ಹೇಗೆ? ಪಾಶ್ಚಾತ್ಯ ಉಡುಗೆಯ ಸಂಯೋಜನೆಯೊಂದಿಗೆ ವಿನ್ಯಾಸಗೊಂಡ ಸೀರೆಯನ್ನು ‘ಹೈಬ್ರಿಡ್‌ ಸೀರೆ’  ಎಂದು ಫ್ಯಾಷನ್‌ ವಿನ್ಯಾಸಕರು ಕರೆದಿದ್ದಾರೆ. ಅರ್ಥಾತ್‌, ಇದು ಇಂಡೊ–ವೆಸ್ಟರ್ನ್‌
ಶೈಲಿಯ ಸೀರೆ.

ನೆರಿಗೆ ಮತ್ತು ಸೆರಗನ್ನು ಹಿಡಿಯುವ ಶಿಸ್ತು ಕಲಿತರೆ ಸೀರೆ ಉಡುವುದು ಕಷ್ಟವೇನಲ್ಲ. ಆದರೆ ಬಹುತೇಕ ಹೆಣ್ಣುಮಕ್ಕಳಿಗೆ ಸೀರೆ ಉಡುವುದು ದುಃಸ್ವಪ್ನವಾಗುವುದು ಇದೇ ಹಂತದಲ್ಲಿ. ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಬಂದದ್ದು ನಾನಾ ಬಗೆಯ ರೆಡಿಮೇಡ್‌ ಸೀರೆಗಳು. ‘ಉಡಲು ರೆಡಿ’ ಎನ್ನುವ ಪರಿಕಲ್ಪನೆಯ ಸೀರೆ ಹರಿಹರೆಯದ ಹೆಣ್ಣುಮಕ್ಕಳ ಸೀರೆ ಉಡುವ ಕಷ್ಟವನ್ನು ನಿವಾರಿಸಿತ್ತು. ಉದ್ದ ಲಂಗ ಅಥವಾ ಪ್ಯಾಂಟ್‌ನಂತೆ ಧರಿಸಬಲ್ಲ ಸೀರೆಗಳನ್ನೂ ಇದೇ ಮಾದರಿಯಲ್ಲಿ ವಸ್ತ್ರವಿನ್ಯಾಸಕರು ವಿನ್ಯಾಸ ಮಾಡಿ ರ‍್ಯಾಂಪ್‌ಗೆ ತಂದರು. ಸೆಲೆಬ್ರಿಟಿಗಳಿಗೂ ಉಡಿಸಿ ಪ್ರಚಾರ ಕೊಟ್ಟರು. 

ಕಚ್ಚೆ ಸೀರೆ, ಪ್ಯಾಂಟ್ ಸೀರೆ, ಸೆರಗು ಮತ್ತು ನೆರಿಗೆಯ ಭಾಗದಲ್ಲಿ ಹೊಲಿಗೆ ಹಾಕಿದ ಸೀರೆಗಳು ಹೈಬ್ರಿಡ್‌ ಮಾದರಿಯವೇ. ಕೆಲತಿಂಗಳಿಂದೀಚೆ ಹೈಬ್ರಿಡ್‌ ಸೀರೆಯಲ್ಲಿಯೂ ರೂಪಾಂತರಗಳನ್ನು ಮಾಡಲಾಗುತ್ತಿದೆ.

ರೂಪಾಂತರಗಳು ಒಂದೆರಡಲ್ಲ!
ಪುರುಷರು ಮತ್ತು ಮಹಿಳೆಯರ ಕುರ್ತಾಗಳಲ್ಲಿ ಪರಿಚಯಗೊಂಡ ಸೀಳು ವಿನ್ಯಾಸಗಳು ಈಗ ಹೈಬ್ರಿಡ್‌ ಸೀರೆಗಳಿಗೆ ಬಡ್ತಿ ಪಡೆದಿವೆ. ಸೀರೆಯೊಳಗಿನ ಸ್ಲಿಪ್‌ ಅಥವಾ ಪ್ಯಾಂಟ್‌, ಧೋತಿ ಕಾಣಿಸುವಂತೆ ಸ್ಟಿಚ್ಡ್‌ ನೆರಿಗೆಯ ಭಾಗದಲ್ಲಿ ಸೀಳು ವಿನ್ಯಾಸ ಈ ವರ್ಷದ ಕೊಡುಗೆಯಂತಿದೆ.

ಅನಾಮಿಕ ಖನ್ನಾ ಎಂಬ ಸ್ಟೈಲಿಸ್ಟ್‌ ಇಂತಹ ಪ್ರಯೋಗಗಳನ್ನು ಮಾಡಿದ್ದಾರೆ. ‘ಗೋಲ್ಡ್‌’ ಸಿನಿಮಾದ ಪ್ರಚಾರದ ವೇಳೆ ನಟಿ ಮೌನಿ ರಾಯ್‌, ಅನಾಮಿಕಾ ವಿನ್ಯಾಸದ ಸೀರೆ ಧರಿಸಿ ಸುದ್ದಿಯಾಗಿದ್ದರು. ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ವಿಭಿನ್ನವಾಗಿ ಸೀರೆ ಉಡುವ ಶೈಲಿಯಿಂದಲೇ ಸಾಮಾನ್ಯ ಸೀರೆಗೆ ಅಸಾಮಾನ್ಯ ನೋಟ ನೀಡುತ್ತಾರೆ.

ಇತ್ತೀಚೆಗೆ ಶಿಲ್ಪಾ ಟೋಗಾ ಶೈಲಿಯ ಸೀರೆಯ ಫೋಟೊವನ್ನು ಪಿಂಟರೆಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಸೀರೆ ವಿನ್ಯಾಸ ಮಾಡಿದವರು  ಮಾಲಿನಿ ರಮಣಿ ಎಂಬ ವಿನ್ಯಾಸಕಿ. ನೆರಿಗೆಯನ್ನು ಹೊಟ್ಟೆಯ ಭಾಗಕ್ಕೆಲ್ಲಾ ಹರಡಿದಂತೆ ಭಾಸವಾಗುತ್ತದೆ. ಆದರೆ ಅದರ ಕಟ್‌ ವಿನ್ಯಾಸ ಮತ್ತು ಲೋ ವೇಸ್ಟ್‌ನಲ್ಲಿ ಉಡುವ ಶೈಲಿಯ ಜೊತೆಗೆ ಸೀರೆಯದೇ ಭಾಗದಿಂದ ಹೊಲಿದ ರವಿಕೆ, ಆ ಸೀರೆಯನ್ನು ಸಹಜವಾಗಿಯೇ ಹೈಬ್ರಿಡ್‌ ಮಾಡಿಬಿಟ್ಟಿದೆ!  ಶಿಲ್ಪಾ ಶೆಟ್ಟಿ 40ಕ್ಕೂ ಹೆಚ್ಚು ಬಗೆಯಲ್ಲಿ ಸೀರೆ ಉಟ್ಟು ಸುದ್ದಿಯಾದವರು. ಹೊಸ ಬಗೆಯ ಸೀರೆ ಉಡುವ ಶೈಲಿ ಪರಿಚಯಗೊಳ್ಳುವುದಕ್ಕೂ ಮೊದಲು ವಿನ್ಯಾಸಕರು ಆ ವಿನ್ಯಾಸಕ್ಕೆ ರಾಯಭಾರಿಯಾಗಿ  ಆಯ್ಕೆ ಮಾಡುವುದೇ ಶಿಲ್ಪಾ ಅವರನ್ನು!

ಕೆನಡಾ ಮೂಲದ ಮಣಿ ಕೆ. ಜಸ್ಸಲ್‌ ಎಂಬ ವಿನ್ಯಾಸಕಿ ‘ಫ್ರೀ ಸ್ಪಿರಿಟ್‌’ ಎಂಬ ಲೇಬಲ್‌ನಲ್ಲಿ ಸಡಿಲವಾದ ಉಡುಗೆ ತೊಡುಗೆಗಳನ್ನು ಪರಿಚಯಿಸಿದ್ದರು. ಅವರ ಸಂಗ್ರಹದಲ್ಲಿನ ಸೀರೆಗಳೂ ಹೈಬ್ರಿಡ್‌ ಮಾದರಿಯವೇ.

ಸಾಮಾನ್ಯ ಸೀರೆಯನ್ನೇ ವಿಭಿನ್ನ ಶೈಲಿಯಲ್ಲಿ ಉಡುವ ಕಾರ್ಯಾಗಾರಗಳಿಗೆ ನೂರಾರು ಮಹಿಳೆಯರು ದುಬಾರಿ ಶುಲ್ಕ ಪಾವತಿಸಿ ಪಾಲ್ಗೊಳ್ಳುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು ನಡೆಯುತ್ತಲೇ ಇರುತ್ತವೆ. ಹೆಣ್ಣು ಮಕ್ಕಳಿಗೆ ಸೀರೆ ಉಡುವ ಉಮೇದು ಇದ್ದೇ ಇರುತ್ತದೆ. ಆದರೆ ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಉಟ್ಟು ಟ್ರೆಂಡ್‌ ಸೃಷ್ಟಿಸುವುದು ನಿಜವಾದ ಸವಾಲು.‌

‘ಹೈಬ್ರಿಡ್‌’ ಶೈಲಿಯಲ್ಲಿ ಸೀರೆ ಉಡುವುದನ್ನು ನೀವೂ ಪ್ರಯತ್ನಿಸಿ ನೋಡಿ. ಹೊಸ ಟ್ರೆಂಡ್‌ನಲ್ಲಿ ನಿಮ್ಮ ಛಾಪೂ ಮೂಡಿಸಿ!

Tags: 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !