ಭಾವ ಲಾಸ್ಯಾ

7

ಭಾವ ಲಾಸ್ಯಾ

Published:
Updated:

‘ಈ ಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇನೆ. ನಿರ್ದಿಷ್ಟ ಪಾತ್ರಗಳು ಬೇಕೆಂದು ಬೇಡಿಕೆ ಇಡುವುದಿಲ್ಲ. ಎಲ್ಲ ತರಹದ ಪಾತ್ರಗಳಲ್ಲೂ ನಟಿಸಲು ಸಿದ್ಧ. ಗ್ಲಾಮರ್‌ ಪಾತ್ರದಲ್ಲೂ ಅಭಿನಯಿಸಲು ಹಿಂದೇಟು ಹಾಕಲಾರೆ’ 

ಹೀಗೆಂದು ಹೇಳುತ್ತಾ ಕಣ್ಣರಳಿಸಿ ನಕ್ಕರು ನಟಿ ಲಾಸ್ಯಾ ನಾಗರಾಜ್. ನೃತ್ಯದ ಮೂಲಕ ನಟನಾ ಕ್ಷೇತ್ರ ಪ್ರವೇಶಿಸಿರುವ ಅವರ ಮಾತುಗಳಲ್ಲಿ ಚಂದನವನದಲ್ಲಿಯೇ ಗಟ್ಟಿಯಾಗಿ ನೆಲೆಯೂರುವ ಆಸೆ ಇತ್ತು. ಬೆಳ್ಳಿತೆರೆಗೆ ಕಾಲಿಟ್ಟಿದ್ದರೂ ಭರತನಾಟ್ಯದ ಬಗೆಗಿನ ಅವರ ಮೋಹ ಕಡಿಮೆಯಾಗಿಲ್ಲ. 

ಲಾಸ್ಯಾ ಹುಟ್ಟಿ ಬೆಳೆದಿದ್ದು, ಬೆಂಗಳೂರಿನಲ್ಲಿಯೇ. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪೂರೈಸಿದ್ದಾರೆ. ಈಗ ಆಹಾರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಅವರ ಭರತನಾಟ್ಯ ಪ್ರದರ್ಶನ ನೋಡಿದ ನಿರ್ದೇಶಕರೊಬ್ಬರು ಕಿರುತೆರೆಯಲ್ಲಿ ನಟಿಸಲು ಆಹ್ವಾನ ನೀಡಿದರಂತೆ. ಉದಯ ಟಿ.ವಿ.ಯ ‘ಮಧುಮಗಳು’ ಧಾರಾವಾಹಿಯಲ್ಲಿ ಅಭಿನಯಿಸುವುದರೊಂದಿಗೆ ಕ್ಯಾಮೆರಾ ಎದುರಿನ ನಟನಾ ಪಯಣ ಆರಂಭಿಸಿದರು. ಬಳಿಕ ‘ಪದ್ಮಾವತಿ’ ಧಾರಾವಾಹಿಯಲ್ಲಿ ನಟಿಸಿದರು. ಅದೇ ವೇಳೆಗೆ ರಾಜೇಶ್‌ ವೇಣೂರ್‌ ನಿರ್ದೇಶನದ ‘ಅಸತೋಮ ಸದ್ಗಮಯ’ ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿತು. ಇದು ಅವರ ನಟನೆಯ ಮೊದಲ ಚಿತ್ರ. ‘ಬಾಲ್ಯದಲ್ಲಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇರಲಿಲ್ಲ. ನಟಿಯಾಗುವ ಆಸೆ ಚಿಗುರಿದ್ದು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗ. ಗಟ್ಟಿ ನಿರ್ಧಾರ ಕೈಗೊಂಡು ನಟನಾ ಕ್ಷೇತ್ರಕ್ಕೆ ಜಿಗಿದೆ’ ಎನ್ನುತ್ತಾರೆ ಲಾಸ್ಯಾ.

ತಾವು ನಟಿಸಿರುವ ಪ್ರಥಮ ಚಿತ್ರ ಈ ವಾರ ತೆರೆ ಕಾಣುತ್ತಿರುವ ಖುಷಿಯಲ್ಲಿರುವ ಅವರು, ‘ಹೋಮ್‌ ಮಿನಿಸ್ಟರ್’ ಚಿತ್ರದಲ್ಲಿ ನಟ ಉಪೇಂದ್ರ ಅವರೊಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಜೊತೆಗೆ, ಚಂದನ್ ಆಚಾರ್‌ ನಾಯಕ ನಟನಾಗಿರುವ ‘ಮಂಗಳವಾರ ರಜಾ ದಿನ’ ಚಿತ್ರಕ್ಕೂ ಅವರೇ ನಾಯಕಿ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

‘ಅಪ್ಪ ಛಾಯಾಗ್ರಾಹಕರಾಗಿದ್ದರು. ಈಗ ಬ್ಯುಸಿನೆಸ್‌ ಮಾಡುತ್ತಿದ್ದಾರೆ. ಅಮ್ಮ ಡಾನ್ಸರ್‌. ನಮ್ಮದೇ ‘ಆರಾಧನಾ ಇನ್‌ಸ್ಟಿಟ್ಯೂಟ್ ಆಫ್‌ ಭರತನಾಟ್ಯಂ’ ಸಂಸ್ಥೆಯಿದೆ. ನಾನು ನೃತ್ಯ ಕಲಿಯಲು ಅಮ್ಮನೇ ಪ್ರೇರಣೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಲಕ್ಷ್ಮಿ ಬಾರಮ್ಮ’ ಕನ್ನಡ ಧಾರಾವಾಹಿಯ ತಮಿಳು ಅವತರಣಿಕೆಯಾದ ‘ಬಂದಾಲ್‌ ಶ್ರೀದೇವಿ’ಯಲ್ಲೂ ಲಾಸ್ಯಾ ನಟಿಸಿದ್ದಾರೆ. ಇದರಲ್ಲಿ ಅವರದು ಬುದ್ಧಿವಿಕಲ್ಪಗೊಂಡ (ಸೈಕಾಟಿಕ್) ಮಹಿಳೆಯ ಪಾತ್ರ. ‘ಸೈಕಾಟಿಕ್‌ ಪಾತ್ರಗಳೇ ನಿನಗೆ ಸೂಕ್ತ. ಆ ಮಾದರಿಯ ಪಾತ್ರಗಳಲ್ಲಿ ನಟಿಸುವಂತೆ ಸ್ನೇಹಿತರು ಸಲಹೆಯಿತ್ತರು. ನಟಿ ಕಲ್ಪನಾ ಅವರು ಕಾಣಿಸಿಕೊಂಡಂತಹ ಪಾತ್ರಗಳಲ್ಲಿ ನಟಿಸುವುದು ನನಗಿಷ್ಟ. ಆದರೆ, ಯಾವುದೇ ಪಾತ್ರಗಳಿಗೆ ಜೋತುಬೀಳುವುದಿಲ್ಲ. ಸಿಕ್ಕಿದ ಪಾತ್ರಗಳಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ’ ಎಂದು ಕಣ್ಣರಳಿಸುತ್ತಾರೆ.

ತಮಿಳಿನ ಚಿತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶಗಳು ಬರುತ್ತಿವೆಯಂತೆ. ಉತ್ತಮ ಪಾತ್ರಗಳಿಗೆ ಕಾಯುತ್ತಿರುವ ಅವರು ಚಂದನವನವೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.

ಲಾಸ್ಯಾ ಅವರ ಪ್ರಕಾರ ಕಿರುತೆರೆ ಮತ್ತು ಹಿರಿತೆರೆ ನಟನೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ‘ಧಾರಾವಾಹಿಯಲ್ಲಿನ ನಟನೆ ಒಂದು ಪಾತ್ರಕ್ಕೆ ಸೀಮಿತ. ಕೊನೆಯವರೆಗೂ ಆ ಪಾತ್ರದ ಸುತ್ತವೇ ನಟನೆ ಸಾಗುತ್ತದೆ. ಸಂಭಾಷಣೆಯ ಸಿದ್ಧತೆಗೆ ಸಮಯ ಸಿಗುವುದಿಲ್ಲ. ನಮ್ಮೊಳಗಿನ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಸಿಗುವುದು ಕಡಿಮೆ. ಆದರೆ, ಸಿನಿಮಾದಲ್ಲಿ ಸಾಕಷ್ಟು ಸಮಯ ಸಿಗುತ್ತದೆ. ಸ್ವಾತಂತ್ರ್ಯವೂ ಸಿಗುತ್ತದೆ. ಇಲ್ಲಿ ಭಿನ್ನವಾದ ಪಾತ್ರಗಳನ್ನು ಮಾಡಬಹುದು. ಪಾತ್ರದ ಪೋಷಣೆಗೂ ಅವಕಾಶ ಸಿಗುತ್ತದೆ’ ಎಂದು ವಿವರಿಸುತ್ತಾರೆ. 

‘ಅಸತೋಮ ಸದ್ಗಮಯ ಚಿತ್ರದಲ್ಲಿ ಇಂಡಿಯಾ, ಮಂಡ್ಯ ನನಗಲ್ಲ ಎನ್ನುವ ಮನಸ್ಥಿತಿ ಹೊಂದಿರುವ ಪಾತ್ರ ನನ್ನದು. ನನ್ನದೇ ಆದ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತೇನೆ. ಪ್ರಿಯಕರನೊಂದಿಗೆ ವಿದೇಶಕ್ಕೆ ಹೋಗಿ ನೆಲೆಯೂರುವ ಕನಸು ಹೊಂದಿರುವ ಪಾತ್ರವದು. ಪ್ರಥಮ ಚಿತ್ರದಲ್ಲಿಯೇ ಭಿನ್ನವಾದ ಪಾತ್ರದಲ್ಲಿ ನಟಿಸಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !