ಸೋಮವಾರ, ಅಕ್ಟೋಬರ್ 18, 2021
26 °C
‘ಅ. 1ರಂದು ‘ಕಾಗೆ ಮೊಟ್ಟೆ’ ತೆರೆಗೆ

ತಂದೆ ಜಗ್ಗೇಶ್‌ಗೆ ಸಿನಿಮಾ ನಿರ್ದೇಶನ ಮಾಡಲು ಅಣಿಯಾದ ಪುತ್ರ ಗುರುರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಪ್ಪ ಜಗ್ಗೇಶ್‌ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡುತ್ತಾರಂತೆ ಪುತ್ರ ಗುರುರಾಜ್‌. ‘ಕಾಗೆಮೊಟ್ಟೆ’ ಚಿತ್ರದ ಟ್ರೈಲರ್‌ ಪ್ರದರ್ಶನ ಸಂದರ್ಭದಲ್ಲಿ ಅವರು ಈ ವಿಚಾರ ಹಂಚಿಕೊಂಡರು. 

‘ಕಾಗೆಮೊಟ್ಟೆ’ ತೀರಾ ಕಚ್ಚಾ ಮಾದರಿಯ ಕಥಾಹಂದರದ ಆ್ಯಕ್ಷನ್‌ ಸಿನಿಮಾ. ಪ್ರೇಕ್ಷಕನಿಗೆ ಇಷ್ಟವಾಗುತ್ತದೆ ಎಂದಿರುವ ಗುರುರಾಜ್‌, ‘ಒಂದು ಕಥೆ ಬರೆದಿದ್ದೇನೆ. ಅದಕ್ಕೆ ಅಪ್ಪನನ್ನೇ ಹಾಕಿಕೊಂಡು ಆ ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತೇನೆ. ಮುಂದಿನ ಜೂನ್‌ ವೇಳೆಗೆ ಸಿನಿಮಾ ಸೆಟ್ಟೇರಲಿದೆ‌’ ಎಂದರು. 

ಪ್ರತಿಕ್ರಿಯಿಸಿದ ಜಗ್ಗೇಶ್‌, ‘ಹೌದು. ಗುರು ನನಗೆ ಕತೆ ಹೇಳಿದಾಗ ನಾನು ದಂಗಾಗಿಬಿಟ್ಟೆ. ತುಂಬಾ ಚೆನ್ನಾಗಿದೆ. ಆದರೆ, ನನಗೆ ಒಳ್ಳೊಳ್ಳೆಯ ಡೈಲಾಗ್ಸ್‌ ಬೇಕು ಎಂದು ತಾಕೀತು ಮಾಡಿದ್ದೇನೆ. ಸ್ಕ್ರಿಪ್ಟ್‌ನ್ನು ಚೆನ್ನಾಗಿ ಮಾಡಬೇಕು. ಆಗ ನಾನು ಅಭಿನಯಿಸುತ್ತೇನೆ’ ಎಂದು ಮಗನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. 

‘ನನ್ನ ಮಗನಿಗೆ ಬುಧಾದಿತ್ಯ ಯೋಗ ಇದೆ. ಎರಡೂ ಗ್ರಹಗಳು ಒಟ್ಟಿಗೇ ಸೇರಿರುವ ಯೋಗ ಬರುವುದು ಅಪರೂ‍ಪ. ಅದು ಗುರುರಾಜನಿಗೆ ಇದೆ. ಹಾಗಾಗಿ ಅವನ ಕೆಲಸಗಳೆಲ್ಲವೂ ಯಶಸ್ವಿಯಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅವನಿಗೆ ಬೇರೆ ಭಾಷೆಗಳಲ್ಲೂ ಅವಕಾಶಗಳು ಬಂದಿವೆ. ಆದರೆ ಅತ್ತ ಹೋಗದಂತೆ ನಾನೇ ತಡೆದಿದ್ದೆ. ನಾನು ಹಾಗೆ ಮಾಡಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು ಜಗ್ಗೇಶ್‌.

ಚಿತ್ರದ ನಿರ್ದೇಶಕ ಚಂದ್ರಹಾಸ ಮಾತನಾಡಿ, ‘ಚಿತ್ರವು ನೈಜತೆಗೆ ಹತ್ತಿರ ಇರುವಂತೆ ಸಹಜವಾದ ಸನ್ನಿವೇಶಗಳಲ್ಲಿ ಚಿತ್ರಿಸಿದ್ದೇವೆ. ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.

‘ಕಾಗೆಮೊಟ್ಟೆ – ಪಿಳ್ಳಗೋವಿ ಕೃಷ್ಣಕತೆ ಎಂಬ ಟ್ಯಾಗ್‌ಲೈನ್‌ ಇದೆ. ಲೊಕ್ಕನಹಳ್ಳಿಯ ಒಂದಿಷ್ಟು ಯುವಕರು ಹುಟ್ಟೂರಿನಲ್ಲಿ ನಿರಂತರ ತಪ್ಪು ಮಾಡುತ್ತಾ ಬೇರೆಯವರಿಗೆ ತೊಂದರೆ ಕೊಡುತ್ತಾ ಕೊನೆಗೊಂದು ದಿನ ಊರು ತೊರೆಯುತ್ತಾರೆ. ಅಲ್ಲಿಂದ ಬೆಂಗಳೂರಿನ ಭೂಗತ ಲೋಕ ಸೇರಿ ಇಲ್ಲಿನ ಡಾ‌ನ್‌ ರಾಮಚಂದ್ರ ಎಂಬಾತನನ್ನು ಹೊಡೆಯಲು ಯತ್ನಿಸುತ್ತಾರೆ. ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು’ ಎಂದರು ಚಂದ್ರಹಾಸ.

ಗುರುರಾಜ್‌ ಜೊತೆಗೆ ಹೇಮಂತರೆಡ್ಡಿ, ಮಾದೇಶ, ತನುಜಾ, ಸೌಜನ್ಯಾ, ಶರತ್‌ ಲೋಹಿತಾಶ್ವ, ಪೊನ್ನಂಬಳಂ, ರಾಜ್‌ ಬಹದ್ದೂರ್‌, ಸತ್ಯಜಿತ್‌ ತಾರಾಗಣದಲ್ಲಿದ್ದಾರೆ. ಶ್ರೀವತ್ಸ ಅವರ ಸಂಗೀತ, ಡಾ.ವಿ.ನಾಗೇಂದ್ರಪ್ರಸಾದ್‌ ಅವರ ಸಂಭಾಷಣೆ ಇದೆ. ಪಿ.ಎಲ್‌.ರವಿ ಅವರ ಛಾಯಾಗ್ರಹಣ ಇದೆ. ಜಯಂತ್‌ ಕಾಯ್ಕಿಣಿ ಮತ್ತು ಕವಿರಾಜ್‌ ಅವರು ಹಾಡಿನ ಸಾಹಿತ್ಯ ಬರೆದಿದ್ದಾರೆ. ಮಾಸ್‌ ಮಾದ ಚಿತ್ರದ ಸಾಹಸ ನಿರ್ದೇಶಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು