ತೆರೆಯ ಮೇಲೆ ‘ಜುಗಾರಿ ಕ್ರಾಸ್‌’

ಭಾನುವಾರ, ಮೇ 26, 2019
22 °C

ತೆರೆಯ ಮೇಲೆ ‘ಜುಗಾರಿ ಕ್ರಾಸ್‌’

Published:
Updated:
Prajavani

‘ಕಾಡು ಕಾಳದಂಧೆಗಳ ತವರುಮನೆಯಾಗುತ್ತಿದೆ. ಕಾಡಿನಿಂದ ಉತ್ಪತ್ತಿಯಾಗುತ್ತಿರುವ ಕಾಳಧನ ನಮ್ಮ ದೇಶದ ಅತ್ಯುನ್ನತ ರಾಜಕೀಯವನ್ನು ಸಹ ನಿಯಂತ್ರಿಸುತ್ತಿದೆ’ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ‘ಜುಗಾರಿ ಕ್ರಾಸ್‌’ ಕಾದಂಬರಿಯಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ. 

‘ಕಾಳ ವ್ಯವಹಾರಗಳ ವಿಷವೃತ್ತ ಈ ಮಟ್ಟ ತಲುಪಿದ ಮೇಲೆ ಕಾನೂನು ಮತ್ತು ನ್ಯಾಯಾಲಯಗಳು ಇದನ್ನು ಪ್ರತಿರೋಧಿಸಲಾರವು. ಜನಸಮಷ್ಟಿಯ ದೃಢ ನಿಶ್ಚಯ ಒಂದೇ ರಕ್ಷೆ’ ಎಂದು ಅವರು ಮುಂದುವರಿದು ಹೇಳುತ್ತಾರೆ. ಈ ಕಾದಂಬರಿ ಮೂಲಕ ತೊಂಬತ್ತರ ದಶಕದಲ್ಲಿಯೇ ತೇಜಸ್ವಿ ಅವರು, ಸಹ್ಯಾದ್ರಿಯ ಸಾಮಾಜಿಕ ಸ್ಥಿತ್ಯಂತರಗಳ ಕಾಣ್ಕೆಯನ್ನು ಒಂದೇ ಒಂದು ಮಿಂಚಿನಲ್ಲಿ ಓದುಗರಿಗೆ ತೋರಿಸಿದ್ದರು.

ಈ ಕಾದಂಬರಿಯನ್ನು ತೆರೆಯ ಮೇಲೆ ತರಲು ಹಲವು ನಿರ್ದೇಶಕರು ನಿರ್ಧರಿಸಿದ್ದೂ ಉಂಟು. ಪ್ರಸ್ತುತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಕಾದಂಬರಿಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ಕಾದಂಬರಿಯಲ್ಲಿ ಇರುವ ಅಧ್ಯಾಯಗಳ ಸಂಖ್ಯೆ ಮೂವತ್ತು. ನಾಗಾಭರಣ ಅವರು ಹದಿನೆಂಟು ಅಧ್ಯಾಯಗಳಿಗೆ ಸೀಮಿತಗೊಳಿಸಿ ಚಿತ್ರಕಥೆ ಹೆಣೆದಿದ್ದಾರಂತೆ. ಶೂಟಿಂಗ್‌ ಸಂದರ್ಭದಲ್ಲಿ ಇದು ಬದಲಾವಣೆಯಾಗುವ ಸಾಧ್ಯತೆಯೂ ಇದೆ.

ಬೆಂಗಳೂರಿನ ನಿಮಿಷಾಂಬ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ಚಿರಂಜೀವಿ ಸರ್ಜಾ ನಟನೆಯ ಮೊದಲ ದೃಶ್ಯಕ್ಕೆ ನಟ ಪುನೀತ್‍ ರಾಜ್‍ಕುಮಾರ್ ಕ್ಲಾಪ್ ಮಾಡಿದರು. ನಟ ಯಶ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು.  

ಕತೆಯಲ್ಲಿ ಬರುವ ನೇರ, ದಿಟ್ಟ ಗುಣವುಳ್ಳ ಸುರೇಶನ ಪಾತ್ರಕ್ಕೆ ಚಿರಂಜೀವಿ ಸರ್ಜಾ ಬಣ್ಣ ಹಚ್ಚುತ್ತಿದ್ದಾರೆ. ರಿಮೇಕ್‌ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅವರ ಖಾತೆಗೆ ಈ ಸ್ವಮೇಕ್‌ ಚಿತ್ರ ಸೇರ್ಪಡೆಯಾಗುತ್ತಿದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. 

ಒಟ್ಟು 18 ಪಾತ್ರಗಳ ಪೈಕಿ 6 ಪಾತ್ರಗಳು ಮುಖ್ಯ ಭೂಮಿಕೆಯಲ್ಲಿ ಬರುತ್ತವೆ. ಇಡೀ ಕಥೆ ಸಾಗುವುದು ಮಲೆನಾಡಿನ ಪ್ರದೇಶದಲ್ಲಿ. ದಾಂಡೇಲಿ, ಯಲ್ಲಾಪುರ, ಯಡಕಮುರಿ ಕಾಡಿನ ಪೈಕಿ ಒಂದು ಪ್ರದೇಶದಲ್ಲಿ ಕಾದಂಬರಿಯಲ್ಲಿರುವ ದೇವಪುರ ಊರಿನ ಸೃಷ್ಟಿಗೆ ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದು, ಎಚ್‌.ಸಿ. ವೇಣು ಅವರ ಛಾಯಾಗ್ರಹಣವಿದೆ.

‘ಕಡ್ಡಿಪುಡಿ’ ಖ್ಯಾತಿಯ ಚಂದ್ರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವರೂ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.‌

ರಂಗಾಯಣ ರಘು, ಕರಿಸುಬ್ಬು, ಸುಂದರ್‌ ರಾಜ್, ಪ್ರಮೀಳಾ ಜೋಷಾಯ್, ಮೇಘನಾ ರಾಜ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !