ಮಂಗಳವಾರ, ಫೆಬ್ರವರಿ 18, 2020
31 °C

ವೆಲ್‌ಕಮ್ ‘ಸಫೊ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಫೊ’ ನನ್ನ ಮಗಳಿಗೆ ಸ್ವಾಗತ.. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಕಲ್ಕಿ ಕೊಯ್ಲಿನ್. ಮಗಳು ಹುಟ್ಟಿದ ಮಾರನೇ ದಿನವೇ ಮಗುವಿಗೆ ‘ಸಫೊ’ ಎಂದು ನಾಮಕರಣ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.

‘ಸಫೊ’ 7ನೇ ಶತಮಾನದ ಗ್ರೀಕ್ ಕವಯತ್ರಿ. ಆಗಿನ ಕಾಲಕ್ಕೆ ಲೆಸ್‌ಬಿಯನ್ ಆಗಿ ಬದುಕಿ, ಬಹಿರಂಗವಾಗಿ ಆ ಬಗ್ಗೆ ಹೇಳಿಕೊಂಡಿದ್ದರು. ಬದುಕಿದಂತೆ ಬರೆದವರು. ಅವರ ಹೆಣ್ತನದ ಪದ್ಯಗಳು ಜನಪ್ರಿಯಗೊಂಡಿದ್ದವು. ಸ್ತ್ರೀ ಸಲಿಂಗಕಾಮದ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಾ, ಅವರ ಹಕ್ಕುಗಳ ಬಗ್ಗೆ ಹೋರಾಡಿದ್ದವರು ‘ಸಫೊ’.

ಈ ಗ್ರೀಕ್‌ ಕವಿ ‘ಸಫೊ’ ಹೆಸರನ್ನು ತಮ್ಮ ಮಗಳಿಗೆ ಇಟ್ಟಿದ್ದಾರೆ ಕಲ್ಕಿ.

ಮಗುವಿನ ಪಾದದ ನೀಲಿ ಗುರುತಿನ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಸಫೊ’ ಗೆ ಸ್ವಾಗತ. ಇಷ್ಟು ದಿನ ನನ್ನ ಹೊಟ್ಟೆಯಲ್ಲಿ ಮೊಮೊ ಹಾಗೆ ಮುದುಡಿಕೊಂಡು ಇದ್ದ ಮಗುವಿಗೆ ಇನ್ನು ಆರಾಮಾಗಿ ಇರಲು ಅವಕಾಶ ಮಾಡಿಕೊಡಬೇಕು. ನಮ್ಮನ್ನು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಜನ್ಮ ನೀಡುವ ಎಲ್ಲಾ ತಾಯಂದಿರಿಗೆ ವಿಶೇಷ ಗೌರವ ನೀಡಬೇಕು. ನಾವು ಬಹುದೊಡ್ಡ ದೈಹಿಕ ಹಾಗೂ ಮಾನಸಿಕ ಬದಲಾವಣೆಗೆ ಒಳಗಾಗುತ್ತೇವೆ. ಜೀವನದ ಬಹುದೊಡ್ಡ ಹೋರಾಟ ಈ ಗರ್ಭಾವಸ್ಥೆ. 

ಒಂದು ಸಣ್ಣ ಅಂಡಾಣು ಮನುಷ್ಯನಾಗಿ ರೂಪಾಂತರಗೊಳ್ಳವುದು ಹೆಣ್ಣಿನ ಗರ್ಭದಲ್ಲಿ. ನಮಗೆ ವಿಶೇಷ ಪ್ರೀತಿ ಮತ್ತು ಗೌರವವನ್ನು ನೀಡಬೇಕು ಎಂದು ಬರೆದುಕೊಂಡಿದ್ದಾರೆ.

ಕೊನೆಯಲ್ಲಿ

‘ಈ ಕಪ್ಪು ಭೂಮಿಯ ಮೇಲೆ ಕುದುರೆ ಸವಾರರು ಅಥವಾ ಕಾಲಾಳುಪಡೆಗಳ ಸೈನ್ಯವನ್ನು ದೊಡ್ಡದು ಎನ್ನುತ್ತಾರೆ ಕೆಲವರು, ಹಡಗುಗಳ ಸಮೂಹವೇ ದೊಡ್ಡದು ಎನ್ನುತ್ತಾರೆ ಆದರೆ ನಾನು ಪ್ರೀತಿ ದೊಡ್ಡದು ಎನ್ನುತ್ತೇನೆ’

–‘ಸಫೊ’

ಹೀಗೆಂದು ‘ಸಫೊ’ ಕವಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ.

#notesfromapregnantdiary ಮೂಲಕ ತಾಯಿಯಾಗುವ ನಿರೀಕ್ಷೆ ಹಂಚಿಕೊಳ್ಳುತ್ತಿದ್ದ, ಕಲ್ಕಿ ಅವರ ಬಾಯ್‌ಫ್ರೆಂಡ್ ಗಯ್ ಹರ್ಷ್‌ಬರ್ಗ್‌ ಏನನ್ನೂ ಹೇಳಿಕೊಂಡಿಲ್ಲ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಲ್ಕಿ ಕೊಯ್ಲಿನ್ ತಾನು ಗರ್ಭವತಿಯಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಸಾಕಷ್ಟು ಚಿತ್ರಗಳನ್ನೂ ಪೋಸ್ಟ್‌ ಮಾಡಿದ್ದರು. ನೀರಿನಲ್ಲಿ ಮಗುವಿಗೆ ಜನ್ಮ ನೀಡುವ ವಿಧಾನ (ವಾಟರ್‌ ಬರ್ತ್‌ ಮೆಥಡ್) ಆರಿಸಿಕೊಂಡಿದ್ದೇನೆ ಎಂದು ಧೈರ್ಯವಾಗಿ ಘೋಷಿಸಿಕೊಂಡಿದ್ದರು.

ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಈ ಹಿಂದೆ ಕಲ್ಕಿ ಮದುವೆಯಾಗಿದ್ದರು. 2015ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.

2009ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಚಿತ್ರ ಡೇವ್ ಡಿ ಮೂಲಕ ಚಿತ್ರರಂಗಕ್ಕೆ ಬಂದ ಕಲ್ಕಿ ಮಾರ್ಗರಿಟಾ ವಿತ್ ಎ ಸ್ಟ್ರಾ, ಯೆ ಜವಾನಿ ಹೈ ದಿವಾನಿ, ಜಿಂದಗಿ ನ ಮಿಲೇಗಿ ದುಬಾರಾ, ಶೈತಾನ್ ಮತ್ತು ದಟ್ ಗರ್ಲ್ ಇನ್ ಯೆಲ್ಲೊ ಬೂಟ್ಸ್‌ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ಹೆವೆನ್ ವೆಬ್ ಸೀರೀಸ್ ಮತ್ತು ನೆಟ್‌ಫ್ಲಿಕ್ಸ್‌ನ ಸೇಕ್ರೆಡ್ ಗೇಮ್ಸ್‌–2 ಸರಣಿಗಳಲ್ಲಿ ಅಭಿನಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)