ಬುಧವಾರ, ಜೂನ್ 3, 2020
27 °C

ಕನಸು ಮಾರಾಟಕ್ಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾಸ್ಯ ನಟರೇ ತುಂಬಿದ್ದ ‘ಮನೆ ಮಾರಾಟಕ್ಕಿದೆ’ ಕಾಮಿಡಿ ಸಿನಿಮಾ ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡಿತ್ತು. ಬಹುತೇಕ ಕಾಮಿಡಿ ಕಲಾವಿದರಿಂದಲೇ ಸಿದ್ಧಗೊಂಡಿರುವ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗ ತೆರೆಕಾಣಲು ಸಜ್ಜಾಗಿದೆ. ಇದು ಕನಸುಗಳನ್ನು ಹೊತ್ತು ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ಕರಾವಳಿಯ ಉದಯೋನ್ಮುಖ ಪ್ರತಿಭೆಗಳ ತಂಡ ಸಿದ್ಧಪಡಿಸಿರುವ ಚಿತ್ರ.

ಕೊರೊನಾ ಹರಡುವ ಮೊದಲು ಈ ಚಿತ್ರವನ್ನು ಏಪ್ರಿಲ್‌ 26ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಲಾಕ್‌ಡೌನ್‌ ತೆರವಾದ ನಂತರ ಸಂದರ್ಭ ನೋಡಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಸ್ಮಿತೇಶ್ ಎಸ್.ಬಾರ್ಯ ಚಿತ್ರರಂಗದ ಸೆಳೆತದಿಂದ ನಿರ್ದೇಶಕನ ಟೊಪ್ಪಿ ಧರಿಸಿದ್ದಾರೆ. ಇದು ಇವರ ಪ್ರಥಮ ಪ್ರಯತ್ನ. ‘ಕಾಮಿಡಿ ಕಿಲಾಡಿಗಳು ಸೀಜನ್ 1ರ’ ಕಲಾವಿದರಾದ ಗೋವಿಂದೇಗೌಡ, ಸೂರ್ಯ ಕುಂದಾಪುರ, ಧೀರಜ್‍ ಮಂಗಳೂರು, ಚಿದಂಬರ ಹಾಗೂ ಅನೀಶ್‍ ಪೂಜಾರಿ ಈ ಚಿತ್ರದಲ್ಲಿ ನಟಿಸುವ ಜತೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿರಿಯ ನಟ ಸಿದ್ಲಿಂಗು ಶ್ರೀಧರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ.

ನಾಯಕನಾಗಿ ಬಣ್ಣಹಚ್ಚಿರುವ ಪ್ರಜ್ಞೇಶ್‌ ಶೆಟ್ಟಿಗೂ ಇದು ಮೊದಲ ಚಿತ್ರ. ಬಣ್ಣದ ಲೋಕದಲ್ಲಿ ವಿಹರಿಸುವ ಕನಸಿನೊಂದಿಗೆ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಮುಗ್ಧ ಮತ್ತು ಕಾಲೇಜು ವಿದ್ಯಾರ್ಥಿಯ ಪಾತ್ರವಂತೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಕನ್ನಡದ ಚಿತ್ರಗಳಲ್ಲಿ ನಟಿಸಿರುವ ಸ್ವಸ್ತಿಕಾ ಪೂಜಾರಿ ಮತ್ತು ತುಳು ಚಿತ್ರಗಳಲ್ಲಿ ನಟಿಸಿರುವ ನವ್ಯಾ ಪೂಜಾರಿ ನಾಯಕಿಯರಾಗಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಕಾಮಿಡಿ ಥ್ರಿಲ್ಲರ್‌ ಸಿನಿಮಾ. ಕನಸುಗಳ ಬೆನ್ನೇರಿ ಹೋಗುವ ಯುವಕನ ಕಥೆಯನ್ನು ಕಾಮಿಡಿ ಮತ್ತು ಥ್ರಿಲ್ಲರ್‌ ಬೆರೆಸಿ ಹೇಳಲಾಗಿದೆ ಎನ್ನುತ್ತಾರೆ ನಟ ಅನೀಶ್‍ ಪೂಜಾರಿ.

ಮಡಿಕೇರಿಯ ಶಿವಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಸಂತೋಷ್‍ ಆಚಾರ್ಯ ಗುಂಪಲಾಜೆ ಅವರದು. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ‘ಭರ್ಜರಿ’ ಖ್ಯಾತಿಯ ಚೇತನ್‍ ಕುಮಾರ್, ಸುಖೇಶ್‍ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಐದು ಹಾಡುಗಳಿಗೆ ಗಾಯಕಿ ಮಾನಸ ಹೊಳ್ಳ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.