ಮಂಸೋರೆ ಹೊಸ ಸಿನಿಮಾ ‘19.20.21’: ಅಬ್ಬಕ್ಕ ಸಿನಿಮಾ ತಾತ್ಕಾಲಿಕ ಮುಂದಕ್ಕೆ

‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್–1978’ ಸಿನಿಮಾಗಳ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು, ಇದೀಗ ನೈಜ ಘಟನೆಯೊಂದನ್ನು ಆಧರಿಸಿದ ಸಿನಿಮಾವೊಂದನ್ನು ತೆರೆ ಮೇಲೆ ತರಲು ಸಿದ್ಧತೆ ಆರಂಭಿಸಿದ್ದಾರೆ. ಚಿತ್ರವು ವಿಭಿನ್ನವಾದ ಶೀರ್ಷಿಕೆಯನ್ನು ಹೊಂದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
‘19.20.21’ ಮಂಸೋರೆ ಅವರ ಹೊಸ ಚಿತ್ರದ ಟೈಟಲ್. ಮಾನವ ಹಕ್ಕುಗಳು, ಪ್ರತಿಭಟನೆ, ಸರ್ಕಾರ, ರಾಜಕೀಯ, ಪೊಲೀಸ್, ನ್ಯಾಯಾಲಯ, ಮಾಧ್ಯಮ, ಅನ್ಯಾಯದಿಂದ ಬಂಧಿಯಾಗಿರುವ ವ್ಯಕ್ತಿ ಹಾಗೂ ಹಿನ್ನೆಲೆಯಲ್ಲಿ ಅಂಬೇಡ್ಕರ್ ನೆರಳು, ಹೀಗೆ ಭಿನ್ನವಾದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ನೈಜ ಘಟನೆಯ ಕಥೆ ಹೇಳಲು ಮಂಸೋರೆ ಅವರು ಸಜ್ಜಾಗಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ‘ನಾವು ಈ ಹಿಂದೆ ನಿಮ್ಮೊಂದಿಗೆ ನನ್ನ ಬಹುವರ್ಷಗಳ ಕನಸು ಹಂಚಿಕೊಂಡಿದ್ದೆ. ‘ಅಬ್ಬಕ್ಕ’ ಸಿನಿಮಾ ಮಾಡುವ ಯೋಜನೆಯನ್ನು ಕೊರೋನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದಿದ್ದಾರೆ.
ಹೊಸ ಸಿನಿಮಾ ಕುರಿತು ವಿವರ ನೀಡುತ್ತಾ, ‘ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು, ಸಿನಿಮಾವೇ ನಮ್ಮ ಜೀವನ. ಸಿನಿಮಾ ಕನಸು ಕಾಣದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ನಮಗೇ ಅಸಾಧ್ಯ. ಹಾಗಾಗಿ, ‘ಅಬ್ಬಕ್ಕ’ ಯೋಜನೆಯ ಕನಸಿನ ಜೊತೆಜೊತೆಗೆ ಈ ಕೊರೊನಾ ಕಾಲದಲ್ಲಿ, ವರ್ಷ ಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಬಹಳ ಕಷ್ಟವೆನಿಸಿದರೂ, ಆ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು’
‘ಅದರ ಫಲವೇ ಈಗ ಹೊಸ ಸಿನಿಮಾ, ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತ. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ. ಈ ವರ್ಷವೇ ಸಿನಿಮಾವೇ ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ’ ಎಂದಿದ್ದಾರೆ ಮಂಸೋರೆ.
‘ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು...’ ಇವು ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು.. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಕುರಿತಾಗಿ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ’ ಎಂದು ಮಂಸೋರೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.