ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಭಾಗ್ಯವಂತರು

Last Updated 11 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಜನಪ್ರಿಯ ನಟರನ್ನು ಸಿನಿಮಾಗಳಲ್ಲಿ ಅನುಕರಿಸುವುದು, ಅವರ ಅಭಿಮಾನಿಗಳನ್ನು ಕಥಾನಾಯಕನನ್ನಾಗಿಸುವುದು ಗಾಂಧಿನಗರದಲ್ಲಿ ಹೊಸ ಸಂಗತಿಯೇನಲ್ಲ. ಆದರೆ ಇದೇ ಸಿದ್ಧಸೂತ್ರಕ್ಕೆ ಸಾಮಾಜಿಕ ಕಳಕಳಿಯ ಹೊಳಪು ಕೊಟ್ಟು ತಮ್ಮನ್ನು ಕೊಂಚ ಭಿನ್ನವಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಎಂ. ಹರಿಕೃಷ್ಣ. ಈ ಚಿತ್ರಕ್ಕೆ ಅವರು ‘ನಾವೇ ಭಾಗ್ಯವಂತರು’ ಎಂಬ ಹೆಸರನ್ನಿಟ್ಟಿದ್ದಾರೆ. ಚಿತ್ರದ ಹಾಡುಗಳ ಬಿಡುಗಡೆಗಾಗಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು.

ಈ ಚಿತ್ರದಲ್ಲಿಮೂವರು ನಾಯಕರು. ಆ ಮೂವರೂ ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ಶಂಕರ್‌ನಾಗ್ ಅವರ ಅಭಿಮಾನಿಗಳು. ಅವರು ಬಿಟ್ಟುಹೋದ ಆದರ್ಶಗಳನ್ನು ಈ ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ನಿರ್ದೇಶಕರದು.

‘ಹಿರಿಯರ ಆದರ್ಶಗಳನ್ನಷ್ಟೇ ತೆಗೆದುಕೊಳ್ಳಬೇಕು. ಕೆಟ್ಟಗುಣಗಳನ್ನು ಕಲಿಯಬಾರದು ಎಂಬ ಸಂದೇಶ ಹೇಳಹೊರಟಿದ್ದೇವೆ. ಕುಡಿತ ನಮಗೆ ಬೇಡ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಕುಡಿತದಿಂದ ಆಗುವಂಥ ಅನಾಹುತ ಚಿತ್ರದ ಕಥೆ. ಕುಡಿತ ತೋರಿಸಿದ್ದೇವೆ, ಆದರೆ ಕುಡಿತ ಬಿಡಿಸಿದ್ದೇವೆ’ ಎಂದು ವಿವರಿಸಿದರು ಹರಿಕೃಷ್ಣ.

ಶೃವಂತ್ ಈ ಚಿತ್ರದ ಮೂವರು ನಾಯಕರಲ್ಲಿ ಒಬ್ಬರು. ‘ನನ್ನದು ದಂಡಪಿಂಡ ಹುಡುಗನ ಪಾತ್ರ. ಒಂದು ಸಂದೇಶವನ್ನು ಎಷ್ಟು ರಸವತ್ತಾಗಿ ತೋರಿಸಬಹುದೋ ಅಷ್ಟು ಚೆನ್ನಾಗಿ ತೋರಿಸಿದ್ದಾರೆ ನಿರ್ದೇಶಕರು. ಸಂದೇಶ ಇರುವ ಕಾಮಿಡಿ, ಆ್ಯಕ್ಷನ್, ಎಮೋಶನ್ಸ್ ಎಲ್ಲವೂ ಇರುವ ಸಿನಿಮಾ ಇದು’ ಎಂದು ವಿವರಿಸಿದರು ಶೃವಂತ್.

‘ಕುಲವಧು’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿರುವ ಸೂರಜ್ ಹೊಳಲು ಅವರಿಗೆ ಇದು ಮೊದಲ ಸಿನಿಮಾ. ಕಿರುತೆರೆಯಿಂದ ಹಿರಿತೆರೆಗೆ ಜಿಗಿಯುವ ಪುಲಕದಲ್ಲಿ ಅವರಿದ್ದಾರೆ. ನಿಜಜೀವನದಲ್ಲಿಯೂ ರಾಜ್‌ ಅಭಿಮಾನಿ ಆಗಿರುವ ಅವರಿಗೆ ಸಿನಿಮಾದಲ್ಲಿಯೂ ರಾಜ್ ಅಭಿಮಾನಿಯ ಪಾತ್ರವೇ ಸಿಕ್ಕಿರುವುದು ಅವರ ಖುಷಿಯನ್ನು ಹೆಚ್ಚಿಸಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಚಿರಪರಿಚಿತರಾಗಿರುವ ಲೋಕೇಶ್ ಕುಮಾರ್ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ತಂದೆ ತಾಯಿ ಇಲ್ಲದವರ ಸಂಕಷ್ಟ ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಈ ಚಿತ್ರ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿದೆ. ಈ ಕಥೆಯನ್ನು ಕೇಳಿದಾಗ ಕಣ್ಣಿನಲ್ಲಿ ನೀರು ಬಂದಿತ್ತು’ ಎಂದು ತುಸು ಭಾವುಕರಾಗಿಯೇ ಮಾತನಾಡಿದರು ಲೋಕೇಶ್.

ದಿವ್ಯಾ, ಚಂದನಾ ಗೌಡ, ಶಿಲ್ಪಾ ರವಿ ನಾಯಕಿಯರಾಗಿದ್ದಾರೆ. ‘ತುಂಬ ಜನ ತಾಯಂದಿರನ್ನು ಪ್ರತಿನಿಧಿಸುವ ಪಾತ್ರ ನನ್ನದು. ಮೊದಲ ಬಾರಿ ನನ್ನ ಅಜ್ಜಿ ಜತೆ ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು ದಿವ್ಯಾ. ಚಂದನಾ ಪಾತ್ರದ ಹೆಸರು ನಂದಿನಿ. ಮುಂಗಾರು ಮಳೆ ಚಿತ್ರದ ಹಾಗೆ ಇಲ್ಲಿಯೂ ನಂದಿನಿ ನಾಯಕನಿಗೆ ಸಿಗುವುದಿಲ್ಲವಂತೆ. ಶಿಲ್ಪಾ ರವಿ ಶ್ರೀಮಂತ ಹುಡುಗಿಯಾಗಿ ನಟಿಸಿದ್ದಾಳೆ. ‘ನನ್ನದು ಸಿಂಪಲ್ ಮತ್ತು ಸ್ವೀಟ್ ಪಾತ್ರ’ ಎಂದು ಹೇಳಿಕೊಂಡರು ಅವರು.

ಎಂ. ಪ್ರಕಾಶ್ ಕುಮಾರ್ ಮತ್ತು ಎಚ್.ಎಸ್. ಅಶ್ವಥ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಎಂ.ಪಿ. ಬಸವಣ್ಣ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್ ಗೌಡ ನಾಗವಾರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT