ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌದು, ಕತ್ರೀನಾ ಕೈಫ್‌ಗೆ ಈಗ 36!

Last Updated 20 ಜುಲೈ 2019, 4:32 IST
ಅಕ್ಷರ ಗಾತ್ರ

ಹರಿತ ಕಣ್ಣೋಟ, ಹಾಲಿಗೆ ಚೂರೇ ಚೂರು ಅರಿಶಿನ ಬೆರೆಸಿ ಎರಕ ಹೊಯ್ದಂಥ ಮೈಬಣ್ಣ, ಸೇಬನ್ನು ಕತ್ತರಿಸಿ ಜೋಡಿಸಿದಂಥ ಕದಪು, ಬೀಸುವ ಗಾಳಿಯೂ ಜಾರುವಂಥ ನಯವಾದ ಕೂದಲು.. ನಗುವಿನಲ್ಲಿಯೇ ಬೆಳದಿಂಗಳು ಚೆಲ್ಲುವ ಈ ಚೆಲುವೆ ಕೊಂಚ ವಿದೇಶಿ ಅನಿಸುವ ಕಾರಣದಿಂದಲೇ ಆಪ್ತವಾಗುವವಳು. ಅಸಂಖ್ಯ ಪಡ್ಡೆಗಳ ಎದೆಯಲ್ಲಿ ಎಂದೂ ನಂದದ ಅಗ್ಗಷ್ಟಿಕೆಯನ್ನು ಹೊತ್ತಿಸಿಟ್ಟಿರುವ ಹುಡುಗಿಗೆ ಈಗ ಮೂವತ್ತಾರು ವರ್ಷ ಎಂದರೆ ಖಂಡಿತ ನಂಬುವುದು ಕಷ್ಟ. ಆದರೆ ಕಣ್ಣೆದುರಿನ ನಳನಳಿಕೆಯ ರೂಪರಾಶಿ ಅಲ್ಲಗಳೆಯುತ್ತಿರುವ ಸತ್ಯವನ್ನು ಕ್ಯಾಲೆಂಡರ್‌ ನಿಜವೆನ್ನುತ್ತಿದೆ.

ಹೌದು, ಕತ್ರೀನಾ ಕೈಫ್‌ಗೆ ಈಗ 36!

ಈಚೆಗೆ ಮೆಕ್ಸಿಕೊದಲ್ಲಿ ಜನ್ಮದಿನ ಆಚರಿಸಿಕೊಂಡಿರುವ ಈ ಬೆಳ್ಳಿ ಬೆಡಗಿಗೆ ಸಹಸ್ರ ಸಹಸ್ರ ಅಭಿಮಾನಿಗಳಷ್ಟೇ ಅಲ್ಲ, ಬಾಲಿವುಡ್‌ ಘಟಾನುಘಟಿಗಳೂ ಶುಭಕೋರಿದ್ದಾಳೆ.

ಈ ಕೋಲುಮುಖದ ಚೆಲುವೆ ಈಗ ಇರುವ ಯಶಸ್ಸಿನ ಉತ್ತುಂಗಕ್ಕೆ ತಲುಪಲು ಸವೆಸಿದ ದಾರಿಯೇನೂ ಸುರಳೀತವಾದದ್ದಲ್ಲ. ಅದೊಂದು ಪರ್ವತಾರೋಹಣವೇ.

ಕತ್ರೀನಾ ಹುಟ್ಟಿದ್ದು ಹಾಂಗ್‌ಕಾಂಗ್‌ನಲ್ಲಿ. ವೃತ್ತಿನಿಮಿತ್ತ ಇನ್ನೂ ಹಲವು ದೇಶಗಳಲ್ಲಿ ಸಂಚರಿಸುತ್ತಿದ್ದ ಅವರ ಕುಟುಂಬ ಕೊನೆಗೆ ನೆಲೆನಿಂತಿದ್ದು ಲಂಡನ್‌ನಲ್ಲಿ. ನಟನೆಯ ಗಾಳಿಗಂಧ ಸೋಕಿರದಿದ್ದರೂ ಎಳವೆಯಲ್ಲಿಯೇ ಮಾಡೆಲಿಂಗ್ ವ್ಯಾಮೋಹಕ್ಕೆ ಆತುಕೊಂಡಿದ್ದರು.

ಇಂಥದ್ದೇ ಒಂದು ಫ್ಯಾಷನ್‌ ಷೋದಲ್ಲಿ ಬೆಕ್ಕಿನ ನಡಿಗೆ ಮಾಡುತ್ತಿದ್ದ ಕತ್ರೀನಾಳನ್ನು ನೋಡಿದ ನಿರ್ದೇಶಕ ಕೈಝಾದ್ ಗುಸ್ತಾದ್ 2003ರಲ್ಲಿ ತಮ್ಮ ಸಿನಿಮಾ ‘ಭೂಮ್‌’ನಲ್ಲಿ ಒಂದು ಪಾತ್ರ ಕೊಟ್ಟರು. ಕತ್ರೀನಾಳ ಬಾಲಿವುಡ್ ಪುರಪ್ರವೇಶವಾಗಿದ್ದು ಹೀಗೆ. ಆದರೆ ಅವಳ ಮೊದಲ ಸಿನಿಮಾ ಹೀನಾಯವಾಗಿ ಸೋಲು ಕಂಡಿತು. ಹೋಗಲಿ ಇನ್ನೊಂದಿಷ್ಟು ಅವಕಾಶಗಳನ್ನಾದರೂ ಹೆಕ್ಕಿಕೊಟ್ಟಿತಾ? ಅದೂ ಇಲ್ಲ. ಇವಳ ವಿದೇಶಿಯಂತೆ ಕಾಣುವ ಮುಖ, ತೊಡರುವ ಹಿಂದಿ ಮಾತುಗಳನ್ನು ನೋಡಿದ ಬಾಲಿವುಡ್ಡಿಗರು ಅವಕಾಶ ಕೊಡಲು ಹಿಂಜರಿಯುತ್ತಿದ್ದರು. ಹಾಗಂತ ಅವಕಾಶಕ್ಕಾಗಿ ಅಲೆದಾಡಿಕೊಂಡು ಕೂರುವ ಪರಿಸ್ಥಿತಿಯಲ್ಲೇನೂ ಕತ್ರೀನಾ ಇರಲಿಲ್ಲ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಅವರು ಸಾಕಷ್ಟು ಬ್ಯುಸಿಯಾಗಿಯೇ ಇದ್ದರು.

ಕೊನೆಗೆ ಸಿನಿರಂಗದಲ್ಲಿ ಕತ್ರೀನಾ ಲಕ್‌ ಅನ್ನು ಬದಲಾಯಿಸಿದ್ದು ಒಂದು ತೆಲುಗು ಸಿನಿಮಾ. 2004ರಲ್ಲಿ ತೆರೆಕಂಡ ‘ಮಲ್ಲೀಸ್ವರಿ’ ಎಂಬ ತೆಲುಗು ರೊಮ್ಯಾಂಟಿಕ್ ಕಾಮೆಡಿ ಸಿನಿಮಾದಲ್ಲಿ ವೆಂಕಟೇಶ್‌ ಅವರ ಜೊತೆಗೆ ತೆರೆ ಹಂಚಿಕೊಂಡಳು. ಈ ಚಿತ್ರ ಸೂಪರ್‌ ಹಿಟ್‌ ಆದಾಗ ಮತ್ತೆ ಕತ್ರೀನಾ ಮೇಲೆ ಬಾಲಿವುಡ್ ಮಂದಿಯ ಕಣ್ಣು ಬಿತ್ತು. ಅಲ್ಲಿಂದ ಮತ್ತೆ ಅವರು ತಿರುಗಿ ನೋಡಲಿಲ್ಲ.

2005ರಲ್ಲಿ ತೆರೆಕಂಡ ‘ಮೈ ನೇ ಪ್ಯಾರ್‌ ಕ್ಯೋ ಕಿಯಾ‘ 2007ರಲ್ಲಿ ತೆರೆಕಂಡ ‘ನಮಸ್ತೆ ಲಂಡನ್‌’ ಸಿನಿಮಾಗಳು ಅವಳಿಗೆ ಬಾಲಿವುಡ್‌ನ ಸಕ್ಸಸ್‌ನ ರುಚಿಯುಣ್ಣಿಸಿದವು.2009ರಲ್ಲಿ ತೆರೆಕಂಡ ‘ನ್ಯೂಯಾರ್ಕ್‌’ ಸಿನಿಮಾದಲ್ಲಿನ ಅವರ ನಟನೆ ಫಿಲಂ ಫೇರ್ ಅವಾರ್ಡ್‌ನ ಗರಿಮೆಯನ್ನೂ ತುಂದುಕೊಟ್ಟಿತು.

‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾದಲ್ಲಿ ವಾಸ್ತವವೋ ಎಲ್ಲರ ಎದೆಯಾಳದ ಅಭಿಲಾಷೆಯ ಸಾಕಾರ ರೂಪದ ಕಲ್ಪನೆಯೋ ಗೊತ್ತಾಗದ ಬಗೆಯ ಪಾತ್ರದಲ್ಲಿ ಅವರ ನಟನೆ ಬಹುಕಾಲ ನೆನಪಿನಲ್ಲುಳಿಯುವಂಥದ್ದು. ಬಿಟ್ಟು ಹೊರಟ ಗೆಳೆಯನಿಗೆ ಬೈಕ್‌ನಲ್ಲಿ ಹಿಂಬಾಲಿಸಿ ಬಂದು ತುಟಿಮುತ್ತನಿಕ್ಕಿ ಹೊರಡುವ ಆ ತುಂಟ ಹುಡುಗಿಯನ್ನು ಎದೆಯಲ್ಲಿ ತುಂಬಿಸಿಕೊಂಡು ನರಳಿದ ಹುಡುಗರೆಷ್ಟೋ. ‘ಅಜಬ್‌ ಪ್ರೇಮ್‌ ಕಿ ಗಜಬ್‌ ಕಹಾನಿ’ ಚಿತ್ರದಲ್ಲಿ ರಣ್‌ಬೀರ್ ಕಪೂರ್‌ ಜೊತೆ ಮಾಯಾಲೋಕದಲ್ಲಿ ಅಡ್ಡಾಡುವಾಗ ಬಿದ್ದು ಬಿದ್ದು ನಗದಿರಲು ಸಾಧ್ಯವೇ ಇಲ್ಲ. ‘ರಾಜ್‌ನೀತಿ’ಯ ಧೀರ ಗಂಭೀರೆ, ‘ಧೂಮ್‌ 3’ಯ ಚಾಣಾಕ್ಷ ಮಾದಕ ಚದುರೆ, ‘ಏಕ್‌ ಥಾ ಟೈಗರ್‌’ನ ಜಿಂಕೆ ನಡಿಗೆಯ ಹುಡುಗಿ,‘ಭಾರತ್‌’ ಸಿನಿಮಾದ ಮುಗ್ಧ ಸುಂದರಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಜನಪ್ರಿಯತೆಯ ಪ್ರಭಾವಳಿ ಬೆಳೆಯುತ್ತ ಹೋದಂತೆ ವಿವಾದಗಳೂ ಸುತ್ತಿಕೊಳ್ಳುವುದು ಬಿ–ಟೌನ್‌ನಲ್ಲಿ ಹೊಸ ವಿಷಯವೇನಲ್ಲ. ಹಾಗೆಯೇ ಕತ್ರಿನಾ ಕುರಿತೂ ಗಾಸಿಪ್‌ಗಳು ಆಗೀಗ ಹಬ್ಬುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಿಜವೂ ಇರಬಹುದು. ಮೊದಲು ಸಲ್ಮಾನ್‌ ಖಾನ್‌ ಜೊತೆ ತಳುಕು ಹಾಕಿಕೊಂಡಿದ್ದ ಅವರು ಹೆಸರು ನಂತರ ರಣ್‌ಬೀರ್ ಕಪೂರ್‌ ಜೊತೆಯಲ್ಲಿಯೂ ಓಡಾಡಿತು. ಆದರೆ ಇಂಥ ಗಾಳಿಸುದ್ದಿಗಳಿಗೆ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತು ಸಮರ್ಥ ಉತ್ತರವಾಗಬಲ್ಲದು.

‘ಒಬ್ಬಳು ಹುಡುಗಿಯ ಬದುಕಿನಲ್ಲಿ ಮದುವೆಗೂ ಮುಂಚಿನ ಬದುಕು ಮತ್ತು ಮದುವೆಯ ನಂತರದ ಬದುಕು ಎಂದು ಎರಡು ವಿಭಾಗಗಳು ಇದ್ದೇ ಇರುತ್ತದೆ. ಮದುವೆಗೂ ಮುಂಚಿನ ಬದುಕಿನಲ್ಲಿ ನಮ್ಮನ್ನು ‘ಸಿಂಗಲ್’ ಎಂದು ಗುರ್ತಿಸುತ್ತಾರೆ. ನನ್ನ ಬದುಕಿನ ಆ ಭಾಗವನ್ನು ನಾನು ಸಂಪೂರ್ಣ ಘನತೆ ಮತ್ತು ವಿವೇಚನೆಯಿಂದ ಕಳೆಯಲು ಬಯಸುತ್ತೇನೆ’

ಈ ಮಾತುಗಳು ಕತ್ರೀನಾ ಅವರ ಸೌಂದರ್ಯದ ಹಿಂದಿನ ಪ್ರಬುದ್ಧತೆಯನ್ನು ಸೂಚಿಸುವಂತಿದೆ. ಈ ಪ್ರಬುದ್ಧ ಗುಣವೇ ಕ್ಯಾಲೆಂಡರು ತೋರಿಸುತ್ತಿರುವ ವಯಸ್ಸಿನ ಸಂಖ್ಯೆ ಅವರ ಮನಸ್ಸಿಗೂ ಕಾಯಕ್ಕೂ ಹೊರೆಯಾಗದ ಹಾಗೆ ಕಾಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT