ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆ.ಜಿ.ಎಫ್‌ ತಾತ’ ಖ್ಯಾತಿಯ ನಟ ಕೃಷ್ಣೋಜಿ ನಿಧನ

Last Updated 7 ಡಿಸೆಂಬರ್ 2022, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆ.ಜಿ.ಎಫ್‌. ತಾತ’ ಎಂದೇ ಖ್ಯಾತಿ ಪಡೆದಿದ್ದ ನಟ ಕೃಷ್ಣೋಜಿ ರಾವ್(72) ಅವರು ಬುಧವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದ ಸಮಸ್ಯೆಯ ಕಾರಣ ಆರು ದಿನಗಳ ಹಿಂದೆಯೇ ನಗರದ ಸೀತಾ ಸರ್ಕಲ್‌ ಬಳಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು. ಗುರುವಾರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಅಣ್ಣ ನಾಗೇಂದ್ರ ರಾವ್‌ ತಿಳಿಸಿದ್ದಾರೆ.

ಪಾವಗಡದ ವೈ. ಎನ್. ಹೊಸಕೋಟೆ ಮೂಲದ ಕೃಷ್ಣೋಜಿ ಅವರು ನಾಲ್ಕು ದಶಕಗಳ ಹಿಂದೆಯೇ ಚಿತ್ರರಂಗಕ್ಕೆ ಕಾಲಿಟ್ಟವರು. ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದಷ್ಟೇ ಅಲ್ಲದೆ ಸುಮಾರು 40 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ ಹಾಗೂ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಸುದೀರ್ಘ ಅವಧಿಯಿಂದ ಚಿತ್ರರಂಗದಲ್ಲಿದ್ದ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ನಟನೆಯ ‘ಕೆ.ಜಿ.ಎಫ್‌’ ಸಿನಿಮಾ. ಈ ಸಿನಿಮಾ ಬಿಡುಗಡೆಯಾದ ಬಳಿಕ ಅವರು ‘ಕೆ.ಜಿ.ಎಫ್‌ ತಾತ’ ಎಂದೇ ಖ್ಯಾತಿ ಪಡೆದಿದ್ದರು. ಕುರುಡ ಮುದುಕನ ಪಾತ್ರದಲ್ಲಿ ಅವರು ನಟಿಸಿದ್ದರು.

ಕೆ.ಜಿ.ಎಫ್‌–ಚಾಪ್ಟರ್‌ 2 ಸಿನಿಮಾದಲ್ಲಿ ಅವರು ಹೇಳಿದ ಡೈಲಾಗ್‌ ಅವರಿಗೆ ಮತ್ತಷ್ಟು ಖ್ಯಾತಿ ತಂದಿತ್ತು. ಇದಾದ ಬಳಿಕ ಸಾಲು ಸಾಲು ಸಿನಿಮಾಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಅವರು ನಾಯಕನಾಗಿ ನಟಿಸಿರುವ ‘ಮುದುಕನ ಲವ್‌ ಸ್ಟೋರಿ’ ಹಾಗೂ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ನಿರ್ದೇಶಕ ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿರುವ ‘ನ್ಯಾನೊ ನಾರಾಯಣಪ್ಪ’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT