ಕೆಜಿಎಫ್‌ 2 ಸಿನಿಮಾದಲ್ಲೂ ಮೋಡಿ ಮಾಡಲಿದ್ದಾರೆ ‘ಜೀಜಿ’

7

ಕೆಜಿಎಫ್‌ 2 ಸಿನಿಮಾದಲ್ಲೂ ಮೋಡಿ ಮಾಡಲಿದ್ದಾರೆ ‘ಜೀಜಿ’

Published:
Updated:

ಹಾಸ್ಯನಟ ಗೋವಿಂದೇಗೌಡರ ಸಿನಿ ಬದುಕಿನಲ್ಲಿ ‘ಕೆಜಿಎಫ್’ ಸಿನಿಮಾ ಹೊಸ ಹವಾ ಸೃಷ್ಟಿಸಿದೆ. ಅಭಿನಯಿಸಿದ್ದು ಚಿಕ್ಕ ಪಾತ್ರವಾದರೂ ಅದು ಹುಟ್ಟುಹಾಕಿದ ಸಂಚಲನ ಸಹಜವಾಗಿಯೇ ಥ್ರಿಲ್ ಮೂಡಿಸಿದೆ. ಎಲ್ಲಿ ಹೋದರೂ ಅಭಿಮಾನಿಗಳು ಸಿನಿಮಾದ ಡೈಲಾಗ್‌ ಹೇಳಿ ಮುತ್ತಿಗೆ ಹಾಕಿ ಸೆಲ್ಫಿಗೆ ಮುಖವೊಡ್ಡುತ್ತಿದ್ದಾರೆ.

‘ಕೆಜಿಎಫ್ 2’ ನಲ್ಲೂ ನೀವು ಇರುತ್ತೀರಾ?

ಈಗ ಬಿಡುಗಡೆಯಾದ ‘ಕೆಜಿಎಫ್‌’ನಲ್ಲಿ ಕಾಮಿಡಿ ಎಂದರೆ ನನ್ನದೇ; ಈಗಾಗಲೇ ನನ್ನ ‘ಉಣ್ಣಾಕೆ ಬನ್ನಿ, ಉಣ್ಣಾಕೆ’, ‘ಬಪ್ಪರೆ ಮಗನೇ’ ಡೈಲಾಗ್‌ಗಳು ಅಭಿಮಾನಿಗಳ ಬಾಯಲ್ಲಿವೆ. ಫೋನ್‌ ಕರೆ ಮಾಡಿದವರೆಲ್ಲ, ನಿಮ್ಮ ಪಾತ್ರ ರಿಜಿಸ್ಟರ್ ಆಗುತ್ತೆ. ಅದರಲ್ಲೂ ಮಾಳವಿಕಾ ಮೇಡಂಗೆ ಗದರಿಸುವ ದೃಶ್ಯ ತುಂಬಾ ಚೆನ್ನಾಗಿ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ‘ಕೆಜಿಎಫ್‌ 2’ರಲ್ಲಿ ನಾನು ಇರುತ್ತೇನೆ ಎಂದು ನಿರ್ದೇಶಕ ಪ್ರಶಾಂತ್‌ ನೀಲ್ ತಿಳಿಸಿದ್ದಾರೆ. ಅವರ ಜತೆ ಕೆಲಸ ಮಾಡುವುದು ನನ್ನ ಭಾಗ್ಯ. ‘ಉಗ್ರಂ’ ಚಿತ್ರ ನೋಡಿದಾಗಲೇ ಥ್ರಿಲ್ ಆಗಿದ್ದೆ. ‘ಕೆಜಿಎಫ್‌’ನಲ್ಲಿ ನನ್ನ ಕನಸು ನಿಜ ಆಯಿತು. ‘ಕೆಜಿಎಫ್ 2’ರಲ್ಲಿ ಅದು ಮುಂದುವರೀತಾ ಇದೆ. ‘ಕೆಜಿಎಫ್‌ 2’ನಲ್ಲಿ ನಾನು ಇರ್ತೀನಾ ಎಂದು ನಿರ್ದೇಶಕರನ್ನು ಕೇಳಬೇಕು ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತಿದ್ದೆ. ಮುಜುಗರದಿಂದ ಸುಮ್ಮನಿದ್ದೆ. ಒಮ್ಮೆ ಡಬ್ಬಿಂಗ್ ಸಮಯದಲ್ಲಿ, ಜೀ.ಜೀ. ಅವರೇ ‘ಕೆಜಿಎಫ್ 2’ಗೆ ರೆಡಿ ಆಗಿಬಿಡಿ’ ಎಂದು ಹೇಳಿದರು. ಸಿಕ್ಕಾಪಟ್ಟೆ ಖುಷಿಪಟ್ಟೆ. ಅದರಲ್ಲಿ ಎಷ್ಟು ಇರ್ತೀನಿ ಗೊತ್ತಿಲ್ಲ. ಒಂದು ಕ್ಷಣ ಇದ್ದರೂ ಅದು ಖುಷಿಯೇ. ಅದರಲ್ಲಿ ಇದೀನಿ ಎನ್ನುವುದೇ ನನಗೆ ಹೆಮ್ಮೆ.

ಹಿರಿತೆರೆಯಲ್ಲೇ ಮುಂದುವರಿಯುತ್ತೀರಾ? ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತೀರಾ?
ಹೆಸರು ಮಾಡಿದ್ದೇ ಕಿರುತೆರೆಯಿಂದ. ಕಾಮಿಡಿ ಕಿಲಾಡಿ ಜೀ.ಜೀ ಆಗಿದ್ದೇ ಕಿರುತೆರೆಯಿಂದ; ಹಾಗಾಗಿ, ಕಲಾವಿದರಿಗೆ ಹಿರಿತೆರೆ, ಕಿರಿತೆರೆ, ರಂಗಭೂಮಿ ಎಂಬ ಭೇದ, ಭಾವಗಳಿಲ್ಲ. ಎಲ್ಲಿ ಹೋದರೂ ನಟನೆ ಮಾಡುತ್ತೇವೆ. ಒಳ್ಳೆಯ ಅವಕಾಶಗಳು, ಪಾತ್ರಕ್ಕೆ ಗೌರವ ಸಿಗುತ್ತದೆ, ಅಲ್ಲಿ ಮುಂದುವರಿಯಲು ಇಷ್ಟಡುತ್ತೇನೆ.

ನೀವು ರಂಗಭೂಮಿ ಹಿನ್ನೆಲೆಯಿಂದ ಬಂದವರು...

ನಾನು ಇವತ್ತು ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ರಂಗಭೂಮಿಯೇ ಕಾರಣ. ಸುಮಾರು 15 ವರ್ಷಗಳಿಂದ ನಾನು ರಂಗಭೂಮಿಯ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ನಟನೆ, ಸಂಗೀತ, ನಿರ್ದೇಶನ, ಸೆಟ್‌ವರ್ಕ್, ಪ್ರಾಪರ್ಟಿ ನಿರ್ವಹಣೆ ಎಲ್ಲವನ್ನೂ ಮಾಡಿದ್ದೇನೆ. ರಂಗಭೂಮಿ ಎನ್ನುವುದು ದೊಡ್ಡ ವಿಶ್ವವಿದ್ಯಾಲಯ ಇದ್ದಂತೆ. ಅಲ್ಲಿಂದ ಬಂದಿದ್ದರಿಂದ ‘ಕಾಮಿಡಿ ಕಿಲಾಡಿ’ಗೆ ಆಯ್ಕೆಯಾಗಲು ಕಾರಣವಾಯಿತು. ರಂಗಭೂಮಿ ನಂಟನ್ನು ಮುಂದೆಯೂ ನಾನು ಬಿಡುವುದಿಲ್ಲ. ಅವಕಾಶ ಸಿಕ್ಕಾಗೆಲ್ಲ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತೇನೆ.

‘ಕಾಮಿಡಿ ಕಿಲಾಡಿ’ ರಿಯಾಲಿಟಿ ಷೋ ಜರ್ನಿ ಬಗ್ಗೆ...

ನಿಜಕ್ಕೂ ಅನಿರೀಕ್ಷಿತ ಸಾಧನೆ. ಆ ವೇಳೆ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಆಗ ಆಕಸ್ಮಿಕವಾಗಿ ‘ಕಾಮಿಡಿ ಕಿಲಾಡಿ’ ಆಡಿಷನ್‌ಗೆ ಹೋದಾಗ ಅಲ್ಲಿ ಸತೀಶ್ ಸಾರ್ ಅಂತ ಇದ್ದರು. ಅವರು ಕೆಲವು ನಟನೆಯ ಪಾಠಗಳನ್ನು ಹೇಳಿಕೊಟ್ಟರು. ಕಾಮಿಡಿ ಕಿಲಾಡಿಯಲ್ಲೇ ನನ್ನ ಮೊದಲ ಕಿರುತೆರೆ ನಟನೆ. ಷೋ ನಿರ್ದೇಶಕ ಶರಣಯ್ಯ ಸಾರ್ ಹಾಗೂ ತೀರ್ಪುಗಾರರು ಎಲ್ಲರಿಂದಲೂ ಸಾಕಷ್ಟು ಕಲಿತೆ. ಒಂದೊಂದು ಸ್ಕಿಟ್‌ ಕೂಡ ನನ್ನನ್ನು ಬೆಳೆಸಿದವು. ಇಡೀ ನಾಡಿಗೆ ನನ್ನನ್ನು ಪರಿಚಯಿಸಿದ ಜೀ ಟೀವಿಗೆ ಋಣಿರಾಗಿರುವೆ.

ಒಬ್ಬ ಹಾಸ್ಯ ಕಲಾವಿದನ ಶಕ್ತಿಯೇನು?

ಹಾಸ್ಯ ಕಲಾವಿದನಿಗೆ ಬಹಳ ಮುಖ್ಯವಾಗಿ ಸಮಯಪ್ರಜ್ಞೆ ಇರಬೇಕು. ಹಾಸ್ಯದ ಜತೆಗೆ ಗಂಭೀರತೆಯ ಅರ್ಥಯೂ ಗೊತ್ತಿರಬೇಕು. ದೇಹಭಾಷೆಯಿಂದ, ಕಿರುಚುವುದರಿಂದ ಜನರನ್ನು ನಗಿಸಲು ಆಗುವುದಿಲ್ಲ. ಕೆಲವು ಸಲ ದುಃಖದಲ್ಲಿ ನಾವಿದ್ದು, ಜನರನ್ನು ನಗಿಸಬೇಕಾಗುತ್ತದೆ.

‘ಕೆಜಿಎಫ್‌’ ಗಂಭೀರ ಸಿನಿಮಾ. ಆದರೆ, ನನ್ನಲ್ಲಿ ನಿರ್ದೇಶಕರು ಅಮಾಯಕತನ, ಮುಗ್ಧತೆಗಳನ್ನು ತೋರಿಸಿ ಜನರಿಗೆ ಒಂದು ಕಾಮಿಕ್ ರಿಲೀಫ್ ನೀಡಿದ್ದಾರೆ. ಹಾಸ್ಯ ಕಲಾವಿದ ಎಂದರೆ ಆತನಲ್ಲಿ ಎಲ್ಲಾ ಪಾತ್ರಗಳೂ ಇರಬೇಕು. ಅಮಾಯಾಕ, ರೌಡಿ, ನಿಸ್ಸಹಾಯಕ, ಅನಾಥ, ಆಫೀಸರ್ ಕೂಡ ಆತ ಆಗಿರಬೇಕು. ಹಾಸ್ಯ ಕಲಾವಿದನಿಗೆ ಎಲ್ಲವೂ ಗೊತ್ತಿರಬೇಕು. ಆದರೂ ಏನೂ ಗೊತ್ತಿಲ್ಲದವನಂತೆ ನಟಿಸಬೇಕು.

ಸಿನಿ ಯಾನ...

ನಾನು ನಟಿಸಿದ ಐದು ಸಿನಿಮಾಗಳು ಕಳೆದ ವರ್ಷ ಬಿಡುಗಡೆಯಾಗಿವೆ.

‘ಪರಸಂಗ’, ‘ಶತಾಯಗತಾಯ’, ‘ಒಂಥರ ಬಣ್ಣಗಳು’, ‘ಜಂತರ್‌ ಮಂತರ್’, ‘ಕೆಜಿಎಫ್’. ಈಗ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು ‘ನಾನು ಮತ್ತು ಗುಂಡ’, ‘ಆಪರೇಷನ್ ನಕ್ಷತ್ರ’, ‘ಪುಣ್ಯಾತ್ಗಿತ್ತಿಯರು’. ಈಗ ಚಿತ್ರೀಕರಣ ನಡೆಯುತ್ತಿರುವ ಸಿನಿಮಾಗಳು ‘ಮುತ್ತು ಕುಮಾರ’, ‘ರವಿಚಂದ್ರ’, ‘ಭರಾಟೆ’ ಹಾಗೂ ಇನ್ನೂ ಹೆಸರಿಡದ ಸಿನಿಮಾಗಳು ಎರಡು. ಹೀಗೆ ಸಿನಿಮಾಯಾನ ಸಾಗಿದೆ.

Tags: 

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !