ಶುಕ್ರವಾರ, ಸೆಪ್ಟೆಂಬರ್ 17, 2021
29 °C

‘ಹುಚ್ಚ’ ಸಿನಿಮಾದ ‘ಉಸಿರೇ‘ ಹಾಡಿನ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಫಿನಾಲೆ ಹಲವು ಕುತೂಹಲಕಾರಿ ವಿಷಯಗಳಿಗೆ ಸಾಕ್ಷಿಯಾಯಿತು. ಸ್ಪರ್ಧಿಗಳ ಎಲಿಮಿನೇಶನ್, ವಿನ್ನರ್ ಘೋಷಣೆ ಒಂದೆಡೆಯಾದರೆ, ಕಿಚ್ಚ ಸುದೀಪ್ ಅವರ ಅನುಭವಗಳ ಬುತ್ತಿ ಮತ್ತೊಂದೆಡೆ ಗಮನ ಸೆಳೆಯಿತು.

‘ಹುಚ್ಚ’ನ ‘ಉಸಿರೇ’ಗುಟ್ಟು ಬಿಚ್ಚಿಟ್ಟ ಕಿಚ್ಚ: ಹೌದು, ಕಿಚ್ಚ ಸುದೀಪ್ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟ ಚಿತ್ರ ‘ಹುಚ್ಚ’. ಇದರಲ್ಲಿ ಕಿಚ್ಚ ಸುದೀಪ್ ಅವರ ಮ್ಯಾರಿಸಂ, ಯಂಗ್ ಅಂಡ್ ಎನರ್ಜೆಟಿಕ್ ಕಾಲೇಜು ಹುಡುಗನ ಅಬ್ಬರ, ಸುದೀಪ್ ಅವರು ಮನೋಜ್ಞ ಅಭಿನಯ ಅವರು ಅಭಿನಯ ಚಕ್ರವರ್ತಿ ಎಂಬುದನ್ನು ಅಂದೇ ಸಾಬೀತುಪಡಿಸುವಂತಿತ್ತು.

ಈ ಚಿತ್ರದಲ್ಲಿ ಬರುವ ‘ಉಸಿರೇ’ ಹಾಡು ಸಹ ಅಷ್ಟೇ ಜನಪ್ರಿಯವಾಗಿತ್ತು. ಆದರೆ, ಈ ಹಾಡಿನ ಹಿಂದೆ ಇದ್ದ ಹಿನ್ನೆಲೆ ಗಾಯನದ ರಹಸ್ಯವೊಂದನ್ನು ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಬಿಚ್ಚಿಟ್ಟಿದ್ದಾರೆ.

ಅಂದಹಾಗೆ, ಮೊದಲಿಗೆ ಆ ಹಾಡನ್ನು ಹಿಂದಿಯ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಹಾಡಿದ್ದರಂತೆ. ಆದರೆ, ಅವರ ಹಾಡುಗಾರಿಕೆ ಸುದೀಪ್ ಅವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಹಾಗಾಗಿ, ಆ ಹಾಡನ್ನು ಮತ್ತೆ ರಾಜೇಶ್ ಕೃಷ್ಣನ್ ಅವರಿಂದ ಹಾಡಿಸಲು ಸುದೀಪ್ ನಿಶ್ಚಯಿಸಿದ್ದರು. ಅಂದು ಚಿತ್ರರಂಗದಲ್ಲಿ ಅಷ್ಟಾಗಿ ಹೆಸರು ಮಾಡಿರದ ಸುದೀಪ್ ಅವರ ಮಾತಿಗೆ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರಿಗೆ ಸಮ್ಮತ ಇರಲಿಲ್ಲ. ಹಲವು ಬಾರಿ ಮನವಿ ಮಾಡಿ ರಾಜೇಶ್ ರಾಮನಾಥ್ ಅವರನ್ನು ಕಾಡಿ ಬೇಡಿ ಆ ಹಾಡನ್ನು ಮತ್ತೆ ರಾಜೇಶ್ ಕೃಷ್ಣನ್ ಅವರಿಂದ ಹಾಡಿಸಲು ಒಪ್ಪಿಸಿದರಂತೆ.

ಮೊದ ಮೊದಲು ಬೇಡ ಎನ್ನುತ್ತಿದ್ದ ರಾಜೇಶ್ ಕೃಷ್ಣನ್ ಅವರು ಸಹ ಬಳಿಕ ಒಪ್ಪಿಕೊಂಡು ಹಾಡಿದರು. ಆಡಿಯೊ ಸಿಡಿಯಲ್ಲಿ ಸೋನು ನಿಗಮ್ ಹೆಸರಿದ್ದರೆ, ಹಾಡುಗಾರಿಕೆ ಮಾತ್ರ ರಾಜೇಶ್ ಕೃಷ್ಣನ್ ಅವರದ್ದಾಗಿತ್ತು ಎಂದು ಸುದೀಪ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.