ಶನಿವಾರ, ಆಗಸ್ಟ್ 20, 2022
21 °C

ಮೌನದ ಸಮ್ಮೋಹಕ ದನಿ

ಬಿ. ಶ್ರೀಪಾದ ಭಟ್ Updated:

ಅಕ್ಷರ ಗಾತ್ರ : | |

Prajavani

‘ನನಗೆ ನಾನೇ ಪ್ರಶ್ನೆ ಕೇಳಿಕೊಳ್ಳುತ್ತೇನೆ; ಮನುಷ್ಯನೆಂದರೆ ಏನು? ಮನುಷ್ಯನಾಗಿರುವುದಕ್ಕೆ ಅರ್ಥವೇನು? ನನ್ನ ಹೊಸ ಸಿನಿಮಾಗಳು ಮತ್ತೆ ಅಮಾನುಷವಾಗಿವೆ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ನಾವು ಏನು ನೋಡುತ್ತೇವೆ, ಅನುಭವಿಸುತ್ತೇವೆಯೋ, ಅದರ ಪ್ರತಿಬಿಂಬವನ್ನು ನಾನು ಸಿನಿಮಾದಲ್ಲಿ ತೋರಿಸುತ್ತೇನೆ.’

ಮೊನ್ನೆ ನಿಧನನಾದ ಕಿಮ್ ಕಿ ಡುಕ್ ಹೇಳಿದ ಮಾತಿದು. ಜಾಗತಿಕವಾಗಿ ಪ್ರಸಿದ್ಧ ನಿರ್ದೇಶಕನಾಗಿದ್ದ ಕಿಮ್‍ಗೆ ಅಪಾರ ಅಭಿಮಾನಿಗಳಿದ್ದರು. ಆತನಿಗೆ ಮಾತ್ರ ಸಾಧ್ಯವಿರುವ ಆ ವಿಶಿಷ್ಟ ನಿರೂಪಣೆ, ಹಸಿಯಾದ ಹಿಂಸೆ ವಿಜೃಂಭಿಸಿದರೂ ವಾಸ್ತವವನ್ನು ಬಿಚ್ಚಿಡುತ್ತಿದ್ದಾನಲ್ಲ ಎಂದು ಪ್ರೇಕ್ಷಕರು ಆತನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ಪದೇ ಪದೇ ನಿರೂಪಿತವಾಗುವ ನೋವಿನ ಅರ್ತನಾದವನ್ನು ಪ್ರೇಕ್ಷಕರೂ ಅನುಭವಿಸುತ್ತಿದ್ದರು; ತಲ್ಲಣಗೊಳ್ಳುತ್ತಿದ್ದರು. ದೃಶ್ಯಗಳ ಮೂಲಕವೇ ಅದ್ಭುತವಾಗಿ ಮಾತನಾಡುವ ಆ ಮೌನದ ಭಾಷೆಗೆ ಫಿದಾ ಆಗಿದ್ದರು. ಪಾತ್ರಗಳು ಮಾತನಾಡದಿದ್ದರೂ ಜಾಗತಿಕ ಪ್ರೇಕ್ಷಕರು ಇಡೀ ಸಿನಿಮಾದ ವಸ್ತುವನ್ನು, ಅದರಾಳದ ವಿಕ್ಷಿಪ್ತತೆಯನ್ನು ಎಳೆ ಎಳೆಯಾಗಿ ಅರ್ಥ ಮಾಡಿಕೊಂಡಿದ್ದರು. ಇದು ಕಿಮ್‍ನ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿತ್ತು. 

ಕಿಮ್‌ನ ತಾಯ್ನಾಡು ದಕ್ಷಿಣ ಕೊರಿಯಾದಲ್ಲಿ ಆತನ ಸಿನಿಮಾಗಳ ಕುರಿತು ಅಂತಹ ಉತ್ಸಾಹವಿರಲಿಲ್ಲ. ಆತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿದ್ದವು. ಕೆಲವರು ಆತನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಅನೇಕ ಕೊರಿಯನ್ನರು ‘ಕಿಮ್ ದಕ್ಷಿಣ ಕೊರಿಯಾ ಸಿನಿಮಾವನ್ನು ಪ್ರತಿನಿಧಿಸುವುದಿಲ್ಲ’ ಎಂದು ಟ್ವೀಟ್ ಮಾಡಿದರು. ಮತ್ತೆ ಹಲವರು ‘ಕಿಮ್‍ನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ಇನ್ನುಮುಂದೆ ಸಮಾಧಾನದಲ್ಲಿ ಬದುಕಬಹುದು’ ಎಂದು ಬರೆದುಕೊಂಡಿದ್ದರು.

ಜಾಗತಿಕವಾಗಿ ಕಲ್ಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಕಿಮ್ ದಕ್ಷಿಣ ಕೊರಿಯಾದ ಬಡ ಕುಟುಂಬದಲ್ಲಿ ಜನಿಸಿದ. ತಾರುಣ್ಯದಲ್ಲಿ ‘ಸೈಲೆನ್ಸ್ ಆಫ್ ದ ಲ್ಯಾಂಬ್’ ತರಹದ ಸಿನಿಮಾ ಆತನನ್ನು ಆಕರ್ಷಿಸಿತು. ಮನುಷ್ಯ ಮತ್ತು ಆತನೊಳಗಿನ ಕ್ರೌರ್ಯವನ್ನು, ವಿಕ್ಷಿಪ್ತತೆಯನ್ನು, ಲೈಂಗಿಕ ವಿಕೃತಿಯನ್ನು ಬೆತ್ತಲಾಗಿಸಲು ಸಿನಿಮಾ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡ ಕಿಮ್ ನಂತರ ತಿರುಗಿ ನೋಡುವ ಸಂದರ್ಭವೇ ಬರಲಿಲ್ಲ. 1998ರಲ್ಲಿ ಆತನ ‘Birdcage Inn’ ಸಿನಿಮಾ ಬರ್ಲಿನ್ ಚಿತ್ರೋತ್ಸವದಲ್ಲಿ, 2000ರಲ್ಲಿ ‘The Isle’ ಸಿನಿಮಾ ವೆನ್ನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡವು. The Isle ಸಿನಿಮಾ ಬಿಡುಗಡೆಯಾದಾಗ ಅಲ್ಲಿನ ಹಿಂಸೆಯ ನಿರೂಪಣೆಯಿಂದ ದಿಗ್ಭ್ರಮೆಗೊಂಡು ಪ್ರೇಕ್ಷಕರು ಅರ್ಧದಲ್ಲಿ ಹೊರನಡೆದಿದ್ದರು. ಆದರೆ, ಕುತೂಹಲ ತಾಳಲಾರದೆ ಮರಳಿ ಒಳಬಂದು ಅದರ ಅಂತ್ಯವನ್ನು ನೋಡಿ ತಲ್ಲಣಿಸಿದ್ದರು.

ಒಂದು ಸರೋವರ, ಅಲ್ಲಿನ ತೂಗುವ ಚಿಕ್ಕ ಕಾಟೇಜ್‍ಗಳು, ಅದರ ಮೇಲ್ವಿಚಾರಣೆ ನೋಡಿಕೊಳ್ಳುವ ಹೀ-ಜಿನ್ ಎನ್ನುವ ಮಹಿಳೆ. ಆಕೆ ಸಿನಿಮಾದ ಉದ್ದಕ್ಕೂ ಮಾತನಾಡುವುದಿಲ್ಲ (ಕಿಮ್‍ನ ಸಿನಿಮಾಗಳಲ್ಲಿ ಬಹುತೇಕ ಮಹಿಳಾ ಪಾತ್ರಗಳು ಮಾತನಾಡುವುದೇ ಇಲ್ಲ). ಆದರೆ ಆ ನೀರವ, ನಿರ್ಜನ ಸರೋವರದೊಂದಿಗೆ ಆಕೆಯ ಅವಿನಾಭಾವ ನಂಟು, ಆಕೆಯ ನಿಗೂಢತೆ, ಕಾಡುವ ಏಕಾಂಗಿತನ ಮತ್ತು ಒಳಗಿನ ವ್ಯಗ್ರತೆ ಆಸ್ಫೋಟಿಸುವ ಕ್ಷಣ ಮತ್ತು ಅದರ ಭೀಕರತೆ ಎಲ್ಲವನ್ನೂ ಪ್ರೇಕ್ಷಕರು ಅನುಭವಿಸುತ್ತಾರೆ.

2003ರಲ್ಲಿ ಬಿಡುಗಡೆಯಾದ ಸಿನಿಮಾ ‘Spring, Summer, Fall, Winter… and Spring’ ಕಿಮ್‍ನ ಸಿನಿಮಾ ಬದುಕಿನ ಮೈಲಿಗಲ್ಲು ಎಂದೇ ಹೇಳಬಹುದು. ತನ್ನ ಹಿಂದಿನ ಸಿನಿಮಾಗಳಲ್ಲಿ ಹಿಂಸೆಯ ನಿರೂಪಣೆಯ ಮೂಲಕ ಬದುಕಿನ ರೋಗಗಳನ್ನು ಅನಾವರಣ ಮಾಡಿದ ಕಿಮ್‍ನ ಈ ಸಿನಿಮಾ  ಕೊರಿಯನ್ ಬುದ್ಧಿಸಂ ಕುರಿತು ಮಾತನಾಡುತ್ತದೆ. ಇಡೀ ಸಿನಿಮಾದ ಆಶಯ ಸರಳವಾಗಿದೆ. ಎಲ್ಲಿಯೂ ದ್ವಂದ್ವವಿಲ್ಲ. ಋತುಮಾನಗಳು ಮತ್ತು ಅದರ ಜೊತೆಗೆ ಬೆಸೆದುಕೊಂಡ ಮನುಷ್ಯನ ವರ್ತನೆಗಳು ಇಡೀ ಸಿನಿಮಾದಲ್ಲಿ ನೇರವಾಗಿ ನಿರೂಪಿತವಾಗಿವೆ.

ಚಿತ್ರಕಥೆಗೆ ಸಾಂಪ್ರದಾಯಿಕ ಕೊರಿಯನ್ ಬುದ್ಧಿಸಂನ ವಸ್ತ್ರವನ್ನು ತೊಡಿಸಲಾಗಿದೆ. ವಸಂತ, ಬೇಸಿಗೆ, ಮಾಗಿ ಕಾಲ ಇವುಗಳ ಆವರ್ತನದ ಜೊತೆಗೆ ಬಾಲಕ ಬಿಕ್ಕುವೂ ಬೆಳೆಯುತ್ತಾ ಹೋಗುತ್ತಾನೆ. ಆ ಬಾಲಕ ಬಿಕ್ಕು ಹದಿಹರೆಯದವನಾಗಿ ಬೆಳೆದು ಮುಂದೆ ಆತನ ನೈತಿಕ ಪತನದ ನಂತರ ಮರಳಿ ಬುದ್ಧಿಸಂನ ತಬ್ಬಿಕೊಳ್ಳುವುದರ ಮೂಲಕ ಪಾತಕವನ್ನು ಕಳಚಿಕೊಳ್ಳುತ್ತಾನೆ. ಒಟ್ಟಾರೆ ಬದುಕು ಒಂದು ವೃತ್ತದಂತೆ ಮರಳಿ ಪ್ರಾರಂಭದ ಬಿಂದುವಿಗೆ ಬಂದು ಸೇರುತ್ತದೆ.

ಪ್ರತೀ ಆವರ್ತನದಲ್ಲಿ ಬೌದ್ಧ ಗುರುವು ಸಾಕ್ಷಿಪ್ರಜ್ಞೆಯಂತೆ ಇಡೀ ಕಥನವನ್ನು ನಿಯಂತ್ರಿಸುತ್ತಿರುತ್ತಾನೆ. ಬೇಸಿಗೆಯಲ್ಲಿ ಕಾಮದ ಆಕರ್ಷಣೆಗೆ ಒಳಗಾಗುವ ತನ್ನ ಶಿಷ್ಯನಿಗೆ ‘ಕಾಮವು ವಶಪಡಿಸಿಕೊಳ್ಳುವ ದುರಾಸೆ ಮೂಡಿಸುತ್ತದೆ, ಈ ವಶಪಡಿಸಿಕೊಳ್ಳುವಿಕೆಯು ಕೊಲೆಗೆ ಕಾರಣವಾಗುತ್ತದೆ’ ಎಂದು ಹೇಳುತ್ತಾನೆ. ಅದು ಆಧ್ಯಾತ್ಮಿಕವಾಗಿ ಎಂದು ಹೇಳಲು ಕಿಮ್‌ ತವಕಿಸುತ್ತಾನೆ. ಆದರೆ ಪ್ರೇಕ್ಷಕನಿಗೆ ಇದು ಯಾಜಮಾನಕೀಯ ಎಂದು ಕಂಡುಬರುತ್ತದೆ. Spring, Summer… ಅದರ ಎಲ್ಲಾ ಮಿತಿಗಳ ನಡುವೆಯೂ ನಿರೂಪಣೆಯಲ್ಲಿನ ಮೌನ ನಮ್ಮನ್ನು ತೀವ್ರವಾಗಿ ಕಾಡುತ್ತದೆ. ಅತ್ಯಂತ ಕಡಿಮೆ ತಾರಾಗಣದಲ್ಲಿ ಇಡೀ ಸಿನಿಮಾ ಪರಿಣಾಮಕಾರಿಯಾಗಿ ಮಾತನಾಡುತ್ತದೆ.

2004ರಲ್ಲಿ ಬಿಡುಗಡೆಯಾದ ‘3-Iron’  ಒಂದು ಪ್ರೇಮಕಥೆ. ಆದರೆ, ಇದು ಮಾಮೂಲಿ ಪ್ರೀತಿ, ಪ್ರಣಯವಲ್ಲ. ಕಿಮ್‍ನ ಎಲ್ಲಾ ಸಿನಿಮಾಗಳಂತೆ ಇಲ್ಲಿ ನಾಯಕ, ನಾಯಕಿ ಮಾತನಾಡುವುದಿಲ್ಲ. ಚಿತ್ರಕತೆ ಮತ್ತು ದೃಶ್ಯಗಳು ಮಾತನಾಡುತ್ತವೆ. ಇದೊಂದು ಮಾಂತ್ರಿಕ ಸಿನಿಮಾ. ‘ನಾವು ಜೀವಿಸುವ ಈ ಜಗತ್ತು ಅನೇಕ ರಹಸ್ಯಗಳನ್ನೊಳಗೊಂಡಿದೆ. ಅದರ ಪರಿಣಾಮಗಳು ಸ್ವತಃ ನಮಗೇ ಗೊತ್ತಿಲ್ಲದಂತೆ ನಮ್ಮೊಳಗೆ ಸಂಭವಿಸುತ್ತಿರುತ್ತವೆ’ ಎಂದು ಹೇಳಲು ಕಿಮ್ ತವಕಿಸುತ್ತಾನೆ. 

2012ರಲ್ಲಿ ಬಿಡುಗಡೆಯಾದ ‘Pieta’ ಕಿಮ್‍ನ ಮಹತ್ವಾಕಾಂಕ್ಷೆ ಸಿನಿಮಾ. ಇಲ್ಲಿ ಹಿಂಸೆ ಢಾಳಾಗಿದೆ. ಇಲ್ಲಿನ ಪ್ರೊಟಗಾನಿಸ್ಟ್‌ ಲೀ ಕಾಂಗ್-ಡು ಪ್ರತಿ ನಾಯಕ. ಇಲ್ಲಿ ಪ್ರತಿಯೊಬ್ಬರಿಗೂ ಒಂದು ಗುರಿ ಇದೆ. ಆದರೆ, ಆ ಗುರಿಗಳು ಪ್ರತಿಯೊಂದು ಪಾತ್ರಗಳ ಒಳ ಒತ್ತಡದಿಂದ ರೂಪಿತವಾಗಿವೆ. ಮೈಕೆಲ್‌ ಏಂಜೆಲೋ ಕೆತ್ತಿದ ರಕ್ತದಿಂದ ತೋಯ್ದ ಜೀಸಸ್‍ನನ್ನು ತನ್ನ ತೋಳುಗಳಲ್ಲಿ ತಬ್ಬಿಕೊಂಡ ವರ್ಜಿನ್ ಮೇರಿಯ ಶಿಲ್ಪ ಕಲೆಯಿಂದ ಈ ‘Pieta’ ಶೀರ್ಷಿಕೆ ಪ್ರೇರಿತವಾಗಿದೆ.

ಕಿಮ್ ಕಿ ಡುಕ್‍ನ ಸಿನಿಮಾಗಳ ಕುರಿತು ಎಣೆಯಿಲ್ಲದೆ ಬರೆಯಬಹುದು. ಕಿಮ್ ದಕ್ಷಿಣ ಕೊರಿಯಾದ ಹೊಸ ಅಲೆ ಸಿನಿಮಾಗಳಿಗೆ ಹೊಸ ದೃಷ್ಟಿಕೋನ, ಹೊಸ ಭಾಷೆ ತಂದುಕೊಟ್ಟ. ಈತನನ್ನು ವಿಮರ್ಶಕರು alchemist of cinema ಎಂದು ಕರೆದರು. ಅದು ಅತಿಶಯೋಕ್ತಿಯೂ ಅಲ್ಲ. ಜಾಗತಿಕವಾಗಿ ಜನಪ್ರಿಯತೆ ಗಳಿಸಿದ ಕಿಮ್‍ನ ಸಿನಿಮಾಗಳು ಸ್ವದೇಶದಲ್ಲಿ ಸೋಲುತ್ತಿದ್ದವು. ವೈರುಧ್ಯಗಳ ಈ ಬದುಕಿನಲ್ಲಿ ಈಸಿದ ಕಿಮ್ ತನ್ನ ಸಿನಿಮಾಗಳಲ್ಲಿ ಹಿಂಸೆಯನ್ನು ಬೆಚ್ಚಿಬೀಳಿಸಲು ಪ್ರದರ್ಶಿಸಲಿಲ್ಲ. ವ್ಯವಸ್ಥೆಯಲ್ಲಿಯೇ ಹಿಂಸೆ ಇದೆ ನೋಡಿ ಎಂದು ಎಲ್ಲವನ್ನೂ ಬೆತ್ತಲು ಮಾಡಿದ. ತನ್ನ ಸಿನಿಮಾಗಳನ್ನು ರೂಪಕಗಳಲ್ಲಿ ತೋಯಿಸಿದ.

ಕಿಮ್ ಸಿನಿಮಾಗಳಲ್ಲಿ ಪಾತ್ರಗಳು ಮಾತನಾಡುತ್ತಿರಲಿಲ್ಲ. ಆತ ಸಿದ್ಧ ಮಾದರಿಗಳನ್ನು ಮುರಿದಿದ್ದಾನೆಂದರೆ ಸರಳೀಕರಿಸಿ ದಂತಾಗುತ್ತದೆ. ಮನುಷ್ಯ ಬದುಕುವ ಪರಿಸರ, ಆತ ಕೇಳುವ ಹಾಡು ಪಾಡು, ಸಂಗೀತದ ಮೂಲಕ ಕಿಮ್ ಸಿನಿಮಾಗಳು ಅದ್ಭುತವಾಗಿ ಮಾತನಾಡಿದವು. ಮೌನಕ್ಕೆ ಹೊಸ ದನಿ ಕೊಟ್ಟ ಕಿಮ್ 21ನೇ ಶತಮಾನದ ಜಾಗತಿಕ ಸಿನಿಮಾದ ಮಹತ್ವದ ಕರ್ತಾರ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು