ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ಜೀ ತಾಳ ‘ರಂಗನಾಯಕಿ’ ನೃತ್ಯ

ಕಿರುತೆರೆ
Last Updated 4 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಧಾರಾವಾಹಿಯು ಮನೆಮಂದಿಯ ಮನಸು ಗೆದ್ದಿರುವುದು ನಿಮಗೆಲ್ಲ ಗೊತ್ತೇ ಇದೆ. ಇದರ ನಿರ್ದೇಶಕ ಕೆ.ಎಸ್.ರಾಮ್ ಜೀ ಅವರ ಮತ್ತೊಂದು ಹೊಸ ಧಾರಾವಾಹಿ ‘ರಂಗನಾಯಕಿ’ ಇದೇ 8ರಿಂದ ರಾತ್ರಿ 8.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ‌.

ಸಾವಿನ ದವಡೆಗೆ ಸಿಕ್ಕಾಗೆಲ್ಲ ಪವಾಡ ಸದೃಶ ರೀತಿಯಲ್ಲಿ ಸಾವು ಗೆದ್ದು, ಮತ್ತೆಮತ್ತೆ ಬದುಕಿ ಬರುವ ‘ಪುಟ್ಟಗೌರಿ’ ಪಾತ್ರವನ್ನು ಪರಿಚಯಿಸಿ ಮಹಿಳಾ ವೀಕ್ಷಕರ ಮನಗೆದ್ದವರುಕೆ.ಎಸ್.ರಾಮ್ ಜೀ., ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಟ್ರೋಲ್‌, ಮೀಮ್‌ಗೆ ಒಳಗಾದ ಪಾತ್ರ ಪುಟ್ಟಗೌರಿ ಎನ್ನುವುದೂ ಬೇರೆ ಮಾತು ಬಿಡಿ. ಪುಟ್ಟಗೌರಿ ಯಶಸ್ಸಿನ ಬೆನ್ನಲ್ಲೇ ರಾಮ್‌ ಜೀ ತಾಳದಲ್ಲಿ ‘ರಂಗನಾಯಕಿ’ ಕಿರುತೆರೆ ಮೇಲೆ ನರ್ತಿಸಲಿದ್ದಾಳೆ.

ನಿರ್ದೇಶಕರೊಬ್ಬರು ಮಾತ್ರ ಹಳಬರು, ಉಳಿದಂತೆ ಪಾತ್ರ ವರ್ಗವೆಲ್ಲವೂ ಹೊಸಬರ ದಂಡು! ‌‘ರಂಗನಾಯಕಿ ಜನರಿಗಾಗಿ ನಾಟಕ ಆಡುತ್ತಾಳೆ, ತನ್ನನ್ನು ತಾನು ಹುಡುಕುತ್ತಾ ಹೊರಡುತ್ತಾಳೆ’ ಎಂದು, ಒಂದು ಸಾಲಿನಲ್ಲಿ ಕಥೆಯ ಗುಟ್ಟು ಬಿಟ್ಟುಕೊಟ್ಟ ರಾಮ್‌ ಜೀ, ಸಿನಿಮಾ ಪುರವಣಿಯೊಂದಿಗೆ ಹಂಚಿಕೊಂಡಿರುವ ಮಾತುಕತೆಯ ವಿವರ ಇಲ್ಲಿದೆ.

ರಂಗನಾಯಕಿ ಪುಟ್ಟಣ್ಣ ಕಣಗಾಲ್‌ ಸಿನಿಮಾದ ಕಥಾ ನಾಯಕಿ ಅಲ್ಲವೇ?

1981ರಲ್ಲಿ ತೆರೆ ಕಂಡ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ, ಆರತಿ ಮತ್ತು ಅಂಬರೀಷ್‌ ಅಭಿನಯದರಂಗನಾಯಕಿಗೂ ನಮ್ಮ ಈ ಸೀರಿಯಲ್‌ ರಂಗನಾಯಕಿಗೂ ಎಳ್ಳಷ್ಟೂ ಸಂಬಂಧ ಇಲ್ಲ. ನಮ್ಮ ಕಥೆಗೆ ಅದೇ ಟೈಟಲ್‌ ಸೂಕ್ತವೆನಿಸಿ ಇಟ್ಟಿದ್ದೇವೆ.

ಪುಟ್ಟಗೌರಿಯಂತೆಯೇ ಇದು ಸಹ ಮಹಿಳಾ ಮತ್ತು ಕುಟುಂಬ ಪ್ರಧಾನವೇ?

ಹೌದು, ಹಾಗಂತ ಪುರುಷ ವೀಕ್ಷಕರು ಇಲ್ಲವೇ ಇಲ್ಲ ಎನ್ನಲಾಗದು. ಮನೆಯಲ್ಲಿ ಮಡದಿ, ಅಮ್ಮ, ಮಗಳು, ಅಕ್ಕ, ತಂಗಿ...ಹೀಗೆ ಹಲವರ ಕಾರಣಕ್ಕೆ ಸೀರಿಯಲ್‌ ವೀಕ್ಷಣೆಪುರುಷರಿಗೂ ಅನಿವಾರ್ಯವಾಗಿದೆ. ಹಾಗಾಗಿ ನಮಗೆ ಹೊಸ ವೀಕ್ಷಕ ವರ್ಗವೂ ಸಿಕ್ಕಿದೆ.ಅವರನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡೇ ಪಾತ್ರ ಪೋಷಣೆ ಇರಲಿದೆ. ರಂಗನಾಯಕಿ ಖಂಡಿತಾ ಎಲ್ಲರನ್ನು ತಲುಪುತ್ತಾಳೆ.

ಎಂತೆಂಥ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೀರಿ?

ನಿಜ ಹೇಳಬೇಕೆಂದರೆ, ಇದೊಂದು ರೀತಿ ಅವಕಾಶ ವಂಚಿತ ಪ್ರತಿಭೆಗಳ ಅನಾವರಣ ಎನ್ನಬಹುದೇನೊ. ಬಹುತೇಕ ಎಲ್ಲರೂ ಹೊಸ ಮುಖಗಳೇ. ತಮ್ಮಲ್ಲಿ ಪ್ರತಿಭೆ ಇದ್ದೂ ಅವಕಾಶ ಸಿಗದೆ, ಯಾವ್ಯಾವುದೋ ಪಾತ್ರಕ್ಕೆ ಸೀಮಿತಗೊಂಡಿದ್ದವರನ್ನು ಹುಡುಕಿ ಹುಡುಕಿ ಕರೆತಂದು ಅವರಲ್ಲಿರುವ ನಿಜವಾದ ಪ್ರತಿಭೆ ಹೊರಗೆಳೆದಿದ್ದೇವೆ. ‘ಇವರು ಹೀಗೂ ಅಭಿನಯಿಸಬಲ್ಲರೇ’ ಎಂದು ಹುಬ್ಬೇರಿಸುವಂತೆ ನಟಿಸಿದ್ದಾರೆ.

ನಾಯಕ, ನಾಯಕಿ ಬಗ್ಗೆ ಹೇಳಬಹುದೇ?

ನಾಯಕಿ ಪ್ರೇರಣಾಚಂದನವನದಿಂದ ಬಂದಿರುವ ನಟಿ. ‘ರಂಗನಾಯಕಿ’ಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ನಾಯಕನ ಪಾತ್ರದ ಪೋಷಾಕು ಧರಿಸಿರುವ ಪವನ್‌ ರವೀಂದ್ರ, ಸರಿಯಾಗಿ ಅಭಿನಯ ಬರುವುದಿಲ್ಲವೆಂದು ಮೊದಲ ಧಾರಾವಾಹಿಯಲ್ಲೇ 20–30 ಎಪಿಸೋಡ್‌ಗಳಾದ ನಂತರ ಹೊರಬಿದ್ದ ಹುಡುಗ. ಅವನ ಪ್ರತಿಭೆಯನ್ನು ಹೇಗೆ ಹೊರ ತಂದಿದ್ದೇವೆ ಎನ್ನುವುದನ್ನು ಇದರಲ್ಲಿ ನೋಡಲಿದ್ದೀರಿ.

ಕಥೆ ಸಾಗುವ, ಚಿತ್ರೀಕರಣ ನಡೆಸಿರುವ ಪರಿಸರದ ಬಗ್ಗೆ?

ಬೆಂಗಳೂರು ನಗರ ಮತ್ತು ಗೋಕರ್ಣದಲ್ಲಿ ಈಗಾಗಲೇ ಚಿತ್ರೀಕರಣ ಮಾಡಿದ್ದೇವೆ. ನಗರ ಮತ್ತು ಗ್ರಾಮೀಣ ಪರಿಸರವೂ ಇದರಲ್ಲಿರಲಿದೆ. ಗೋಕರ್ಣದ ದೇವಸ್ಥಾನ, ಕಡಲ ಕಿನಾರೆಯನ್ನು ಕ್ಯಾಮೆರಾ ಮೂಲಕ ಎಷ್ಟು ಚೆಂದವಾಗಿ ತೋರಿಸಲು ಸಾಧ್ಯವೋ ಅಷ್ಟು ಚೆಂದ ತೋರಿಸಿದ್ದೇವೆ.

ಪುಟ್ಟಗೌರಿಯ ಪಾಡು ಏನು?

ಇದೇ ಏಪ್ರಿಲ್‌ ಕೊನೆಗೆ ಪುಟ್ಟಗೌರಿ 2,000 ಎಪಿಸೋಡ್‌ಗಳನ್ನು ಪೂರೈಸಲಿದೆ. ಏಳು ವರ್ಷಗಳಿಂದ ಈ ಪುಟ್ಟಗೌರಿ ಮನೆಮಂದಿಯನ್ನು ಹೇಗೆ ಆವರಿಸಿದ್ದಾಳೆ ಎನ್ನುವುದನ್ನು ನೋಡಿದ್ದೀರಿ. ಮೊದಲ ಮಗು ಅದಾಗೆ ಎದ್ದು ನಡೆಯುವುದನ್ನು ಕಲಿತ ಮೇಲೆ ಎರಡನೇ ಮಗುವಿಗೆ ಹೇಗೆ ‘ಕುಟುಂಬ ಯೋಜನೆ’ ರೂಪಿಸುತ್ತೀವೊ ಹಾಗೆ ಎಂದುಕೊಳ್ಳಿ ಈ ರಂಗನಾಯಕಿ. ಎರಡನೇ ಮಗು ಬಂತು ಎಂದಾಕ್ಷಣ ಮೊದಲ ಮಗುವನ್ನು ಯಾರೂ ನಿರ್ಲಕ್ಷ್ಯ ಮಾಡುವುದಿಲ್ಲ. ಪುಟ್ಟಗೌರಿ ಅದರ ಪಾಡಿಗೆ ಅದು ಮುನ್ನಡೆಯಲಿದೆ.

ಹಾಗಾದರೆ ಪುಟ್ಟಗೌರಿಗೆ ಮುಕ್ತಿ ಇಲ್ಲ?

ಟಿಆರ್‌ಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ಪುಟ್ಟಗೌರಿಯನ್ನು ಹೇಗೆ ನಿಲ್ಲಿಸಲಿ ಹೇಳಿ, ನಾನು ನಿಲ್ಲಿಸಬೇಕೆಂದುಕೊಂಡರೂ ವಾಹಿನಿಯವರು ಒಪ್ಪಿಕೊಳ್ಳಬೇಕಲ್ಲ. ತಲೆಯಲ್ಲಿ ಸರಕು ಖಾಲಿಯಾಗಿದೆ ಎನಿಸಿದಾಗ ಪುಟ್ಟಗೌರಿ ನಿಲ್ಲಿಸಿಬಿಡೋಣ ಎನಿಸಿದ್ದು ಉಂಟು. ರಾತ್ರಿ ಮಲಗಿ, ಬೆಳಿಗ್ಗೆ ಎದ್ದಾಗ ಕಥೆಗೆ ಏನೋ ಹೊಸ ಟ್ವಿಸ್ಟ್‌ ಸಿಕ್ಕಿರುತ್ತದೆ. ಮತ್ತೆ ಚಿತ್ರೀಕರಣ ಎಂದಿನಂತೆ ಸಾಗುತ್ತದೆ. ಹಾಗಂತ ಪುಟ್ಟಗೌರಿ ಟಿಆರ್‌ಪಿ ಕಳೆದುಕೊಳ್ಳುವ ಹಂತಕ್ಕೆ ಹೋಗಲು ಬಿಡುವುದಿಲ್ಲ. ಅದು ಒಳ್ಳೆಯ ಹಂತದಲ್ಲಿರುವಾಗಲೇ ಮುಕ್ತಿ ಕಾಣಿಸುವ ಆಲೋಚನೆ ಇದೆ.

ರಂಗನಾಯಕಿ ಕೈಗೆತ್ತಿಕೊಂಡ ಕಾರಣಕ್ಕೆ ಪುಟ್ಟಗೌರಿ ಸದ್ಯದಲ್ಲೇ ಮುಗಿಯುತ್ತದೆ ಎಂದು ಯಾರೂ ಭಾವಿಸಬೇಡಿ. ಯಾರೋ ಒಂದಿಬ್ಬರು ಸಾಕು ಮಾಡಿ ಎಂದಾಕ್ಷಣ ಪುಟ್ಟಗೌರಿ ನಿಲ್ಲಲ್ಲ. ಇಬ್ಬರು ಬೋರಾಗಿದೆ ಎಂದರೆ, ಇಷ್ಟಪಡುವವರು ನೂರಾರು ಮಂದಿ ಇದ್ದಾರಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT