ಬುಧವಾರ, ಏಪ್ರಿಲ್ 21, 2021
32 °C

ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಗಡಿ ರಸ್ತೆಯ ಟೋಲ್‌ ಗೇಟ್‌ ವೃತ್ತದ (ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ) ಪ್ರತ್ಯೇಕ ಜಾಗದಲ್ಲಿ ನಟ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಿಸಲು ವಿಷ್ಣುವರ್ಧನ್‌ ಅಭಿಮಾನಿಗಳು ನಟ ಅನಿರುದ್ಧ್ ಅವರ ಸಮ್ಮುಖದಲ್ಲಿ ಗುದ್ದಲಿ ಪೂಜೆಯನ್ನು ಸೋಮವಾರ ನೆರವೇರಿಸಿದರು.

ಇದೇ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಕಳೆದ ಶುಕ್ರವಾರ ರಾತ್ರಿ ಧ್ವಂಸ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿದ್ದರು.

ಧ್ವಂಸಗೊಂಡಿದ್ದ ಜಾಗದಲ್ಲೇ ಪ್ರತಿಮೆ ಮರುಸ್ಥಾಪಿಸುವಂತೆ ಪಟ್ಟು ಹಿಡಿದಿದ್ದರು. ಪ್ರತಿಮೆ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದರು. ಬಳಿಕ ಅದೇ ವೃತ್ತದಲ್ಲಿ ಬೇರೆಡೆ ಪ್ರತಿಮೆ ಇಡಲು ಅಭಿಮಾನಿಗಳು ಒಪ್ಪಿದ್ದರು.

‘ಈ ವೃತ್ತಕ್ಕೆ ಹಿಂದಿನಿಂದಲೇ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರಿದೆ. ವಿಷ್ಣುವರ್ಧನ್ ಅವರ ಪ್ರತಿಮೆಗೆ ಇದೇ ವೃತ್ತದಲ್ಲಿ ಜಾಗ ನಿಗದಿಯಾಗಿದೆ. ಕಂಚಿನ ಪ್ರತಿಮೆ ಮಾಡಿಸಲು ಉದ್ದೇಶಿಸಲಾಗಿದೆ. ಅಭಿಮಾನಿಗಳ ಬೇಡಿಕೆಯಂತೆ ವಿಷ್ಣುವರ್ಧನ್ ಅವರ ಪ್ರತಿಮೆ ಇಲ್ಲೇ ತಲೆ ಎತ್ತಲಿದೆ’ ಎಂದು ಡಾ.ವಿಷ್ಣುಸೇನಾ ಸಮಿತಿಯ ಗೌರವಾಧ್ಯಕ್ಷ ಕ್ರಾಂತಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು