ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಕಿ ಎಸ್‌.ಜಾನಕಿ ಆರೋಗ್ಯವಾಗಿದ್ದಾರೆ

ಸುಳ್ಳು ಸುದ್ದಿ ಹಬ್ಬಿಸಬೇಡಿ; ಬಾಲಸುಬ್ರಹ್ಮಣ್ಯಂ ಮನವಿ
Last Updated 29 ಜೂನ್ 2020, 10:12 IST
ಅಕ್ಷರ ಗಾತ್ರ

ಬೆಂಗಳೂರು: ಗಾನಕೋಗಿಲೆ, ಬಹುಭಾಷಾ ಗಾಯಕಿ ಎಸ್‌. ಜಾನಕಿ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಭಾನುವಾರ ರಾತ್ರಿಯಿಂದ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ‘ಇದೊಂದು ಸುಳ್ಳುಸುದ್ದಿ, ಜಾನಕಿಯವರು ಆರೋಗ್ಯವಾಗಿದ್ದಾರೆ'ಎಂದು ಸ್ಪಷ್ಟಪಡಿಸಿದ್ದಾರೆ.

ಜಾಲತಾಣವೊಂದಕ್ಕೆ ವಿಡಿಯೊ ಮೂಲಕ ಮಾಹಿತಿ ನೀಡಿರುವ ಬಾಲು ಅವರು, ಆ ವಿಡಿಯೊದಲ್ಲಿ ಸುಳ್ಳು ಸುದ್ದಿ ಹರಡಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಾನಕಿ ಅಮ್ಮನವರ ಆರೋಗ್ಯ ವಿಚಾರಿಸಿಕೊಂಡು ಬೆಳಿಗ್ಗೆಯಿಂದ ಸಾಕಷ್ಟು ಫೋನ್‌ ಕರೆಗಳು ಬರುತ್ತಿವೆ. ಯಾರೋ ಅವರು ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಬಿಟ್ಟಿದ್ದಾರೆ. ಜಾನಕಿಯಮ್ಮನೊಂದಿಗೆ ನಾನು ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಸೋಷಿಯಲ್ ಮೀಡಿಯಾವನ್ನು ಸಕಾರಾತ್ಮಕ ವಿಚಾರಗಳನ್ನು ಬಳಸಿ'ಎಂದು ಮನವಿ ಮಾಡಿದ್ದಾರೆ.

ಈ ಸುಳ್ಳು ಸುದ್ದಿ ಹರಿದಾಡುತ್ತಿದ್ದನ್ನು ಗಮನಿಸಿದ ಜಾನಕಿಯವರ ಮಗ ಮುರುಳಿ ಕೃಷ್ಣ ಅವರು ‘ನಮ್ಮ ತಾಯಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ,ಆರೋಗ್ಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳುಸುದ್ದಿ. ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ'ಎಂದು ಖಾಸಗಿ ವೆಬ್‌ಪೋರ್ಟ್‌ಲ್‌ವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಜಾನಕಿಯವರ ಸಾವಿನ ಬಗ್ಗೆ 2016 ಮತ್ತು 2017ರಲ್ಲೂ ಹೀಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಆಗಲೂ ಬಾಲಸುಬ್ರಹ್ಮಣ್ಯಂ ಸೇರಿದಂತೆ ಅನೇಕರು ಹೀಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದರು. ಈಗ ಮತ್ತೊಮ್ಮೆ ಅಂಥದ್ದೇ ಪ್ರಯತ್ನ ನಡೆದಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್

ಭಾನುವಾರ ತಡರಾತ್ರಿಯಿಂದಲೇ ಜಾನಕಿಯವರ ಸಾವಿನ ಸುಳ್ಳು ಸುದ್ದಿ ಟ್ವಿಟರ್‌ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರುಟ್ವಿಟರ್‌ಗಳಲ್ಲಿ ‘ಜಾನಕಿಯವರ ಸಾವಿನ ಸುದ್ದಿ ಬರುತ್ತಿದೆ, ಇದು ನಿಜವೇ‘ ಎಂದು ಮಾಹಿತಿ ಕೇಳಿದ್ದರೆ, ಇನ್ನೂ ಕೆಲವರು ಮಾಹಿತಿ ಕೇಳಿದವರಿಗೆ ‘ಇದು ಸುಳ್ಳು ಸುದ್ದಿ. ಜಾನಕಿಯಮ್ಮ ಆರೋಗ್ಯವಾಗಿದ್ದಾರೆ. ಇಂಥ ಸುಳ್ಳು ಸುದ್ದಿಗಳನ್ನು ಹಂಚಬೇಡಿ‘ ಎಂದು ಮನವಿ ಮಾಡಿದ್ದಾರೆ.

ಡಿ.ಸುರೇಶ್‌ ಕುಮಾರ್ ಎಂಬುವವರು ‘ಗಾಯನ ಲೋಕದ ದಂತಕಥೆ ಎಸ್‌. ಜಾನಕಿಯವರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಅವರ ಸಾವಿನ ಸುಳ್ಳು ಸುದ್ದಿಯನ್ನು ಪೋಸ್ಟ್‌ ಮಾಡಿದ್ದೆ. ಅದಕ್ಕಾಗಿ ಕ್ಷಮೆಯಾಚಿಸುತ್ತಿದ್ದೇನೆ‘ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ ಖಚಿತ ಸುದ್ದಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಫ್ರಾಕ್ಚರ್ ಆಗಿತ್ತು

ಕಳೆದ ವರ್ಷ (2019) ಮೇ ತಿಂಗಳಲ್ಲಿ ಮೈಸೂರಿನ ಸಂಬಂಧಿಕರ ಮನೆಯಲ್ಲಿ ಉಳಿದಿದ್ದ ಎಸ್‌.ಜಾನಕಿಯವರು ಕಾಲುಜಾರಿ ಬಿದ್ದು ಸೊಂಟಕ್ಕೆ ಏಟು ಬಿದ್ದಿತ್ತು. ಏಟು ಬಿದ್ದ ಜಾಗದಲ್ಲಿ ಮೂಳೆ ಮುರಿದ ಕಾರಣ ಅವರನ್ನು ಅಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಸೂರಲ್ಲೇ ಗಾಯನ ಆರಂಭ–ಅಂತ್ಯ

ಎಸ್‌.ಜಾನಕಿಯವರು, 1952 ರಲ್ಲಿ ಅಂದಿನ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜತೆ ಮೊದಲ ಬಾರಿಗೆ ಹಾಡು ಹೇಳುವ ಮೂಲಕ, ಗಾಯನ ಕ್ಷೇತ್ರ ಪ್ರವೇಶಿಸಿದ್ದರು. ಮೂರು ವರ್ಷಗಳ ಹಿಂದೆ ಇದೇ ಮೈಸೂರಿನಲ್ಲಿ ನಡೆದ ‘ಎಸ್‌.ಜಾನಕಿ ಮ್ಯೂಸಿಕಲ್‌ ನೈಟ್'‘ ಕಾರ್ಯಕ್ರಮದಲ್ಲಿ ಜಾನಕಿಯವರು ತಾವು ಗಾಯನ ಲೋಕಕ್ಕೆ ವಿದಾಯ ಹೇಳುತ್ತಿರುವುದಾಗಿ ಪ್ರಕಟಿಸಿದ್ದರು. ಎಲ್ಲಿಂದ ಗಾಯನ ಪಯಣ ಆರಂಭಿಸಿದರೋ, ಅಲ್ಲಿಯೇ ವಿದಾಯ ಹೇಳುತ್ತಿದ್ದೇನೆ ಎಂದು ಆ ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಈ ಘಟನೆಗೆರಾಜವಂಶಸ್ಥೆ ಪ್ರಮೋದಾ ದೇವಿ, ನಟ ರಾಜೇಶ್, ಹಿರಿಯರಾದ ನಟಿ ಜಯಂತಿ, ಭಾರತೀ ವಿಷ್ಣುವರ್ಧನ್, ಹೇಮಾ ಚೌಧರಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದರು.

82 ವರ್ಷದ ಗಾಯಕಿ ಜಾನಕಿ ಅವರು,ಇಲ್ಲಿವರೆಗೂ ಸುಮಾರು ಕನ್ನಡ, ತೆಲುಗು, ತಮಿಳು ಸೇರಿದಂತೆ 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT