ಕಥೆಗೂ ಬೀಗ

7

ಕಥೆಗೂ ಬೀಗ

Published:
Updated:
Deccan Herald

ಪೋಸ್ಟರ್‌ನಲ್ಲಿ ಹಳೆಯ ಕಾಲದ ಬೀಗದ ಚಿತ್ರವಿತ್ತು. ಅದರ ಕೆಳಗೆ‌ ಕೀಗಳ ಗೊಂಚಲು ನೇತಾಡುತ್ತಿತ್ತು. ಆ ಬೀಗದ ಕಥೆ ಹೇಳುವಂತೆ ಪತ್ರಕರ್ತರು ನಿರ್ದೇಶಕ ಪರಶುರಾಮ್‌ಗೆ ದುಂಬಾಲು ಬಿದ್ದರು. ಅವರು ಮನೆಯಲ್ಲಿ ಕೀ ಬಿಟ್ಟುಬಂದವರಂತೆ ಚಿತ್ರದ ಕಥೆ ಹೇಳಲು ಹಿಂಜರಿದರು. ಕೆದಕಿ ಕೇಳಿದರೂ ಕಥೆಯ ಬಗ್ಗೆ ಹೇಳಲಿಲ್ಲ.  

ಚಿತ್ರದಲ್ಲಿ ನಟಿಸಿರುವ ಕಲಾವಿದರು ವೇದಿಕೆ ಮೇಲೆ ಆಸೀನರಾಗಿದ್ದರು. ಮಾಧ್ಯಮದವರ ಪ್ರಶ್ನೆಗಳಿಗೆ ನಿರ್ದೇಶಕರಿಂದ ಉತ್ತರ ದೊರೆಯದಿದ್ದಾಗ ಅವರ ಮೊಗದಲ್ಲಿ ನಗು ಮೂಡಿತು. ನಿರ್ದೇಶಕರು ಮಾತ್ರ ಕಥೆ ಹೇಳಲು ಸಿದ್ಧರಿರಲಿಲ್ಲ. ‘ದೇಶಕ್ಕೆ ಬೇಕಾಗಿರುವ ಒಂದು ಘಟನೆ ಬಗ್ಗೆ ವಿವರಿಸುವುದೇ ಕಥಾಹಂದರ’ ಎಂದಷ್ಟೇ ಹೇಳಿದರು.

‘ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ ಇದು. ನಾಯಕ, ನಾಯಕಿ ಒಂದು ಘಟನೆಯ ಸತ್ಯಾಸತ್ಯತೆಯ ಪರೀಕ್ಷೆಗೆ ಇಳಿಯುತ್ತಾರೆ. ಅವರು ಕಾರ್ಯಾಚರಣೆಗೆ ಇಳಿದಾಗ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕಿದೆ’ ಎಂದು ಹೇಳಿದರು.

ಯಾಣ ಮತ್ತು ಕನಕ‍ಪುರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ನಟ ಶಶಿಕುಮಾರ್‌ ಈ ಚಿತ್ರದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನೇತಾಜಿ ಅವರ ಜೀವನದ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಟಿಸಿರುವ ಯಾರೊಬ್ಬರಿಗೂ ಕಥೆಯ ಬಗ್ಗೆ ಗೊತ್ತಿಲ್ಲವಂತೆ. ಅವರೆಲ್ಲರೂ ಮೈಕ್‌ ಹಿಡಿದಾಗ ಈ ಸತ್ಯವನ್ನು ಬಹಿರಂಗಪಡಿಸಿದರು. ನಮ್ಮ ಪಾತ್ರಗಳನ್ನಷ್ಟೇ ನಾವು ನಿರ್ವಹಿಸಿದ್ದೇವೆ. ನಿರ್ದೇಶಕರು ನಮಗೆ ಕಥೆ ಬಗ್ಗೆ ಹೇಳಿಲ್ಲ ಎಂದು ವಿವರಿಸಿದರು.

ನಟ ಎಂ.ಕೆ. ಮಠ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಈ ಮಣ್ಣಿನಲ್ಲಿ ಗತಿಸಿಹೋದ ಸಣ್ಣ ಎಳೆಯನ್ನು ಇಟ್ಟುಕೊಂಡು ಚಿತ್ರ ಮಾಡಲಾಗಿದೆ’ ಎಂದಷ್ಟೇ ಹೇಳಿದರು.

ರೋಹಿತ್‌ ಅಶೋಕ್‌ಕುಮಾರ್‌ ಮತ್ತು ಪಿ. ರಾಮ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿನಯಚಂದ್ರ ಪ್ರಸನ್ನ ಅವರ ಛಾಯಾಗ್ರಹಣವಿದೆ. ಎಂ. ಸಂಜೀವರಾವ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್‌ ಈ ಸಿನಿಮಾದ ನಾಯಕ. ಸೌಂದರ್ಯ ಮೊದಲ ಬಾರಿಗೆ ನಾಯಕಿಯಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಾಜ್‌ ಹಿರೇಮಠ, ರಾಕ್‌ ಸತೀಶ್, ಪ್ರಕಾಶ್‌ ರಾಜಕುಮಾರ್, ದಿಶಾ ಪೂವಯ್ಯ ನಟಿಸಿದ್ದಾರೆ. 


ಪರಶುರಾಮ್ ಹಾಗೂ ಎಂ.ಕೆ. ಮಠ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !