ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗೆ ಬಂದು ಹೀಗೆ ಹೋದವರು

Last Updated 2 ಜನವರಿ 2019, 17:28 IST
ಅಕ್ಷರ ಗಾತ್ರ

ಕನ್ನಡ ನೆಲದ ನಟಿಯರು ಪರಭಾಷೆಯ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು ಮತ್ತು ಮಿಂಚಿದ್ದು ತುಂಬಾನೇ ಕಡಿಮೆ. ಆದರೆ ಅನ್ಯಭಾಷೆಯ ನಟಿಯರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡು ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದು ಅಲ್ಲದೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪರಭಾಷೆಯ ನಟಿಯರ ಪೈಕಿ ಕೇರಳ ಮಲೆಯಾಳಂ ಚಿತ್ರರಂಗದಿಂದ ಬಂದವರೇ ಹೆಚ್ಚು. ಅಂತಹ ನಟಿಯರ ಉದ್ದ ಸಾಲಿನಲ್ಲಿ ಪ್ರಮುಖವಾಗಿ ಮೀರಾ ಜಾಸ್ಮಿನ್‌, ನವ್ಯಾ ನಾಯರ್, ಸಿಂಧೂ ಮೆನನ್, ಶಿಲ್ಪಾ ಮುಂತಾದವರನ್ನು ಗುರುತಿಸಬಹುದು. ಅವರು ತಮ್ಮ ಛಾಪು ಮೂಡಿಸಿದ್ದು ಅಲ್ಲದೆ ಅಭಿಮಾನಿಗಳನ್ನೂ ಸೃಷ್ಟಿಸಿಕೊಂಡರು.

ಕನ್ನಡ ಮತ್ತು ಮಲೆಯಾಳಂ ಚಿತ್ರರಂಗಗಳ ಈ ರೀತಿಯ ನೆಂಟಸ್ತನ ಇತ್ತೀಚಿನದ್ದಲ್ಲ. ದಶಕಗಳದ್ದು. ಮಲೆಯಾಳಂನ ಕೆಲ ನಟಿಯರು ಸ್ಯಾಂಡಲ್‌ವುಡ್‌ನಲ್ಲಿ ದೀರ್ಘಕಾಲದವರೆಗೆ ಉಳಿಯಲಿಲ್ಲ. ಒಂದರ್ಥದಲ್ಲಿ ಹಾಗೆ ಬಂದು ಹೀಗೆ ಹೋದರು. ಆದರೆ ಕೆಲವರು ಆಗಾಗ್ಗೆ ಕಾಣಿಸಿಕೊಂಡು ಮರೆಯಾದರು. ಕೆಲ ನಟಿಯರ ಅಭಿನಯದ ಮೊದಲನೇ ಕನ್ನಡ ಚಿತ್ರ ಹಿಟ್ ಆಗಿದ್ದೇ ತಡ, ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಹುಡುಕಿ ಬಂದವು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದಾಗ ತವರಿಗೆ ಮರಳಿದರು. ಕೆಲವರು ಮದುವೆಯಾಗಿ ಅಭಿನಯಕ್ಕೆ ವಿದಾಯ ಹೇಳಿದರು.

ಮರೆಯಲಾಗದ ಊರ್ವಶಿ, ಅಂಬಿಕಾ

ತಿರುವನಂತಪುರದಲ್ಲಿ ಜನಿಸಿದ ಊರ್ವಶಿ ಅವರು 1980-90ರ ದಶಕದಲ್ಲಿ ಕನ್ನಡ ಚಿತ್ರಗಳಾದ ಶ್ರಾವಣ ಬಂತು, ನಾನು ನನ್ನ ಹೆಂಡ್ತಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು.

ವರ್ಷಕ್ಕೊಂದರಂತೆ ಚಿತ್ರದಲ್ಲಿ ಅಭಿನಯಿಸಿದ ಅವರು 2000ರಿಂದ ನಿರಂತರವಾಗಿ ಕಾಣಿಸಿಕೊಂಡರು. ಯಾರಿಗೆ ಸಾಲುತ್ತೆ ಸಂಬಳ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ರಾಮ ಶಾಮ ಭಾಮ, ಒಗ್ಗರಣೆ ಮುಂತಾದವುಗಳಲ್ಲಿ ಅಭಿನಯಿಸಿದರು. ಕೆಲ ಚಿತ್ರಗಳು ಇನ್ನೂ ತೆರೆ ಕಾಣಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದುದ್ದು ವಿಶೇಷ.

ಈ ಕಾಲಘಟ್ಟದಲ್ಲೇ ಅಂಬಿಕಾ ಬಹುತೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಇತರೆ ನಾಯಕಿಯರಿಗೆ ಪೈಪೋಟಿ ನೀಡಿದರು. ರೆಬೆಲ್ ಸ್ಟಾರ್ ಅಂಬರೀಷ್ ಅವರು ಜೊತೆಗಿನ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು ಗರುಡ ರೇಖೆ, ಚಕ್ರವ್ಯೂಹ, ಹಸಿದ ಹೆಬ್ಬುಲಿ ಮುಂತಾದವುಗಳಲ್ಲಿ ಅಭಿನಯಿಸಿದರು. ಇತ್ತೀಚಿನ ವರ್ಷಗಳಲ್ಲಿ ತೆರೆ ಕಂಡ ನಂದಿ ಮತ್ತು ಇತರೆ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.

ತಿರುವನಂತಪುರಂನ ಶಿಲ್ಪಾ ಜನುಮದ ಜೋಡಿ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಟ ಶಿವರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡ ಅವರು ಕ್ಷಿಪ್ರ ಸಂಚಲನವನ್ನೇ ಮಾಡಿಬಿಟ್ಟರು. ಅತ್ಯುತ್ತಮ ಅಭಿನಯಕ್ಕೆ ಪ್ರಶಸ್ತಿ ಗಳಿಸಿದರು. ಇದೇ ಹುಮ್ಮಸ್ಸಿನಲ್ಲಿ ಅವರು ಭೂಮಿತಾಯಿಯ ಚೊಚ್ಚಲ ಮಗ, ಮುಂಗಾರಿನ ಮಿಂಚು, ಇದು ಎಂಥ ಪ್ರೇಮವಯ್ಯ ಚಿತ್ರಗಳಲ್ಲಿ ಅಭಿನಯಿಸಿದರು. ನಂತರದ ವರ್ಷಗಳಲ್ಲಿ ಅವರು ಚಿತ್ರರಂಗದಲ್ಲಿ ಮತ್ತೆ ಕಾಣಿಸಿಕೊಳ್ಳಲಿಲ್ಲ. ಅವರು ಸದ್ಯಕ್ಕೆ ಮಲೆಯಾಳಂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

ಮೀರಾ ಜಾಸ್ಮಿನ್‌, ಸಿಂಧೂ ಮೆನನ್‌, ಪಾರ್ವತಿ

ಈ ಹಿರಿಯ ನಟಿಯರಂತೆಯೇ ಮೀರಾ ಜಾಸ್ಮಿನ್, ಸಿಂಧೂ ಮೆನನ್ ಮುಂತಾದವರು ಪ್ರಮುಖ ಪಾತ್ರ ಗಿಟ್ಟಿಸಿಕೊಂಡು ಅಭಿನಯದ ಮೂಲಕ ಬೆರಗು ಮೂಡಿಸಿದರು.

ಸಿಂಧು ಮೆನನ್ ಅವರು ನಂದಿ, ಖುಷಿ, ಧರ್ಮ ಚಿತ್ರಗಳಲ್ಲಿ ಕಾಣಿಸಿಕೊಂಡರೆ, ಕಾರ್ತಿಕಾ ನಾಯರ್ ಅವರು ನಟ ದರ್ಶನ್ ಅಭಿನಯದ ಬೃಂದಾವನದಲ್ಲಿ ಮಿಂಚಿದರು. ನಿತ್ಯಾ ಮೆನನ್ ಅವರು ಸೆವೆನ್ ಓ ಕ್ಲಾಕ್, ಮೈನಾ ಮುಂತಾದವುಗಳಲ್ಲಿ ನಟಿಸಿದರೆ, ನವ್ಯಾ ನಾಯರ್ ಅವರು ಗಜ, ನಮ್ಮ ಯಜಮಾನ್ರು, ದೃಶ್ಯಂ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಪಾರ್ವತಿ ಮೆನನ್ ಅಭಿನಯದ ಮಿಲನ ಚಿತ್ರ ಸೂಪರ್ ಹಿಟ್ ಆದರೆ, ಮೀರಾ ಜಾಸ್ಮಿನ್ ಅಭಿನಯದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ ಚಿತ್ರದಲ್ಲಿ ಅಭಿಮಾನಿಗಳ ಮನ ಗೆದ್ದರು. ವಿಶೇಷವೆಂದರೆ, ಮೀರಾ ಎರಡು ಚಿತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಅಭಿನಯಿಸಿದರೆ, ಮತ್ತೊಂದು ಚಿತ್ರದಲ್ಲಿ ಶಿವರಾಜ್‌ಕುಮಾರ್ ತಂಗಿಯಾಗಿ ಕಾಣಿಸಿಕೊಂಡರು.

ಮಲೆಯಾಳಂ ನಟಿಯರು ಆಗೊಮ್ಮೆ ಈಗೊಮ್ಮೆ ಪರಭಾಷಾ ಚಿತ್ರರಂಗಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಕೆಲವರು ಬಾಲಿವುಡ್‌ನಲ್ಲಿ ಯಶಸ್ಸು ಕಾಣಲು ಪ್ರಯತ್ನ ನಡೆಸಿದ್ದಾರೆ. ಚಿತ್ರರಂಗದಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಯಾರ‍್ಯಾರಿಗೆ ಅದೃಷ್ಟವಿದೆಯೋ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT