ಗುರುವಾರ , ಏಪ್ರಿಲ್ 9, 2020
19 °C
ಕೆಜಿಎಫ್‌ ಚಿತ್ರದ ಸೆಟ್‌ನ ಗುಟ್ಟು ಹೇಳಿದ ಶಿವಕುಮಾರ್

ಮಣ್ಣು ಗುದ್ದಿ ಚಿನ್ನ ತೆಗೆದ ಕಥನ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರಕ್ಕೆ ಸೆಟ್‌ ಹಾಕುವುದು ದೊಡ್ಡ ಸವಾಲಾಗಿತ್ತು. ಹಾಕಿದ್ದ ಸೆಟ್‌ ಅನ್ನು ಕಣ್ಣ ಮುಂದೆಯೇ ಮಳೆಯು ಕೊಂಚ ಕರುಣೆ ತೋರದೆ ತೊಳೆದು ಹಾಕಿತ್ತು. ಚಾಪ್ಟರ್‌ 2ರ ಸೆಟ್‌ ನಿರ್ಮಾಣದ ವೇಳೆಯೂ ಮಳೆ ಸುರಿಯುತ್ತಿತ್ತು. ಅದನ್ನು ನಾವು ನಿರೀಕ್ಷೆ ಮಾಡಿದ್ದೆವು. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರಿಂದ ಹೆಚ್ಚಿನ ತೊಂದರೆಯಾಗಲಿಲ್ಲ. ಮೊದಲ ಅಧ್ಯಾಯದಲ್ಲಿ ಅನುಭವಿದಷ್ಟು ಸಂಕಷ್ಟ ಎದುರಾಗಲಿಲ್ಲ. ಇಂಟರ್‌ಲಾಕ್‌ ಸಿಸ್ಟಂನಲ್ಲಿ ಕೆಲಸ ಮಾಡಿದ್ದು ಫಲ ನೀಡಿತು’.

–ಕಲಾ ನಿರ್ದೇಶಕ ಶಿವಕುಮಾರ್‌ ಒಂದೇ ಉಸಿರಿಗೆ ಇಷ್ಟನ್ನು ಹೇಳಿ ತುಸು ಹಗುರಾದರು. ಕೆಜಿಎಫ್‌ ಚಿತ್ರದಲ್ಲಿ ‘ನರಾಚಿ ಸಾಮ್ರಾಜ್ಯ’ ನಿರ್ಮಾಣದ ಹಿಂದಿರುವ ಗುಟ್ಟನ್ನು ಮತ್ತೆ ಮುಂದುವರಿಸಿದರು.

‘ಎರಡನೇ ಅಧ್ಯಾಯದಲ್ಲೂ ನರಾಚಿ ಸೆಟ್‌ ಹಾಕಿದ್ದೇವೆ. ಅದು ಬೇರೆಯದ್ದೇ ಲೆವೆಲ್‌ನಲ್ಲಿದೆ. ಮೊದಲ ಅಧ್ಯಾಯದಲ್ಲಿ 250 ಮಂದಿ ಕೆಲಸ ಮಾಡಿದ್ದೆವು. ಈ ಬಾರಿ 350 ಮಂದಿ ಮೂರು ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದೇವೆ. ಚಾಪ್ಟರ್‌ 1ರ ಸೆಟ್‌ಗೆ ಹೆಚ್ಚಿನ ಸಮಯ ಹಿಡಿದಿತ್ತು. ನಿರೀಕ್ಷೆಗೂ ಮೀರಿ ಮಳೆ ಸುರಿದಿದ್ದರಿಂದಲೇ ಹೆಚ್ಚಿನ ಸಮಯ ಬೇಡಿತ್ತು’ ಎಂದು ಸೆಟ್‌ ನಿರ್ಮಾಣದ ಹಿಂದಿನ ಗುಟ್ಟು ಬಿಚ್ಚಿಟ್ಟರು.

‘ಕೆಜಿಎಫ್‌ ಚಾಪ್ಟರ್‌ 2’ರ ಇಡೀ ಚಿತ್ರೀಕರಣ ನಡೆದಿರುವುದು ಸೆಟ್‌ನಲ್ಲಿಯೇ. ಬೆಂಗಳೂರಿನ ಮಿನರ್ವ ಮಿಲ್‌, ಕೋಲಾರದ ಕೆಜಿಎಫ್‌, ಮೈಸೂರು, ಹೈದರಾಬಾದ್‌ನ ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಸೆಟ್‌ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಸೆಟ್‌ನಲ್ಲಿ ಸಣ್ಣ ಕುರ್ಚಿ ತಂದಿಟ್ಟಿರುವುದು ಸ್ಮರಣೀಯವಾದುದು. ಅಂತಹ ಕ್ವಾಲಿಟಿ ಅದಕ್ಕಿದೆ ಎಂದು ನೆನಪಿಸಿಕೊಳ್ಳುತ್ತಾರೆ.

ಹಾಲಿವುಡ್‌ ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಸೆಟ್‌ಗಾಗಿಯೇ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತದೆ. ಕೆಜಿಎಫ್‌ ಚಿತ್ರದಲ್ಲಿಯೂ ಅಂತಹದ್ದೇ ಸೆಟ್‌ಗಳನ್ನೂ ಹಾಕಿ ಶೂಟಿಂಗ್‌ ನಡೆಸಲಾಗಿದೆಯಂತೆ. ‘ಹಿಂದಿ ಸಿನಿಮಾಗಳಿಗೆ ಖರ್ಚು ಮಾಡುವಷ್ಟೇ ಹಣವನ್ನು ಕನ್ನಡದ ನಿರ್ಮಾಪಕರು ಖರ್ಚು ಮಾಡುತ್ತಿದ್ದಾರೆ. ಇಂಡಸ್ಟ್ರಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಎಲ್ಲಾ ತಂತ್ರಜ್ಞರು ದುಡಿಯುತ್ತಿದ್ದಾರೆ. ಬೇರೆ ಚಿತ್ರರಂಗಗಳಿಗೆ ನಾವು ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ. ಹಣದ ಅಂಕಿ–ಅಂಶದಿಂದ ಸೆಟ್‌ ಅನ್ನು ಅಳೆಯಲಾಗುವುದಿಲ್ಲ. ತೆರೆಯ ಮೇಲೆ ನೋಡಿದಾಗ ಖರ್ಚಿನ ಅರಿವಾಗುತ್ತದೆ’ ಎನ್ನುವುದು ಅವರ ಅನುಭವದ ಮಾತು.

ನಿರ್ಮಾಣದ ಹಿಂದಿನ ಸವಾಲು 

‘ಹೊರಾಂಗಣ ಚಿತ್ರೀಕರಣಕ್ಕೆ ಸೆಟ್‌ ಅಳವಡಿಸುವಾಗ ಹವಾಗುಣ ಬಹುಮುಖ್ಯ ‍ಪಾತ್ರವಹಿಸುತ್ತದೆ. ಅದು ನಿಜಕ್ಕೂ ಸವಾಲಿನಿಂದ ಕೂಡಿರುತ್ತದೆ. ಅಲ್ಲಿನ ಮಣ್ಣಿನ ಗುಣವನ್ನು ಅವಲೋಕಿಸಬೇಕಾಗಿರುತ್ತದೆ. ಒಳಾಂಗಣದಲ್ಲಿ ಸೆಟ್‌ ಹಾಕುವ ಕೆಲಸವೂ ಸವಾಲಾಗಿರುತ್ತದೆ. ಪ್ರೇಕ್ಷಕರಿಗೆ ಅದು ಸೆಟ್‌ ಎಂದು ಕಾಣಬಾರದು; ಮನೆಯಂತೆಯೇ ಕಾಣಬೇಕು. ನೈಸರ್ಗಿಕವಾಗಿ ಕಂಡಾಗ ನೋಡುಗರನ್ನು ಹಿಡಿದಿಡುತ್ತದೆ’ ಎನ್ನುವುದು ಅವರ ವಿವರಣೆ.

ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರಕ್ಕೂ ಶಿವಕುಮಾರ್‌ ಅವರೇ ಸೆಟ್‌ ಹಾಕುತ್ತಿದ್ದಾರೆ. ಈಗಾಗಲೇ, ಮೊದಲ ಹಂತದ ಸೆಟ್‌ ಕಾರ್ಯವೂ ಪೂರ್ಣಗೊಂಡಿದೆಯಂತೆ. ಉಪೇಂದ್ರ ನಟನೆಯ ‘ಕಬ್ಜ’ ಚಿತ್ರದಲ್ಲೂ ಅವರ ಕೈಚಳಕವಿದೆ. ಇನ್ನೂ ಹೆಸರಿಡದ ಪುನೀತ್‌ ರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾಕ್ಕೂ ಸೆಟ್‌ ಹಾಕಲು ಅವರು ಯೋಜನೆ ರೂಪಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)